Asianet Suvarna News Asianet Suvarna News

ಅಮೆರಿಕಾದಲ್ಲಿ ಮಿಂಚುತ್ತಿದ್ದಾನೆ ಮಂಡ್ಯದ ಹುಡುಗ ಸುಹೇಲ್

ಇವನ ವಯಸ್ಸಿನ್ನೂ ಹದಿನೆಂಟು ಆದರೆ ಮಾಡಿರುವ ಸಾಧನೆ ನೂರೆಂಟು. ಹೆಸರು ಸಿ.ಎಸ್. ಮೊಹಮ್ಮದ್ ಸುಹೇಲ್. ಮಂಡ್ಯದ ಶ್ರೀರಂಗಪಟ್ಟಣದ ಮೂಲದವನಾದ ಈ ಪೋರ ಇಂದು ವಿದ್ಯಾಭ್ಯಾಸ ಮಾಡುತ್ತಿರುವುದು ಮಂಗಳೂರಿನಲ್ಲಿ. ಬಾಲ್ಯದಿಂದಲೂ ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಆ ನಿಟ್ಟಿನಲ್ಲಿ ಸಂಶೋಧನೆಗಳನ್ನು ಆರಂಭಿಸಿದ ಸುಹೇಲ್ ಸ್ಥಳೀಯ ಮಟ್ಟದಿಂದ ಆರಂಭವಾಗಿ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ರಾಕೆಟ್ ವೇಗದಲ್ಲಿ ಸಾಧನೆಯ ಶಿಖರ ಏರುತ್ತಿದ್ದಾನೆ. ಇದು ಸುಹೇಲ್‌ನ ಸಾಹಸಯಾನದ ಪರಿಚಯ.

Republic day honours to youth scientist  suhail from mandya
Author
Bengaluru, First Published Jan 7, 2019, 12:33 PM IST

ಸಿ.ಎಸ್. ಮೊಹಮ್ಮದ್ ಸುಹೇಲ್ ಶ್ರೀರಂಗಪಟ್ಟಣದ ಹುಡುಗ. ಬಾಲ್ಯದಿಂದಲೂ ವಿಜ್ಞಾನದಲ್ಲಿ ಅಪಾರ ಆಸಕ್ತಿ. ಅದೇ ಆಸಕ್ತಿಯ ಫಲ ಇಂದು ಈತನನ್ನು ದೇಶ ಮತ್ತು ದೇಶದ ಗಡಿಯಾಚೆ ಬಾಲ ಸಾಧಕನನ್ನಾಗಿ ಮಾಡಿದೆ. ೨೦೧೭ರಲ್ಲಿ ಅಪೌಷ್ಠಿಕತೆ ಬಗ್ಗೆ ಸಂಶೋಧನೆ ಮಾಡಿ ಅದನ್ನು ಅಮೆರಿಕಾದಲ್ಲಿ ಮಂಡಿಸಿ ಮೆಚ್ಚುಗೆ ಪಡೆದಿದ್ದ ಸುಹೇಲ್ 4 ಇಂಟರ್ ನ್ಯಾಷನಲ್ ಅವಾರ್ಡ್‌ಗಳನ್ನು ಮುಡಿಗೇರಿಸಿಕೊಂಡಿದ್ದಾನೆ. ಅಲ್ಲದೇ ಇದೇ ಜನವರಿ 26ರ ಗಣರಾಜ್ಯೋತ್ಸವದಂದು ದೆಹಲಿಯ ಕೆಂಪುಕೋಟೆಯಲ್ಲಿ ರಾಷ್ಟ್ರಪತಿಗಳಿಂದ ನ್ಯಾಷನಲ್ ಚೈಲ್ಡ್ ಎಕ್ಸ್‌ಸಪ್ಶನಲ್ ಅವಾರ್ಡ್ ಇನ್ ಇನ್ನೋವೇಷನ್ ಪ್ರಶಸ್ತಿಯನ್ನು ಪಡೆದುಕೊಳ್ಳಲು ಸಜ್ಜಾಗಿದ್ದಾನೆ.

ಸುಹೇಲ್ ಹಾದಿ

ಬಾಲ್ಯದಿಂದಲೂ ವಿಜ್ಞಾನ ವಿಷಯದಲ್ಲಿ ಪ್ರಯೋಗಗಳನ್ನು ಮಾಡುತ್ತಾ ಬಂದ ಸುಹೇಲ್ ಕತೆಯನ್ನು ಅವನೇ ಹೇಳುತ್ತಾನೆ ಕೇಳಿ, ‘ನನಗೆ ಮೊದಲಿನಿಂದಲೂ ವಿಜ್ಞಾನ ಎಂದರೆ ಕೂತೂಹಲ ಹೆಚ್ಚಿಸುವ ವಿಷಯವಾಗಿತ್ತು. ಎಲ್ಲರಂತೆ ನಾನೂ ಶಾಲೆಯಲ್ಲಿ ಪಾಠ ಕೇಳಿ ಪರಿಸರದಲ್ಲಿ ಅವುಗಳ ಪ್ರಯೋಗ ಮಾಡುತ್ತಿದ್ದೆ. 7ನೇ ತರಗತಿಯಲ್ಲಿ ಇರುವಾಗ ಕಲುಷಿತವಾದ ನೀರನ್ನು ಹೇಗೆ ಮರುಬಳಕೆ ಮಾಡಬಹುದು ಎನ್ನುವುದರ ಬಗ್ಗೆ ಪ್ರಯೋಗ ಮಾಡಿದೆ. ಇದನ್ನು ಎಲ್ಲರೂ ಮೆಚ್ಚಿಕೊಂಡರು. ಆಮೇಲೆ ಮಾನವನ ನಡಿಗೆಯಿಂದ ಹೇಗೆ ವಿದ್ಯುತ್ ಉತ್ಪಾದನೆ ಮಾಡಬಹುದು ಎನ್ನುವುದರ ಬಗ್ಗೆ ಪ್ರಯೋಗ ಮಾಡಿದೆ. ಅದೂಯಶ ಕಂಡಿತು. ಹೀಗೆ ನನ್ನ ಸಣ್ಣ ಪುಟ್ಟ ಕಾರ್ಯಗಳಿಗೆ ಬೆಂಬಲ ನೀಡಿದ್ದು ನನ್ನ ಅಪ್ಪ ಅನಾರ್ಕಲಿ ಸಲೀಂ ಚಿಣ್ಯ (ಆರೋಗ್ಯ ಸಹಾಯಕರು) ಹಾಗೂ ಅಮ್ಮ ಡಾ. ಪರ್ವೀನ್ ಸಲೀಂ (ಕನ್ನಡ ಅಧ್ಯಾಪಕಿ).

ನಾನು ಚಿಕ್ಕವನಿದ್ದಾಗಲೇ ನನ್ನ ಅಪ್ಪ ಅಮ್ಮ ನನಗೆ ಒಂದು ಎನ್ ಸೈಕ್ಲೋಪೀಡಿಯಾವನ್ನು ಕೊಡಿಸಿದ್ದರು. ಅದನ್ನು ಓದಿಕೊಂಡೇ ನಾನು ಬೆಳೆದೆ. ಅದರಿಂದ ಸಾಕಷ್ಟು ಕಲಿತೆ. ಆಮೇಲೆ ನನ್ನ ಹುಟ್ಟುಹಬ್ಬಕ್ಕೆ ಅಮ್ಮ ಲ್ಯಾಪ್‌ಟಾಪ್ ಕೊಡಿಸಿದರು. ಇದುವೇ ನನಗೆ ಹೊಸ ಅವಕಾಶಗಳ ಬಾಗಿಲು ತೆರೆಯುವಂತೆ ಮಾಡಿತು. ಇಂಟರ್‌ನೆಟ್‌ನಲ್ಲಿ ಸಾಕಷ್ಟು ವಿಜ್ಞಾನಕ್ಕೆ ಸಂಬಂಧಿಸಿದ ವಿಚಾರಗಳನ್ನು ಹುಡುಕಿದೆ. ಹೊಸ ಹೊಸ ಆವಿಷ್ಕಾರಗಳ ಬಗ್ಗೆ ತಿಳಿದುಕೊಂಡೆ. ಹೀಗೆ ಮಾಡುತ್ತಲೇ ನಾನು ಏನು ಮಾಡಬೇಕು ಎನ್ನುವುದರ ಸ್ಪಷ್ಟತೆ ಹೆಚ್ಚುತ್ತಾ ಹೋಯಿತು. ನನ್ನ ಸಂಶೋಧನೆಗಳನ್ನು ದೆಹಲಿಯ ಎಂಪಿಯಾದ ಮೀನಾಕ್ಷಿ ಲೇಖಿ ಅವರು ಮೆಚ್ಚಿ ಇಂಡಿಯನ್ ಸೈನ್ಸ್ ಕಾಂಗ್ರೆಸ್‌ನಲ್ಲಿ ಭಾಗವಹಿಸುವ ಅವಕಾಶ ನೀಡಿದರು. ಅದಾದ ಮೇಲೆ ಅಮೆರಿಕಾದಲ್ಲಿಯೂ ನನ್ನ ಪ್ರಬಂಧ ಮಂಡಿಸಿದೆ’ ಎಂದು ತನ್ನ ಹಾದಿಯನ್ನು ಹೇಳುವ ಸುಹೇಲ್ ಈಗಾಗಲೇ ಸಾಕಷ್ಟು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ಮುಂದೆ ಸಾಗುತ್ತಿದ್ದಾರೆ.

Republic day honours to youth scientist  suhail from mandya

ಹರಿಸಿ ಬಂದಿವೆ ಹತ್ತಾರು ಪ್ರಶಸ್ತಿ

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಶ್ರೀರಂಗಪಟ್ಟಣದಲ್ಲಿಯೇ ಮುಗಿಸಿದ ಸುಹೇಲ್ ಇಂದು ಮಂಗಳೂರಿನಲ್ಲಿ ಪಿಯುಸಿ ಓದುತ್ತಿದ್ದಾನೆ. ಇಷ್ಟು ಕಡಿಮೆ ವಯಸ್ಸಿನಲ್ಲಿಯೇ ದೇಶದ ಪ್ರತಿಷ್ಟಿತ ಸಂಸ್ಥೆಗಳು ಇವನನ್ನು ಗುರುತಿಸಿ ಗೌರವಿಸಿವೆ. 2018ರ ರಾಷ್ಟ್ರೀಯ ಅಮೆಚೂರ್ ಸೈಂಟಿಸ್ಟ್ ಪ್ರಶಸ್ತಿ, 2017 ಮತ್ತು 2018ರಲ್ಲಿ ಎರಡು ಬಾರಿ ಅಗಸ್ತ್ಯ ಜಿಗ್ನಾಸ್ಯಾ ರಾಷ್ಟ್ರೀಯ ವಿಜ್ಞಾನ ವಿಶೆಷ ಪ್ರಶಸ್ತಿ,

ಜಿಲ್ಲಾ ಬಾಲ ವಿಜ್ಞಾನಿ, ಜಿಲ್ಲಾ ಯುವ ವಿಜ್ಞಾನಿ, 2013 ಮತ್ತು 2018ರಲ್ಲಿ ಎರಡು ಬಾರಿ ರಾಜ್ಯ ಯುವ ವಿಜ್ಞಾನಿ, ರೋಟರಿ ವಿಜ್ಞಾನಿ, 217ರಲ್ಲಿ ರಾಜ್ಯ ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿ, ಜಿಲ್ಲಾ ಕಲಾ ಶ್ರೀ, ಜಿಲ್ಲಾ ಅಸಾಧಾರಣ ಪ್ರತಿಭಾ ಪ್ರಶಸ್ತಿ, 2015ರಲ್ಲಿ ರಾಜ್ಯ ಅಸಾಧಾರಣ ಪ್ರಶಸ್ತಿ, 2018ರ ಡಾ. ಶಿವರಾಮ ಕಾರಂತ ಬಾಲವನದ ಬಾಲ ವಿಜ್ಞಾನಿ ಪ್ರಶಸ್ತಿ, ಶ್ರೀರಂಗಪಟ್ಟಣದ ಶ್ರೀರಾಮಲಿಂಗೇಶ್ವರ ಸಂಸ್ಥೆಯ ಅಭಿನವ ಶ್ರೀ ಪ್ರಶಸ್ತಿಗಳು ಈತನ ಉತ್ಸಾಹ ಹೆಚ್ಚಿಸಿವೆ. ಮತ್ತಷ್ಟು ಸಾಧನೆಗೆ ಹಸಿರು ಹಾದಿ ಸೃಷ್ಟಿ ಮಾಡಿವೆ.

ಇದರೊಂದಿಗೆ ದೆಹಲಿಯಲ್ಲಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಇಂಟೆಲ್ ಹಾಗೂ ಐಯುಎಸ್ ಎಸ್‌ಟಿಎಫ್ ಸಂಸ್ಥೆಗಳು ಆಯೋಜಿಸಿದ್ದ ಐರಿಸ್-2018ರ ರಾಷ್ಟ್ರೀಯ ವಿಜ್ಞಾನ ಸ್ಪರ್ಧೆಯಲ್ಲಿ ಮಂಗಳೂರಿನ ದಿ ಲರ್ನಿಂಗ್ ಸೆಂಟರ್ ಸಂಸ್ಥೆಯನ್ನು ಪ್ರತಿನಿಧಿಸಿದ್ದ. ಸದ್ಯ ಐರಿಸ್ ರಾಷ್ಟ್ರೀಯ ಗ್ರಾಂಡ್ ಅವಾರ್ಡ್-2018ರ ಗೌರವ ಪಡೆದು 2019ರ ಮೇ ತಿಂಗಳಿನಲ್ಲಿ ಅಮೆರಿಕದ ಫೋನೆಕ್ಸ್ ಆರಿಜೋನಾದಲ್ಲಿ ನಡೆಯುವ   ಅಂತಾರಾಷ್ಟ್ರೀಯ ವಿಜ್ಞಾನ ಸಮಾವೇಶದಲ್ಲಿ ಎರಡನೇ ಬಾರಿಗೆ ಭಾರತವನ್ನು ಪ್ರತಿನಿಧಿಸುವ ಅವಕಾಶ ಪಡೆದುಕೊಂಡು ಕಂಪ್ಯೂರ್ಟರ್ ಸೆಕ್ಯೂರಿಟಿ ವಿಷಯದ ಕುರಿತು ವೈಜ್ಞಾನಿಕ ಸಂಶೋಧನಾ ಪ್ರಬಂಧ ಮಂಡಿಸಲಿದ್ದಾ ಸುಹೇಲ್. ಇವನಿಗೆ ಆಲ್ ದಿ ಬೆಸ್ಟ್ ಹೇಳೋಣ.

 

 

Follow Us:
Download App:
  • android
  • ios