Asianet Suvarna News Asianet Suvarna News

ಮೊಬೈಲ್ ಖರೀದಿಗೆ ಮುನ್ನ ವಿಕಿರಣ ಸುರಕ್ಷತೆ ಖಾತರಿ ಮಾಡ್ಕೊಳ್ಳಿ!

  • ಎಸ್‌ಎಆರ್-ಏನಿದು?
  • ರೇಡಿಯೋ ತರಂಗಗಳ ಬಳಕೆ ಯಾಕೆ?
  • ಮುಂಜಾಗ್ರತೆ ಒಳ್ಳೆಯದು
  • ಹೆಚ್ಚಿನ ಎಸ್‌ಎಆರ್ ವ್ಯಾಲ್ಯೂ ಅಪಾಯಕಾರಿಯೇ?
  • ನಿಮ್ಮ ಮೊಬೈಲ್‌ನ ಎಸ್‌ಎಆರ್ ವ್ಯಾಲ್ಯೂ ಗುರುತಿಸುವುದು ಹೇಗೆ?
Be Careful While Buying Mobiles

ನಿಮ್ಮ ಮೊಬೈಲ್‌ನ ಎಸ್‌ಎಆರ್ ವ್ಯಾಲ್ಯೂ ಎಷ್ಟು ಅಂತ ನಿಮಗೆ ಗೊತ್ತಾ? ಗೊತ್ತಿಲ್ಲದಿದ್ದರೆ ಈಗಲೇ ತಿಳಿದುಕೊಳ್ಳಿ. ಸಾವಿರಾರು ರುಪಾಯಿ ತೆತ್ತು ಮೊಬೈಲ್ ಖರೀದಿಸುವ ನಾವು ಅದು ಹೊರಸೂಸುವ ವಿಕಿರಣ ಪ್ರಮಾಣವನ್ನು ಸುರಕ್ಷತೆ ದೃಷ್ಟಿಯಿಂದ ಗಮನಿಸುವುದು ಕಡಿಮೆ. ‘ಎಸ್‌ಎಆರ್ ವ್ಯಾಲ್ಯೂ’ ಮಾನದಂಡದಲ್ಲಿ ಮೊಬೈಲ್ ವಿಕಿರಣ ಸುರಕ್ಷತೆಯನ್ನು ಖರೀದಿಗೆ ಮುನ್ನ ಖಾತರಿಪಡಿಸಿಕೊಳ್ಳುವುದು ಲೇಸು. ಮೊಬೈಲ್ ಬಳಸಿದ ತಕ್ಷಣ ಆರೋಗ್ಯ ಕೆಟ್ಟುಹೋಗುತ್ತದೆ ಎಂದು ಯಾವ ವಿಜ್ಞಾನಿಯೂ, ವೈದ್ಯರೂ ಹೇಳಿಲ್ಲ. ಆದರೆ ಅತಿಯಾದ ವಿಕಿರಣದ ಸಾಮಿಪ್ಯತೆ ಭವಿಷ್ಯದಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಗಂಭೀರವಾಗಿ ಯೋಚಿಸಬೇಕಾದ ವಿಚಾರವೇ ಸರಿ.

ಸೆಲ್ ಫೋನ್ ಹೊರಸೂಸುವ ವಿಕಿರಣ ಪ್ರಭಾವ ಹಾಗೂ ಎಸ್‌ಎಆರ್ (ಸ್ಪೆಸಿಫಿಕ್ ಅಬ್ಸಾರ್ಪ್ಶನ್ ರೇಟ್) ವ್ಯಾಲ್ಯೂ ಕುರಿತು ಕೆಲ ವರ್ಷಗಳಿಂದ ಸಾಕಷ್ಟು ಚರ್ಚೆಗಳಾಗುತ್ತಿವೆ. ಈ ವರೆಗಿನ ಕೆಲವು ಸಮೀಕ್ಷೆಗಳು ಈ ಮಾನವ ಶರೀರದ ಮೇಲೆ ಮೊಬೈಲ್ ವಿಕಿರಣದ ಪರಿಣಾಮಗಳ ಕುರಿತು ಅಲ್ಪ ಸ್ವಲ್ಪ ಮಾಹಿತಿಯ ಮೇಲೆ ಬೆಳಕು ಚೆಲ್ಲಿವೆ. ನಾವು ಖರೀದಿಸುವ ಪ್ರತಿ ಮೊಬೈಲ್‌ಗೂ ‘ಎಸ್‌ಎಆರ್ ವ್ಯಾಲ್ಯೂ’ ಮಾನದಂಡದಲ್ಲಿ ಗರಿಷ್ಠ ಪ್ರಮಾಣವೊಂದನ್ನು ನಿಗದಿಪಡಿಸಲಾಗಿದ್ದು, ಮೊಬೈಲ್ ಖರೀದಿಗೆ ಮುನ್ನ ಆ ಬ್ರಾಂಡ್ ಮೊಬೈಲ್‌ನ ಎಸ್ಎಆರ್ ವ್ಯಾಲ್ಯೂ ತಜ್ಞರು ನಿಗದಿಪಡಿಸಿದ ಮಿತಿಯೊಳಗಿದೆ ಅಥವಾ ಅದರ ಪ್ರಮಾಣ ಕನಿಷ್ಠವಿದೆ ಎಂದು ಖಾತರಿಪಡಿಸಿಕೊಳ್ಳುವುದು ಭವಿಷ್ಯದ ಆರೋಗ್ಯದ ದೃಷ್ಟಿಯಿಂದ ಉತ್ತಮ.

ಎಸ್‌ಎಆರ್-ಏನಿದು?:

ರೇಡಿಯೋ ಫ್ರೀಕ್ವೆನ್ಸಿ ಹೊರಸೂಸುವ ಎಲೆಕ್ಟ್ರೋಮ್ಯಾಗ್ನೆಟಿಕ್ ಉಪಕರಣವೊಂದು ಮಾನವ ಶರೀರ ಸಾಮಿಪ್ಯ ಹೊಂದಿದಾಗ ಅದರಲ್ಲಿನ ಶಕ್ತಿಯನ್ನು ಯಾವ ಪ್ರಮಾಣದಲ್ಲಿ ಶರೀರ ಹೀರಿಕೊಳ್ಳುತ್ತದೆ ಎಂಬ ದರವನ್ನೇ ಎಸ್‌ಎಆರ್ ವ್ಯಾಲ್ಯೂ ಎನ್ನಲಾಗುತ್ತದೆ. ಅಲ್ಟ್ರಾಸೌಂಡ್ ಪರೀಕ್ಷೆಯಂತಹ ಸಂದರ್ಭ ಅಂಗಾಂಶ ಹೀರಿಕೊಳ್ಳುವ ಶಕ್ತಿಯ ಪ್ರಮಾಣವನ್ನೂ ಇದು ಸೂಚಿಸುತ್ತದೆ. ಮೊಬೈಲ್ ಫೋನ್‌ಗಳು ಎಲೆಕ್ಟ್ರೋಮ್ಯಾಗ್ನೆಟಿಕ್ ವಿಕಿರಣ ಬಳಸುವುದರಿಂದ ವಿಕಿರಣಗಳ ತೀವ್ರತೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಎಂಬ ವಾದ ಪ್ರಬಲವಾಗಿರುವುದು ಈ ಮುಂಜಾಗ್ರತೆ ಕಿವಿಮಾತಿಗೆ ಪುಷ್ಟಿ ನೀಡುತ್ತದೆ. ಮೊಬೈಲ್ ಹ್ಯಾಂಡ್‌ಸೆಟ್ ಮಾತ್ರವಲ್ಲ, ವೈಫೈ, ರಾಡಾರ್‌ಗಳು, ಮೈಕ್ರೋವೇವ್ ಓವೆನ್ ಮತ್ತಿತರ ಸಾಧನಗಳೂ ಇದೇ ರೀತಿಯ ವಿಕಿರಣಗಳನ್ನು ಹೊರ ಸೂಸುತ್ತವೆ.

ಮೊಬೈಲ್ ಫೋನ್‌ಗಳಲ್ಲಿ ಒಂದು ನಿರ್ದಿಷ್ಟ ಸಮಯದ ಅವಧಿಯಲ್ಲಿ ಮಾನವ ಶರೀರದ ಅಂಗಾಂಶಗಳು ಹೀರಿಕೊಳ್ಳುವ ಶಕ್ತಿಯ ದರವನ್ನು ಎಸ್‌ಎಆರ್ ಎಂದು ಗುರುತಿಸಲಾಗುತ್ತದೆ. ಇದನ್ನು ಪವರ್ ಪರ್ ಮಾಸ್ ಎಂಬ ಪ್ರಮಾಣದಲ್ಲಿ (ಡಬ್ಲ್ಯೂ/ಕೆಜಿ) ಗುರುತಿಸಲಾಗುತ್ತದೆ. ಇನ್ನೂ ಸರಳವಾಗಿ ಹೇಳುವುದಾದರೆ ಎಸ್‌ಎಆರ್ ಎಂದರೆ ಸೆಲ್ ಫೋನ್‌ನ ವಿಕಿರಣ ಪ್ರಸಾರದ ಪ್ರಭಾವದ ಪ್ರಮಾಣ. ಈ ಮಾಪನದ ಮೂಲಕ ಒಂದು ಹ್ಯಾಂಡ್‌ಸೆಟ್ ನಮ್ಮ ಸುರಕ್ಷತೆಗೆ ಹೇಳಲಾಗಿರುವ ಗರಿಷ್ಠ ದರವನ್ನು ದಾಟುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಸಾಧ್ಯವಾಗುತ್ತದೆ.

ಸಾಮಾನ್ಯವಾಗಿ ಇಡೀ ಶರೀರ ಹೀರಿಕೊಳ್ಳುವ ವಿಕಿರಣ ಶಕ್ತಿಯ ಪ್ರಮಾಣ ಅಥವಾ ಕೆಲ ಅಂಗಾಂಶ ಮಾದರಿಗಳು ಹೀರಿಕೊಳ್ಳುವ ಪ್ರಮಾಣವನ್ನು ಆಧರಿಸಿ ನಿಗದಿಯಾಗುತ್ತವೆ. ಮಾತನಾಡುವ ಸಂದರ್ಭದ ಶಕ್ತಿಯ ಹೀರುವಿಕೆಯ ಆಧಾರದಲ್ಲೇ ಎಸ್‌ಎಆರ್ ದರ ನಿಗದಿಯಾಗುತ್ತವೆ. ಸಾಮಾನ್ಯವಾಗಿ ಮೊಬೈಲ್ ಉತ್ಪಾದಕರು ಹ್ಯಾಂಡ್‌ಸೆಟ್‌ನ ಎಸ್ಎಆರ್ ಮಟ್ಟ ಪರೀಕ್ಷೆ ಮಾಡಿ ಅದನ್ನು ಘೋಷಿಸಿರುತ್ತಾರೆ. ಗರಿಷ್ಠ ಸಾಧ್ಯತೆಯ ಎಸ್ಎಆರ್ ವ್ಯಾಲ್ಯೂವನ್ನು ಮೊಬೈಲ್ ಮ್ಯಾನ್ಯುವೆಲ್‌ನಲ್ಲಿ ನಮೂದಿಸಿರುತ್ತಾರೆ. ಈಗಿನ ನಿಗದಿ ಪ್ರಕಾರ ಅಮೆರಿಕಾದಲ್ಲಿ ಎಸ್‌ಎಆರ್ ವ್ಯಾಲ್ಯೂ 1.6 ಡಬ್ಲ್ಯೂ/ಕೆಜಿ ಇರಬೇಕು. ಯುರೋಪಿನಲ್ಲಿ 2 ಡಬ್ಲ್ಯೂ/ಕೆಜಿ ಇರಬೇಕು. ಆದರೆ ಪರೀಕ್ಷೆಗೋಸ್ಕರ ಆರಿಸಲಾಗುವ ಅಂಗಾಂಶಗಳ ಮಾದರಿ ಪ್ರಮಾಣದಲ್ಲಿ ವ್ಯತ್ಯಾಸ ಇರುವುದರಿಂದ ಎರಡು ದೇಶಗಳ ಮಾನದಂಡವನ್ನು ಪರಸ್ಪರ ಹೋಲಿಸಲು ಸಾಧ್ಯವಿಲ್ಲ.

2013 ಸೆಪ್ಟಂಬರ್ ತನಕ ಭಾರತದಲ್ಲಿ ಎಸ್‌ಎಆರ್ ವ್ಯಾಲ್ಯೂ 2.0 ಡಬ್ಲ್ಯೂ/ಕೆಜಿ (ವಾಟ್ಸ್ ಪರ್ ಕಿಲೋಗ್ರಾಂ) ಇತ್ತು. ಈಗ ಈ ದರ 1.6 ಡಬ್ಲ್ಯೂ/ಕೆಜಿಗೆ ನಿಗದಿಯಾಗಿದೆ. ಈ ಮಾಪನಕ್ಕಿಂತ ಕಡಿಮೆ ಮೊತ್ತದ ಎಸ್’ಎಆರ್ ವ್ಯಾಲ್ಯೂ ಹೊಂದಿರುವ ಮೊಬೈಲ್‌ಗಳು ಸುರಕ್ಷಿತ ಮೊಬೈಲ್‌ಗಳು ಅನ್ನಿಸಿಕೊಳ್ಳುತ್ತವೆ.

ರೇಡಿಯೋ ತರಂಗಗಳ ಬಳಕೆ ಯಾಕೆ?:

ಸೆಲ್ ಫೋನ್‌ಗಳು ರೇಡಿಯೊ ತರಂಗಗಳನ್ನು ನಮ್ಮ ಸೆಟ್‌ನ್ನು ಸೆಲ್ ಟವರ್‌ನ್ನು ಸಂಪರ್ಕಿಸಲು ಬಳಸುತ್ತವೆ. ಬೆಳಕಿನ ವೇಗದಲ್ಲಿ ನಮ್ಮ ಧ್ವನಿ ಅಥವಾ ದತ್ತಾಂಶವನ್ನು ಪರಸ್ಪರ ಸೆಟ್‌ಗಳಿಗೆ ತಲುಪಿಸಲು ಈ ರೇಡಿಯೋ ತರಂಗಗಳು ಬಳಕೆಯಾಗುತ್ತವೆ. ಈ ತರಂಗಗಳು ಎಲ್ಲಾ ದಿಕ್ಕನ್ನೂ ವ್ಯಾಪಿಸಿ ಚಲಿಸುತ್ತವೆ. ಇವು ಪರಿಸರದ ಇತರ ಉಪಕರಣಗಳು ಅಥವಾ ಶರೀರಗಳಿಂದ ಹೀರಲ್ಪಡಬಹುದು ಅಥವಾ ಪ್ರತಿಫಲನ ಹೊಂದಲೂ ಬಹುದು.

ಇದೇ ಕಾರಣದಿಂದ ನಾವು ಮೊಬೈಲ್ ಫೋನ್‌ನಲ್ಲಿ ಮಾತನಾಡುವಾಗ ಉಪಕರಣವನ್ನು ನಮ್ಮ ಕಿವಿಯ ಸಮೀಪ ಹಿಡಿಯುವುದರಿಂದ ಅದು ಹೊರಸೂಸುವ ವಿಕಿರಣದ ಒಂದು ಭಾಗವನ್ನು ನಮ್ಮ ಶರೀರವೂ ಹೀರಿಕೊಳ್ಳುತ್ತದೆ. ಪ್ರತಿ ಸೆಲ್ ಫೋನ್‌ನಲ್ಲೂ ಕನಿಷ್ಠ ಒಂದಾದರೂ ರೇಡಿಯೋ ಆಂಟೆನಾ ಇರುತ್ತದೆ. ಈ ಆಂಟೆನಾವೂ ಸಿಗ್ನಲ್‌ನ್ನು ಪ್ರಸರಿಸುತ್ತದೆ. ಈ ಮೂಲಕ ಈ ಆಂಟೆನಾವು ಫೋನ್ ಸಿಗ್ನಲ್‌ನ್ನು ರೇಡಿಯೋ ಅಲೆಗಳಾಗಿ ಪರಿವರ್ತಿಸುತ್ತದೆ. ಅಥವಾ ಇದಕ್ಕೆ ವಿರುದ್ಧವಾಗಿ ರೇಡಿಯೋ ಅಲೆಗಳನ್ನು ಸ್ವೀಕರಿಸಿ ಮೊಬೈಲ್ ಸಿಗ್ನಲ್ ಆಗಿ ಪರಿವರ್ತಿಸುವ ಕಾರ್ಯವನ್ನೂ ಮಾಡುತ್ತದೆ.ಈಗಿನ ಫೋನ್‌ಗಳ ಒಳಗೇ ವೈಫೈಗೆ, ಬ್ಲೂಟೂತ್‌ಗೆ, ಜಿಪಿಎಸ್ ಇತ್ಯಾದಿಗಳಿಗೆ ಅಡಕವಾಗಿರುವ ಆಂಟೆನಾಗಳು ಇರುತ್ತವೆ.

ಎಷ್ಟೋ ಬಾರಿ ನಾವು ನಮ್ಮ ಮೊಬೈಲ್‌ನಲ್ಲಿ ದುರ್ಬಲ ಸಿಗ್ನಲ್ ಇದೆ ಎಂದು ದೂರುತ್ತೇವೆ. ಇದಕ್ಕೆ ಕಾರಣಗಳು ಎರಡು:

1) ನಾವು ಟವರ್‌ನಿಂದ ದೂರ ಇರುವುದು

2) ಸುತ್ತಲಿನ ಕಟ್ಟಡ, ಗುಡ್ಡ ಇತ್ಯಾದಿಗಳು ಸೆಲ್ ಟವರ್‌ಗೆ ಅಡ್ಡವಾಗಿರುವುದು. ಇಂತಹ ದುರ್ಬಲ ಸಿಗ್ನಲ್ ಗಳಿರುವ ಸಂದರ್ಭ ಸಿಗ್ನಲ್ ಸ್ವೀಕರಿಸುವ ಉದ್ದೇಶದಿಂದ ಸೆಲ್‌ಫೋನ್‌ಗಳು ಹೆಚ್ಚಿನ ವಿಕಿರಣವನ್ನು ಹೊರಸೂಸುತ್ತವೆ. ಇದು ಬ್ಯಾಟರಿ ಆಯುಷ್ಯದ ಮೇಲೂ ಪ್ರಭಾವ ಬೀರುವುದು ಮಾತ್ರವಲ್ಲ, ಹೆಚ್ಚಿನ ವಿಕಿರಣವನ್ನು ನಮ್ಮ ಶರೀರ ಹೀರುವ ಅಪಾಯವನ್ನೂ ಸೃಷ್ಟಿಸುತ್ತದೆ ಎಂಬುದು ನೆನಪಿರಲಿ.

ಮುಂಜಾಗ್ರತೆ ಒಳ್ಳೆಯದು:

ಸಿಗ್ನಲ್‌ನ ಸಾಮರ್ಥ್ಯ ಹಾಗೂ ಮೊಬೈಲ್ ಬಳಸುವ ರೀತಿ ಕೂಡಾ ವಿಕಿರಣಕ್ಕೆ ನಮ್ಮನ್ನು ಒಡ್ಡಿಕೊಳ್ಳುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಇವುಗಳ ಜೊತೆಗೆ ಈ ಕೆಲವು ಮುಂಜಾಗ್ರತೆ ವಹಿಸುವ ಮೂಲಕ ಭವಿಷ್ಯದಲ್ಲಿ ವಿಕಿರಣದಿಂದ ಆಗಬಹುದಾದ ಅಪಾಯಗಳನ್ನು ತಪ್ಪಿಸಿಕೊಳ್ಳಬಹುದು:

1 ಹೆಡ್‌ಫೋನ್‌ಗಳನ್ನು ಬಳಸಿ: ನೀವು ತುಂಬಾ ಹೊತ್ತು ಮೊಬೈಲ್ ಬಳಸಿ ಮಾತನಾಡುವವರಾದರೆ ಹೆಡ್ ಫೋನ್, ಇಯರ್‌ಫೋನ್ ಬಳಸಿ ಫೋನಿನ ಸಾಮಿಪ್ಯದ ಅವಧಿಯನ್ನು ಕಡಿಮೆ ಮಾಡಿಕೊಳ್ಳಿ.

2 ಸ್ಪೀಕರ್‌ಫೋನ್ ಬಳಸಿ: ನೀವು ಒಂಟಿಯಾಗಿರುವ ಸಂದರ್ಭವಾದರೆ ಸ್ಪೀಕರ್ ಬಳಸಿ ಸಂಭಾಷಿಸುವುದು ಲೇಸು.

3 ಹೆಡ್‌ಫೋನ್ ಅಥವಾ ಸ್ಪೀಕರ್ ಬಳಸಿ ಮಾತನಾಡಲು ಕಷ್ಟವಾದರೆ ಕೊನೆ ಪಕ್ಷ ಕಿವಿಯಿಂದ ಸ್ವಲ್ಪ ಅಂತರದಲ್ಲಿ ಫೋನ್ ಹಿಡಿಯುವ ಮೂಲಕ ಸಾಮಿಪ್ಯತೆಯನ್ನು ತಪ್ಪಿಸಿಕೊಳ್ಳಿ.

4 ಸಿಗ್ನಲ್ ಸಮಸ್ಯೆಗಳಿರುವ ಜಾಗದಲ್ಲಿ ಮೊಬೈಲ್‌ನಲ್ಲಿ ಸಂಭಾಷಿಸುವ ಸಂದರ್ಭ ಕಡಿಮೆ ಮಾಡಿಕೊಳ್ಳಿ.

5 ಪ್ರಯಾಣಿಸುವ ವೇಳೆ (ಸಂಚಾರಿಗಳಾಗಿರುವಾಗ) ಸಂಭಾಷಣೆ ಕಡಿಮೆ ಮಾಡಿ. ಪ್ರಯಾಣದ ವೇಳೆ ಸಿಗ್ನಲ್ ಬದಲಾವಣೆಗೋಸ್ಕರ ಫೋನ್ ಹೆಚ್ಚು ವಿಕಿರಣ ಹೊರ ಸೂಸುವುದರಿಂದ ಅಪಾಯ ಜಾಸ್ತಿ.

6 ಕೆಲವರು ರಾತ್ರಿ ಮಲಗುವಾಗ ತಲೆ ಪಕ್ಕದಲ್ಲೇ ಮೊಬೈಲ್ ಇರಿಸಿರುತ್ತಾರೆ. ಸಾಧ್ಯವಾದರೆ ಶರೀರದಿಂದ ಮೊಬೈಲ್‌ಗೆ ಕನಿಷ್ಠ ಮೂರು ಫೀಟ್ ಅಂತರವನ್ನಾದರೂ ಕಾಯ್ದೊಳ್ಳಲು ಪ್ರಯತ್ನಿಸಿ.

ಹೆಚ್ಚಿನ ಎಸ್‌ಎಆರ್ ವ್ಯಾಲ್ಯೂ ಅಪಾಯಕಾರಿಯೇ?

ಈ ವಿಚಾರವನ್ನು ನಿರೂಪಿಸಲು ಸಾಕಷ್ಟು ವಿಜ್ಞಾನಿಗಳು ಕೆಲಸ ಮಾಡುತ್ತಿದ್ದಾರೆ. ಸಾಕಷ್ಟೂ ಸಂಶೋಧನೆಗಳೂ ನಡೆದಿವೆ. ಆದರೆ ಯಾರೂ ನಿಖರವಾಗಿ ಮೊಬೈಲ್ ಫೋನ್ ವಿಕಿರಣದಿಂದ ಇಂಥದ್ದೇ ಸಮಸ್ಯೆ ಮೈದೋರುತ್ತದೆ ಎಂದು ನಿರೂಪಿಸಿಲ್ಲ. ಕೆಲ ಸಮಯದ ಹಿಂದೆ ಇಲಿಗಳ ಮೇಲೆ ರೇಡಿಯೋ ವಿಕಿರಣ ಹಾಯಿಸಿ ನಡೆಸಿದ ಪರೀಕ್ಷೆಗಳು ಕ್ಯಾನ್ಸರ್‌ಕಾರಕ ಗಡ್ಡೆಗಳನ್ನು ಮೂಡಿಸಿವೆ ಎಂದು ಹೇಳಲಾಗಿದೆ.  ಮನುಷ್ಯನ ಮೇಲೆ ಇಂತಹ ಪ್ರಯೋಗ ನಡೆದ ಉದಾಹರಣೆ ಲಭಿಸುವುದಿಲ್ಲ ಹಾಗೂ ಇಲಿಗಳ

ಮೇಲೆ ಮಾನವ ಶರೀರ ಬಳಸುವುದಕ್ಕಿಂತ ಏಳು ಪಟ್ಟು ಜಾಸ್ತಿ ವಿಕಿರಣ ಹಾಸಿಯಿಸಿ ಪ್ರಯೋಗ ಮಾಡಿರುವುದು ಗಮನಾರ್ಹ. ಅಂದರೆ ನಿಮ್ಮ ಫೋನಿನಲ್ಲಿ ದಿನಾ 10 ಗಂಟೆ ನಿರಂತರವಾಗಿ ತಿಂಗಳುಗಳ ಕಾಲ ಮಾತನಾಡಿದರಷ್ಟೇ ಅಷ್ಟೊಂದು ವಿಕಿರಣ ಕ್ಕೊಡ್ಡಿಕೊಳ್ಳುವ ಅಪಾಯವಿದೆ.

ಸಂಶೋಧಕರು ಬಹುತೇಕ, ಹೆಚ್ಚಿನ ಪ್ರಮಾಣದಲ್ಲಿ ಮೊಬೈಲ್ ಫೋನಿಗೆ ಶರೀರವನ್ನು ಒಡ್ಡಿಕೊಂಡರೆ ಆರೋಗ್ಯ ಸಮಸ್ಯೆ ಬರಬಲ್ಲುದು ಎಂದು ಹೇಳುತ್ತಾರೆ ಹೊರತು ಅದನ್ನು ನಿಖರವಾಗಿ ಮಾನದಂಡ ಸಹಿತ ಹೇಳಿಲ್ಲ. ಇನ್ನು ಚೈನಾ ಫೋನ್‌ಗಳು ಹೆಚ್ಚು ವಿಕಿರಣಕಾರುತ್ತವೆ ಎಂಬ ವದಂತಿಗಳೂ ಇವೆ. ಇದೂ ಪೂರ್ತಿ ನಿಜವಾಗಿರಬೇಕಿಲ್ಲ. ಯಾಕೆಂದರೆ ಎಲ್ಲಾ ಪರೀಕ್ಷೆಗಳನ್ನು ನಡೆಸಿದ ಬಳಿಕವೇ ಅವು ಮಾರುಕಟ್ಟೆಗೆ ಬರುತ್ತವೆ ಹಾಗೂ ನಿಗದಿಪಡಿಸಿದ ಮಾನದಂಡಗಳೊಳಗಿನ ಎಸ್‌ಎಆರ್ ವ್ಯಾಲ್ಯೂವನ್ನೇ ಹೊಂತಿರುತ್ತವೆ.

ನಿಮ್ಮ ಮೊಬೈಲ್‌ನ ಎಸ್‌ಎಆರ್ ವ್ಯಾಲ್ಯೂ ಗುರುತಿಸುವುದು ಹೇಗೆ?

  • ಫೋನ್ ಜೊತೆ ನೀಡುವ ಪುಸ್ತಿಕೆಯಲ್ಲಿರುತ್ತದೆ.
  • ಬ್ರಾಂಡ್ ಹೆಸರು ಕೊಟ್ಟು ಇಂಟರ್‌ನೆಟ್‌ನಲ್ಲಿ ಹುಡುಕಿದರೆ ಸಿಗುತ್ತದೆ
  • ನಿಮ್ಮ ಫೋನ್‌ನಲ್ಲಿ ಯುಎಸ್‌ಎಸ್‌ಡಿ ಮೂಲಕ ‘ಸ್ಟಾರ್‌ಹ್ಯಾಶ್‌೦೭ಹ್ಯಾಶ್’ ಎಂದು ಟೈಪ್ ಮಾಡಿ ಡಯಲ್ ಮಾಡಿದರೆ ಎಸ್’ಎಆರ್ ವ್ಯಾಲ್ಯೂ ತಿಳಿದುಬರುತ್ತದೆ.

 

 

 

Follow Us:
Download App:
  • android
  • ios