ಬೆಂಗಳೂರು: ಪ್ರತಿಷ್ಠಿತ ವಿಮಾನ ತಯಾರಕ ಕಂಪನಿ ಏರ್‌ಬಸ್ ದೇಶದ ರಾಜಧಾನಿ ದೆಹಲಿಯಲ್ಲಿ ಇದೇ ಮೊದಲ ಬಾರಿಗೆ ವಾಣಿಜ್ಯ ಪೈಲಟ್‌ಗಳಿಗೆ ಮತ್ತು ನಿರ್ವಹಣಾ ಎಂಜಿನಿಯರ್‌ಗಳಿಗೆ ತರಬೇತಿ ನೀಡುವ ಕೇಂದ್ರವನ್ನು ಆರಂಭಿಸಿದೆ.

ಭಾರತದಲ್ಲಿ ಪ್ರಸ್ತುತ  ವಾಣಿಜ್ಯ ವಿಮಾನಯಾನ ಉದ್ಯಮದ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡರೆ ಮುಂದಿನ 20 ವರ್ಷಗಳಲ್ಲಿ 25,000 ಕ್ಕಿಂತ ಹೆಚ್ಚು ಪೈಲಟ್‌ಗಳ ಅಗತ್ಯವಿರಲಿದೆ ಎಂದು ಏರ್‌ಬಸ್ ಅಂದಾಜು. ಈ ನಿಟ್ಟಿನಲ್ಲಿ ನಾಗರಿಕ ವಿಮಾನಯಾನ ಕ್ಷೇತ್ರದ ಪ್ರಗತಿಗೆ ಪೂರಕವಾಗಿ ತೆಗೆದುಕೊಳ್ಳುತ್ತಿರುವ ಪ್ರಯತ್ನ ಇದಾಗಿದೆ ಎಂದು ಏರ್ ಬಸ್ ಹೇಳಿದೆ.

ಇದನ್ನೂ ಓದಿ: ಬೆಂಗಳೂರು ಏರೋ ಶೋ ಸಮಗ್ರ ಸುದ್ದಿ ಒಂದೇ ಕಡೆ

ದೆಹಲಿಯಲ್ಲಿ ಆರಂಭವಾಗಿರುವ ತರಬೇತಿ ಕೇಂದ್ರವು ಪೂರ್ಣಪ್ರಮಾಣದ ಫ್ಲೈಟ್ ಸಿಮ್ಯುಲೇಶನ್‌ಗೆ ಎ320 ಫ್ಲೈಟ್ ಸಿಮ್ಯುಲೇಟರ್ ಅನ್ನು ಹೊಂದಿದೆ. ಇದರಲ್ಲಿ ವಿಮಾನ ವಿಧಾನ ತರಬೇತಿ, ಕಂಪ್ಯೂಟರ್ ಆಧಾರಿತ ತರಬೇತಿ ಕೊಠಡಿ ಮತ್ತು ಗುಣಮಟ್ಟದ ಪೈಲಟ್ ಟ್ರಾನ್ಸಿಶನ್ ಟ್ರೇನಿಂಗ್‌ನಂತಹ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡಿದೆ. 

ಇದಲ್ಲದೇ, ಸಹ ಪೈಲಟ್‌ಗಳಲ್ಲಿ ಪರಿಪಕ್ವತೆಯನ್ನು ತರುವುದು ಮತ್ತು ಕೌಶಲ್ಯಗಳನ್ನು ಸುಧಾರಿಸುವ ನಿಟ್ಟಿನಲ್ಲಿ ‘ಅಪ್‌ಗ್ರೇಡ್ ಟು ಕಮಾಂಡ್' ಎಂಬ ಕೋರ್ಸನ್ನು ಸಹ ಈ ಕೇಂದ್ರ ಒಳಗೊಂಡಿದೆ. ಬೆಂಗಳೂರಿನಲ್ಲಿ 2007 ರಲ್ಲಿ ಆರಂಭವಾದ ಏರ್‌ಬಸ್‌ನ ತರಬೇತಿ ಕೇಂದ್ರದಲ್ಲಿ ಇದುವರೆಗೆ 4,500 ಕ್ಕೂ ಅಧಿಕ ನಿರ್ವಹಣೆ ಎಂಜಿನಿಯರ್‌ಗಳಿಗೆ ತರಬೇತಿ ನೀಡಲಾಗಿದೆ. ದೆಹಲಿಯಲ್ಲಿ ಆರಂಭಿಸಲಾಗಿರುವ ತರಬೇತಿ ಕೇಂದ್ರವು ಬೆಂಗಳೂರಿನ ತರಬೇತಿ ಕೇಂದ್ರಕ್ಕೆ ಪೂರಕವಾಗಿದೆ.

ಏರ್‌ಬಸ್ ಇಂಡಿಯಾ & ದಕ್ಷಿಣ ಏಷ್ಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆನಂದ್ ಇ. ಅವರು ಮಾತನಾಡಿ, ‘‘ಗ್ರಾಹಕರ ವ್ಯವಹಾರಗಳಿಗೆ ಬೆಂಬಲ ನೀಡುವುದು ನಮ್ಮ ಆದ್ಯತೆಯಾಗಿದ್ದು, ಇದಕ್ಕೆ ಅಗತ್ಯವಾದ ಮೂಲಸೌಕರ್ಯಗಳನ್ನು ಹೊಂದಿದ ತರಬೇತಿಯನ್ನು ಈ ಕೇಂದ್ರದಲ್ಲಿ ನೀಡಲಾಗುತ್ತದೆ. ಗ್ರಾಹಕರಿಗೆ ಪೂರಕವಾದ ಸೇವೆಗಳನ್ನು ಒದಗಿಸುವುದು ಮತ್ತು ಸುರಕ್ಷತೆ ನಮ್ಮ ಆಧಾರಸ್ತಂಭಗಳು. ಇದಕ್ಕೆ ಪೂರಕವಾಗಿ ದೇಶದಲ್ಲಿ ತರಬೇತಿ ಕೇಂದ್ರವನ್ನು ಆರಂಭಿಸಿರುವುದು ನಮ್ಮ ಬದ್ಧತೆಯ ಪ್ರತೀಕ, ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಂತೂ ಇಂತೂ Redmi Note 7 ಲಾಂಚ್ ಡೇಟ್ ಬಂತು! ಯಾವಾಗ?

ಜಾಗತಿಕ ಮಟ್ಟದಲ್ಲಿ ಏರ್‌ಬಸ್ ಪೈಲಟ್‌ಗಳು, ನಿರ್ವಹಣೆ ಎಂಜಿನಿಯರ್‌ಗಳು ಮತ್ತು ಸಿಬ್ಬಂದಿಯನ್ನು ಗಮನದಲ್ಲಿಟ್ಟುಕೊಂಡು ಸಮಗ್ರ ಮತ್ತು ಅತ್ಯುತ್ಕೃಷ್ಟವಾದ ಕಸ್ಟಮೈಸ್ಡ್ ತರಬೇತಿ ಯೋಜನೆಗಳನ್ನು ಕಂಪನಿಯು ರೂಪಿಸಿದೆ. ಭಾರತ ಸರ್ಕಾರದ ‘ಸ್ಕಿಲ್ ಇಂಡಿಯಾ ಉಪಕ್ರಮಕ್ಕೆ ಪೂರಕವಾಗಿ ಏರ್‌ಬಸ್, ಉಪಖಂಡದಲ್ಲಿ ಅತ್ಯಾಧುನಿಕ ತರಬೇತಿ ತಂತ್ರಜ್ಞಾನಗಳ ಮೇಲೆ ಗಮನವನ್ನು ಕೇಂದ್ರೀಕರಿಸಿದೆ. ಈ ಮೂಲಕ ಅತ್ಯುತ್ಕೃಷ್ಟವಾದ ಕೌಶಲ್ಯಯುತವಾದ ಮಾನವಶಕ್ತಿಯನ್ನು ಸೃಷ್ಟಿಸಲಿದೆ, ಎಂದು ಅವರು ಹೇಳಿದ್ದಾರೆ.

 ಏರ್‌ಬಸ್ ಕಮರ್ಷಿಯಲ್ ಏರ್‌ಕ್ರಾಫ್ಟ್‌ನ ತರಬೇತಿ ಸೇವೆಗಳ ಮುಖ್ಯಸ್ಥ ಮೈಕೆಲ್ ಚೆಮೌನಿ ಅವರು ಮಾತನಾಡಿ,  ಪೈಲಟ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆ ಹಿನ್ನೆಲೆಯಲ್ಲಿ ಭಾರತದಲ್ಲಿ ಈ ತರಬೇತಿ ಕೇಂದ್ರವನ್ನು ಆರಂಭಿಸಲಾಗಿದೆ.  ಮುಂದಿನ 20 ವರ್ಷಗಳಲ್ಲಿ ಜಗತ್ತಿನಾದ್ಯಂತ 5,00,000 ಕ್ಕೂ ಅಧಿಕ ಹೊಸ ಪೈಲಟ್‌ಗಳ ಅಗತ್ಯವಿರಲಿದೆ, ಎಂದು ಹೇಳಿದ್ದಾರೆ.