ಅಮೆರಿಕಾದ ಟೆಕ್ ಕಂಪನಿಗಳಿಂದ ಬಹಿಷ್ಕಾರಕ್ಕೊಳಗಾಗಿರುವ ಚೀನಾದ Huawei ಕಂಪನಿಯು Androidಗೆ ಸೆಡ್ಡುಹೊಡೆಯಲು, ತನ್ನದೇ ಆದ ಹೊಸ ಆಪರೇಟಿಂಗ್ ಸಿಸ್ಟಮನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ.

Huawei ಫೋನ್‌ಗಳಿಗೆ ಬೇಕಾಗುವ ಹಾಂಗ್‌ಮೆಂಗ್ (Hongmeng) ಎಂಬ ಆಪರೇಟಿಂಗ್ ಸಿಸ್ಟಮನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದ್ದೇವೆ, ಎಂದು ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Huaweiಯು ಆಗಸ್ಟ್ 2019ರ ವರೆಗೆ ಮಾತ್ರ Android OSನ್ನು ಬಳಸಬಹುದಾಗಿದ್ದು, ಹೊಸ Hongmeng OS ಅಕ್ಟೋಬರ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ | ನೀವು ಹೋಗಬೇಕಾದ ಬಸ್‌ ನಂಬರ್‌ ಹೇಳುತ್ತೆ ಗೂಗಲ್‌ ಮ್ಯಾಪ್‌

Hongmeng ಆಪರೇಟಿಂಗ್ ಸಿಸ್ಟಮ್ Androidಗಿಂತ 60 ಶೇ. ಹೆಚ್ಚು ವೇಗವಾಗಿ ಕೆಲಸ ಮಾಡುವ ಸಾಮರ್ಥ್ಯ ಹೊಂದಲಿದೆ ಎನ್ನಲಾಗುತ್ತಿದೆ.  ಚೀನಾದ ಇತರ ದೈತ್ಯ ಮೊಬೈಲ್ ತಯಾರಕ ಕಂಪನಿಗಳಾದ Oppo ಮತ್ತು Vivo ಕೂಡಾ ಇದನ್ನು ಪರೀಕ್ಷಿಸಲು ಮುಂದಾಗಿವೆ. ಯಾವುದಕ್ಕೂ, ಹೊಸ OS ಬಿಡುಗಡೆಯಾಗದೇ ಅದರ ಕಾರ್ಯಕ್ಷಮತೆ ಬಗ್ಗೆ ಖಾತ್ರಿಪಡಿಸುವಂತಿಲ್ಲ. 

ಕಳೆದ ತಿಂಗಳು ಅಮೆರಿಕಾದ ಡೊನಾಲ್ಡ್ ಟ್ರಂಪ್ ಸರ್ಕಾರ, ಆಂತರಿಕ ಭದ್ರತೆಯ ಕಾರಣವನ್ನು ಮುಂದಿಟ್ಟುಕೊಂಡು Huawei ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿತ್ತು. ಹಾಗೂ, ಅಮೆರಿಕಾದ ಟೆಕ್ ಕಂಪನಿಗಳ ಜೊತೆ ವ್ಯವಹರಿಸದಂತೆ ನಿರ್ಬಂಧ ಹೇರಿತ್ತು.

ಆದ್ದರಿಂದ, ಗೂಗಲ್ ಕೂಡಾ ತನ್ನ ಆ್ಯಂಡ್ರಾಯಿಡ್ ಸೇವೆಯನ್ನು Huawei ಫೋನ್‌ಗಳಿಗೆ ಸ್ಥಗಿತಗೊಳಿಸುವ ಸನ್ನಿವೇಶ ಎದುರಾಗಿದೆ.

ಟ್ರಂಪ್ ಸರ್ಕಾರ ಭದ್ರತೆಯ ಕಾರಣ ನೀಡಿ ಈ ಕ್ರಮ ಕೈಗೊಂಡರೂ, ಇದನ್ನು ಚೀನಾ ಜೊತೆಗಿನ ವ್ಯಾಪಾರ-ಸಮರದ ಇನ್ನೊಂದು ರೂಪ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.