* ಏ.1ರಿಂದ ಯೋಜನೆ ಬಹುತೇಕ ಯಥಾವತ್ತು ಮರು ಜಾರಿ ನಿರೀಕ್ಷೆ* ‘ಯಶಸ್ವಿನಿ’ ವಿಮೆ ಕಂತು, ಚಿಕಿತ್ಸೆ ಮೊತ್ತ ಹೆಚ್ಚಳ?
ಬೆಂಗಳೂರು(ಮಾ,27): ರೈತರ ಬಹುದಿನಗಳ ಬೇಡಿಕೆಯಾದ ‘ಯಶಸ್ವಿನಿ’ ಆರೋಗ್ಯ ಯೋಜನೆಯನ್ನು ಬಹುತೇಕ ಯಥಾವತ್ತಾಗಿ ಪುನಃ ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಆದರೆ ಬದಲಾದ ಪರಿಸ್ಥಿತಿಯಲ್ಲಿ ಸದಸ್ಯರು ಭರಿಸುವ ಕಂತು ಹಾಗೂ ಚಿಕಿತ್ಸೆಯ ಮೊತ್ತವನ್ನು ಇನ್ನಷ್ಟುಹೆಚ್ಚಿಸುವ ಸಾಧ್ಯತೆ ಇದೆ.
ಏಪ್ರಿಲ್ 1ರಿಂದ ಸಾಂಕೇತಿಕವಾಗಿ ಪುನಃ ಜಾರಿಗೆ ಬರಲಿರುವ ಯೋಜನೆಗೆ ಚಾಲನೆ ನೀಡಲಿದ್ದು, ಈ ಸಂಬಂಧ ಸೋಮವಾರದ ನಂತರ ಹಣಕಾಸು, ಸಹಕಾರ ಹಾಗೂ ಆರ್ಥಿಕ ಇಲಾಖೆಯ ಅಧಿಕಾರಿಗಳು ಯೋಜನೆ ಜಾರಿ ಸಂಬಂಧ ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ.
ವಿಶೇಷವಾಗಿ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿನ ಸಹಕಾರ ಸಂಘಗಳ ಸದಸ್ಯರು ಎಷ್ಟುಮೊತ್ತದ ವಂತಿಗೆ ಭರಿಸಬೇಕು ಎಂಬುದು ನಿರ್ಧಾರವಾಗಬೇಕಾಗಿದೆ. ಗ್ರಾಮೀಣ ಮತ್ತು ನಗರ ಸಹಕಾರ ಸಂಘಗಳ ಸದಸ್ಯರಿಗೆ ಬೇರೆ ಬೇರೆ ರೀತಿ ವಂತಿಗೆ ನಿಗದಿ ಮಾಡಲಾಗಿತ್ತು. ಪರಿಶಿಷ್ಟರು, ಸಾಮಾನ್ಯ ವರ್ಗದವರಿಗೆ ಬೇರೆ ಬೇರೆ ಮೊತ್ತವನ್ನು ನಿಗದಿಗೊಳಿಸಲಾಗಿತ್ತು. ಈಗ ಮೊತ್ತವನ್ನು ಹೊಸದಾಗಿ ನಿಗದಿ ಮಾಡಬೇಕಾಗಿದೆ. ಈಗಾಗಲೇ ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ’ (ಎಬಿ-ಎಕೆ) ಯೋಜನೆ ಜಾರಿಯಲ್ಲಿರುವಾಗ ಸರಿಸಮನಾಗಿ ಮತ್ತೊಂದು ಯೋಜನೆ ಜಾರಿಯಿಂದ ಆಗುವ ಸಾಧಕ-ಬಾಧಕಗಳ ಬಗ್ಗೆ ಗಂಭೀರವಾದ ಸಮಾಲೋಚನೆ ನಡೆಯಬೇಕಾಗಿದೆ. ಈ ಹಿಂದೆ ಯೋಜನೆಯ ಸದಸ್ಯರಾದವರಿಗೆ ಗರಿಷ್ಠ 2 ಲಕ್ಷದವರೆಗಿನ ವೆಚ್ಚವನ್ನು ಸರ್ಕಾರವೇ ಭರಿಸುತ್ತಿತ್ತು. ಈಗ ಎಬಿ-ಎಕೆ ಯೋಜನೆಯಡಿ ಇದಕ್ಕಿಂತ ಹೆಚ್ಚು ವೆಚ್ಚವನ್ನು ಭರಿಸಲಾಗುತ್ತಿದೆ. ಹೀಗಾಗಿ ಈ ಗೊಂದಲ ನಿವಾರಿಸಿಕೊಳ್ಳಬೇಕಾಗಿದೆ ಎಂದು ಸಹಕಾರ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಯೋಜನೆಯಡಿ ಈ ಹಿಂದೆ ಚಿಕಿತ್ಸೆಗೆ ಗುರುತಿಸಲಾಗಿದ್ದ ಕಾಯಿಲೆಗಳನ್ನು ಬಹುತೇಕ ಯಥಾವತ್ತಾಗಿ ಮುಂದುವರೆಸುವ ಸಾಧ್ಯತೆ ಇದೆ. ಚಿಕಿತ್ಸೆ ನೀಡುವ ಆಸ್ಪತ್ರೆಗಳ ಪಟ್ಟಿಯನ್ನು ಇನ್ನಷ್ಟುಹೆಚ್ಚಿಸುವ ಸಾಧ್ಯತೆ ಇದೆ. ಜೊತೆಗೆ ಯೋಜನೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಟ್ರಸ್ಟನ್ನು ಹೊಸದಾಗಿ ರಚಿಸಬೇಕಾಗಿದೆ ಎಂದು ಅವರು ಹೇಳಿದರು.
2003ರಲ್ಲಿ ಜಾರಿಗೆ ಬಂದ ಈ ಯೋಜನೆ 2017ರವರೆಗೆ ಕೊನೆಗೊಂಡಿತು. ಈ ಸಮಯದಲ್ಲಿ 43 ಲಕ್ಷ ಜನರು ಯೋಜನೆಯ ಸದಸ್ಯರಾಗಿದ್ದರು.
ಯೋಜನೆ ಬಗ್ಗೆ ಒಂದಷ್ಟು ಮಾಹಿತಿ
- ಏ.1ರಿಂದ ಯೋಜನೆ ಬಹುತೇಕ ಯಥಾವತ್ತು ಮರು ಜಾರಿ ನಿರೀಕ್ಷೆ
- 2003ರಲ್ಲಿ ರಾಜ್ಯದಲ್ಲಿ ಜಾರಿಗೆ ಬಂದಿದ್ದ ಯಶಸ್ವಿನಿ ಆರೋಗ್ಯ ವಿಮೆ ಯೋಜನೆ
- ಸಹಕಾರಿ ಸದಸ್ಯರು ವಿಮೆ ಪಡೆದಿದ್ದರೆ 2 ಲಕ್ಷ ರು.ವರೆಗೆ ಚಿಕಿತ್ಸೆ ಉಚಿತ ಸಿಗುತ್ತಿತ್ತು
- ರಾಜ್ಯದ 43 ಲಕ್ಷ ಜನರು ಯಶಸ್ವಿನಿ ಯೋಜನೆಯ ಫಲಾನುಭವಿಗಳಾಗಿದ್ದರು
- ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ ಜಾರಿಯಾಗಿದ್ದರಿಂದ ಸ್ಕೀಂ ಸ್ಥಗಿತ
- ಸದ್ಯ ಆಯುಷ್ಮಾನ್ ಭಾರತದಡಿ ಚಿಕಿತ್ಸಾ ವೆಚ್ಚ 2 ಲಕ್ಷ ರು.ಗಿಂತ ಅಧಿಕವಾಗಿದೆ
- ಹೀಗಾಗಿ ಯಶಸ್ವಿನಿಗೆ ಎಷ್ಟುನಿಗದಿ ಮಾಡಬೇಕು ಎಂಬ ಬಗ್ಗೆ ಚರ್ಚೆಯಾಗಬೇಕಿದೆ
