Asianet Suvarna News Asianet Suvarna News

ಜಗತ್ತಿನ ಅತಿದೊಡ್ಡ ಬೆಂಗಳೂರು ಟೆಕ್‌ ಶೃಂಗ: ಡಿಸಿಎಂ ಅಶ್ವತ್ಥ ನಾರಾಯಣ

8 ಜಾಗತಿಕ ಒಪ್ಪಂದದ ಜೊತೆಗೆ ಶೀಘ್ರ 4 ಒಪ್ಪಂದ| 2.5 ಕೋಟಿಗೂ ಹೆಚ್ವು ಜನರನ್ನು ತಲುಪಿದ ಬೆಂಗಳೂರು ಟೆಕ್‌ ಸಮ್ಮಿಟ್‌| ರಾಜ್ಯದ ಕಾರ್ಯಕ್ಷಮತೆ ಬಗ್ಗೆ ಜಿಐಎ ಮೈತ್ರಿಕೂಟದ 25 ದೇಶಗಳಿಂದ ಅಚ್ಚರಿ: ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ| 
 

DCM Ashwathnarayan Talks Over Bengaluru Tech Summit grg
Author
Bengaluru, First Published Nov 22, 2020, 9:35 AM IST

ಬೆಂಗಳೂರು(ನ.22): ಬೆಂಗಳೂರು ತಂತ್ರಜ್ಞಾನ ಶೃಂಗ-2020’ ಯಶಸ್ವಿಯಾಗಿ ಮುಗಿದಿದ್ದು, ಕೊರೋನಾ ನಡುವೆಯೂ ಈವರೆಗೆ ಜಗತ್ತಿನಲ್ಲಿ ನಡೆದ ಅತಿದೊಡ್ಡ ತಂತ್ರಜ್ಞಾನ ಶೃಂಗವಾಗಿ ಖ್ಯಾತಿಗಳಿಸಿದೆ. ಜೊತೆಗೆ ಸಮಾವೇಶದಲ್ಲಿ ಎಂಟು ಜಾಗತಿಕ ಒಪ್ಪಂದಗಳಿಗೆ ಈಗಾಗಲೇ ಸಹಿ ಬಿದ್ದಿದ್ದು, ಇನ್ನೂ ನಾಲ್ಕು ಒಪ್ಪಂದಗಳು ಅಂತಿಮ ಹಂತದಲ್ಲಿವೆ. ಸದ್ಯದಲ್ಲೇ ಅವುಗಳಿಗೂ ಅಂಕಿತ ಬೀಳುವ ಸಾಧ್ಯತೆ ಇದೆ ಎಂದು ಐಟಿ-ಬಿಟಿ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ಜತೆಗೆ, ಮೂರು ದಿನಗಳ ಕಾಲ ನಡೆದ ಈ ಶೃಂಗವು ಬರೋಬ್ಬರಿ 2.5 ಕೋಟಿ ಮಂದಿ ದೇಶ-ವಿದೇಶಿಗರನ್ನು ತಲುಪಿದ್ದು, ಇಂತಹದೊಂದು ಸಮಾವೇಶವನ್ನು ಸಮರ್ಪಕವಾಗಿ ಆಯೋಜಿಸಿದ ರಾಜ್ಯ ಸರ್ಕಾರದ ಕ್ಷಮತೆಗೆ ಜಿಐಎ ಮೈತ್ರಿಕೂಟದ ದೇಶಗಳು ಅಚ್ಚರಿ ವ್ಯಕ್ತಪಡಿಸಿವೆ ಎಂದು ಸಂತಸ ವ್ಯಕ್ತಪಡಿಸಿದರು.

‘ಬೆಂಗಳೂರು ಟೆಕ್‌ ಸಮ್ಮಿಟ್‌-2020’ ಸಮಾರೋಪದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ದೊರೆತಿದೆ. ಮಾರಕ ವೈರಸ್‌ ಹಾವಳಿಯ ನಡುವೆಯೂ ಯಶಸ್ವಿಯಾಗಿ ನಡೆಸಿದ ರಾಜ್ಯದ ಕ್ಷಮತೆಯ ಬಗ್ಗೆ ಆವಿಷ್ಕಾರ ಮೈತ್ರಿಕೂಟದ (ಜಿಐಎ) 25 ದೇಶಗಳು ಅಚ್ಚರಿ ಮತ್ತು ಮೆಚ್ಚುಗೆ ವ್ಯಕ್ತಪಡಿಸಿವೆ ಎಂದು ಹೇಳಿದರು.

ಐಟಿ ಅಭಿವೃದ್ಧಿಗಾಗಿ ವಿದೇಶಗಳ ಜತೆ ಕರ್ನಾಟಕ ನೇರ ಒಪ್ಪಂದ

ಬಿಟಿಎಸ್‌- 2020ಯಲ್ಲಿ ನಿರೀಕ್ಷೆಗೂ ಮೀರಿ ಪ್ರತಿನಿಧಿಗಳು ಭಾಗಿಯಾಗಿದ್ದರು. ಆರಂಭದಲ್ಲಿ 4,000 ಪ್ರತಿನಿಧಿಗಳು ಭಾಗವಹಿಸಬಹುದು ಎಂದು ಅಂದಾಜು ಮಾಡಲಾಗಿತ್ತು. ಆದರೆ, ಇದಕ್ಕಿಂತ ದುಪ್ಪಟ್ಟು ಅಂದರೆ 8,507 ಪ್ರತಿನಿಧಿಗಳು ನೋಂದಾಯಿಸಿಕೊಂಡು, ಭಾಗಿಯಾಗಿದ್ದು ಈ ಶೃಂಗದ ದೊಡ್ಡ ಸಾಧನೆ. ಈ ಹಿನ್ನೆಲೆಯಲ್ಲಿ ಮುಂದಿನ ವರ್ಷದ ಟೆಕ್‌ ಸಮಿಟ್‌ ಮಾಡುವ ನಮ್ಮ ಉತ್ಸಾಹ ನೂರ್ಮಡಿಯಾಗಿದೆ ಎಂದರು.

ಬಿ2ಬಿ ಸಭೆಗಳ ದಾಖಲೆ:

ಈ ಸಮಾವೇಶದಲ್ಲಿ ಬ್ಯುಸಿನೆಸ್‌ ಸಭೆಗಳು ದಾಖಲೆ ಪ್ರಮಾಣದಲ್ಲಿ ನಡೆದಿದ್ದು, ಒಟ್ಟು 312 ಸಭೆಗಳು ಜರುಗಿವೆ ಎಂದ ಉಪ ಮುಖ್ಯಮಂತ್ರಿ, ಈ ಮಾಸಾಂತ್ಯದವರೆಗೂ ಇಂತಹ ಇನ್ನೂ ಹಲವು ವ್ಯವಹಾರಿಕ ಮಾತುಕತೆ ಹಾಗೂ ಸಭೆಗಳು ನಡೆಯಲಿವೆ ಎಂದರು.

ವರ್ಚುಯಲ್‌ ಆಗಿ ನಡೆದರೂ ಈ ಶೃಂಗದಲ್ಲಿ ಪ್ರದರ್ಶನ ಮಳಿಗೆಗಳ ಸ್ಥಾಪನೆಯಲ್ಲೂ ದಾಖಲೆ ಆಗಿದೆ. 146 ಸ್ಟಾರ್ಟಪ್‌ಗಳು ಕೂಡ ಮಳಿಗೆಗಳನ್ನು ತೆರೆದಿದ್ದವು. ಸುಮಾರು 9,870 ಜನ ಈ ಮಳಿಗೆಗಳಿಗೆ ಭೇಟಿ ನೀಡಿದ್ದಾರೆ ಎಂದರು.
ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣರೆಡ್ಡಿ, ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ್‌ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

2021ರ ನ.18ಕ್ಕೆ ಮುಂದಿನ ಟೆಕ್‌ ಶೃಂಗ

ಮುಂದಿನ ವರ್ಷದ ‘ಬೆಂಗಳೂರು ಟೆಕ್‌ ಸಮಿಟ್‌’ ದಿನಾಂಕವನ್ನೂ ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ್‌ ಅವರು ಶನಿವಾರ ಘೋಷಿಸಿದ್ದು, 2021ರ ನವೆಂಬರ್‌ 18, 19 ಹಾಗೂ 20 ರಂದು ಬೆಂಗಳೂರು ತಂತ್ರಜ್ಞಾನ ಶೃಂಗ ನಡೆಯಲಿದೆ ಎಂದು ಹೇಳಿದ್ದಾರೆ.

ಅದು 2019ರ ಆಫ್‌ಲೈನ್‌ ಹಾಗೂ 2020ರ ಆನ್‌ಲೈನ್‌ ಕಾಂಬಿನೇಷನ್‌ ಸೇರಿ ಹೈಬ್ರಿಡ್‌ ಮಾದರಿಯಲ್ಲಿ ನಡೆಯುತ್ತದೆ. 2021ರ ಶೃಂಗವನ್ನು ಪ್ರಸಕ್ತ ಶೃಂಗದ ದಾಖಲೆಗಳನ್ನು ಮೀರುವಂತೆ ಯಶಸ್ವಿಗೊಳಿಸಲಾಗುವುದು. ಆ ನಿಟ್ಟಿನಲ್ಲಿ ಈಗಲೇ ತಯಾರಿ ಮಾಡಿಕೊಳ್ಳಲಾಗುವುದು ಎಂದರು.

ಇಡೀ ವಿಶ್ವ ಕರ್ನಾಟಕವನ್ನು ನೋಡಲಿದೆ

‘ನೆಕ್ಸ್ಟ್‌ಈಸ್‌ ನೌ’ ಎಂದರೆ ‘ಮುಂದಲ್ಲ, ಈಗಲೇ’ ಎಂಬ ಪರಿಕಲ್ಪನೆಯೊಂದಿಗೆ ಬಿಟಿಎಸ್‌-2020 ನಡೆಸಿದ್ದೇವೆ. ಇದರ ಫಲಶ್ರುತಿ ಅದ್ಭುತವಾಗಿರಲಿದೆ. ಅನೇಕ ಕ್ಷೇತ್ರಗಳಲ್ಲಿ ನಮಗಿಂತ ಮುಂದಿರುವ ದೇಶಗಳು ಕರ್ನಾಟಕ ಜೊತೆ ಕೈ ಜೋಡಿಸಿವೆ. ಕೃತಕ ಬುದ್ಧಿಮತ್ತೆ, ಸೈಬರ್‌ ಭದ್ರತೆ, ಕೃಷಿ, ಜೈವಿಕ ತಂತ್ರಜ್ಞಾನ, ರಕ್ಷಣೆ, ಬಾಹ್ಯಾಕಾಶ ಕ್ಷೇತ್ರಗಳಲ್ಲಿ ರಾಜ್ಯಕ್ಕೆ ಮುಂದೆ ವಿಫುಲ ಅವಕಾಶಗಳಿವೆ. ಸದ್ಯದಲ್ಲೇ ಇಡೀ ವಿಶ್ವ ಕರ್ನಾಟಕವನ್ನು ನೋಡಲಿದೆ ಎಂದು ಡಾ.ಸಿ.ಎನ್‌. ಅಶ್ವತ್ಥನಾರಾಯಣ ವಿಶ್ವಾಸ ವ್ಯಕ್ತಪಡಿಸಿದರು.

300 ಶತಕೋಟಿ ಡಾಲರ್‌ ಜೈವಿಕ ಆರ್ಥಿಕತೆಗೆ ಪೂರಕ

ಆವಿಷ್ಕಾರ, ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರತಿ ಹಂತದ ರೂಪಾಂತರದಲ್ಲೂ ಬೆಂಗಳೂರು ಪ್ರಮುಖ ಪಾತ್ರ ವಹಿಸಿದೆ. ಇದೀಗ ಜೈವಿಕ ಆರ್ಥಿಕತೆ ವೃದ್ಧಿಗಾಗಿ ಪ್ರತ್ಯೇಕ ವರದಿಯನ್ನು ಮಂಡನೆ ಮಾಡಿದ್ದೇವೆ. ಮುಖ್ಯವಾಗಿ ರೈತರಿಗೆ ಅನುಕೂಲವಾಗುವಂತೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಮೂಲಕ ಹಲವು ಪ್ರಯೋಜಗಳನ್ನು ಪ್ರಸ್ತಾಪಿಸಿದ್ದೇವೆ. ಇವೆಲ್ಲವೂ ಜೈವಿಕ ಕ್ಷೇತ್ರದಲ್ಲಿ 300 ಶತ ಕೋಟಿ ಡಾಲರ್‌ ಆರ್ಥಿಕತೆ ಸಾಧಿಸುವ ಗುರಿಗೆ ಪೂರಕವಾಗಲಿವೆ ಎಂದು ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ ತಿಳಿಸಿದರು.
 

Follow Us:
Download App:
  • android
  • ios