Chikkamagaluru: ಯುವಮೋರ್ಚಾ ಅಧ್ಯಕ್ಷ ಅವಿನಾಶ್ ಮೇಲೆ ಪೊಲೀಸರ ಹಲ್ಲೆ ಆರೋಪ: ಬಿಜೆಪಿಯಿಂದ ಬೃಹತ್ ಪ್ರತಿಭಟನೆ
ಜಿಲ್ಲೆಯ ಮೂಡಿಗೆರೆ ತಾಲ್ಲೂಕು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಅವಿನಾಶ್ ಜನ್ನಾಪುರ ಅವರ ಮೇಲೆ ಸಕಲೇಶಪುರ ಪೊಲೀಸರು ತೀವ್ರ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಮೂಡಿಗೆರೆ ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಜು.03): ಜಿಲ್ಲೆಯ ಮೂಡಿಗೆರೆ ತಾಲ್ಲೂಕು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಅವಿನಾಶ್ ಜನ್ನಾಪುರ ಅವರ ಮೇಲೆ ಸಕಲೇಶಪುರ ಪೊಲೀಸರು ತೀವ್ರ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಮೂಡಿಗೆರೆ ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಖಾಕಿ ಪಡೆ ಕಾಂಗ್ರೆಸ್ ಕೈಗೊಂಬೆಯಾಗಿದೆ ಎಂದು ಆರೋಪಿಸಿ ಮೂಡಿಗೆರೆ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.
ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ: ಸಕಲೇಶಪುರದಲ್ಲಿ ಗೋಹತ್ಯೆ ಖಂಡಿಸಿ ಜೂನ್ 30 ರಂದು ನಡೆದ ಪ್ರತಿಭಟನೆಯಲ್ಲಿ ಭಜರಂಗದಳದ ಮುಖಂಡ ರಘು ಸಕಲೇಶಪುರ ಅವರು ಮಾಡಿದ್ದರೆನ್ನಲಾದ ಪ್ರಚೋಧನಕಾರಿ ಭಾಷಣ ಸಂಬಂಧ ರಘು ವಿರುದ್ಧ ಸಕಲೇಶಪುರ ಪೊಲೀಸರು ಪ್ರಕರಣ ದಾಖಲಿದ್ದಾರೆ. ಸದ್ಯ ರಘು ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಈ ಸಂಬಂಧ ರಘು ಅವರ ಜೊತೆ ಸಂಪರ್ಕ ಹೊಂದಿದ್ದರು ಎಂಬ ಕಾರಣಕ್ಕೆ ವಿಚಾರಣೆಗೆಂದು ಸಕಲೇಶಪುರ ಪೊಲೀಸರು ಜನ್ನಾಪುರದ ಅವಿನಾಶ್ ಮನೆಗೆ ಆಗಮಿಸಿ ಅವರನ್ನು ಸಕಲೇಶಪುರ ಠಾಣೆಗೆ ಕರೆದೊಯ್ದಿದ್ದಾರೆ.
ರಾಜಕಾರಣದಲ್ಲಿ ಸೇವಾ ಮನೋಭಾವನೆ ಕಣ್ಮರೆ: ಸಂತೋಷ್ ಹೆಗ್ಡೆ ಆತಂಕ
ಅಲ್ಲಿ ಅವಿನಾಶ್ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಅವಿನಾಶ್ ಮೇಲೆ ಪೊಲೀಸರ ಹಲ್ಲೆ ಖಂಡಿಸಿ ಇಂದು ಮಧ್ಯಾಹ್ನ ಮೂಡಿಗೆರೆ ಪಟ್ಟಣದಲ್ಲಿ ಬಿಜೆಪಿ, ಬಜರಂಗದಳ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಗೆ ಮನವಿ ಸಲ್ಲಿಸಿದರು. ಇದಕ್ಕೂ ಮುನ್ನ ಪ್ರತಿಭಟನಾ ಸಭೆಯಲ್ಲಿ ಮಾತಾಡಿದ ಬಿ.ಜೆ.ಪಿ. ಮಖಂಡ ದೀಪಕ್ ದೊಡ್ಡಯ್ಯ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳಲ್ಲಿಯೇ ಹಿಂದೂಪರ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಶುರುಮಾಡಿದ್ದಾರೆ.
ಪೊಲೀಸ್ ಬಲವನ್ನು ಉಪಯೋಗಿಸಿಕೊಂಡು ನಮ್ಮ ಕಾರ್ಯಕರ್ತರ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು. ಇನ್ನು ಬಿಜೆಪಿ ಯುವಮೋರ್ಚಾದ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ಮಾತಾಡಿ ಸಕಲೇಶಪುರದ ಘಟನೆಯಲ್ಲಿ ಯಾವುದೇ ಸಂಬಂಧವಿಲ್ಲದ ಮೂಡಿಗೆರೆ ಯುವಮೋರ್ಚಾ ಅಧ್ಯಕ್ಷ ಅವಿನಾಶ್ ಮೇಲೆ ಪೊಲೀಸರು ವಿನಾಕಾರಣ ಹಲ್ಲೆ ನಡೆಸಿದ್ದಾರೆ. ಸರ್ಕಾರದ ಇಂತಹ ನಡೆಯಿಂದ ನಮ್ಮ ಶಕ್ತಿಯನ್ನು, ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಇದರ ವಿರುದ್ಧ ನಾವು ಪ್ರಬಲವಾಗಿ ಪ್ರತಿರೋಧ ಒಡ್ಡುತ್ತೇವೆ ಎಂದರು.
ಏನಿದು ಘಟನೆ?: ಬಕ್ರೀದ್ ಸಂದರ್ಭದಲ್ಲಿ ಸಕಲೇಶಪುರ ತಾಲ್ಲೂಕಿನ ಕ್ಯಾಮನಹಳ್ಳಿ ಎಂಬಲ್ಲಿ ಗರ್ಭದ ಎಮ್ಮೆಯೊಂದರ ಹಣೆಗೆ ಗುಂಡಿಟ್ಟು ಸಾಯಿಸಿ ಕತ್ತುಕೊಯ್ದು ಮಾಂಸ ಮಾಡುತ್ತಿದ್ದ ಸಂದರ್ಭದಲ್ಲಿ ಬಜರಂಗದಳದ ಕಾರ್ಯಕರ್ತರು ಸ್ಥಳಕ್ಕೆ ಬಂದಾಗ ಆರೋಪಿಗಳು ಪರಾರಿಯಾಗಿದ್ದರು. ಈ ಘಟನೆಯ ಸ್ಥಳಕ್ಕೆ ಎಸ್ಪಿ ಮಿಥುನ್ ರೈ ಆಗಮಿಸಿ ಪರಿಶೀಲನೆ ನಡೆಸಿದ್ದರು. ಇದನ್ನು ಖಂಡಿಸಿ ಗೋಹತ್ಯೆ ನಡೆಸಿದ ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿ ಜೂನ್ 30 ರಂದು ಸಕಲೇಶಪುರದಲ್ಲಿ ಭಜರಂಗದಳದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ನೆಕ್ಕುಂದಿ ಕೆರೆ ಅವ್ಯವಸ್ಥೆ: ಮೀನುಗಾರಿಕೆ ಇಲಾಖೆ ಅಧಿಕಾರಿಗಳ ವಿರುದ್ಧ ಸಚಿವ ಸುಧಾಕರ್ ಗರಂ
ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಬಜರಂಗದಳ ಮುಖಂಡ ರಘು ಸಕಲೇಶಪುರ ಮಾತನಾಡುತ್ತಾ 'ತರಕಾರಿ ಮೀನು ಮಾರಾಟ ಮಾಡಲು ಬರುವ ವ್ಯಾಪಾರಿಗಳು ಎಚ್ಚರಿಕೆಯಿಂದಿರಿ, ಇಲ್ಲಾಂದ್ರೆ ನಮ್ಮಲ್ಲಿರುವ ಕೋವಿಯೊಳಗಿನ ಗುಂಡು ಹೊರಗಡೆ ಬರುತ್ತವೆ, ನಾವು ಕೂಡ ಗುಂಡು ಹಾರಿಸಬೇಕಾಗುತ್ತದೆ' ಎಂದು ಪ್ರಚೋದನಾಕಾರಿಯಾಗಿ ಭಾಷಣ ಮಾಡಿದ್ದರು. ಈ ಭಾಷಣದ ವಿರುದ್ಧ ಸಕಲೇಶಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ರಘು ಬಂಧನಕ್ಕೆ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಈಗಾಗಲೇ ನಾಲ್ಕೈದು ಮಂದಿ ರಘು ಆಪ್ತರನ್ನು ಬಂಧಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡಿಗೆರೆ ಬಿ.ಜೆ.ಪಿ. ಯುವಮೋರ್ಚಾ ಅಧ್ಯಕ್ಷ ಅವಿನಾಶ್ ಅವರನ್ನು ಠಾಣೆಗೆ ಕರೆದು ವಿಚಾರಣೆ ನಡೆಸಿದ್ದರು. ಆ ಸಂದರ್ಭದಲ್ಲಿ ಅವಿನಾಶ್ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ.