* ಮಹತ್ವಾಕಾಂಕ್ಷೆಯ ಯಶಸ್ವಿನಿ ಆರೋಗ್ಯ ಯೋಜನೆ ಮರುಜಾರಿ* ದಿನಾಂಕ ತಿಳಿಸಿದ ಸಹಕಾರ ಸಚಿವ ಸೋಮಶೇಖರ್* ಯಶಸ್ವಿ ಯೋಜನೆಗಾಗಿಯೇ  300 ಕೋಟಿ ರೂಪಾಯಿ ಘೋಷಣೆ ಮಾಡಿದ್ದ ಸಿಎಂ ಬೊಮ್ಮಾಯಿ

ಬೆಂಗಳೂರು, (ಜುಲೈ.02): ಸ್ಥಗಿತಗೊಳಿಸಲಾಗಿದ್ದ ಯಶಸ್ವಿನಿ ಯೋಜನೆಯನ್ನು ಮತ್ತೆ ಜಾರಿಗೆ ತರುವುದಾಗಿ ಕರ್ನಾಟಕ ಸರ್ಕಾರ ಈಗಾಗಲೇ ಘೋಷಣೆ ಮಾಡಿತ್ತು. ಮಹತ್ವಾಕಾಂಕ್ಷೆಯ ಯಶಸ್ವಿನಿ ಆರೋಗ್ಯ (Yashaswini Yojana) ಯೋಜನೆಯನ್ನು ಮರು ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ​ ಬೊಮ್ಮಾಯಿ ಅವರು ತಮ್ಮ ಚೊಚ್ಚಲ ಬಜೆಟ್​ನಲ್ಲಿ ಘೋಷಿಸಿದ್ದರು. 

ಆದರೆ ಯೋಜನೆ ಯಾವಾಗಿನಿಂದ ಮರು ಜಾರಿ ಆಗಲಿದೆ ಎನ್ನುವುದು ಮಾತ್ರ ನಿಗೂಢವಾಗಿತ್ತು. ಇದೀಗ ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್ ದಿನಾಂಕವನ್ನು ಘೋಷಿಸಿದ್ದಾರೆ. ಇಂದು(ಶನಿವಾರ) ಬೆಂಗಳೂರಿನಲ್ಲಿ ರಾಜ್ಯ ಸಹಕಾರ ಮಹಾಮಂಡಳ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಸಹಕಾರ ದಿನ ಕಾರ್ಯಕ್ರಮದಲ್ಲಿ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಯಶಸ್ವಿನಿ ಯೋಜನೆ ಮರುಜಾರಿ ಕುರಿತು ಮಾತನಾಡಿದರು. 

ಸ್ಥಗಿತಗೊಂಡಿದ್ದ 'ಯಶಸ್ವಿನಿ' ಮರುಜಾರಿ: ವಿಮೆ ಕಂತು, ಚಿಕಿತ್ಸೆ ಮೊತ್ತವೂ ಹೆಚ್ಚಳ?

ಗ್ರಾಮೀಣ ಮತ್ತು ನಗರ ಸಹಕಾರಿಗಳಿಗೆ ಆರೋಗ್ಯ ರಕ್ಷಣೆಗಾಗಿ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ಅಕ್ಟೋಬರ್ 2ರಿಂದ ಮರು ಜಾರಿಗೊಳಿಸುತ್ತೇವೆ, ಈ ಯೋಜನೆಯಡಿ ಲಕ್ಷಾಂತರ ಫಲಾನುಭವಿಗಳಿಗೆ ಲಾಭವಾಗಲಿದೆ ಎಂದು ಹೇಳಿದರು.

Scroll to load tweet…

ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕ್ ಸ್ಥಾಪನೆ ಕುರಿತು ಕೇಂದ್ರ ಹಣಕಾಸು ಸಚಿವರಿಗೆ ಈಗಾಗಲೇ ಪತ್ರ ಬರೆದಿದ್ದು, ಶೀಘ್ರದಲ್ಲೇ ಇದರ ಪ್ರಕ್ರಿಯೆಗಳು ಆರಂಭವಾಗಲಿದೆ. ಸಹಕಾರ ವಿಷಯದಲ್ಲಿ ಡಿಪ್ಲೊಮಾ ಶಿಕ್ಷಣ ಪಡೆದವರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಲು ಕಾಯ್ದೆ ತರಲು ಸರ್ಕಾರ ನಿರ್ಧರಿಸಿದೆ. ಈ ಕ್ಷೇತ್ರದ ಕುರಿತು ಹೆಚ್ಚು ಜ್ಞಾನ ಹೊಂದಿದವರಿಗೆ ವೃತಿಪರರ ನೇಮಕಾತಿ ಮಾಡಿಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ನಡೆಯಲಿರುವ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ ಮಂಡಿಸಲಾಗುವುದು ಎಂದರು.

ಸಿಎಂ ಬಸವರಾಜ​ ಬೊಮ್ಮಾಯಿ ಅವರು ಬಜೆಟ್​ನಲ್ಲಿ (Budget) ಯಶಸ್ವಿ ಯೋಜನೆಗಾಗಿಯೇ 300 ಕೋಟಿ ರೂಪಾಯಿ ಘೋಷಣೆ ಮಾಡಿದ್ದರು.

ಯಶಸ್ವಿನಿ ಗ್ರಾಮೀಣ ಸಹಕಾರಿಗಳ ಆರೋಗ್ಯ ರಕ್ಷಣಾ ಯೋಜನೆ. ಕರ್ನಾಟಕದ ರಾಜ್ಯದ ಗ್ರಾಮೀಣ ಸಹಕಾರಿಗಳಿಗಾಗಿಯೇ ರೂಪಗೊಂಡಿರುವ ಒಂದು 'ಸ್ವಯಂ-ನಿಧಿ ಶಸ್ತ್ರಚಿಕಿತ್ಸಾ ಯೋಜನೆ'. ಈ ಯೋಜನೆಯಡಿ ಗ್ರಾಮೀಣ ಸಹಕಾರಿಯೊಬ್ಬರು ತಿಂಗಳಿಗೆ ಇಂತಿಷ್ಟರಂತೆ ನಿಗದಿತ ಪ್ರಮಾಣದಲ್ಲಿ ಒಂದು ವರ್ಷದ ಅವಧಿಯಲ್ಲಿ ಯೋಜನೆಯಲ್ಲಿ ಒಳಗೊಂಡ ಯಾವುದೇ ಶಸ್ತ್ರ ಚಿಕಿತ್ಸೆಯನ್ನು ನಿಗದಿತ ಮಿತಿಯೊಳಗೆ, ಷರತ್ತು ಮತ್ತು ನಿಯಮಗಳಿಗೆ ಒಳಪಟ್ಟು ಟ್ರಸ್ಟ್​​ನಿಂದ ಅಂಗೀಕೃತ ಯಾವುದೇ ಆಸ್ಪತ್ರೆಗಳಲ್ಲಿ ನಗದು ರಹಿತವಾಗಿ ಪಡೆಯಬಹುದು.

ರಾಜ್ಯದಲ್ಲಿನ 30 ಜಿಲ್ಲೆಗಳಲ್ಲಿರುವ ಸಹಕಾರಿ ಸಂಘಗಳು, ಸೊಸೈಟಿಗಳು, ಪತ್ರಕರ್ತರ ಸಹಕಾರ ಸಂಘಗಳು, ಸಹಕಾರಿ ಬ್ಯಾಂಕ್, ಸ್ತ್ರೀ ಶಕ್ತಿ ಸಂಘ, ಸಾಂಸ್ಕೃತಿಕ ಸಹಕಾರ ಸೊಸೈಟಿಗಳ 43.42 ಲಕ್ಷ ಮಂದಿ ಯಶಸ್ವಿನಿ ಯೋಜನೆಯ ಫಲಾನುಭವಿಗಳಾಗಿದ್ದರು.

ಬಿಪಿಎಲ್ ಹಾಗೂ ಎಪಿಎಲ್ ತಾರತಮ್ಯವಿಲ್ಲದೇ ಪ್ರತಿಯೊಂದು ಕುಟುಂಬಕ್ಕೆ 2 ಲಕ್ಷ ರೂ.ವರೆಗೆ ವಾರ್ಷಿಕ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸುತ್ತಿತ್ತು. ಈಗ ಮರಳಿ ಯೋಜನೆ ಅನುಷ್ಠಾನಕ್ಕೆ ತರುತ್ತಿರುವುದರಿಂದ ಫಲಾನುಭವಿಗಳ ಸಂಖ್ಯೆ 50 ಲಕ್ಷದ ಸನಿಹಕ್ಕೆ ಬರಲಿದೆ.