Asianet Suvarna News Asianet Suvarna News

ವಿಶ್ವದಾಖಲೆಗಾಗಿ ಕರ್ನಾಟಕದಾದ್ಯಂತ ಯೋಗಥಾನ್‌: ಸಾವಿರಾರು ಮಂದಿ ಭಾಗಿ

ರಾಜ್ಯಾದ್ಯಂತ ಯೋಗಥಾನ್‌ ನಡೆಯುತ್ತಿದೆ. ಕೊಡಗು, ಧಾರವಾಡ, ಬಾಗಲಕೋಟೆ, ಹಾವೇರಿ, ಶಿವಮೊಗ್ಗ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಯೋಗಥಾನ್‌ ನಡೆದಿದೆ.  

Yogathon 2023 Held on Jan 15th in Karnataka grg
Author
First Published Jan 15, 2023, 10:16 AM IST

ಬೆಂಗಳೂರು(ಜ.15):  ಇಂದು ರಾಜ್ಯಾದ್ಯಂತ ಯೋಗಥಾನ್‌ ನಡೆಯುತ್ತಿದೆ. ಕೊಡಗು, ಧಾರವಾಡ, ಬಾಗಲಕೋಟೆ, ಹಾವೇರಿ, ಶಿವಮೊಗ್ಗ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಇಂದು(ಭಾನುವಾರ) ಯೋಗಥಾನ್‌ ನಡೆದಿದೆ.  
ಕೊಡಗು ಜಿಲ್ಲೆಯಲ್ಲಿ ಯೋಗಾಭ್ಯಾಸ

ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ನಗರದ ಸಾಯಿ ಹಾಕಿ ಮೈದಾನದಲ್ಲಿ ಯೋಗಾಭ್ಯಾಸದಲ್ಲಿ ಸಾವಿರಾರು ವಿದ್ಯಾರ್ಥಿಗಳು, ಯುವಜನರು ಸಾರ್ವಜನಿಕರು ಭಾಗಿಯಾಗಿದ್ದರು. ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರೂ ಕೂಡ ಯೋಗಾಭ್ಯಾಸ ಮಾಡಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಬಿ.ಸಿ ಸತೀಶ್, ಸಿಇಓ ಡಾ. ಆಕಾಶ್, ಎಡಿಸಿ ನಂಜುಂಡೇಗೌಡ ಅವರೂ ಕೂಡ ಯೋಗಾಭ್ಯಾಸ ಮಾಡಿದ್ದಾರೆ. ವಿಶ್ವದಾಖಲೆಗಾಗಿ ಯೋಗಾಭ್ಯಾಸ ನಡೆಯುತ್ತಿದೆ. ಬೆಳಿಗ್ಗೆ 7.45 ರಿಂದ 8.45 ರವರೆಗೆ ಯೋಗಗುರು ಮಹೇಶ್ ಅವರ ಮಾರ್ಗದರ್ಶನದಲ್ಲಿ ಯೋಗಾಭ್ಯಾಸ ನಡೆದಿದೆ. 

National Youth Festival:15ರಂದು ಗಿನ್ನಿಸ್‌ ದಾಖಲೆಗೆ ಯೋಗಥಾನ್‌!

ಬಾಗಲಕೋಟೆಯಲ್ಲಿ ಯೋಗಾಥಾನ್ ಕಾರ್ಯಕ್ರಮ

ನಗರದ ಬಸವೇಶ್ವರ ಕಾಲೇಜ್ ಮೈದಾನದಲ್ಲಿ ಯೋಗಾಥಾನ್ ಆಯೋಜನೆಯಾಗಿದೆ. ಜಿಲ್ಲಾ ಪಂಚಾಯತ್, ಯುವ ಸಬಲೀಕರಣ & ಕ್ರೀಡಾ ಇಲಾಖೆ, ಶಿಕ್ಷಣ ಇಲಾಖೆ, ಆಯುಷ್ ಇಲಾಖೆ ಹಾಗೂ ಯೋಗ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆದಿದೆ. 

ಯೋಗಾಥಾನ್‌ದಲ್ಲಿ ಸಾವಿರಾರು ಜನರು, ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಬೆಳಿಗ್ಗೆ 8.15 ರಿಂದ 9.03ರವರೆಗೆ  ಸಾಮೂಹಿಕ ಯೋಗ ಕಾರ್ಯಕ್ರಮ ನಡೆದಿದೆ. ಯೋಗಾಥಾನ್‌ಗೆ 20 ಸಾವಿರ ಮಂದಿ ಹೆಸರು ನೋಂದಣಿ ಮಾಡಿಕೊಂಡಿದ್ದರು. ಪತಂಜಲಿ ಯೋಗ ಸಂಸ್ಥೆಯಿಂದ 84 ಯೋಗ ಭೋಧಕರನ್ನ ನಿಯೋಜನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಬಾಗಲಕೋಟೆ ಡಿಸಿ ಪಿ.ಸುನೀಲಕುಮಾರ್, ಸಿಇಓ ಟಿ.ಭೂಬಾಲನ್, ಎಸ್.ಪಿ.ಜಯಪ್ರಕಾಶ್ ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು. 

ಹಾವೇರಿಯಲ್ಲಿ ಗಿನ್ನಿಸ್ ದಾಖಲೆಗಾಗಿ ಯೋಗಾಥಾನ್ 

ಹಾವೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಯೋಗಾಥಾನ್ ಕಾರ್ಯಕ್ರಮದಲ್ಲಿ ಏಕಕಾಲಕ್ಕೆ 12 ಸಾವಿರ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ದಟ್ಟವಾದ ಮಂಜಿನಲ್ಲಿ ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ರಘುನಂದನಮೂರ್ತಿ, ಜಿಲ್ಲಾ ಪಂಚಾಯತಿ ಸಿಇಓ ಮಹಮ್ಮದ್ ರೋಷನ್, ಎಸ್ಪಿ ಹನುಮಂತರಾಯ ಶಾಸಕ ನೆಹರು ಓಲೇಕಾರ ಹಾಗೂ ಜಿಲ್ಲೆಯ ವಿವಿಧ ಶಾಲೆಯ ವಿದ್ಯಾರ್ಥಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗಿಯಾಗಿದ್ದರು. 

ಶಿವಮೊಗ್ಗದಲ್ಲೂ ಯೋಗಥಾನ್

ಶಿವಮೊಗ್ಗ ನಗರದ ನೆಹರು ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಯುವಜನೋತ್ಸವದ ಅಂಗವಾಗಿ 'ಯೋಗಥಾನ್-2023' ಆಯೋಜಿಸಲಾಗಿತ್ತು. ಯೋಗವನ್ನು ಯುವಜನರಲ್ಲಿ ಪ್ರಚುರ ಪಡಿಸುವ ಉದ್ದೇಶದಿಂದ 'ಯೋಗಥಾನ್-2023 ಅಯೋಜನೆಯಾಗಿತ್ತು. ಯೋಗ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಪಾಲ್ಗೊಂಡಿದ್ದರು.ಸಾವಿರಾರು ಯೋಗಾಸಕ್ತರಿಂದ ಹಾಗೂ ಯುವಜನರು ಯೋಗ ಮಾಡಿದ್ದಾರೆ.
ಯೋಗಥಾನ್ ಕಾರ್ಯಕ್ರಮದಲ್ಲಿ ಶಿವಮೊಗ್ಗ ನಗರದ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು ವಿದ್ಯಾರ್ಥಿಗಳು, ಡಿಸಿ ಡಾ ಸೆಲ್ವಮಣಿ ಎಸ್ಪಿ ಮಿಥುನ್ ಕುಮಾರ್ ಮೊದಲಾದವರು ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 

ಸಶಕ್ತ ಭಾರತ, ಸಶಕ್ತ ಯುವ ಸಮಾಜ ನಿರ್ಮಿಸಲು ಯೋಗ ಮತ್ತು ಧ್ಯಾನ ಬಹು ಮುಖ್ಯ: ಡಾ.ಶಾಲೀನಿ ರಜನೀಶ

ಧಾರವಾಡ: ಭಾರತ ಬಹು ದೊಡ್ಡ ದೇಶ. ಹೆಚ್ಚಿನ ಯುವ ಸಮೂಹವಿದೆ. ಸಶಕ್ತ ರಾಷ್ಟ್ರ ಮತ್ತು ಯುವ ಸಮಾಜ ನಿರ್ಮಾಣಕ್ಕೆ ಯೋಗ ಮತ್ತು ಧಾನ್ಯ ಬಹು ಮುಖ್ಯ ಸಾಧನವಾಗಿವೆ ಎಂದು ರಾಜ್ಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲೀನಿ ರಜನೀಶ ಅವರು ಹೇಳಿದರು. ಅವರು ಇಂದು ಬೆಳಿಗ್ಗೆ ಕರ್ನಾಟಕ ವಿಶ್ವವಿದ್ಯಾಲಯ ರಾಣಿ ಚನ್ನಮ್ಮ ಕ್ರೀಡಾಂಗಣದಲ್ಲಿ ಗಿನ್ನಿಸ್ ದಾಖಲೆಗಾಗಿ ಆಯೋಜಿಸಿದ್ದ ಬೃಹತ ಯೋಗಾಥಾನ್ ಉದ್ದೇಶಿಸಿ, ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು.

ಮಾನಸಿಕ ಅಸ್ಥಿರತೆ,ಅನಾರೋಗ್ಯ ಮತ್ತು ಚಂಚಲತೆ ಆತ್ಮಹತ್ಯೆಗೆ ಕಾರಣಗಳಾಗಿವೆ. ದೇಶದ ಯುವ ಸಮೂಹದ ಆತ್ಮಹತ್ಯೆಗಳ ಪೈಕಿ ಒಟ್ಟು ಶೇ. 32 ರಷ್ಟು ಸಾವುಗಳು ಮಾನಸಿಕ ಅನಾರೋಗ್ಯದಿಂದ ಆಗುತ್ತಿವೆ ಎಂದು ಅವರು ತಿಳಿಸಿದರು. ಯೋಗ ಮತ್ತು ಧ್ಯಾನ ಮಾನಸಿಕ ಸದೃಡತೆ ಹೆಚ್ಚಿಸುತ್ತದೆ. ಮತ್ತು ಆರೋಗ್ಯಯುತ ದೈಹಿಕ ಬೆಳವಣಿಗೆ ಒದಗಿಸುತ್ತದೆ. ಯುವಕರು, ವಿದ್ಯಾರ್ಥಿಗಳು ದಿನಂಪ್ರತಿ ಯೋಗ ಮತ್ತು ಧ್ಯಾನವನ್ನು ಮಾಡುವ ಮೂಲಕ ತಮ್ಮ ಜೀವನದ ಒಂದು ಭಾಗವಾಗಿ ಯೋಗ ಮತ್ತು ಧ್ಯಾನವನ್ನು ರೂಡಿಸಿಕೊಳ್ಳಬೇಕು. ಇದರಿಂದ ಸಶಕ್ತ ಭಾರತ ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

ಈಗಾಗಲೇ ನಾವು ಸಾಕ್ಷರ ರಾಜ್ಯವಾಗಿದ್ದೇವೆ. ಈಗ ಸರಕಾರವು ರಾಜ್ಯವನ್ನು ಯೋಗ ಸಾಕ್ಷರ ರಾಜ್ಯವಾಗಿಸುವ ಕನಸು ಹೊಂದಿದೆ.ಅದಕ್ಕಾಗಿಯೇ ಇಂದಿನ ಬೃಹತ್ ಯೋಗಾಥಾನ್ ಆಯೋಜಿಸಲಾಗಿದೆ. ಇಂದಿನ ಯೋಗಾಥಾನ್ ದಲ್ಲಿ ರಾಜ್ಯದ ಎಲ್ಲ ಶಾಲಾ ಕಾಲೇಜು, ಸರಕಾರಿ ಮತ್ತು ಖಾಸಗಿ ವಿಶ್ವವಿದ್ಯಾಲಯಗಳು, ಶಿಕ್ಷಣ ಸಂಸ್ಥೆಗಳು,  ಯೋಗ ಕೇಂದ್ರಗಳು, ಜಿಲ್ಲಾಡಳಿತಗಳು, ಎನ್.ಸಿ.ಸಿ.,ಎನ್.ಎಸ್.ಎಸ್., ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸೇರಿದಂತೆ ಎಲ್ಲ ವಿಭಾಗಗಳು ಸಕ್ರಿಯವಾಗಿ ಭಾಗವಹಿಸಿವೆ. ಮಾಹಿತಿ ಪ್ರಕಾರ ಬೆಳಿಗ್ಗೆ 7:30 ಗಂಟೆಯೊಳಗೆ ರಾಜ್ಯದ ಸುಮಾರು 14 ಲಕ್ಷ ದಷ್ಟು ಯೋಗಾಪಟುಗಳು, ಯೋಗಾಸಕ್ತರು ಯೋಗಾಥಾನ್ ನಡೆಯುತ್ತಿರುವ ಸ್ಥಳಗಳಿಗೆ ಹಾಜರಾಗಿದ್ದಾರೆ. ಯೋಗ ಆರಂಭವಾಗುವ ಸಮಯಕ್ಕೆ ಈ ಸಂಖ್ಯೆ ಇನ್ನು ಹೆಚ್ಚಳವಾಗುತ್ತದೆ ಎಂದು ಡಾ.ಶಾಲೀನಿ ರಜನೀಶ ಅವರು ತಿಳಿಸಿದರು.

Kanakapura: ಉತ್ತಮ ಆರೋ​ಗ್ಯಕ್ಕೆ ಯೋಗಾ​ಸ​ನ ಮದ್ದು: ಡಿ.ಕೆ.ಶಿವಕುಮಾರ್‌

ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಮಾತನಾಡಿ, ಯೋಗ ಜೀವನದಲ್ಲಿ ಅತೀ ಮುಖ್ಯ. ಯುವ ಸಮೂಹ ಮಾನಸಿಕವಾಗಿ ಗಟ್ಟಿಗೊಳ್ಳಲು ಧ್ಯಾನ ಮಾಡಬೇಕು. ವಿದ್ಯಾರ್ಥಿಗಳು ಯೋಗ  ಮತ್ತು ಧ್ಯಾನವನ್ನು ಪ್ರತಿ ದಿನ ಮಾಡುವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ. ಉತ್ತಮ ಆರೋಗ್ಯ ಲಭಿಸುತ್ತದೆ ಎಂದು ಅವರು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕವಿವಿ ಕುಲಪತಿ ಡಾ.ಕೆ.ಬಿ.ಗುಡಸಿ ಅವರು ಮಾತನಾಡಿ, ಪ್ರಧಾನಮಂತ್ರಿಗಳ ಸಂದೇಶ ವಾಚಿಸಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಸೋನಲ್ ವೃಷ್ಣಿ ಅತಿಥಿಗಳಾಗಿದ್ದರು.

ಕವಿವಿ ಕುಲಸಚಿವ ಯಶಪಾಲ್ ಕ್ಷೀರಸಾಗರ ಸ್ವಾಗತಿಸಿದರು. ಸಮಾಜ ವಿಜ್ಞಾನ ನಿಖಾಯದ ಡೀನ್ ಡಾ.ಎಸ್.ಟಿ.ಬಾಗಲಕೋಟಿ ವಂದಿಸಿದರು. ಮಹಾದೇವ ಆರೇರ ಕಾರ್ಯಕ್ರಮ ನಿರೂಪಿಸಿದರು. ಯೋಗಾಥಾನ್ ದಲ್ಲಿ ಕವಿವಿ ಅಧಿಕಾರಿಗಳು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಯೋಗಪಟುಗಳು, ಸಾರ್ವಜನಿಕರು ಭಾಗವಹಿಸಿ,ಯೋಗ ಪ್ರದರ್ಶನ ಮಾಡಿದರು.

Follow Us:
Download App:
  • android
  • ios