ಗೂಗಲ್ ತನ್ನ ಬಳಕೆದಾರರಿಗೆ ಹಳೆಯ ಜಿಮೇಲ್ ಖಾತೆಯನ್ನು ಉಳಿಸಿಕೊಂಡು, ಅದರ ವಿಳಾಸವನ್ನು (ನೇಮ್) ಬದಲಾಯಿಸಲು ಹೊಸ ಅವಕಾಶ ನೀಡಿದೆ. ಇದರಿಂದಾಗಿ, ಶಾಲಾ-ಕಾಲೇಜು ದಿನಗಳಲ್ಲಿ ಸೃಷ್ಟಿಸಿದ ಮುಜುಗರದ ಇಮೇಲ್ ಹೆಸರುಗಳಿಂದ ತೊಂದರೆ ಅನುಭವಿಸುತ್ತಿದ್ದವರು ತಮ್ಮ ಡೇಟಾ ಕಳೆದುಕೊಳ್ಳದೆ ಹೊಸ ಹೆಸರು ಪಡೆಯಬಹುದು.
ಬೆಂಗಳೂರು (ಡಿ.29): ಹೈಸ್ಕೂಲ್ ಮೆಟ್ಟಿಲೇರಿದಾಗ, ಕಾಲೇಜು ಜೀವನ ಆರಂಭಿಸಿದಾಗ ಗೂಗಲ್‌ನಲ್ಲಿ ಜಿಮೇಲ್ ಅಕೌಂಟ್ ಓಪನ್ ಮಾಡಿದ್ದವರು ಸಾಕಷ್ಟು ಮಂದಿ. ಆದರೆ, ತಮ್ಮ ಜೀಮೇಲ್ ಅಕೌಂಟ್ ಹೆಸರಿನಿಂದ ಮುಜುಗರಕ್ಕೆ ಒಳಗಾಗಿ ಜಾಬ್ ಅಪ್ಲೈ ಮಾಡುವ ಟೈಮ್‌ನಲ್ಲಿ ಹೊಸ ಜಿಮೇಲ್ ಅಕೌಂಟ್ ಕ್ರಿಯೇಟ್ ಮಾಡಿದವರೂ ಸಾಕಷ್ಟಿದ್ದಾರೆ. ಆದರೆ, ಇನ್ನು ಮುಂದೆ ಆ ತಾಪತ್ರಯವಿಲ್ಲ. ಗೂಗಲ್ ಈಗ ಯೂಸರ್‌ಗಳಿಗೆ ತಮ್ಮ ಜಿಮೇಲ್ ಪ್ರಿಫಿಕ್ಸ್ ಅಂದರೆ ಜಿಮೇಲ್ ವಿಳಾಸವನ್ನು ಬದಲಾಯಿಸುವ ಅವಕಾಶ ನೀಡಲಿದೆ. ಇದರಿಂದ ನಿಮ್ಮ ಜಿಮೇಲ್ ಅಕೌಂಟ್ ಇರಿಸಿಕೊಂಡು, ಹೊಸ ನೇಮ್ ಪಡೆಯಬಹುದಾಗಿದೆ.
ಗೂಗಲ್ ಕೊನೆಗೂ ಯೂಸರ್‌ಗಳ ಬಹುಕಾಲದ ಕೂಗಿಗೆ ಉತ್ತರಿಸಿದ್ದು, ಜಿಮೇಲ್ ಬಳಕೆದಾರರಿಗೆ ಮುಜುಗರದ ಇಮೇಲ್ ವಿಳಾಸಗಳನ್ನು ಬದಲಾಯಿಸಲು ಅವಕಾಶ ಮಾಡಿಕೊಟ್ಟಿದೆ. ಜಿಮೇಲ್ ಖಾತೆದಾರರು ಈಗ ತಮ್ಮ ಡೇಟಾ ಮತ್ತು ಸೇವೆಗಳನ್ನು ಉಳಿಸಿಕೊಂಡು ತಮ್ಮ ಅಸ್ತಿತ್ವದಲ್ಲಿರುವ @gmail.com ವಿಳಾಸವನ್ನು ಬದಲಾಯಿಸಬಹುದು.
ಒಮ್ಮೆ ಬದಲಾಯಿಸಿದ ನಂತರ, ಹಳೆಯ ಇಮೇಲ್ ವಿಳಾಸ ಸಕ್ರಿಯವಾಗಿರುತ್ತವೆ ಮತ್ತು ಯೂಸರ್‌ಗಳು ಹಳೆಯ ಮತ್ತು ಹೊಸ ವಿಳಾಸಗಳಿಗೆ ಕಳುಹಿಸಲಾದ ಇಮೇಲ್‌ಗಳನ್ನು ಸ್ವೀಕರಿಸುವುದನ್ನು ಮುಂದುವರಿಸುತ್ತಾರೆ. ಫೋಟೋಗಳು, ಮೆಸೇಜ್ ಮತ್ತು ಇಮೇಲ್‌ಗಳು ಸೇರಿದಂತೆ ಹಿಂದಿನ ವಿಳಾಸಗಳಿಗೆ ಸಂಪರ್ಕಗೊಂಡಿರುವ ಸೇವ್ ಮಾಡಲಾದ ಡೇಟಾದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಗೂಗಲ್ ಖಾತೆಯ ಇಮೇಲ್ ವಿಳಾಸಗಳನ್ನು ಬದಲಾಯಿಸುವ ಸಾಮರ್ಥ್ಯವು ಕ್ರಮೇಣ ಎಲ್ಲಾ ಯೂಸರ್‌ಗಳಿಗೆ ಲಭ್ಯವಾಗಲಿದೆ. ಸದ್ಯ ಎಲ್ಲರಿಗೂ ತಕ್ಷಣಕ್ಕೆ ಲಭ್ಯವಿಲ್ಲ ಎಂದು ಗೂಗಲ್ ತನ್ನ ಸಪೋರ್ಟ್ ಪೇಜ್‌ನಲ್ಲಿ ತಿಳಿಸಿದೆ.
ಹೆಚ್ಚು ಅನಾಮಧೇಯ ಇಮೇಲ್ ವಿಳಾಸಗಳಿಗೆ ಬದಲಾಯಿಸಲು ಬಯಸುವ ಅಥವಾ ಬಾಲ್ಯದಲ್ಲಿ ಆಯ್ಕೆ ಮಾಡಿದ ಇಮೇಲ್ ವಿಳಾಸಗಳಿಂದ ಮುಜುಗರ ಪಟ್ಟುಕೊಳ್ಳುತ್ತಿದ್ದ Gmail ಯೂಸರ್‌ಗಳು ಹೊಸ ಅಪ್‌ಡೇಟ್‌ಅನ್ನು ಭರ್ಜರಿಯಾಗಿ ಸ್ವಾಗತಿಸಿದ್ದಾರೆ.
ಕೂಲ್ ಯೂಸರ್‌ಗಳು ಹಾಗೂ ಚಿತ್ರವಿಚಿತ್ರ ಹೆಸರುಗಳು ಈಗ ಮರೆಯಾಗಲಿದೆ. ಆದರೆ, ಅದರ ಜೊತೆಗಿನ ನೆನಪುಗಳು ಮಾತ್ರ ಮರೆಯಾಗೋದಿಲ್ಲ ಎಂದು ಯೂಸರ್ ಒಬ್ಬರು ಬರೆದಿದ್ದಾರೆ. ಇಲ್ಲ ನಾನು StonerBeast42069 ಹೆಸರನ್ನು ಶಾಶ್ವತವಾಗಿ ಉಳಿಸಿಕೊಳ್ಳುತ್ತೇನೆ ಎಂದು ಮತ್ತೊಬ್ಬರು ಬರೆದಿದ್ದಾರೆ.
ಹೊಸ ಆಯ್ಕೆಗಳು ತಮ್ಮ ಹಿಂದಿನ ಹೆಸರುಗಳಿಂದ ದೂರವಿರಲು ಅವಕಾಶ ಮಾಡಿಕೊಟ್ಟಿದ್ದರಿಂದ, ಟ್ರಾನ್ಸ್ಜೆಂಡರ್ ಸಮುದಾಯದ ಸದಸ್ಯರು ಮತ್ತು ತಮ್ಮ ಹೆಸರುಗಳನ್ನು ಬದಲಾಯಿಸಿಕೊಂಡ ಇತರರು ಸಹ ಸಂತೋಷಪಟ್ಟಿದ್ದಾರೆ.
ಯೂಸರ್‌ಗಳು ತಮ್ಮ ಹಳೆಯ Google ಖಾತೆಯ ಇಮೇಲ್ ವಿಳಾಸವನ್ನು ಯಾವುದೇ ಸಮಯದಲ್ಲಿ ಮರುಬಳಕೆ ಮಾಡಬಹುದು, ಒಮ್ಮೆ ಬದಲಾಯಿಸಿದ ನಂತರ, ಮುಂದಿನ 12 ತಿಂಗಳುಗಳವರೆಗೆ ಅದೇ ಖಾತೆಗೆ ಮತ್ತೊಂದು ಇಮೇಲ್ ವಿಳಾಸವನ್ನು ನೋಂದಾಯಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ಹೊಸ ವ್ಯವಸ್ಥೆಯಡಿಯಲ್ಲಿ ತಮ್ಮ ಇಮೇಲ್ ವಿಳಾಸವನ್ನು ಬದಲಾಯಿಸಲು ಆಸಕ್ತಿ ಹೊಂದಿರುವ ಯೂಸರ್‌ಗಳು ಅದನ್ನು ತಮ್ಮ ಅಕೌಂಟ್‌ಗೆ ಬಿಡುಗಡೆ ಮಾಡಲಾಗಿದೆಯೇ ಎಂದು ಮೊದಲು ಚೆಕ್ ಮಾಡಿಕೊಳ್ಳಬೇಕು.
ಹೆಸರು ಬದಲಾಯಿಸಿಕೊಳ್ಳೋದು ಹೇಗೆ?
ತಮ್ಮ ಜಿಮೇಲ್ ಅಕೌಂಟ್‌ಲ್ಲಿ ಯೂಸರ್‌ಗಳು “Manage Your Google Account' ಮೊದಲಿಗೆ ಕ್ಲಿಕ್ ಮಾಡಬೇಕು. ಅದ ಅಡಿಯಲ್ಲಿ Personal Info ಬಳಿ ಹೋಗಿ ಕ್ಲಿಕ್ ಮಾಡಬೇಕು. ತಮ್ಮ ಜಿಮೇಲ್ ಅಕೌಂಟ್ ಅಡ್ರೆಸ್ ಮೇಲೆ ಕ್ಲಿಕ್ ಮಾಡಬೇಕು. ಆ ಪ್ರದೇಶಕ್ಕೆ ಗೂಗಲ್ ಈ ಅಪ್‌ಡೇಟ್ ನೀಡಿದ್ದರೆ, Change your Google Account email address ಆಪ್ಶನ್ ಬಳಸಿ ಹೆಸರು ಬದಲಾಯಿಸಬಹುದು.

