ಧರ್ಮಸ್ಥಳ ವಿರುದ್ಧ ಅಪಪ್ರಚಾರ ಮಾಡಿದ ಗಂಭೀರ ಆರೋಪ ಎದುರಿಸುತ್ತಿರುವ ಯೂಟ್ಯೂಬರ್ ಸಮೀರ್ ಬಂಧನ ಭೀತಿ ಬೆನ್ನಲ್ಲೇ ನಾಪತ್ತೆಯಾಗಿದ್ದಾನೆ. ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಮನೆ ತಡಕಾಡಿದ ಪೊಲೀಸರು ಇದೀಗ ಮೊಬೈಲ್ ನೆಟ್‌ವರ್ಕ್ ಆಧಾರದಲ್ಲಿ ಹುಡುಕಾಟ ಆರಂಭಿಸಿದ್ದಾರೆ.
ಆನೇಕಲ್ (ಆ.21) ಧರ್ಮಸ್ಥಳ ವಿರುದ್ಧ ಅಪಪ್ರಚಾರ ಮಾಡಿದ ಆರೋಪಡಿ ಯೂಟ್ಯೂಬರ್ ಸಮೀರ್ ಸಮೀರ್ ಬಂಧನಕ್ಕೆ ಧರ್ಮಸ್ಥಳದಿಂದ ಪೊಲೀಸರು ಬೆಂಗಳೂರಿಗೆ ಆಗಮಿಸಿದ್ದರು. ಬನ್ನೇರುಘಟ್ಟ ಪೊಲೀಸರ ಜೊತೆ ಸಮೀರ್ ಬಂಧನಕ್ಕೆ ಆಗಮಿಸಿದ ಪೊಲೀಸರು ಸುಳಿವು ಸಿಗುತ್ತಿದ್ದಂತೆ ಯೂಟ್ಯೂಬರ್ ಸಮೀರ್ ನಾಪತ್ತೆಯಾಗಿದ್ದಾರೆ. ಬನ್ನೇರುಘಟ್ಟ ಮನೆಯಿಂದ ಎಸ್ಕೇಪ್ ಆಗಿರುವ ಸಮೀರ್ ಸುಳಿವಿಲ್ಲ. ಇತ್ತ ಪೊಲೀಸರು ಬನ್ನೇರುಘಟ್ಟ ಮನೆ ಜಾಲಾಡಿದ್ದಾರೆ. ಇದೀಗ ಸಿಡಿಆರ್ ಹಾಗೂ ಮೊಬೈಲ್ ನೆಟ್‌ವರ್ಕ್ ಆಧಾರದಲ್ಲಿ ಸಮೀರ್ ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ.
ಸಮೀರ್ ಮನೆ ಹುಡುಕಾಡಿದ ಪೊಲೀಸ್
ಲೊಕೇಷನ್ ಡಂಪ್ ಮಾಡಿದ್ದ ಧರ್ಮಸ್ಥಳ ಪೊಲೀಸರಿಗೆ ಸಮೀರ್ ಅಡ್ರೆಸ್ ಹುಲ್ಲಳ್ಳಿಯ ಕ್ರೈಸ್ಟ್ ಕಾಲೇಜು ಪಕ್ಕದಲ್ಲಿರುವ ಮನೆಯ ಲೊಕೆಷನ್ ತೋರಿಸಿತ್ತು. ಬನ್ನೇರುಘಟ್ಟ ಬಳಿಯ ಹುಲ್ಲಳ್ಳಿ ಯಲ್ಲಿರುವ ಸಮೀರ್ ಮನೆಗೆ ಧರ್ಮಸ್ಥಳ ಪೊಲೀಸರು ಹಾಗೂ ಬನ್ನೇರುಘಟ್ಟ ಪೊಲೀಸರು ಜಂಟಿಯಾಗಿ ಸಮೀರ್ ಬಂಧನಕ್ಕೆ ತೆರಳಿದ್ದರು. ಪೊಲೀಸರು ಸ್ಥಳಕ್ಕೆ ಧಾವಿಸುತ್ತಿದ್ದಂತೆ ಸಮೀರ್ ಮನೆಯಲ್ಲಿ ಇರಲಿಲ್ಲ. ಸಮೀರ್ ಮನೆಯಲ್ಲಿದ್ದ ಕುಟುಂಬಸ್ಥರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಸಮೀರ್ ಜಾಡು ಕಂಡು ಬಂದಲ್ಲಿ ತಕ್ಷಣ ಪೊಲೀಸರಿಗೆ ಸೂಚಿಸುವಂತೆ ಹೇಳಿದ್ದಾರೆ. ಧರ್ಮಸ್ಥಳದಿಂದ ಓರ್ವ ಸಬ್ ಇನ್ಸ್‌ಪೆಕ್ಟರ್, ಇಬ್ಬರು ಪೊಲೀಸ್ ಸಿಬ್ಬಂದಿಗಳು ಬೆಂಗಳೂರಿಗೆ ಆಗಮಿಸಿದ್ದಾರೆ. ಇದೀಗ ಸಮೀರ್ ಮೊಬೈಲ್ ನೆಟ್‌ವರ್ಕ್ ಆಧರಿಸಿ ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ.
ಧರ್ಮಸ್ಥಳ ವಿರುದ್ಧ ಅಪಪ್ರಚಾರ, ಸ್ವಯಂಪ್ರೇರಿತ ದೂರು ದಾಖಲು
ಧರ್ಮಸ್ಥಳದಲ್ಲಿ ಸಾವಿರಾರೂ ಶವಗಳನ್ನು ಹೂತಿಡಲಾಗಿದೆ. ಇದರಲ್ಲಿ ಬಹುತೇಕರು ಮಹಿಳೆಯರು ಹಾಗೂ ಮಕ್ಕಳು. ಮಹಿಳೆ ಹಾಗೂ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆದಿದೆ. ವ್ಯವಸ್ಥಿತವಾಗಿ ಈ ಮೃತದೇಹಗಳನ್ನು ಯಾವುದೇ ಕಾನೂನು ಪ್ರಕ್ರಿಯ ಮುಗಿಸದೆ ಹೂತು ಹಾಕಲಾಗಿದೆ ಎಂದು ಸಮೀರ್ ತನ್ನ ಯೂಟ್ಯೂಬ್ ವಿಡಿಯೋ ಮೂಲಕ ಆರೋಪಿಸಿದ್ದರು. ಇದರ ಜೊತೆಗೆ ಎಐ ವಿಡಿಯೋ ಸೃಷ್ಟಿಸಿ ಜನರಲ್ಲಿ ಧರ್ಮಸ್ಥಳ ವಿರುದ್ಧ ಅಪನಂಬಿಕೆ ಮೂಡುವಂತೆ ಮಾಡಿದ್ದರು. ಹೀಗಾಗಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲಾಗಿತ್ತು. ಈ ಪ್ರಕರಣ ಸಂಬಂಧ ಧರ್ಮಸ್ಥಳ ಪೊಲೀಸರು ಇದೀಗ ಸಮೀರ್ ಬಂಧನಕ್ಕೆ ಮುಂದಾಗಿದ್ದಾರೆ. ಆದರೆ ಸಮೀರ್ ಬಂಧನದ ವಾಸನೆ ಸಿಗುತ್ತಿದ್ದಂತೆ ನಾಪತ್ತೆಯಾಗಿದ್ದಾರೆ.
ಸಮೀರ್ ವಿರದ್ಧದ ದೂರಿನಲ್ಲಿ ಏನಿದೆ?
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಉಪನಿರೀಕ್ಷಕರು ಈ ಕುರಿತು ಸ್ವಯಂಪ್ರೇರಿತ ದೂರು ದಾಖಲಿಸಿದ್ದಾರೆ. 12.07.2025 ರಂದು 19.30 ಗಂಟೆಗೆ ಠಾಣೆಯಲ್ಲಿದ್ದ ಪೊಲೀಸ್ ಅಧಿಕಾರಿ, ಮೊಬೈಲ್‌ನಲ್ಲಿ ಯೂಟ್ಯೂಬ್ ವಿಡಿಯೋ ಹರಿದಾಡುತ್ತಿರುವುದು ಗಮನಕ್ಕೆ ಬಂದಿದೆ. ಧರ್ಮಸ್ಥಳ ಪ್ರಕರಣದ ಬಗ್ಗೆ ಎಐ ವಿಡಿಯೋ ಮಾಡಿ ಪೋಸ್ಟ್ ಮಾಡಲಾಗಿದೆ. ಧರ್ಮಸ್ಥಳ ಶವಹೂತಿಟ್ಟ ಪ್ರಕರಣದದಲ್ಲಿ ಸಾಕ್ಷಿದಾರರು ತನಿಖೆಗೆ ನೀಡಿದ ಮಾಹಿತಿಯನ್ನು ಗೌಪ್ಯವಾಗಿಟ್ಟುಕೊಂಡು ತನಿಖೆ ನಡೆಸಲಾಗುತ್ತಿದೆ. ಇದರ ನಡುವೆ ಸಮೀರ್ ಎಂ.ಡಿ Dhootha ಎಂಬ ಯೂ ಟ್ಯೂಬ್ ಚಾನಲ್ನಲ್ಲಿ Al ಟೂಲ್ ಮೂಲಕ ಸೃಷ್ಟಿಸಿರುವ 23 ನಿಮಿಷ 52 ಸೆಕೆಂಡ್ ನ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿರುತ್ತಾನೆ. ವಿಡಿಯೋವನ್ನು ಪರಿಶೀಲಿಸಿದಾಗ ವಿಡಿಯೋದಲ್ಲಿ. ಪ್ರಕರಣದ ಫಿರ್ಯಾಧಿಯಲ್ಲಿ ಮತ್ತು ಮಾನ್ಯ ನ್ಯಾಯಾಲಯದಲ್ಲಿ ನೀಡಿರುವ ಮಾಹಿತಿಯನ್ನು ಹೊರತುಪಡಿಸಿ ಇನ್ನೂ ಹೆಚ್ಚಿನ ಮಾಹಿತಿಯನ್ನು ಕಾಲ್ಪನಿಕವಾಗಿ ಸೃಷ್ಟಿಸಿಕೊಂಡು ವಿಡಿಯೋ ಮಾಡಿರುವುದು ಪತ್ತೆಯಾಗಿದೆ. ಈ ಪ್ರಕರಣದ ಪಿರ್ಯಾದಿದಾರರಿಗೆ ಸಾಕ್ಷಿದಾರರ ಸಂರಕ್ಷಣೆ ಯೋಜನೆ -2018ರ ಅಡಿಯಲ್ಲಿ ಭದ್ರತೆಯನ್ನು ಒದದಗಿಸಲಾಗಿದೆ. ಅವರ ಬಗ್ಗೆ ಮಾಹಿತಿ ಹಂಚಿಕೊಂಡರೆ ಗುರುತು ಪತ್ತೆಯಾಗುತ್ತದೆ.
ಸಮೀರ್ ಎಂಡಿ ಎಂಬಾತನು ಧೂತಾ ಎಂಬ ಯೂ ಟ್ಯೂಬ್ ಚಾನಲ್ನಲ್ಲಿ Al ಟೂಲ್ ಮೂಲಕ ನಡೆದ ಅಪರಾಧಕ್ಕೆ ಸಂಬಂದಿಸಿದಂತೆ ಸುಳ್ಳು ಸುದ್ದಿಯನ್ನು ಕೊಟ್ಟಿರುತ್ತಾನೆ. ತನ್ನ ವಿಡಿಯೋದಲ್ಲಿ ಸಾವಿರ ಜನರನ್ನು ಅತ್ಯಾ*ರ ಮಾಡಿ ಕೊಲೆ ಮಾಡಿ ಮುಚ್ಚಿ ಹಾಕಿದ್ದಾರೆ ಇದನ್ನು ಕೇಳಿದರೆ ನಿಮ್ಮ ರಕ್ತ ಕುದಿತ್ತಿಲ್ವಾ ಕರ್ನಾಟಕದ ಮೂಲೆ ಮೂಲೆಯಲಿರುವವರು ಬೀದಿಗಿಳಿದು ಪ್ರತಿಭಟನೆ ಮಾಡಬೇಕು. ಈ ಅನ್ಯಾಯದ ವಿರುದ್ಧ ಪ್ರತಿಯೊಬ್ಬರು ಧ್ವನಿ ಎತ್ತಬೇಕು ಎಂದು ಸಂದೇಶ ನೀಡಿದ್ದಾನೆ. ಈ ಮೂಲಕ ಸಮಾಜದಲ್ಲಿ ದೊಂಬಿ ಮಾಡುವ ಉದ್ದೇಶದಿಂದ ಉದ್ದೇಶ ಪೂರ್ವಕವಾಗಿ ಸಾರ್ವಜನಿಕರನ್ನು ಪ್ರಚೋದಿಸಿದ್ದಾರೆ. ಸಾರ್ವಜನಿಕ ಕೇಡಿಗೆ ಕಾರಣವಾಗುವ ಸಾರ್ವಜನಿಕ ನೆಮ್ಮದಿಯ ವಿರುದ್ಧ ಅಪರಾಧ ವೆಸಗುವಂತೆ ಉದ್ದೇಶವುಳ ಹೇಳಿಕೆಯನ್ನು ವಿಡಿಯೋದಲ್ಲಿ ನೀಡಿರುತ್ತಾನೆ. ಆದ್ದರಿಂದ ಸಮೀರ್ ಎಂ.ಡಿ ಮತ್ತು Dhootha ಎಂಬ ಯೂ ಟ್ಯೂಬ್ ಚಾನಲ್ ನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
