ಹಾದಿ ತಪ್ಪುತ್ತಿದೆ 2ಎ ಮೀಸಲು ಹೋರಾಟ| ಉಭಯ ಸಚಿವರಿಂದ ಸುದ್ದಿಗೋಷ್ಠಿ, ಆಕ್ಷೇಪ| ಕಾಂಗ್ರೆಸ್‌ ಪಕ್ಷದ ಬಿ ಟೀಂನಂತೆ ಯತ್ನಾಳ್ ವರ್ತನೆ 

ಬೆಂಗಳೂರು(ಫೆ.23): ‘ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವ ಸಂಬಂಧ ನಡೆಯುತ್ತಿರುವ ಹೋರಾಟವನ್ನು ಕೆಲವರು ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದು, ಹೋರಾಟದ ದಿಕ್ಕು ತಪ್ಪಿಸುತ್ತಿದ್ದಾರೆ. ಹೋರಾಟದ ನೇತೃತ್ವ ವಹಿಸಿರುವ ಬಸವ ಜಯಮೃತ್ಯುಂಜಯ ಸ್ವಾಮೀಜಿಗಳು ಕೆಲ ವ್ಯಕ್ತಿಗಳ ಕಪಿಮುಷ್ಟಿಯಲ್ಲಿದ್ದಾರೆ. ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಕಾಂಗ್ರೆಸ್‌ನ ಬಿ ಟೀಂನಂತೆ ವರ್ತಿಸುತ್ತಿದ್ದಾರೆ...’

ಇದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್‌ ಮತ್ತು ಆಡಳಿತಾರೂಢ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ವಿರುದ್ಧ ಪಂಚಮಸಾಲಿ ಸಮುದಾಯದವರೇ ಆದ ಗಣಿ ಹಾಗೂ ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ಮತ್ತು ಸಣ್ಣ ಕೈಗಾರಿಕಾ ಸಚಿವ ಸಿ.ಸಿ.ಪಾಟೀಲ್‌ ನಡೆಸಿದ ಟೀಕಾಪ್ರಹಾರ.

ಪಂಚಮಸಾಲಿ 2ಎ ಮೀಸಲಾತಿಗೆ ನಮ್ಮ ಬೆಂಬಲವಿದೆ ಎಂದ ಸಚಿವದ್ವಯರು

ಭಾನುವಾರ ನಗರದಲ್ಲಿ ಬೃಹತ್‌ ಸಮಾವೇಶ ನಡೆದ ಬೆನ್ನಲ್ಲೇ ಸಮುದಾಯದ ಜನಪ್ರತಿನಿಧಿಯಲ್ಲಿ ಒಡಕಿನ ದನಿ ಮೂಡಿದೆ. ವಿಜಯಾನಂದ ಕಾಶಪ್ಪನವರ್‌ ಮತ್ತು ಬಸನಗೌಡ ಪಾಟೀಲ್‌ ಯತ್ನಾಳ್‌ ವಿರುದ್ಧ ಸಮುದಾಯದ ಜನಪ್ರತಿನಿಧಿಗಳು ಸಿ.ಸಿ.ಪಾಟೀಲ್‌ ನಿವಾಸದಲ್ಲಿ ಸಭೆ ನಡೆಸಿದ ಬಳಿಕ ವಿಧಾನಸೌಧದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಈ ವೇಳೆ ಸಮಾವೇಶದಲ್ಲಿ ಕಾಶಪ್ಪನವರ್‌ ಮತ್ತು ಯತ್ನಾಳ್‌ ನಡೆಯನ್ನು ತೀವ್ರವಾಗಿ ಖಂಡಿಸಲಾಯಿತು.

ಸಚಿವ ಸಿ.ಸಿ.ಪಾಟೀಲ್‌ ಮಾತನಾಡಿ, ಜಯಮೃತ್ಯುಂಜಯ ಸ್ವಾಮೀಜಿಗಳು ಪಾದಯಾತ್ರೆ ನಡೆಸಿ ಲಕ್ಷಾಂತರ ಜನರ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಆದರೆ, ಕೆಲವು ವ್ಯಕ್ತಿಗಳು ಸ್ವಾರ್ಥಕ್ಕಾಗಿ ಸಮುದಾಯವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಸಮಾಜವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ. 2ಎಗೆ ಪಂಚಮಸಾಲಿ ಸಮುದಾಯವನ್ನು ಸೇರಿಸಬೇಕು ಎನ್ನುವುದು ಸಮಾವೇಶದ ಮುಖ್ಯ ಉದ್ದೇಶ ಆಗಿತ್ತು. ಆದರೆ, ಕೆಲವರು ಅದನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಪಂಚಮಸಾಲಿ 2A ಮೀಸಲಾತಿಗೆ ಸಚಿವರು ವಿರೋಧಿಸಿದ್ರಾ? ಸ್ಪಷ್ಟನೆ ಕೊಟ್ಟ ಶೆಟ್ಟರ್

ಜಯಮೃತ್ಯುಂಜಯ ಸ್ವಾಮೀಜಿಗಳು ಹೋರಾಟವನ್ನು ಒಂದಿಬ್ಬರ ಮಾತು ಕೇಳಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಶ್ರೀಗಳ ಕೆಲ ವ್ಯಕ್ತಿಗಳ ಕಪಿಮುಷ್ಟಿಯಲ್ಲಿದ್ದು, ಅವರು ಹೇಳಿದಂತೆ ಕೇಳುತ್ತಿದ್ದಾರೆ. ಇದು ರಾಜಕೀಯ ಪ್ರೇರಿತವಾಗಿದೆ. ಸ್ವಾಮೀಜಿಗಳನ್ನು ಕಾಶಪ್ಪನವರ್‌ ಹಿಡಿತದಲ್ಲಿಟ್ಟುಕೊಂಡಿದ್ದಾರೆ. ಸಮುದಾಯದ ಅಂತಾರಾಷ್ಟ್ರೀಯ ಅಧ್ಯಕ್ಷನೆಂದು ಸ್ವಯಂಪ್ರೇರಿತವಾಗಿ ಘೋಷಿಸಿಕೊಂಡಿದ್ದಾರೆ. ಇದು ಕಾನೂನುಬಾಹಿರ. ಸ್ವಾಮೀಜಿಗಳಿಗೂ ಆ ರೀತಿ ಘೋಷಿಸುವ ಅಧಿಕಾರ ಇಲ್ಲ. ಬೂಟಾಟಿಕೆ ಮಾತನಾಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಕಾಶಪ್ಪನವರ್‌ ಅಧಿಕಾರದಲ್ಲಿದ್ದಾಗ ಸಮುದಾಯಕ್ಕೆ ಕೊಟ್ಟಕೊಡುಗೆ ಏನು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟವನ್ನು ಮುಂದುವರಿಸಿ ಉಪವಾಸ ಸತ್ಯಾಗ್ರಹ ನಡೆಸಲು ಸ್ವಾಮೀಜಿಗಳು ಮುಂದಾಗಿದ್ದಾರೆ. ಆದರೆ, ಸ್ವಾಮೀಜಿಗಳು ಉಪವಾಸ ಸತ್ಯಾಗ್ರಹವನ್ನು ಕೈಬಿಡಬೇಕು. ಮಾತುಕತೆಗೆ ಬಂದು ಸರ್ಕಾರದ ಜತೆ ಸಹಕರಿಸಬೇಕು. ಸಮಾಜದ ಹಿತ ಕಾಪಾಡಲು ನಾವು ಬದ್ಧರಿದ್ದೇವೆ. ಸಮಾಜದಿಂದ ಬೆಳೆದ ನಾವು ಸಮಾಜಕ್ಕೆ ಒಳ್ಳೆಯದನ್ನು ಬಯಸುತ್ತೇವೆ. ಸದುದ್ದೇಶದಿಂದ ಆರಂಭವಾದ ಮೀಸಲಾತಿ ಹೋರಾಟ ಸಮಾವೇಶ ಅದೇ ಸದುದ್ದೇಶದಿಂದ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಯತ್ನಾಳ್‌ಗೆ ನಿರಾಣಿ ಬಹಿರಂಗ ಸವಾಲು:

ಆಡಳಿತಪಕ್ಷದ ಶಾಸಕರೇ ಆದ ಬಸನಗೌಡ ಪಾಟೀಲ್‌ ಯತ್ನಾಳ್‌ ಹಲವು ವರ್ಷಗಳಿಂದ ಪಕ್ಷದವರ ವಿರುದ್ಧ ವಾಗ್ದಾಳಿ ನಡೆಸಿಕೊಂಡು ಬರುತ್ತಿದ್ದಾರೆ. ಆತ ಕಾಂಗ್ರೆಸ್‌ನ ಬಿ ಟೀಂನಂತೆ ಕೆಲಸ ಮಾಡುತ್ತಿದ್ದಾರೆ. ಅವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಸಂಘ ಪರಿವಾರ, ಕಾರ್ಯಕರ್ತರ ಆಶೀರ್ವಾದದಿಂದ ಶಾಸಕರಾಗಿದ್ದಾರೆ. ಯಡಿಯೂರಪ್ಪ ಮತ್ತು ನಮ್ಮ ರಾಜೀನಾಮೆ ಕೇಳುವ ಆತ ತಾಕತ್ತಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷೇತರ ಶಾಸಕನಾಗಿ ಗೆದ್ದು ಬರಲಿ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ಬಹಿರಂಗವಾಗಿ ಸವಾಲು ಹಾಕಿದರು.

2ಎಗೆ ಸೇರ್ಪಡೆ ಅಧ್ಯಯನಕ್ಕೆ ಅಧಿಕೃತ ಸೂಚನೆ

ಯತ್ನಾಳ್‌ ಕಳೆದ ಚುನಾವಣೆಯಲ್ಲಿ ಗೆದ್ದು ಬಂದಿದ್ದೇ ಯಡಿಯೂರಪ್ಪ ಅವರ ಆಶೀರ್ವಾದದಿಂದ. ವಿಧಾನಪರಿಷತ್‌ ಚುನಾವಣೆ ವೇಳೆ ಯಾರಾರ‍ಯರ ಕೈಕಾಲು ಹಿಡಿದು ಗೆದ್ದು ಬಂದರು ಎಂಬುದನ್ನು ಬಹಿರಂಗಪಡಿಸಬೇಕಾಗುತ್ತದೆ. ಕಳೆದ 25 ವರ್ಷಗಳಿಂದ ಪಕ್ಷದ ಮುಖಂಡರ ಮೇಲೆ ಟೀಕೆ ಮಾಡುತ್ತಲೇ ಬಂದಿದ್ದಾರೆ. ಸಚಿವರಾದ ಜಗದೀಶ್‌ ಶೆಟ್ಟರ್‌, ವಿ.ಸೋಮಣ್ಣ, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ನನ್ನ ಮೇಲೂ ವಾಗ್ದಾಳಿ ನಡೆಸಿದ್ದಾರೆ. ನಾವು ನಮ್ಮ ಕ್ಷೇತ್ರದ ಜನರಿಂದ ಶಾಸಕರಾಗಿದ್ದು, ಹೈಕಮಾಂಡ್‌ ಮತ್ತು ಮುಖ್ಯಮಂತ್ರಿಗಳು ಸಚಿವ ಸ್ಥಾನ ನೀಡಿದ್ದಾರೆ. ಅವರು ನಮ್ಮ ರಾಜೀನಾಮೆ ಕೇಳಬೇಕೇ ಹೊರತು ರಾಜೀನಾಮೆ ಕೇಳುವುದಕ್ಕೆ ಯತ್ನಾಳ್‌ಗೆ ಯಾವ ಅರ್ಹತೆಯೂ ಇಲ್ಲ ಎಂದು ತಿರುಗೇಟು ನೀಡಿದರು.

ಪಂಚಮಸಾಲಿ ಸಮುದಾಯವನ್ನು ಮಾತ್ರ 2ಎಗೆ ಸೇರಿಸುವುದಲ್ಲ. ಸಮಸ್ತ ವೀರಶೈವ ಲಿಂಗಾಯತರನ್ನು ಸೇರಿಸಬೇಕಿದೆ. ಸಮುದಾಯವು ರೈತಾಪಿ ಸಮುದಾಯ. ರಾಜಕೀಯ ಮೀಸಲಾತಿ ಕೇಳುತ್ತಿಲ್ಲ. ಕೇವಲ ಶೈಕ್ಷಣಿಕ, ಔದ್ಯೋಗಿಕ ಮೀಸಲಾತಿ ಕೇಳುತ್ತಿದ್ದೇವೆ. ಪಂಚಮಸಾಲಿಗೆ 2ಎ ಮೀಸಲಾತಿ ಸಿಗಬೇಕು. ಇದರ ಜತೆ ಸಣ್ಣ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಸದ ಕರಡಿ ಸಂಗಣ್ಣ, ಶಾಸಕರಾದ ಮಹೇಶ್‌ ಕುಮಟಳ್ಳಿ, ಅರುಣ್‌ ಕುಮಾರ್‌ ಪೂಜಾರ್‌, ಶಂಕರ್‌ ಪಾಟೀಲ್‌ ಮುನೇನಕೊಪ್ಪ, ಸಿದ್ದು ಸವದಿ, ವಿರೂಪಾಕ್ಷಪ್ಪ ಬಳ್ಳಾರಿ ಇತರರು ಉಪಸ್ಥಿತರಿದ್ದರು.

ಬಸನಗೌಡ ಪಾಟೀಲ್‌ ಯತ್ನಾಳ ಕಾಂಗ್ರೆಸ್‌ನ ಬಿ ಟೀಮ್‌ನಂತೆ ಕೆಲಸ ಮಾಡುತ್ತಿದ್ದಾರೆ. ಸಿಎಂ ಯಡಿಯೂರಪ್ಪ, ಸಂಘ ಪರಿವಾರ, ಕಾರ್ಯಕರ್ತರ ಆಶೀರ್ವಾದದಿಂದ ಶಾಸಕರಾಗಿದ್ದಾರೆ. ಯಡಿಯೂರಪ್ಪ ಮತ್ತು ನಮ್ಮ ರಾಜೀನಾಮೆ ಕೇಳುವ ಆತ ತಾಕತ್ತಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷೇತರ ಶಾಸಕನಾಗಿ ಗೆದ್ದು ಬರಲಿ.

-ಮುರುಗೇಶ್‌ ನಿರಾಣಿ, ಗಣಿ ಸಚಿವ