ಬೆಂಗಳೂರು(ಅ.01): ವಿಕ್ರಮ್ ಲ್ಯಾಂಡರ್ ಸಂಪರ್ಕಕ್ಕಾಗಿ ಸತತ ಪ್ರಯತ್ನ ಮುಂದುವರೆಸಿರುವ ಇಸ್ರೋ, ನಿಗದಿತ ಸಮಯ ಮುಗಿದಿದ್ದರೂ ಸಂಪರ್ಕ ಸಾಧ್ಯತೆಯ ಆಶಾಭಾವನೆಯನ್ನು ಮುಂದುವರೆಸಿದೆ.

ಕಳೆದ ಸೆ.07 ಚಂದ್ರನ ದಕ್ಷಿಣ ಧ್ರುವದ ಮೇಲೆ ಹಾರ್ಡ್ ಲ್ಯಾಂಡಿಂಗ್ ಆದ ಬಳಿಕ ವಿಕ್ರಮ್ ಲ್ಯಾಂಡರ್  ಸಂಪರ್ಕ ಕಡಿದುಕೊಂಡಿತ್ತು. ತದನಂತರ ಲ್ಯಾಂಡರ್ ಸಂಪರ್ಕಕ್ಕಾಗಿ ಸತತ ಪ್ರಯತ್ನ ನಡೆಸಿರುವ ಇಸ್ರೋ, ಈಗಲೂ ಸಂಪರ್ಕ ಸಾಧ್ಯೆತೆಯ ಕುರಿತು ಆಶಾಭಾವನೆ ಹೊಂದಿದೆ.

ಸಂಪರ್ಕ ಕಡಿದುಕೊಂಡಿರುವ ವಿಕ್ರಮ್ ಲ್ಯಾಂಡರ್ ಮರುಸಂಪರ್ಕಕ್ಕೆ ಕೇವಲ 14 ದಿನಗಳ ಕಾಲಾವಕಾಶ ಇತ್ತು. ಇದೀಗ ನಿಗದಿತ ಸಮಯ ಮುಗಿದಿದ್ದು, ಆದರೂ ಸಂಪರ್ಕ ಸಾಧ್ಯತೆಗಳ ಕುರಿತು ಇಸ್ರೋ ಚಿಂತಿಸುತ್ತಿದೆ. 

ಸದ್ಯ ಚಂದ್ರನ ದಕ್ಷಿಣ ದ್ರುವದಲ್ಲಿ ನಿರಂತರ ಕತ್ತಲು  ಆವರಿಸಿದ್ದು,  ವಿಕ್ರಮ್ ಲ್ಯಾಂಡರ್ ಬಿದ್ದಿರುವ ಸ್ಥಳ ಗುರುತಿಸಲು ಸಾಧ್ಯವಿಲ್ಲ. ಆದರೆ 10 ದಿನಳ ಬಳಿಕ ಬೆಳಕು ಆವರಿಸಿದಾಗ ಸಂಪರ್ಕಕ್ಕೆ ಮತ್ತೆ ಪ್ರಯತ್ನ ನಡೆಸಲಾಗುವುದು ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ಸ್ಪಷ್ಟಪಡಿಸಿದ್ದಾರೆ.