ಬೆಂಗಳೂರು, (ಫೆ.19): ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿಗೆ ಸಚಿವ ಜಗದೀಶ್ ಶೆಟ್ಟರ್ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದ್ದು, ಈ ಬಗ್ಗೆ ಸ್ವತಃ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ.

ನಿನ್ನೆ (ಗುರುವಾರ) ಸಿಎಂ ಬಿಎಸ್‌ವೈ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಗದೀಶ್ ಶೆಟ್ಟರ್ ಅವರು ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿಗೆ ವಿರೋಧದ ಮಾತುಗಳನ್ನಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಪಂಚಮಸಾಲಿ ಸಮುದಾಯದವರನ್ನ ಕೆರಳಿಸಿದೆ.

ಇನ್ನು ಈ ಬಗ್ಗೆ ಬೆಂಗಳೂರಿನಲ್ಲಿ ಇಂದು(ಶುಕ್ರವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್,  ಕ್ಯಾಬಿನೆಟ್ ಸಭೆ ವೇಳೆ ನಾನು ವಿರೋಧ ಮಾಡಿದ್ದೇನೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿ ಎಂದು ಸ್ಪಷ್ಟಪಡಿಸಿದರು.

ಮೀಸಲಾತಿ ಹೋರಾಟಕ್ಕೆ ಸಾಥ್ ಕೊಟ್ಟ ಬಿಜೆಪಿ ಶಾಸಕರು, ಸಚಿವರಿಗೆ ಸಂಕಷ್ಟ ಎದುರಾಗುತ್ತಾ?

ನಿನ್ನೆಯ (ಸಚಿವ ಸಂಪುಟ ಸಭೆ) ಸಭೆಯಲ್ಲಿ ಮೀಸಲಾತಿ ಕುರಿತು ವಿಸ್ತ್ರತವಾಗಿ ಚರ್ಚೆ ಆಗಿದೆ. ನಾನು ಮುಖ್ಯಮಂತ್ರಿಗಳಿಗೆ ಪರಿಸ್ಥಿತಿ ಕ್ಲಿಷ್ಟಕರವಾಗಿದೆ. ಹೀಗಾಗಿ ಈ ಬಗ್ಗೆ ಸಮಗ್ರವಾಗಿ ಅಧ್ಯಯನ ಮಾಡಿ. ಯಾವ ಸಮಾಜಕ್ಕೆ ಅನ್ಯಾಯ ಆಗಿದೆ. ಅದನ್ನು ಸರಿಪಡಿಸುವ ಕೆಲಸ ಆಗಬೇಕು ಎಂದಿದ್ದೇನೆ‌ ಎಂದು ಹೇಳಿದರು.

ನಾನು ಹಲವು ದಿನಗಳಿಂದ ಪಂಚಮಸಾಲಿ 2ಎಗೆ ಸೇರಿಸೋ ಸಭೆಗಳಿಗೆ ಹೋಗಿದ್ದೇನೆ. ಆ ಸಭೆಗಳಲ್ಲಿ ನಾನು ಆ ಸಮುದಾಯಕ್ಕೆ ಮೀಸಲಾತಿ ಸಿಗಬೇಕು ಎಂದು ಹೇಳಿದ್ದೇನೆ. ಪಂಚಮಸಾಲಿಗೆ 2ಎ ಸಿಗೋದ್ರಲ್ಲಿ ಎರಡು ಮಾತಿಲ್ಲ. ಅವರ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು ತಿಳಿಸಿದರು.