ಮೊಬೈಲ್‌ ಮಾರುಕಟ್ಟೆಯಲ್ಲಿ ತಮ್ಮ ಬ್ರ್ಯಾಂಡನ್ನು ವಿಸ್ತರಿಸುವುದರೊಂದಿಗೆ, ಹೊಸ ತಂತ್ರಜ್ಞಾನ ಆಧರಿಸಿ ಬಳಕೆದಾರರಿಗೆ ಹೊಸ ಫೀಚರ್‌ಗಳನ್ನು ಒದಗಿಸುವುದು ಮೊಬೈಲ್ ಕಂಪನಿಗಳ ಮುಂದಿರುವ ಆದ್ಯತೆ.  ಮೊಬೈಲ್ ಜಗತ್ತಿನ ದಿಗ್ಗಜ ಸ್ಯಾಮ್ಸಂಗ್ ಹೊಸ ಫೋನ್ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಯಾವ ಫೋನ್ ಅದು? ಏನೆಲ್ಲಾ ಫೀಚರ್ಸ್ ಇರಬಹುದು? ಇಲ್ಲಿದೆ ವಿವರ...   

ಭಾರತದ ಮೊಬೈಲ್ ಮಾರುಕಟ್ಟೆಗೆ ಲಗ್ಗೆಯಿಡಲು ಸ್ಯಾಮ್ಸಂಗ್ ಗ್ಯಾಲಕ್ಸಿ S10 ತಯಾರಿ ನಡೆಸಿದೆ. ಈ ಹಿಂದೆ ತಾನು ಬಿಡುಗಡೆ ಮಾಡಿರುವ ಎಲ್ಲಾ ಫೋನ್‌ಗಳಿಗಿಂತ ಹೆಚ್ಚು ನಿರೀಕ್ಷೆಗಳನ್ನು ಗ್ಯಾಲಕ್ಸಿ S10 ಹುಟ್ಟುಹಾಕಿದೆ. 

ಮುಂಬರುವ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಗ್ಯಾಲಕ್ಸಿ S10ನ ಮೂರು ಆವೃತ್ತಿಗಳು ಮಾರುಕಟ್ಟೆಗೆ ಬಿಡುಗಡೆಯಾಗುವ ನಿರೀಕ್ಷೆಯಿದ್ದು, 6.7 ಡಿಸ್ಪ್ಲೇ ಹೊಂದಿರಲಿದೆ, ಎಂದು ಹೇಳಲಾಗುತ್ತಿದೆ.

5G ತಂತ್ರಜ್ಞಾನ ಹೊಂದಿರುವ ಈ ಫೋನ್ ಬರೋಬ್ಬರಿ 6 ಕ್ಯಾಮೆರಾಗಳನ್ನು ಹೊಂದಿರಲಿದೆ ಎಂದು ವರದಿಯಾಗಿದೆ!

ಇದನ್ನೂ ಓದಿ: ಹುಷಾರ್! ಈ 5 ಕೆಲಸ ಮಾಡಿದ್ರೆ ವಾಟ್ಸಪ್ ನಿಮ್ಮನ್ನು ಬ್ಯಾನ್ ಮಾಡುತ್ತೆ

ಸ್ಯಾಮ್ಸಂಗ್ ಕಂಪನಿಯು ತನ್ನ ಮಹಾತ್ವಾಕಾಂಕ್ಷಿ ಫೋನ್ ಬಗ್ಗೆ ಯಾವುದೇ ಸುಳಿವನ್ನು ಬಿಟ್ಟುಕೊಡದಿದ್ದರೂ, ಕೆಲವೊಂದು ಟೆಕ್ ನಿಯತಕಾಲಿಕೆಗಳು, S10 ಹಾಗೂ ಅದರ ಫೀಚರ್ಸ್‌ಗಳ ಬಗ್ಗೆ ಹಲವು ಮಗ್ಗುಲುಗಳಿಂದ ವರದಿ ಮಾಡುತ್ತಿವೆ.

ಗ್ಯಾಲಕ್ಸಿ S10, AMOLED ತಂತ್ರಜ್ಞಾನಾಧಾರಿತ 5.8 ಮತ್ತು 6.4 ಇಂಚುಗಳ ಡಿಸ್ಪ್ಲೇ ಹೊಂದಿರಲಿದೆ ಎಂದು ಈ ಹಿಂದೆ ಒಂದು ವರದಿ ಹೇಳಿತ್ತು.

ವಾಲ್ ಸ್ಟ್ರೀಟ್ ಜರ್ನಲ್ ವರದಿ ಪ್ರಕಾರ, 6.7 ಇಂಚು ಡಿಸ್ಪ್ಲೇ ಹೊಂದಿರುವ ಗ್ಯಾಲಕ್ಸಿ S10 ಫೋನ್ 6 ಕ್ಯಾಮೆರಾಗಳನ್ನು ಹೊಂದಿರಲಿದೆ. ಗ್ಯಾಲಕ್ಷಿ A9 (2018)ರಂತೆ, ಇದರಲ್ಲೂ ಮುಂಭಾಗದಲ್ಲಿ ಎರಡು ಹಾಗೂ ಹಿಂಭಾಗದಲ್ಲಿ ನಾಲ್ಕು ಕ್ಯಾಮೆರಾಗಳನ್ನು ಹೊಂದಿರಲಿದೆ.

ಹುವೈ ಕಂಪನಿ ಬಿಡುಗಡೆ ಮಾಡಲಿರುವ ಮೇಟ್ 20 Pro ಫೋನ್‌ನಂತೆ, ಸ್ಯಾಮ್ಸಂಗ್ ಕೂಡಾ ಗ್ಯಾಲಕ್ಸಿ S10 ಫೋನಿನಲ್ಲಿ ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್‌ ಫೀಚರ್‌ ಒದಗಿಸುವ ಸಾಧ್ಯತೆಯಿದೆಯನ್ನಲಾಗಿದೆ. 

 ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್‌ ಫೀಚರ್ ಇದ್ದಲ್ಲಿ, ವೈರ್‌ಲೆಸ್‌ ಆಗಿ ಫೋನ್ ಚಾರ್ಜ್ ಮಾಡಬಹುದಲ್ಲದೇ, ಬೇರೆ ಫೋನ್‌ಗಳನ್ನು ಈ ಫೋನ್‌ ಮೂಲಕ ಚಾರ್ಜ್ ಮಾಡಬಹುದಾಗಿದೆ.