ಚೀನಾದ ಹುವೈ ಕಂಪೆನಿಗೆ ನಿಷೇಧ!
ಚೀನಾದ ಹುವಾವೇ ಕಂಪನಿ ಅಮೆರಿಕದಿಂದ ಬಿಡಿಭಾಗ ತಂತ್ರಜ್ಞಾನ ಬಳಕೆಗೆ ನಿಷೇಧ
ವಾಷಿಂಗ್ಟನ್[ಮೇ.17]: ತನ್ನ ಟೆಲಿಕಾಂ ಉತ್ಪನ್ನಗಳ ಮೂಲಕ ಬೇಹುಗಾರಿಕೆ ನಡೆಸುತ್ತಿದೆ ಎಂಬ ಆರೋಪವನ್ನು ಎದುರಿಸುತ್ತಿರುವ ಚೀನಾದ ಹುವಾವೇ ಕಂಪನಿಯನ್ನು ಅಮೆರಿಕ ನಿಷೇಧಿತ ಕಂಪನಿಗಳ ಪಟ್ಟಿಗೆ ಸೇರಿಸಿದೆ.
ಚೀನಾದ ಜೊತೆ ವ್ಯಾಪಾರಿ ಕದನವನ್ನು ತೀವ್ರಗೊಳಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕದ ಟೆಲಿಕಾಂ ಕಂಪನಿಗಳು ದೇಶದ ಭದ್ರತೆಗೆ ಧಕ್ಕೆ ಉಂಟು ಮಾಡಬಬಲ್ಲ ವಿದೇಶಿ ನಿರ್ಮಿತ ಉಪಕರಣಗಳನ್ನು ಅಳವಡಿಸಿಕೊಳ್ಳುವುದಕ್ಕೆ ನಿಷೇಧ ಹೇರಿ ಆದೇಶವೊಂದನ್ನು ಹೊರಡಿಸಿದ್ದಾರೆ. ಟ್ರಂಪ್ ತಮ್ಮ ಆದೇಶದಲ್ಲಿ ಯಾವುದೇ ದೇಶ ಅಥವಾ ಕಂಪನಿಯ ಹೆಸರನ್ನು ನೇರವಾಗಿ ಉಲ್ಲೇಖಿಸಿಲ್ಲ. ಆದರೆ, ಈ ಆದೇಶದಿಂದಾಗಿ ವಿಶ್ವದಲ್ಲೇ ಅತಿ ದೊಡ್ಡ ದೂರಸಂಪರ್ಕ ಸಾಧನಗಳನ್ನು ಉತ್ಪಾದನೆ ಮಾಡುವ ಚೀನಾ ತಂತ್ರಜ್ಞಾನ ದೈತ್ಯ ಹುವಾವೇ ಅಮೆರಿಕದಿಂದ ಬಿಡಿಭಾಗಗಳು ಮತ್ತು ತಂತ್ರಜ್ಞಾನವನ್ನು ಖರೀದಿಸಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ.
ಹುವಾವೇ ಕಂಪನಿ ಅಮೆರಿಕದ ತಂತ್ರಜ್ಞಾನ ಪಡೆಯಲು ಅಮೆರಿಕ ಸರ್ಕಾರದ ಪರವಾನಗಿ ಪಡೆಯ ಬೇಕಿದೆ. ಬೇಹುಗಾರಿಕೆ, ಸೇವಾ ತಾರತಮ್ಯ, ವಂಚನೆಯ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಅಮೆರಿಕ ಸೇರಿದಂತೆ ವಿವಿಧ ದೇಶಗಳು ಹುವಾವೇಗೆ ತಮ್ಮ ದೇಶದ ನೆಟ್‌ವರ್ಕ್ ಬಳಸಿಕೊಳ್ಳಲು ನಿಷೆಧ ಹೇರಿವೆ.