ಗ್ಯಾರಂಟಿ ಯೋಜನೆ: ಡಿಸೆಂಬರ್‌ನಿಂದ ಯುವನಿಧಿ ಸ್ಕೀಂ ಜಾರಿ, ಪದವಿ, ಡಿಪ್ಲೊಮಾ ಆದ ನಿರುದ್ಯೋಗಿಗಳಿಗೆ ಹಣ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು(ಜು.23): ರಾಜ್ಯ ಸರ್ಕಾರದ ಐದನೇ ಗ್ಯಾರಂಟಿ ‘ಯುವನಿಧಿ’ ಬಹುತೇಕ ಡಿಸೆಂಬರ್‌ನಿಂದ ಜಾರಿಯಾಗಲಿದೆ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಶನಿವಾರ ವಿಧಾನಸೌಧ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಆಯೋಜಿಸಿದ್ದ ರಾಜ್ಯ ಶ್ರೇಷ್ಠ ರಫ್ತು ಪ್ರಶಸ್ತಿಗಳ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಚುನಾವಣೆ ಪ್ರಣಾಳಿಕೆಯಲ್ಲಿ ಐದನೇ ಗ್ಯಾರಂಟಿಯಾಗಿ ‘ಯುವನಿಧಿ’ ಘೋಷಿಸಲಾಗಿತ್ತು. ಅದರಂತೆ 2022-23ರಲ್ಲಿ ಪದವೀದರರಾಗಿ ಹೊರಬಂದು ನಿರುದ್ಯೋಗಿಗಳಾದಲ್ಲಿ ಅವರಿಗೆ ಮೂರು ಸಾವಿರ ಭತ್ಯೆ, ಡಿಪ್ಲಮೋ ಪದವೀಧರರಿಗೆ ಒಂದೂವರೆ ಸಾವಿರ ರುಪಾಯಿ ಭತ್ಯೆ ನೀಡುವ ಯೋಜನೆಯನ್ನು ಘೋಷಿಸಿದ್ದೇವೆ. ಈ ಯೋಜನೆ ನಿರುದ್ಯೋಗಿಗಳಿಗೆ ಆಶಾದಾಯಕವಾಗಲಿದೆ. ಬಹುತೇಕ ಡಿಸೆಂಬರ್‌ನಲ್ಲಿ ಆರಂಭವಾಗಲಿದೆ. ಜೊತೆಗೆ ಕೌಶಲ್ಯ ಇಲಾಖೆಯಿಂದ ತರಬೇತಿ ನೀಡುವ ಕೆಲಸವನ್ನು ಮಾಡಲಾಗುವುದು ಎಂದರು.

ಜನತೆಗೆ ಹೊಸದಾಗಿ ಬೆಲೆ ಏರಿಕೆ ಗ್ಯಾರಂಟಿ, ಬೆಲೆ ಭಾಗ್ಯವನ್ನು ಸರ್ಕಾರ ಕರುಣಿಸಿದೆ: ಹೆಚ್‌ಡಿಕೆ

ಶೀಘ್ರವೇ ಕೈಗಾರಿಕೋದ್ಯಮಿಗಳ ಜೊತೆ ಸಭೆ ನಡೆಸಿ ಉದ್ಯಮಗಳಲ್ಲಿ ಪ್ರಸ್ತುತ ಮಾರುಕಟ್ಟೆಯ ಕಾಲಕ್ಕನುಗುಣವಾಗಿ ಯಾವ ರೀತಿ ಉದ್ಯೋಗಿಗಳು ಬೇಕಾಗುತ್ತಾರೆ ಎಂಬುದನ್ನು ತಿಳಿಯಲಾಗುವುದು. ಅದಕ್ಕೆ ಅನುಗುಣವಾದ ಪಠ್ಯವನ್ನು ಕಾಲೇಜು ಶಿಕ್ಷಣದಲ್ಲಿ ಅಳವಡಿಸಿ ಬೋಧನೆ ಮಾಡಲಾಗುವುದು. ಇದರಿಂದ ನಿರುದ್ಯೋಗವೂ ನಿಯಂತ್ರಣವಾಗಲಿದೆ, ಕೈಗಾರಿಕೆಗಳಿಗೆ ಉದ್ಯೋಗಿಗಳೂ ಲಭ್ಯರಾಗುತ್ತಾರೆ ಎಂದು ಹೇಳಿದರು.

ಹಿಂದೆ ನಮ್ಮ ಸರ್ಕಾರವಿದ್ದಾಗ ಕೈಗಾರಿಕಾ ಬೆಳವಣಿಗೆಗಾಗಿ ಪ್ರತ್ಯೇಕ ಕೌಶಲ್ಯ ತರಬೇತಿ ಇಲಾಖೆ ತರೆದು ವಿವಿಧ ಕಾರ್ಯಕ್ರಮ ಆರಂಭಿಸಲಾಗಿತ್ತು. ಆದರೆ ಬಳಿಕ ಬಂದ ಸರ್ಕಾರ ಅದಕ್ಕೆ ಪ್ರೋತ್ಸಾಹ ನೀಡಲಿಲ್ಲ. ಆದರೆ ನಾವೀಗ ಆ ಇಲಾಖೆಯ ಕಾರ್ಯಕ್ರಮಗಳಿಗೆ ಪುನಃ ಅದಕ್ಕೆ ಶಕ್ತಿ ತುಂಬಲಿದ್ದೇವೆ. ಕೈಗಾರಿಕೆ ಬೆಳೆದರೆ ಉದ್ಯೋಗ ಸೃಷ್ಟಿಯಾಗುತ್ತದೆ. ಅದರಿಂದ ರಾಜ್ಯದ ಜಿಡಿಪಿ ಬೆಳೆಯುತ್ತದೆ. ಆ ಮೂಲಕ ದೇಶದ ಜಿಡಿಪಿಗೆ ರಾಜ್ಯದಿಂದ ಹೆಚ್ಚು ಕೊಡುಗೆ ನೀಡಲು ಸಾಧ್ಯವಾಗಲಿದೆ ಎಂದರು.

ಏನಿದು ಯುವನಿಧಿ ಯೋಜನೆ?

2022-23ನೇ ಸಾಲಿನಲ್ಲಿ ಯಾವುದೇ ವೃತ್ತಿಪರ ಕೋಸ್‌, ಪದವಿ, ಡಿಪ್ಲಮೋ ಪದವಿ ಪಡೆದವರಿಗೆ ಅನ್ವಯ. ಪದವಿ ಪಡೆದ 6 ತಿಂಗಳಲ್ಲಿ ಯಾವುದೇ ಉದ್ಯೋಗ ಸಿಗದೇ ಇದ್ದಲ್ಲಿ ಮುಂದಿನ 24 ತಿಂಗಳ ಅವಧಿಯಿಗೆ ಪದವೀಧರಿಗೆ ಮಾಸಿಕ 3000 ರು. ಮತ್ತು ಡಿಪ್ಲಮೋ ಪದವೀಧರರಿಗೆ ಮಾಸಿಕ 1500 ರು. ನಿರುದ್ಯೋಗ ಭತ್ಯೆ ನೀಡಲಾಗುವುದು.