ಗೂಗಲ್ ಮತ್ತು ಸ್ಯಾಮ್ಸಂಗ್ ಜಂಟಿಯಾಗಿ 'Hey Gemini' ವೈಶಿಷ್ಟ್ಯವುಳ್ಳ ನೂತನ ಸ್ಮಾರ್ಟ್ ಗ್ಲಾಸ್ಗಳನ್ನು ಪರಿಚಯಿಸಿವೆ. ಇದರಲ್ಲಿ 12MP ಕ್ಯಾಮೆರಾ, ಸ್ಪೀಕರ್ ಮತ್ತು AI ಅಸಿಸ್ಟೆಂಟ್ ಸೌಲಭ್ಯವಿದ್ದು, ಕೇವಲ ಧ್ವನಿಯ ಮೂಲಕ ಮಾಹಿತಿ ಪಡೆಯಬಹುದು. ಡಿಸೆಂಬರ್ 10 ರಿಂದ ಅಮೆರಿಕದಲ್ಲಿ ಮಾರಾಟ ಆರಂಭವಾಗಲಿದೆ.
ಬೆಂಗಳೂರು (ನ.14): ಇಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ (AI) ಬಳಕೆಯು ಕೇವಲ ಸ್ಮಾರ್ಟ್ಫೋನ್ಗಳಿಗೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ದೈನಂದಿನ ಜೀವನದ ಕೆಲಸಗಳನ್ನು ಮತ್ತಷ್ಟು ಸುಲಭಗೊಳಿಸುವಂತಹ ಸ್ಮಾರ್ಟ್ ಗ್ಯಾಜೆಟ್ಗಳ ಅಭಿವೃದ್ಧಿಯಲ್ಲಿ ಟೆಕ್ ದಿಗ್ಗಜರು ನಿರತರಾಗಿದ್ದಾರೆ. ಇದೇ ಹಾದಿಯಲ್ಲಿ ಮತ್ತೊಂದು ದಿಟ್ಟ ಹೆಜ್ಜೆಯಿಟ್ಟಿರುವ ಗೂಗಲ್ (Google), ತನ್ನ ನೂತನ Android XR ಸ್ಮಾರ್ಟ್ ಗ್ಲಾಸ್ಗಳಲ್ಲಿ (Smart Glasses) 'Gemini Live' ಸೇವೆಯನ್ನು ಸಕ್ರಿಯಗೊಳಿಸಲು 'Hey Gemini' ವಾಯ್ಸ್ ಕಮಾಂಡ್ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದೆ.
ಈ ಹೊಸ ಸೌಲಭ್ಯದಿಂದಾಗಿ, AI ಅಸಿಸ್ಟೆಂಟ್ ಜೊತೆ ಮಾತನಾಡಲು ಪದೇ ಪದೇ ಜೇಬಿನಿಂದ ಫೋನ್ ಹೊರತೆಗೆಯುವ ಅಥವಾ ಯಾವುದೇ ಬಟನ್ ಒತ್ತುವ ಅಗತ್ಯವಿರುವುದಿಲ್ಲ. ಯೂಸರ್ಗಳು ಕನ್ನಡಕ ಧರಿಸಿ ಕೇವಲ "Hey Gemini" ಎಂದು ಹೇಳಿದರೆ ಸಾಕು, ತಕ್ಷಣವೇ AI ಅಸಿಸ್ಟೆಂಟ್ ಸಕ್ರಿಯಗೊಂಡು ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧವಾಗುತ್ತದೆ.
9 to 5 Google ವರದಿಯ ಪ್ರಕಾರ, ಗೂಗಲ್ ಮತ್ತು ಸ್ಯಾಮ್ಸಂಗ್ (Samsung) ಜಂಟಿಯಾಗಿ ಅಭಿವೃದ್ಧಿಪಡಿಸಿರುವ ನೂತನ 'ಇಂಟೆಲಿಜೆಂಟ್ ಐವೇರ್' (Intelligent Eyewear) ಸಾಧನಗಳಲ್ಲಿ ಈ ವೈಶಿಷ್ಟ್ಯವನ್ನು ಅಳವಡಿಸಲಾಗಿದೆ. ದಿನನಿತ್ಯ ದೀರ್ಘಕಾಲದವರೆಗೆ ಧರಿಸಿದರೂ ಯಾವುದೇ ಕಿರಿಕಿರಿಯಾಗದಂತೆ ಇವುಗಳನ್ನು ವಿನ್ಯಾಸಗೊಳಿಸಲಾಗಿದ್ದು, ಇದಕ್ಕಾಗಿ ಎರಡೂ ಕಂಪನಿಗಳು ಖ್ಯಾತ ಐವೇರ್ ಬ್ರ್ಯಾಂಡ್ಗಳಾದ ವಾರ್ಬಿ ಪಾರ್ಕರ್ (Warby Parker) ಮತ್ತು ಜೆಂಟಲ್ ಮಾನ್ಸ್ಟರ್ (Gentle Monster) ಜೊತೆ ಪಾಲುದಾರಿಕೆ ಮಾಡಿಕೊಂಡಿವೆ.
ಆಂಡ್ರಾಯ್ಡ್ ಫೋನ್ಗಳಲ್ಲಿ ಇನ್ನೂ 'Hey Google' ಕಮಾಂಡ್ ಅನಿವಾರ್ಯ
ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಗೂಗಲ್ ತನ್ನ ಸ್ಮಾರ್ಟ್ ಗ್ಲಾಸ್ಗಳಿಗೆ ಮಾತ್ರ 'Hey Gemini' ಕಮಾಂಡ್ ನೀಡಿದೆ. ಆದರೆ ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳಲ್ಲಿ Gemini Live ಮತ್ತು Google Search ಸಕ್ರಿಯಗೊಳಿಸಲು ಈಗಲೂ ದಶಕದಿಂದ ಬಳಕೆಯಲ್ಲಿರುವ "Hey Google" ಎಂದೇ ಹೇಳಬೇಕಾಗುತ್ತದೆ.
ಪ್ರತ್ಯೇಕ ಕಮಾಂಡ್ ನೀಡಲು ಕಾರಣವೇನು? ಸ್ಮಾರ್ಟ್ಫೋನ್ಗಳಲ್ಲಿ ಜನರು ಸಾಮಾನ್ಯವಾಗಿ ಮಾಹಿತಿ ಹುಡುಕಲು (Voice Search) ಧ್ವನಿ ಆದೇಶ ಬಳಸುತ್ತಾರೆ. ಆದರೆ ಸ್ಮಾರ್ಟ್ ಗ್ಲಾಸ್ ಬಳಕೆ ಸಂಪೂರ್ಣ ಭಿನ್ನವಾಗಿದೆ. ಕನ್ನಡಕ ಧರಿಸಿದ ಬಳಕೆದಾರರು ತಮ್ಮ ಕಣ್ಣಮುಂದೆ ಕಾಣುವ ಸ್ಥಳ ಅಥವಾ ವಸ್ತುಗಳನ್ನು ನೋಡುತ್ತಲೇ ಅವುಗಳ ಬಗ್ಗೆ ಪ್ರಶ್ನೆ ಕೇಳಿ ತಕ್ಷಣದ ಮಾಹಿತಿ ಪಡೆಯಬಹುದು. ಹೀಗಾಗಿ ನೇರವಾಗಿ Gemini ಅನ್ನು ಧ್ವನಿಯ ಮೂಲಕ ಕರೆಯುವುದು ಸುಲಭವಾಗಲಿದೆ. ಇತ್ತ ಸ್ಯಾಮ್ಸಂಗ್ ಸಹ ತನ್ನ ಸ್ಮಾರ್ಟ್ಫೋನ್ ಮತ್ತು ಸ್ಮಾರ್ಟ್ ಗ್ಲಾಸ್ಗಳಲ್ಲಿ ಬಿಸ್ಕ್ಬಿ (Bixby) ಸಕ್ರಿಯಗೊಳಿಸಲು "Hi Bixby" ಎಂಬ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿದೆ.
ಬೆಲೆ ಎಷ್ಟು? ಮಾರಾಟ ಯಾವಾಗ ಆರಂಭ?
ಗೂಗಲ್ ಮತ್ತು ಸ್ಯಾಮ್ಸಂಗ್ ಸಹಯೋಗದ ಈ ಸ್ಮಾರ್ಟ್ ಗ್ಲಾಸ್ಗಳ ಬೆಲೆಯೂ ಬಹಿರಂಗವಾಗಿದೆ.
ವಾರ್ಬಿ ಪಾರ್ಕರ್ (Warby Parker) ಶ್ರೇಣಿ: ಆರಂಭಿಕ ಬೆಲೆ 395 ಡಾಲರ್ (ಭಾರತೀಯ ಕರೆನ್ಸಿಯಲ್ಲಿ ಅಂದಾಜು ₹37,000).
ಜೆಂಟಲ್ ಮಾನ್ಸ್ಟರ್ (Gentle Monster) ಶ್ರೇಣಿ: ಆರಂಭಿಕ ಬೆಲೆ 499 ಡಾಲರ್ (ಅಂದಾಜು ₹42,000).
ಪ್ರಸ್ತುತ ಅಮೆರಿಕದಲ್ಲಿ (US) ಮಾತ್ರ ಇವುಗಳ ಪ್ರೀ-ಆರ್ಡರ್ ಬುಕಿಂಗ್ ನಡೆಯುತ್ತಿದ್ದು, ಡಿಸೆಂಬರ್ 10 ರಿಂದ ಅಧಿಕೃತ ಮಾರಾಟ ಆರಂಭವಾಗಲಿದೆ.
12MP ಕ್ಯಾಮೆರಾದಿಂದ 64GB ಸ್ಟೋರೇಜ್ವರೆಗೆ ಏನೆಲ್ಲಾ ಫೀಚರ್ಸ್ ಇವೆ?
ತಂತ್ರಜ್ಞಾನದ ದೃಷ್ಟಿಯಿಂದ ಈ ಸ್ಮಾರ್ಟ್ ಕನ್ನಡಕಗಳು ಅತ್ಯಂತ ಶಕ್ತಿಶಾಲಿಯಾಗಿವೆ. ಇದರಲ್ಲಿ ಕ್ವಾಲ್ಕಾಮ್ Snapdragon AR1 Gen 1 ಚಿಪ್ಸೆಟ್ ಅಳವಡಿಸಲಾಗಿದ್ದು, 2GB RAM ಮತ್ತು 64GB ಆಂತರಿಕ ಸ್ಟೋರೇಜ್ ನೀಡಲಾಗಿದೆ. ಫೋಟೋ ಮತ್ತು ವಿಡಿಯೋ ರೆಕಾರ್ಡಿಂಗ್ಗಾಗಿ ಒಂದು ಬದಿಯಲ್ಲಿ 12 ಮೆಗಾಪಿಕ್ಸೆಲ್ HDR ಕ್ಯಾಮೆರಾ ನೀಡಲಾಗಿದೆ. ಜೊತೆಗೆ ಎರಡು ಓಪನ್ ಸ್ಪೀಕರ್ಗಳು (Open speakers) ಮತ್ತು ನಾಲ್ಕು ಮೈಕ್ರೋಫೋನ್ಗಳಿವೆ. ಅಂದರೆ ಒಂದೇ ಕನ್ನಡಕದಲ್ಲಿ ಕ್ಯಾಮೆರಾ, ಆಡಿಯೋ ಮತ್ತು AI ಅಸಿಸ್ಟೆಂಟ್ ಮೂರೂ ಸೌಲಭ್ಯಗಳು ಲಭ್ಯವಿವೆ. Wi-Fi 6E ಮತ್ತು Bluetooth 5.4 ಬೆಂಬಲವಿದೆ. ಭಾರತೀಯ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್ ಗ್ಲಾಸ್ಗಳು ಯಾವಾಗ ಬಿಡುಗಡೆಯಾಗಲಿವೆ ಎಂಬ ಬಗ್ಗೆ ಕಂಪನಿಗಳು ಇನ್ನೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.














