*ಕೇಂದ್ರ ಸರ್ಕಾರದಿಂದ ಬ್ಲಾಕ್‌ಚೈನ್ ತಂತ್ರಜ್ಞಾನ ಬಳಸಿ ಡಿಜಿಟಲ್‌ ಕರೆನ್ಸಿ*ಬಿಡುಗಡೆಗೆ  ಇನ್ನೂ ಟೈಮ್‌ಲೈನನ್ನು ಊಹಿಸಲು ಸಾಧ್ಯವಿಲ್ಲ*ಕ್ರಿಪ್ಟೋಕರೆನ್ಸಿ ಭಾರತದ ಆರ್ಥಿಕ ಸ್ಥಿರತೆಗೆ ಅಪಾಯಕಾರಿ: RBI ಗವರ್ನರ್

ನವದೆಹಲಿ (ಫೆ. 10): ಕ್ರಿಪ್ಟೋಕರೆನ್ಸಿಗಳ ಕುರಿತು ತನ್ನ ಅಭಿಪ್ರಾಯವನ್ನು ಪುನರುಚ್ಚರಿಸಿರುವ ಭಾರತೀಯ ರಿಸವ್‌ರ್‍ ಬ್ಯಾಂಕ್‌ (ಆರ್‌ಬಿಐ), ಇವು ಬೃಹತ್‌ ಆರ್ಥಿಕತೆ ಮತ್ತು ಆರ್ಥಿಕ ಸ್ಥಿರತೆ ಎರಡಕ್ಕೂ ಅಪಾಯಕಾರಿ ಎಂದು ಹೇಳಿದೆ. ಈ ಮೂಲಕ ಭಾರತದಲ್ಲಿ ಕ್ರಿಪ್ಟೋಕರೆನ್ಸಿಗೆ ಮಾನ್ಯತೆ ನೀಡುವ ಯಾವುದೇ ಸಾಧ್ಯತೆ ಇಲ್ಲವೇ ಇಲ್ಲ ಎಂದು ಪರೋಕ್ಷವಾಗಿ ಸ್ಪಷ್ಟಪಡಿಸಿದೆ. ಗುರುವಾರ ದ್ವೈಮಾಸಿಕ ಹಣಕಾಸು ನೀತಿ ಮಂಡನೆ ವೇಳೆ ಈ ಕುರಿತು ಎಚ್ಚರಿಕೆ ನೀಡಿರುವ ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ‘ಖಾಸಗಿ ಕ್ರಿಪ್ಟೋಕರೆನ್ಸಿ ಅಥವಾ ಇನ್ಯಾವುದೇ ಹೆಸರುಗಳಿಂದ ನೀವು ಅದನ್ನು ಕರೆಯಿರಿ, ಅವುಗಳು ಬೃಹತ್‌ ಆರ್ಥಿಕತೆ ಮತ್ತು ಆರ್ಥಿಕ ಸ್ಥಿರತೆ ಎರಡಕ್ಕೂ ಅಪಾಯಕಾರಿ. ಜೊತೆಗೆ ಅವು ಬೃಹತ್‌ ಆರ್ಥಿಕತೆ ಮತ್ತು ಆರ್ಥಿಕ ಸ್ಥಿರತೆ ನಿರ್ವಹಿಸುವ ಆರ್‌ಬಿಐನ ಸಾಮರ್ಥ್ಯವನ್ನು ಕುಂದಿಸುತ್ತವೆ’ ಎಂದು ಹೇಳಿದ್ದಾರೆ.

ಇದೇ ವೇಳೆ ಕ್ರಿಪ್ಟೋಕರೆನ್ಸಿಗಳಿಗೆ ಯಾವುದೇ ಆಧಾರ ಇಲ್ಲ. ಅವುಗಳಿಗೆ ಎಳ್ಳಷ್ಟೂಮೌಲ್ಯ ಇಲ್ಲ ಎಂಬುದನ್ನು ಹೂಡಿಕೆದಾರರು ತಿಳಿಯಬೇಕು. ಜೊತೆಗೆ ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ ಮಾಡುತ್ತಿರುವವರು ಅಪಾಯ ಅರಿತು (ಓನ್‌ ರಿಸ್ಕ್‌) ಈ ರೀತಿ ಮಾಡುತ್ತಿದ್ದೇವೆ ಎಂಬುದನ್ನು ತಿಳಿದುಕೊಳ್ಳಬೇಕು’ ಎಂದು ಎಚ್ಚರಿಸಿದ್ದಾರೆ. ಈ ವಿಷಯದಲ್ಲಿ ಹೂಡಿಕೆದಾರರನ್ನು ಎಚ್ಚರಿಸುವುದು ಆರ್‌ಬಿಐನ ಕರ್ತವ್ಯ. ಅದರಂತೆ ನಾವು ಹೂಡಿಕೆದಾರರಿಗೆ ಈ ಮೂಲಕ ಅರಿವು ಮೂಡಿಸುತ್ತಿದ್ದೇವೆ ಎಂದು ದಾಸ್‌ ಹೇಳಿದ್ದಾರೆ.

ಇದನ್ನೂ ಓದಿ: Digital Rupee : ಭಾರತಕ್ಕೆ ತನ್ನದೇ ಆದ ಡಿಜಿಟಲ್ ಕರೆನ್ಸಿ, ಇದರ ಬಗ್ಗೆ ಏನಿದೆ ಮಾಹಿತಿ?

ಇತ್ತೀಚೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಕ್ರಿಪ್ಟೋಕರೆನ್ಸಿ ವಹಿವಾಟಿನ ಮೇಲೆ ಶೇ.1ರಷ್ಟುಟಿಡಿಎಸ್‌ ಮತ್ತು ಆದಾಯದ ಮೇಲೆ ಶೇ.30ರಷ್ಟುತೆರಿಗೆಯನ್ನು ಹೇರಲಾಗಿತ್ತು. ಇದು ಪರೋಕ್ಷವಾಗಿ ಕ್ರಿಪ್ಟೋಕರೆನ್ಸಿಗೆ ಮಾನ್ಯತೆ ನೀಡಿದ ಕ್ರಮ ಎಂಬ ವಿಶ್ಲೇಷಣೆ ಕೇಳಿಬಂದಿತ್ತಾದರೂ ಅದನ್ನು ಸ್ಪಷ್ಟವಾಗಿ ನಿರಾಕರಿಸಿದ್ದ ಸರ್ಕಾರ, ಇದು ಕ್ರಿಪ್ಟೋಕರೆನ್ಸಿ ವಲಯದ ಆಳಗಲ ಅರಿಯುವ ಯತ್ನವಷ್ಟೇ ಎಂದಿತ್ತು.

ಗವರ್ನರ್‌ ಹೇಳೋದೇನು?

- ಕ್ರಿಪ್ಟೋಕರೆನ್ಸಿಗಳಿಗೆ ಯಾವುದೇ ಆಧಾರ, ಮೌಲ್ಯ ಇಲ್ಲ

- ಆರ್ಥಿಕತೆ, ಆರ್ಥಿಕ ಸ್ಥಿರತೆ ಎರಡಕ್ಕೂ ಇವು ಡೇಂಜರ್‌

- ಆರ್ಥಿಕತೆ ನಿರ್ವಹಿಸುವ ಆರ್‌ಬಿಐ ಸಾಮಥ್ಯಕ್ಕೂ ಅಪಾಯ

- ಅದರಲ್ಲಿ ಹೂಡಿಕೆ ಮಾಡುವುದು ನಾಗರಿಕರದ್ದೇ ರಿಸ್ಕ್‌

- ಹೂಡಿಕೆದಾರರನ್ನು ಎಚ್ಚರಿಸುವುದು ನಮ್ಮ ಕರ್ತವ್ಯ

- ಹೀಗಾಗಿ ಅರಿವು ಮೂಡಿಸುತ್ತಿದ್ದೇವೆ: ಶಕ್ತಿಕಾಂತ್‌ ದಾಸ್‌

ಆರ್ಥಿಕತೆಗೆ ದೊಡ್ಡ ಉತ್ತೇಜನ: 2022-23ರಲ್ಲಿ ಬ್ಲಾಕ್‌ಚೈನ್ ತಂತ್ರಜ್ಞಾನ (Block Chain) ಬಳಸಿ ಭಾರತೀಯ ರಿಸರ್ವ್‌ ಬ್ಯಾಂಕ್‌ನಿಂದ್ (Rserve Bank Of India) ಡಿಜಿಟಲ್‌ ಕರೆನ್ಸಿ ಬಿಡುಗಡೆ ಮಾಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ ಮಂಡನೆ ವೇಳೆ ತಿಳಿಸಿದ್ದರು. ಆರ್‌ಬಿಐ ಡಿಜಿಟಲ್‌ ಕರೆನ್ಸಿ ಮೂಲಕ ಬಿಟ್‌ಕಾಯಿನ್‌ ಕ್ರಿಪ್ಟೋಕರೆನ್ಸಿ ಮಾದರಿಯಲ್ಲಿ ನಮ್ಮದೇ ಆದೇ ಆದ ಡಿಜಿಟಲ್‌ ಕರೆನ್ಸಿ ಜಾರಿಗೊಳಿಸಲು ಸಾಧ್ಯವಾಗಲಿದೆ. 

ಇದನ್ನೂ ಓದಿ:Digital Currency ಕ್ರಿಪ್ಟೋಗೆ ತೆರಿಗೆ ಹಾಕಿದ ಮಾತ್ರಕ್ಕೆ ಕಾನೂನಿನ ಮಾನ್ಯತೆ ನೀಡಿದಂತಲ್ಲ, CBDT ಸ್ಪಷ್ಟನೆ!

"ಬ್ಲಾಕ್‌ಚೈನ್ ಮತ್ತು ಇತರ ತಂತ್ರಜ್ಞಾನಗಳನ್ನು ಬಳಸಿಕೊಂಡು ಡಿಜಿಟಲ್ ರೂಪಾಯಿಯನ್ನು ನೀಡಲಾಗುತ್ತದೆ. ಇದನ್ನು 2022-23 ರಿಂದ ಆರ್‌ಬಿಐ ಬಿಡುಗಡೆ ಮಾಡುತ್ತದೆ. ಇದು ಆರ್ಥಿಕತೆಗೆ ದೊಡ್ಡ ಉತ್ತೇಜನವನ್ನು ನೀಡುತ್ತದೆ" ಎಂದು ನಿರ್ಮಾಲಾ ಸೀತಾರಾಮನ್‌ ಹೇಳಿದ್ದರು. 

ಖಾಸಗಿ ಕ್ರಿಪ್ಟೋಕರೆನ್ಸಿಗಳಿಗೆ ಹೋಲಿಸಿದರೆ ಕೇಂದ್ರೀಯ ಬ್ಯಾಂಕ್‌ಗಳು ಬಿಡುಗಡೆ ಮಾಡುವ ಡಿಜಿಟಲ್‌ ಕರೆನ್ಸಿ, ಅಸಹಜ ಏರಿಳಿಕೆಯಿಂದ ರಕ್ಷಣೆ ನೀಡುತ್ತದೆ. ಡಿಜಿಟಲ್‌ ಕರೆನ್ಸಿ ಬಳಕೆಯು, ನೋಟುಗಳ ಮೇಲಿನ ಅವಲಂಬನೆ ಕಡಿಮೆ ಮಾಡುತ್ತದೆ, ನಿರ್ವವಣಾ ವೆಚ್ಚ, ಮುದ್ರಣಾ ವೆಚ್ಚ ಉಳಿಸುತ್ತದೆ ಜೊತೆಗೆ ಸೆಟಲ್‌ಮೆಂಟ್‌ ಅಪಾಯವನ್ನೂ ಕಡಿಮೆ ಮಾಡುತ್ತದೆ. 

ಖಾಸಗಿ ಕ್ರಿಪ್ಟೋ ಕರೆನ್ಸಿಗಳನ್ನು ರದ್ದುಗೊಳಿಸುವ ಮತ್ತು ದೇಶೀಯ ಕ್ರಿಪ್ಟೋ ಕರೆನ್ಸಿ ಬಿಡುಗಡೆಗೆ ಅನುವು ಮಾಡಿಕೊಡುವ ಕ್ರಿಪ್ಟೋ ಕರೆನ್ಸಿ ಮತ್ತು ಡಿಜಿಟಲ್‌ ಕರೆನ್ಸಿ ನಿಯಂತ್ರಣ-2021 ಮಸೂದೆಯನ್ನು ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಮಂಡಿಸುವ ಸಾಧ್ಯತೆ ಇತ್ತು ಎಂದು ಹೇಳಲಾಗಿತ್ತು. ಆದರೆ ಅಧಿವೇಶನದಲ್ಲಿ ಈ ಬಗ್ಗೆ ಯಾವುದೇ ಪ್ರಸ್ತಾಪವಿರಲಿಲ್ಲ.