ಭಾರತ ಸೇರಿದಂತೆ ವಿಶ್ವದಾದ್ಯಂತ ಹಲವು ರಾಷ್ಟ್ರಗಳಲ್ಲಿ ಜಿಮೇಲ್‌ ಸೇವೆಯಲ್ಲಿ ವ್ಯತ್ಯಯವಾಗಿದೆ. ಪ್ರಪಂಚದಾದ್ಯಂತ ಅನೇಕ ಜನರಿಗೆ ಜಿಮೇಲ್‌ ಬಳಕೆ ಮಾಡಲು ತೊಂದರೆ ಎದುರಿಸುತ್ತಿದ್ದಾರೆ.

ನವದೆಹಲಿ (ಡಿ.10): 2022ರಲ್ಲಿ ಗರಿಷ್ಠ ಡೌನ್‌ಲೋಡ್‌ ಮಾಡಿದ ಆಪ್‌ಗಳಲ್ಲಿ ಒಂದಾದ ಜಿಮೇಲ್‌ ಶನಿವಾರ ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಜಿಮೇಲ್‌ ಸೇವೆಗಳು ವಿಶ್ವದ ಹಲವು ಭಾಗಗಳಲ್ಲಿ ವ್ಯತ್ಯಯವಾಗಿರುವ ಬಗ್ಗೆ ವರದಿಯಾಗಿದೆ. ಡೌನ್‌ಡಿಟೆಕ್ಟರ್‌ ಡಾಟ್‌ ಕಾಮ್‌ ಪ್ರಕಾರ, ಕಳೆದ ಒಂದು ಗಂಟೆಯಿಂದ ಜಿಮೇಲ್‌ ಡೌನ್‌ ಅಗಿರುವ ಬಗ್ಗೆ ಮಾಹಿತಿಗಳು ದಾಖಲಾಗಿವೆ. ಭಾರತದಾದ್ಯಂತ, ಬಳಕೆದಾರರು ಕಳಿಸಿದ ಈಮೇಲ್‌ಗಳು ವ್ಯಕ್ತಿಗಳಿಗೆ ಹೋಗುತ್ತಿಲ್ಲ. ಈಮೇಲ್‌ಗಳಿಗೆ ಪ್ರತಿಕ್ರಿಯೆ ನೀಡಿದರೂ ಅದು ದಾಖಲಾಗುತ್ತಿಲ್ಲ. ಜಿಮೇಲ್‌ ಅಪ್ಲಿಕೇಶನ್‌ಗಳಲ್ಲಿ ದೊಡ್ಡ ಮಟ್ಟದ ಸಮಸ್ಯೆ ಎದುರಾಗಿದೆ. ಜಿಮೇಲ್‌ ವೈಬ್‌ಸೈಟ್‌ ಸರ್ವೀಸ್‌ನಲ್ಲಿ ಕೂಡ ವ್ಯತ್ಯವಾಗಿದೆ ಎಂದು ಹೇಳಲಾಗಿದೆ. ವಿಶ್ವದಾದ್ಯಂತ 1.5 ಬಿಲಿಯನ್ ಬಳಕೆದಾರರನ್ನು ಜಿಮೇಲ್‌ ಹೊಂದಿದೆ. 2022ರಲ್ಲಿ ಗರಿಷ್ಠ ಬಾರಿ ಡೌನ್‌ ಲೋಡ್‌ ಆದ ಅಪ್ಲಿಕೇಷನ್‌ಗಳಲ್ಲಿ ಒಂದಾಗಿದೆ. ಅಂದಾಜು 8.30ರ ವೇಳೆಗೆ 300ಕ್ಕಿಂತ ಅಧಿಕ ಬಳಕೆದಾರರು ಜಿಮೇಲ್‌ ಸೇವೆಗಳಲ್ಲಿ ವ್ಯತ್ಯಯವಾಗಿರುವ ಬಗ್ಗೆ ದೂರು ದಾಖಲು ಮಾಡಿದ್ದಾರೆ. ಹೆಚ್ಚಿನ ಮಂದಿ ಮೇಲ್‌ ರಿಸೀವ್‌ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ದೂರಿದ್ದರೆ, ಸರ್ವರ್‌ ಸಮಸ್ಯೆ ಆಗಿರುವ ಬಗ್ಗೆ ಕೆಲವೇ ಕೆಲವು ಮಂದಿ ದೂರಿದ್ದಾರೆ.

ಗೂಗಲ್‌ನ ಇಮೇಲ್ ಸೇವೆ ಜಿಮೇಲ್ ಹಲವಾರು ಬಳಕೆದಾರರಿಗೆ ಸ್ಥಗಿತಗೊಂಡಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಜಿಮೇಲ್‌ನ ಅಪ್ಲಿಕೇಶನ್ ಮತ್ತು ಡೆಸ್ಕ್‌ಟಾಪ್ ಆವೃತ್ತಿಗಳೆರಡರಲ್ಲೂ ಡೌನ್‌ ಪರಿಣಾಮ ಬೀರಿದೆ ಎಂದು ಟ್ವೀಟ್‌ನಲ್ಲಿ ತಿಳಿಸಿದೆ.