BSNL ಮಾಸ್ಟರ್ ಸ್ಟ್ರೋಕ್! ಎಲ್ಲಾ ಟೆಲಿಕಾಂ ಕಂಪನಿಗಳಿಗೆ ಶಾಕ್!

2020ರ ವೇಳೆಗೆ ಜಾಗತಿಕವಾಗಿ ವಾಣಿಜ್ಯ ಸ್ವರೂಪದಲ್ಲಿ ಬಳಕೆದಾರರ ಕೈಗೆ 5G ತಂತ್ರಜ್ಞಾನ ಸಿಗುವ ಅಂದಾಜಿದೆ. ಕೊರಿಯಾ ಟೆಲಿಕಾಂ, ವೊಡಾಫೋನ್ ಮತ್ತಿತರ ಸಂಸ್ಥೆಗಳು ವಿವಿಧ ದೇಶಗಳಲ್ಲಿ ಈಗಾಗಲೇ 5G ತರಂಗಗಳ ಪ್ರಾಯೋಗಿಕ ಪ್ರಾತ್ಯಕ್ಷಿಕೆ ನೀಡುವ ಪ್ರಯತ್ನಮಾಡಿವೆ.

BSNL To Pioneer 5G To Launch Services in 2020
  • ಕೃಷ್ಣಮೋಹನ ತಲೆಂಗಳ

ಸರಕಾರಿ ಸ್ವಾಮ್ಯದ ಭಾರತ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್) ನಿಧಾನಗತಿ ಧೋರಣೆ ತಾಳುತ್ತಿದೆ ಎಂಬುದು ಯುವ ಜನತೆಯ ಆರೋಪ. ಆದರೆ, ಈ ಅಪವಾದಕ್ಕೇ ಅಪವಾದವೆಂಬಂತೆ ಈಗೊಂದು ಸವಾಲಿನ ಸಾಧನೆಯನ್ನು ಬಿಎಸ್‌ಎನ್‌ಎಲ್ ಗ್ರಾಹಕರ ಮುಂದಿರಿಸಿದೆ. 2020ನೇ ಇಸವಿ ವೇಳೆಗೆ ವಿಶ್ವದ ಇತರೆಡೆಗಳಂತೆ ಏಕಕಾಲದಲ್ಲಿ ಅತಿ ವೇಗದ ಐದನೇ ತಲೆಮಾರಿನ 5G ಟೆಲಿಕಾಂ ಸೇವೆ ನೀಡಲು ಸಿದ್ಧತೆ ನಡೆಸಿರುವುದನ್ನು ಸಂಸ್ಥೆ ಅಧಿಕೃತವಾಗಿ ಘೋಷಿಸಿದೆ.

ವಿಶ್ವಕ್ಕೆ ಮೊದಲ 2G ಮೊಬೈಲ್ ಸೇವೆ 1992ರಲ್ಲಿ ವಾಣಿಜ್ಯಾತ್ಮಕವಾಗಿ ಪರಿಚಯಿಸಲ್ಪಟ್ಟಿತು. 3G ಜಾಗತಿಕವಾಗಿ ಆರಂಭವಾಗಿದ್ದು 2001ರಲ್ಲಿ. ಪೂರ್ಣಪ್ರಮಾಣದ 4G ಸೇವೆ ಗುಣಮಟ್ಟದ ಸಹಿತ ಜಾರಿಗೆ ಬಂದದ್ದು 2012ರಲ್ಲಿ. 4G ತಂತ್ರಜ್ಞಾನ ಅಮೆರಿಕಾದಲ್ಲಿ 2011ರಲ್ಲಿ ಬಿಡುಗಡೆಯಾಗಿದ್ದರೂ ಅದು ಭಾರತದಲ್ಲಿ ಪೂರ್ಣ ಪ್ರಮಾಣದಲ್ಲಿ ಕಾಲೂರಲು 2016ರ ತನಕ ಕಾಯಬೇಕಾಯಿತು.

5Gಯಲ್ಲಿ ಬಿಎಸ್‌ಎನ್‌ಎಲ್ ಮುಂದು ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳಿಗಿಂತ 25 ವರ್ಷದ ಬಳಿಕ ನಾವು 2G ಸೇವೆ ಹೊಂದಿದರೆ, ಯುಎಸ್, ಯುರೋಪ್‌ಗಳಿಗೆ 3G ಕಾಲಿಟ್ಟ ದಶಕದ ಬಳಿಕ ನಮಗದು ದೊರಕಿತು. 4G ತಂತ್ರಜ್ಞಾನ ಐದು ವರ್ಷ ವಿಳಂಬವಾಗಿ ನಮ್ಮ ದೇಶಕ್ಕೆ ಕಾಲಿಟ್ಟಿತು. ಈ ನಡುವೆ ದೇಶದಲ್ಲಿ ಏರ್‌ಟೆಲ್, ವೋಡಾಫೋನ್, ಐಡಿಯಾ, ಜಿಯೋದಂತಹ ದೈತ್ಯ ಸಂಸ್ಥೆಗಳು 4G ತಂತ್ರಜ್ಞಾನದಿಂದ ಹುಚ್ಚೆಬ್ಬಿಸಿದರೂ ಬಿಎಸ್‌ಎನ್ ಎಲ್ 4Gಯನ್ನು ಮುಟ್ಟುವ ಗೋಜಿಗೇ ಹೋಗಲಿಲ್ಲ! ಅಂತಹ ಬಿಎಸ್‌ಎನ್‌ಎಲ್ ಇದೀಗ, 5G ವಿಚಾರಕ್ಕೆ ಬಂದಾಗ ತಾನೇ ಮುಂಚೂಣಿಯಲ್ಲಿರುವ ಸೂಚನೆ ನೀಡಿದೆ.

ಮಾತ್ರವಲ್ಲ ಬಹುರಾಷ್ಟ್ರೀಯ ಮೊಬೈಲ್ ಉತ್ಪಾದಕ ಕಂಪನಿಗಳ ಜೊತೆಗೆ 5G ತಂತ್ರಜ್ಞಾನ ಅಳವಡಿಕೆ ಕುರಿತು ಸಂಯುಕ್ತ ಕಾರ್ಯಾಚರಣೆ ನಡೆಸಿದೆ. ಜಗತ್ತಿನ ಇತರೆಡೆಗಳಲ್ಲಿ ಮಾರುಕಟ್ಟೆಗೆ ಬರುವ ದಿನವೇ ಬಿಎಸ್‌ಎನ್‌ಎಲ್ ಭಾರತದಲ್ಲೂ 5G ಕಾಲಿಡಲಿದೆ ಎಂದಿದ್ದಾರೆ ಬಿಎಸ್‌ಎನ್‌ಎಲ್ ಪ್ರಧಾನ ವ್ಯವಸ್ಥಾಪಕ ಅನಿಲ್ ಜೈನ್.

5Gಗೆ ಬೇಕು ಹೊಸ ಮೊಬೈಲ್:

ದೇಶದಲ್ಲಿ 5G ಸೇವೆ ಪಡೆಯಬೇಕಾದರೆ ಗ್ರಾಹಕರಿಗೆ ಸಾಕಷ್ಟು ಪ್ರಮಾಣದಲ್ಲಿ 5G ಸೇವೆಯನ್ನು ನೀಡಬಲ್ಲ ಹೊಸ ಮೊಬೈಲ್ ಹ್ಯಾಂಡ್‌ಸೆಟ್‌ಗಳೂ ಸಿದ್ಧವಾಗಿರಬೇಕು ಎಂಬುದು ಗಮನಾರ್ಹ ಅಂಶ. ಈಗಿರುವ 4G ಹ್ಯಾಂಡ್‌ಸೆಟ್‌ಗಳಲ್ಲಿ 5G ಸೇವೆ ಪಡೆಯಲಾಗದು ಎಂಬುದು ನೆನಪಿರಲಿ. 5G ನೆಟ್‌ವರ್ಕ್ ಸರ್ವಿಸ್‌ನ್ನು ಮೂರು ವಿಧವಾಗಿ ವಿಂಗಡಿಸಲಾಗಿದೆ. ಎನ್‌ಹೆನ್ಸ್‌ಡ್ ಮೊಬೈಲ್ ಬ್ರಾಡ್‌ಬ್ಯಾಂಡ್ (ಇಎಂಬಿಬಿ) ಅಥವಾ ಹ್ಯಾಂಡ್‌ಸೆಟ್, ಅಲ್ಟ್ರಾ ರಿಲಯೇಬಲ್ ಲೋ ಲ್ಯಾಟೆನ್ಸಿ ಕಮ್ಯುನಿಕೇಶನ್ಸ್ (ಯುಆರ್‌ಎಲ್‌ಎಲ್‌ಸಿ), ಮಾಸಿವ್ ಮೆಶನ್ ಟೈಪ್ ಕಮ್ಯೂನಿಕೇಶನ್ಸ್ (ಎಂಎಂಟಿಸಿ).

ಮೊಬೈಲ್‌ಗಳಿಗೆ ಬಳಕೆಯಾಗುವುದು ಇಎಂಬಿಬಿ. ಒಂದು ಮಾಹಿತಿಯಂತೆ 5G ನೆಟ್ ವರ್ಕ್‌ನಲ್ಲಿ ಸೆಕೆಂಡಿಗೆ 20 ಜಿಬಿ ಡೇಟಾ ಡೌನ್‌ಲೋಡ್ ವೇಗ ಹೊಂದಿರಲಿದೆ. ದೈತ್ಯ ಕಂಪೆನಿಗಳ ಪೈಪೋಟಿ 5G ತಂತ್ರಜ್ಞಾನ ಮತ್ತು ಮೂಲ ಸೌಕರ್ಯ ಅಭಿವೃದ್ದಿಯಲ್ಲಿ ದೈತ್ಯ ಟೆಕ್ ಸಂಸ್ಥೆಗಳಾದ ಇಂಟೆಲ್, ಕ್ವಾಲ್‌ಕೋಮ್, ನೋಕಿಯಾ, ಹುವಾಯ್, ಎರಿಕ್ಸನ್, ಝಡ್‌ಟಿಇ, ಸ್ಯಾಮ್ಸಂಗ್ ಮತ್ತಿತರರು ಈಗಾಗಲೇ ಬಿರುಸಿನಿಂದ ತೊಡಗಿವೆ.

2020ರ ವೇಳೆಗೆ ಜಾಗತಿಕವಾಗಿ ವಾಣಿಜ್ಯ ಸ್ವರೂಪದಲ್ಲಿ ಬಳಕೆದಾರರ ಕೈಗೆ 5G ತಂತ್ರಜ್ಞಾನ ಸಿಗುವ ಅಂದಾಜಿದೆ. ಕೊರಿಯಾ ಟೆಲಿಕಾಂ, ವೋಡಾಫೋನ್ ಮತ್ತಿತರ ಸಂಸ್ಥೆಗಳು ವಿವಿಧ ದೇಶಗಳಲ್ಲಿ ಈಗಾಗಲೇ 5G ತರಂಗಗಳ ಪ್ರಾಯೋಗಿಕ ಪ್ರಾತ್ಯಕ್ಷಿಕೆ ನೀಡುವ ಪ್ರಯತ್ನ ಮಾಡಿವೆ. ಮೊಬೈಲ್ ಫೋನ್ ಗಳ ಬಳಕೆ ಮಾತ್ರವಲ್ಲದೆ 5G ತರಂಗಗಳು ಖಾಸಗಿ ನೆಟ್‌ವರ್ಕ್ ಗಳ ಸಹಾಯದಿಂದ ಕೈಗಾರಿಕಾ ವಲಯ, ಔದ್ಯಮಿಕ ಕಾರ್ಯಜಾಲಗಳು, ತುರ್ತು ಸಂವಹನ ಕ್ಷೇತ್ರಗಳಲ್ಲೂ ಬಳಕೆಯಾಗುವ ನಿರೀಕ್ಷೆಯಿದೆ. 

ಸಾಂಪ್ರದಾಯಿಕ ಸೆಲ್ಯುಲಾರ್ ಮೋಡೆಮ್ ಉತ್ಪಾದಕರು 5G ಮೋಡೆಮ್ ಅಭಿವೃದ್ಧಿಯಲ್ಲಿ ತೊಡಗಿವೆ. ಬಿಎಸ್‌ಎನ್‌ಎಲ್ ದಾರಿ ಭಾರತದಲ್ಲಿ ಸಮಗ್ರ ಹಾಗೂ ವ್ಯಾಪಕವಾಗಿ ಟೆಲಿಕಾಂ ಸೇವೆ ನೀಡುತ್ತಿರುವ ಸರಕಾರಿ ಮುಂಚೂಣಿ ಸಂಸ್ಥೆ ಬಿಎಸ್‌ಎನ್‌ಎಲ್ 2000ರಲ್ಲಿ ಈ ಹೆಸರಿನಿಂದ ಅಸ್ತಿತ್ವಕ್ಕೆ ಬಂದಿದೆ. ಇಂದು 36.42 ಮಿಲಿಯನ್ ಲೈನ್ ಬೇಸಿಕ್ ಟೆಲಿಫೋನ್ ಸಾಮರ್ಥ್ಯ, 7.13 ಮಿಲಿಯನ್ ವಿಲ್ ಫೋನ್ ಸಾಮರ್ಥ್ಯ, 95.96 ಮಿಲಿಯನ್ ಜಿಎಸ್‌ಎಂ ಸಂಪರ್ಕ ಸಾಮರ್ಥ್ಯ, 34,727 ಎಕ್ಸ್‌ಚೇಂಜ್‌ಗಳು, 9594 ಸಿಡಿಎಂಎ ಗೋಪುರಗಳು, 102 ಸೆಟಲೈಟ್ ಸ್ಟೇಷನ್‌ಗಳನ್ನು ಹೊಂದಿದ್ದು, 646 ಜಿಲ್ಲೆಗಳು, 4519 ನಗರಗಳು, 6.25 ಲಕ್ಷ ಹಳ್ಳಿಗಳನ್ನು ಸಂಪರ್ಕಿಸುವಷ್ಟು ಮೈಕ್ರೋವೇವ್ ಕಾರ್ಯಜಾಲ ಹೊಂದಿದೆ. 

2016ರ ಅಂಕಿ ಅಂಶದಂತೆ ಬಿಎಸ್‌ಎನ್‌ಎಲ್ 94.36 ಮಿಲಿಯನ್ ಸೆಲ್ಯುಲರ್ ಹಾಗೂ 1.02 ಮಿಲಿಯನ್ ವಿಲ್ ಫೋನ್ ಗ್ರಾಹಕರನ್ನು ಹೊಂದಿದೆ. 13.88 ಮಿಲಿಯನ್ ವೈರ್‌ಲೈನ್ ಫೋನ್ ಗ್ರಾಹಕರಿದ್ದಾರೆ. 21.86 ಮಿಲಿಯನ್ ಬ್ರಾಡ್‌ಬ್ಯಾಂಡ್ ಗ್ರಾಹಕರಿದ್ದಾರೆ. 32,919 ಕೋಟಿ ರು.ಗಳಷ್ಟು ವಹಿವಾಟು ಹೊಂದಿದೆ. ಸಂಸ್ಥೆ 2012ರಲ್ಲಿ 3G ಸೇವೆ ಶುರು ಮಾಡಿತು. 160 ವರ್ಷಗಳ ಸೇವೆಯ ಬಳಿಕ 2013 ಜು. 15ರಂದು ತನ್ನ ಟೆಲಿಗ್ರಾಪ್ ಸೇವೆಯನ್ನು ಸ್ಥಗಿತಗೊಳಿಸಿತು. 

 

Latest Videos
Follow Us:
Download App:
  • android
  • ios