ಮೊಬೈಲ್ ಕೊಳ್ಳುತ್ತಿದ್ದೀರಾ ಹಾಗಾದ್ರೆ ನೀವು ಎಚ್ಚರಿಕೆ ವಹಿಸುವುದು ಅಗತ್ಯ. ಯಾಕೆಂದರೆ ಬ್ರಾಂಡೆಂಡ್ ಮೊಬೈಲ್ ಗಳ ಹೆಸರಲ್ಲೇ ನಕಲಿ ಮೊಬೈಲ್ ಗಳೂ ಇದೀಗ ಕಾಲಿಟ್ಟಿವೆ. 

ವಡೋದರಾ: ಐಫೋನ್‌ ಎಕ್ಸ್‌ ಹಾಗೂ ಸ್ಯಾಮ್‌ಸಂಗ್‌ ಗೆಲಾಕ್ಸಿ ಮೊಬೈಲ್‌ ಫೋನ್‌ ಆನ್‌ಲೈನ್‌ನಲ್ಲಿ ಕೊಂಚ ಅಗ್ಗದ ಬೆಲೆಗೆ ಸಿಕ್ಕಿದೆ ಎಂದು ಖರೀದಿಸಿ ಖುಷಿಪಡುತ್ತಿದ್ದೀರಾ? ಹಾಗಿದ್ದರೆ, ಅದು ಅಸಲಿಯೋ ನಕಲಿಯೋ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಿ.

ಯಾಕೆಂದರೆ, ಪ್ರಸಿದ್ಧ ಕಂಪನಿಗಳ ಮೊಬೈಲ್‌ಗಳ ನಕಲು ತಯಾರಿಸಿ, ಅದನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಿ ವಂಚಿಸುತ್ತಿದ್ದ ಜಾಲವೊಂದನ್ನು ಗುಜರಾತ್‌ನ ವಡೋದರಾ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದು, 24 ಲಕ್ಷ ರು. ಮೌಲ್ಯದ ನಕಲಿ ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆನ್‌ಲೈನ್‌ನಲ್ಲಿ ಹೈಎಂಡ್‌ ಮೊಬೈಲ್‌ ಖರೀದಿಸಲು ಬಯಸುವ ಗ್ರಾಹಕರನ್ನೇ ಆರೋಪಿಗಳು ಗುರಿಯಾಗಿಸಿಕೊಳ್ಳುತ್ತಿದ್ದರು. ಪ್ರಖ್ಯಾತ ಕಂಪನಿಗಳ ಪ್ರಸಿದ್ಧ ಮಾಡೆಲ್‌ ಫೋನ್‌ಗಳ ನಕಲಿಯನ್ನು ಮಾರಾಟ ಮಾಡುತ್ತಿದ್ದರು. ಈ ಸಂಬಂಧ ಸಾಕಷ್ಟುದೂರುಗಳು ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುಜರಾತಿನಲ್ಲಿ ಸಕ್ರಿಯವಾಗಿರುವ ಈ ಜಾಲ ಆನ್‌ಲೈನ್‌ ಮೂಲಕ ದೇಶದ ಮೂಲೆಮೂಲೆಯ ಗ್ರಾಹಕರಿಗೂ ಮೊಬೈಲ್‌ ಮಾರಾಟ ಮಾಡಿರುವ ಶಂಕೆ ಪೊಲೀಸರಿಗೆ ಇದೆ. ಈ ತಂಡ ದುಬಾರಿ ಬೆಲೆಯ ಐಫೋನ್‌ ಎಕ್ಸ್‌ ಹಾಗೂ ಸ್ಯಾಮ್‌ಸಂಗ್‌ ಗೆಲಾಕ್ಸಿ ಸೀರಿಸ್‌ ಮೊಬೈಲ್‌ಗಳ ನಕಲನ್ನು ಹೆಚ್ಚು ಮಾರಾಟ ಮಾಡುತ್ತಿತ್ತು. ಈ ಮೊಬೈಲ್‌ಗಳ ಬೆಲೆ 50 ಸಾವಿರ ರು.ಗಿಂತ ಅಧಿಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಸಲಿಯೋ, ನಕಲಿಯೋ ಪರೀಕ್ಷೆ ಹೇಗೆ?

ಪ್ರತಿ ಮೊಬೈಲ್‌ಗೂ ವಿಶಿಷ್ಟಗುರುತಿನ ಸಂಖ್ಯೆ ಇರುತ್ತದೆ. ಅದುವೇ ಐಎಂಇಐ. ನಿಮ್ಮ ಮೊಬೈಲ್‌ನಲ್ಲಿ ‘*್ಫ06್ಫ’ಗೆ ಡಯಲ್‌ ಮಾಡಿದರೆ ಐಎಂಇಐ ಸಂಖ್ಯೆ ಗೋಚರವಾಗುತ್ತದೆ. ಆಯಾ ಕಂಪನಿಯ ವೆಬ್‌ಸೈಟ್‌ಗೆ ಹೋಗಿ ಇದನ್ನು ನಮೂದಿಸಿ, ಮೊಬೈಲ್‌ ಅಸಲಿಯೋ ಅಥವಾ ನಕಲಿಯೋ ಎಂಬುದನ್ನು ಪರಿಶೀಲಿಸಿಕೊಳ್ಳಬಹುದು.