ಪ್ಲುಟೋ ಪತ್ತೆಯಾಗಿ 90 ವರ್ಷ: ಅನುದಿನವೂ ತಿಳುವಳಿಕೆಯ ವಿಸ್ತಾರದ ಹರ್ಷ!

ಪ್ಲುಟೋ ಗ್ರಹ ಕಂಡು ಹಿಡಿದು ಗತಿಸಿವೆ 90 ವರ್ಷಗಳು| ಖಗೋಳ ವಿಜ್ಞಾನಿ ಕ್ಲೈಡ್ ಟೋಂಬಾಗ್ ಪತ್ತೆ ಹಚ್ಚಿದ ಪ್ಲುಟೋ ಗ್ರಹ| ಸೌರಮಂಡಲದ 9ನೇ ಗ್ರಹವಾಗಿ ಪರಿಚಯವಾಗಿದ್ದ ಪ್ಲುಟೋ| 2004ರಲ್ಲಿ ಪ್ಲುಟೋ ಗ್ರಹ ವ್ಯವಸ್ಥೆಯ ಪಟ್ಟಿಯಿಂದ ಹೊರಕ್ಕೆ| ಪ್ಲುಟೋ ಇದೀಗ ಕೈಪರ್ ಬೆಲ್ಟ್’ಮ ಅತ್ಯತಂತ ದೊಡ್ಡ ಕುಬ್ಜ ಗ್ರಹ| ಪ್ಲುಟೋ ಕುರಿತು ಕುತೂಹಲಕಾರಿ ಮಾಹಿತಿ ಇಲ್ಲಿದೆ| 

Pluto Discovered 90 Years Ago Know More About The Dwarf Planet

ವಾಷಿಂಗ್ಟನ್(ಫೆ.20): ಅದು ಫೆ.18, 1930. ಪ್ರಖ್ಯಾತ ಖಗೋಳ ವಿಜ್ಞಾನಿ ಕ್ಲೈಡ್ ಟೋಂಬಾಗ್ ಸೌರಮಂಡಲದ ಅತ್ಯಂತ ದೂರದ ಗ್ರಹ(ಈಗ ಅಲ್ಲ) ಪ್ಲುಟೋವನ್ನು ಕಂಡುಹಿಡಿದ ದಿನ.

ಫ್ಲ್ಯಾಗ್ ಸ್ಟಾಫ್ ಅರಿಜೋನಾದಲ್ಲಿರುವ ಲಾವೆಲ್ ಖಗೋಳ ವೀಕ್ಷಣಾಲಯದಲ್ಲಿ ಪ್ಲುಟೋ ಇರುವಿಕೆಯನ್ನು ಮೊದಲ ಬಾರಿಗೆ ಪತ್ತೆ ಹಚ್ಚಿದ್ದ ಕ್ಲೈಡ್ ಟೋಂಬಾಗ್, ಸೌರಮಂಡಲದ 9ನೇ ಗ್ರಹದ ಅಸ್ತಿತ್ವವನ್ನು ಘೋಷಿಸಿದ್ದರು.

ಇದೀಗ ಪ್ಲುಟೋ ಆವಿಷ್ಕಾರದ 90ನೇ ವರ್ಷಾಚರಣೆಯನ್ನು ನಾಸಾ ಆಚರಿಸುತ್ತಿದ್ದು, ಪ್ಲುಟೋ ಗ್ರಹ ಕಂಡುಹಿಡಿದ ವಿಜ್ಞಾನಿ ಕ್ಲೈಡ್ ಟೋಂಬಾಗ್ ಅವರನ್ನು ಸ್ಮರಿಸಿದೆ.

ಈ 90 ವರ್ಷಗಳ ಅವಧಿಯಲ್ಲಿ ನಾಸಾದ ಹಲವು ಖಗೋಳ ಅನ್ವೇಷಕ ವಾಹಕಗಳು ಪ್ಲುಟೋ ಗ್ರಹದ ಅಧ್ಯಯನ ನಡೆಸಿವೆ. ಅದರಲ್ಲಿ ನಾಸಾದ ನ್ಯೂ ಹೊರೈಜನ್ ನೌಕೆ ಅತ್ಯಂತ ಮಹತ್ವದ್ದು. ಪ್ಲುಟೋದ ಗುರುತ್ವಾಕರ್ಷಣೆ ಬಲದ ಪರೀಧಿ ತಲುಪಿದ ಮೊದಲ ಮಾನವ ನಿರ್ಮಿತ ನೌಕೆ ಎಂಬ ಹೆಗ್ಗಳಿಕೆಗೆ ನ್ಯೂ ಹೊರೈಜನ್ ನೌಕೆ ಪಾತ್ರವವಾಗಿದೆ.

ಆದರೆ 2004ರಲ್ಲಿ ಪ್ಲುಟೋದ ಗಾತ್ರ, ಗುರುತ್ವ ಬಲ ಹಾಗೂ ಇತರ ಅಂಶಗಳನ್ನು ಪರಿಗಣಿಸಿ ಅದನ್ನು ಗ್ರಹ ವ್ಯವಸ್ಥೆಯಿಂದ ಹೊರಗೆ ಹಾಕಿದ್ದು ಇದೀಗ ಇತಿಹಾಸ. ಪ್ಲುಟೋವನ್ನು ಸೌರಮಂಡಲದ ಗ್ರಹಗಳ ಪಟ್ಟಿಯಿಂದ ಹೊರಗಟ್ಟಿದ ಪರಿಣಾಮ ಈಗ ಕೇವಲ 8 ಗ್ರಹಗಳು ಮಾತ್ರ ಉಳಿದುಕೊಂಡಿವೆ. 

ಪ್ಲುಟೋ 'ಗ್ರಹ'ಚಾರ ಬದಲು?: ಅದೊಂದು ಗ್ರಹ ಎಂದ ನಾಸಾ ಮುಖ್ಯಸ್ಥ!

ಆದರೆ ಪ್ಲುಟೋ ಸೇರಿದಂತೆ ಯುರೇನಸ್ ಗ್ರಹದ ಆಚೆ ವಿಶಾಲ ಪ್ರದೇಶದಲ್ಲಿ ಹರಿಡುರವ ಕೈಪರ್ ಬೆಲ್ಟ್ ಗ್ರಹಕಾಯ ವ್ಯವಸ್ಥೆಯ ಕೆಲವು ಸಣ್ಣ ಗ್ರಹಗಳನ್ನು ಕುಬ್ಜ ಗ್ರಹಗಳು ಎಂದು ಮರುನಾಮಕರಣ ಮಾಡಲಾಯಿತು.

ಪ್ಲುಟೋ ಗ್ರಹದ ಕುರಿತು ಕೆಲವು ಕುತೂಲಹಕಾರಿ ಮಾಹಿತಿ ಇಲ್ಲಿದೆ.

1. ಫೆ.18, 1930ರಲ್ಲಿ ಖಗೋಳ ವಿಜ್ಞಾನಿ ಕ್ಲೈಡ್ ಟೋಂಬಾಗ್ ಪ್ಲುಟೋವನ್ನು ಕಂಡುಹಿಡಿದರು.
2. ವೆನೆಷಿಯಾ ಬರ್ನೆ ಎಂಬ ಆಕ್ಸ್’ಫರ್ಡ್ ಶಾಲೆಯ 11 ವರ್ಷದ ಬಾಲಕಿ ಹೊಸದಾಗಿ ಕಂಡುಹಿಡಿದ ಗ್ರಹಕ್ಕೆ ಪ್ಲುಟೋ ಎಂದು ಹೆಸರಿಟ್ಟಳು.
3. ಪ್ಲುಟೋ ಸೂರ್ಯನಿಂದ 440-740 ಕೋಟಿ ಕಿ.ಮೀ ದೂರದಲ್ಲಿದೆ.
4. ಪ್ಲುಟೋ ಸೂರ್ಯನನ್ನು ಒಂದು ಸುತ್ತು ಹಾಕಲು ಬರೋಬ್ಬರಿ 248 ವರ್ಷಗಳನ್ನು ತೆಗೆದುಕೊಳ್ಳುತ್ತದೆ.
5. ಪ್ಲುಟೋ ಗ್ರಹಕ್ಕೆ ಶಾರನ್, ಸ್ಟಿಕ್ಸ್, ನಿಕ್ಸ್, ಕೆರ್ಬೆರೋಸ್ ಹಾಗೂ ಹೈಡ್ರಾ ಎಂಬ 5 ಉಪಗ್ರಹಗಳಿವೆ.
6. 2004ರಲ್ಲಿ ಪ್ಲುಟೋವನ್ನು ಗ್ರಹ ವ್ಯವಸ್ಥೆಯಿಂದ ಪ್ರತ್ಯೇಕಿಸಿ ಕುಬ್ಜ ಗ್ರಹಗಳ ಪಟ್ಟಿಗೆ ಸೇರಿಸಲಾಯಿತು. ಅಲ್ಲದೇ ಇದಕ್ಕೆ 134340 ಎಂಬ ಸಂಖ್ಯೆಯನ್ನು ನೀಡಲಾಯಿತು.
7. ನ್ಯೂ ಮೆಕ್ಸಿಕೋ ಮಾತ್ರ ಪ್ಲುಟೋವನ್ನು ಇನ್ನೂ ಗ್ರಹವೆಂದೇ ಪರಿಗಣಿಸುವ ಏಕೈಕ ರಾಷ್ಟ್ರ. ಅದರಂತೆ ಪ್ರತಿವರ್ಷ ಮಾರ್ಚ್ 13ರನ್ನು ‘ಪ್ಲುಟೋ ಪ್ಲ್ಯಾನೆಟ್ ಡೇ’ಯನ್ನಾಗಿ ಆಚರಿಸುತ್ತದೆ.
8. ಪ್ಲುಟೋದ ಮೇಲ್ಮೈಯು ಶೇ.98ರಷ್ಟು ಸಾರಜನಕದ ಮಂಜಿನಿಂದ ಕೂಡಿದೆ. ಅಲ್ಪಪ್ರಮಾಣದ  ಮಿಥೇನ್ ಹಾಗೂ ಇಂಗಾಲದ ಮಾನಾಕ್ಸೈಡ್ ಇರುವಿಕೆಯನ್ನು ಪತ್ತೆ ಮಾಡಲಾಗಿದೆ.
9. ಪ್ಲುಟೋದ ದ್ರವ್ಯರಾಶಿ ಭೂಮಿಯ ದ್ರವ್ಯಾರಾಶಿಯ ಕೇವಲ ಶೇ.1ರಷ್ಟಿದೆ.
10. ಸೂರ್ಯನ ಕಿರಣಗಳು ಪ್ಲುಟೋ ಗ್ರಹ ತಲುಪಲು 5.5 ಗಂಟೆ ಸಮಯ ಬೇಕು(ಭೂಮಿಗೆ ಸೂರ್ಯನ ಕಿರಣ ಕೇವಲ 8 ಸೆಕೆಂಡ್’ನಲ್ಲಿ ತಲುಪುತ್ತದೆ.)
11. ನಾಸಾದ ವಾಯೇಜರ್ 1, ಹಾಗೂ ನ್ಯೂ ಹೊರೈಜನ್ ನೌಕೆ ಪ್ಲುಟೋದ ಕುರಿತು ಅಧ್ಯಯನ ನಡೆಸಿವೆ.


ಹೀಗೆ ಸೌರಮಂಡಲದ ಅತ್ಯಂತ ದೂರದ ಹಾಗೂ ಕೊನೆಯ ಗ್ರಹ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಪ್ಲುಟೋ, ಇದೀಗ ಕೇವಲ ಕುಬ್ಜ ಗ್ರಹವಾಗಿ ಪರಿಗಣಿಸಲ್ಪಡುತ್ತದೆ. ಆದರೂ ಈ ಗ್ರಹದ ಕುರಿತು ಮಾನವನ ತತಿಳುವಳಿಕೆಯ ಜ್ಞಾನ ದಿನವೂ ವಿಸ್ತರಿಸುತ್ತಿರುವುದು ವಿಶೇಷ.

Latest Videos
Follow Us:
Download App:
  • android
  • ios