ಮೈಸೂರು, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಶುಕ್ರವಾರ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಈ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ಬೆಂಗಳೂರು (ಮೇ.2): ಮೈಸೂರು, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಶುಕ್ರವಾರ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಈ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ದಕ್ಷಿಣ ಒಳನಾಡಿನಲ್ಲಿ ಮತ್ತೆ ಮಳೆ ಚುರುಕುಗೊಂಡಿದ್ದು, ಮುಂದಿನ 24 ಗಂಟೆಯಲ್ಲಿ ನಾಲ್ಕು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ಒಂದು ವಾರ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಮಳೆಯೊಂದಿಗೆ ಗಾಳಿಯು ಗಂಟೆಗೆ 50 ಕಿ.ಮೀ. ವೇಗದಲ್ಲಿ ಇರಲಿದೆ. ಗುಡುಗು, ಮಿಂಚಿನ ಅಬ್ಬರ ಸಹ ಇರಲಿದೆ ಎಂದು ತಿಳಿಸಿದೆ.
ಉತ್ತರ ಒಳನಾಡಿನಲ್ಲಿ ಮೊದಲ ಮೂರ್ನಾಲ್ಕು ದಿನ ಕಲಬುರಗಿ, ವಿಜಯಪುರ, ರಾಯಚೂರು, ಗದಗ, ಯಾದಗಿರಿ, ಕೊಪ್ಪಳ, ಹಾವೇರಿ, ಧಾರವಾಡದಲ್ಲಿ ಗಾಳಿಯೊಂದಿಗೆ ಹಗುರ ಮಳೆ ಸಾಧ್ಯತೆ ಇದೆ. ನಂತರ ಉತ್ತರ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ. ಕರಾವಳಿ ಜಿಲ್ಲೆಗಳಲ್ಲೂ ಇದೇ ವಾತಾವರಣ ಇರಲಿದೆ.
ಇದನ್ನೂ ಓದಿ: Bengaluru rains: ರಾಜಧಾನಿಗೆ ಐದಾರು ದಿನ ವರ್ಷಧಾರೆ ಸಾಧ್ಯತೆ
ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ವರದಿ ಪ್ರಕಾರ, ಕೆ.ಆರ್.ಪೇಟೆಯಲ್ಲಿ ಅತಿ ಹೆಚ್ಚು 10 ಸೆಂ.ಮೀ ಮಳೆಯಾಗಿದೆ. ಉಳಿದಂತೆ ಬೆಂಗಳೂರಿನ ಟಿ.ಜಿ.ಹಳ್ಳಿ, ಹಿರಿಯೂರಿನಲ್ಲಿ ತಲಾ 5, ಮೈಸೂರು 4, ಗುಬ್ಬಿ 3, ಬೆಳ್ತಂಗಡಿ, ಸುಳ್ಯ, ನಾಗಮಂಗಲ, ಗೌರಿಬಿದನೂರು, ಚಿಕ್ಕಬಳ್ಳಾಪುರ, ಕೃಷ್ಣರಾಜಸಾಗರದಲ್ಲಿ ತಲಾ 2, ಉಪ್ಪಿನಂಗಡಿ, ಮದ್ದೂರು, ಬಾಳೆಹೊನ್ನೂರು, ನಾಯಕಹಟ್ಟಿ, ಕೊಟ್ಟಿಗೆಹಾರ, ಚಿತ್ರದುರ್ಗ, ಚಿಕ್ಕಮಗಳೂರು, ತುಮಕೂರಿನಲ್ಲಿ ತಲಾ 1 ಸೆಂ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.


