Asianet Suvarna News Asianet Suvarna News

ಶಾಲೆಗಳಲ್ಲಿ ಯಕ್ಷಗಾನ ಕಲಿಸಬೇಕು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಇಂದು ಸಾಮಾಜಿಕ ಕತೆಗಳ ಯಕ್ಷಗಾನವನ್ನು ನೋಡುವಾಗ ನಾಟಕವನ್ನೋ, ಸಿನಿಮಾವನ್ನೋ ನೋಡಿದಂತಾಗುತ್ತಿದೆ. ಆದರೆ, ಯಕ್ಷಗಾನವು ನಾಟಕ, ಸಿನಿಮಾಗಳಂತೆ ಆಗಬಾರದು. ಯಕ್ಷಗಾನ ನಮ್ಮತನವನ್ನು ಮೂಲಸತ್ವವನ್ನು ಅದರ ಹಿರಿಮೆ, ಗರಿಮೆಯನ್ನು ಉಳಿಸಿಕೊಳ್ಳಬೇಕು ಎಂದು ಶೋಭಾ ಕರಂದ್ಲಾಜೆ ಸಲಹೆ ನೀಡಿದರು. 

Yakshagana should be taught in Schools Says Union Minister Shobha Karandlaje At Udupi gvd
Author
First Published Feb 12, 2023, 5:40 AM IST

ಉಡುಪಿ (ಫೆ.12): ಇಂದು ಸಾಮಾಜಿಕ ಕತೆಗಳ ಯಕ್ಷಗಾನವನ್ನು ನೋಡುವಾಗ ನಾಟಕವನ್ನೋ, ಸಿನಿಮಾವನ್ನೋ ನೋಡಿದಂತಾಗುತ್ತಿದೆ. ಆದರೆ, ಯಕ್ಷಗಾನವು ನಾಟಕ, ಸಿನಿಮಾಗಳಂತೆ ಆಗಬಾರದು. ಯಕ್ಷಗಾನ ನಮ್ಮತನವನ್ನು ಮೂಲಸತ್ವವನ್ನು ಅದರ ಹಿರಿಮೆ, ಗರಿಮೆಯನ್ನು ಉಳಿಸಿಕೊಳ್ಳಬೇಕು ಎಂದು ಕೇಂದ್ರ ರೈತ, ಕೃಷಿ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಸಲಹೆ ನೀಡಿದರು. ನಗರದ ಎಂಜಿಎಂ ಕಾಲೇಜು ಮೈದಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆಯತ್ತಿರುವ 2 ದಿನಗಳ ಪ್ರಥಮ ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. 

ಕರಾವಳಿಯ ಯುವಕರಿಗೆ ಪುರಾಣಗಳ ಅರಿವಿದ್ದರೆ ಅದಕ್ಕೆ ಪೌರಾಣಿಕ ಯಕ್ಷಗಾನಗಳೇ ಕಾರಣ. ಯಕ್ಷಗಾನ ಒಂದು ಧರ್ಮಕ್ಕೆ ಸೀಮಿತವಲ್ಲ. ಭಾರತೀಯ ಸಂಸ್ಕೃತಿಗೆ ಮತ್ತು ಯಕ್ಷಗಾನಕ್ಕೆ ನೇರಾನೇರ ಸಂಬಂಧ ಇದೆ. ಶಾಲೆಗಳಲ್ಲಿ ಯಕ್ಷಗಾನವನ್ನು ಕಲಿಸುವ ಉಡುಪಿ ಮಾದರಿ ಇಡೀ ರಾಜ್ಯಕ್ಕೆ ಅನ್ವಯವಾಗಬೇಕು. ರಾಜ್ಯದ ಪ್ರತಿಯೊಂದು ಶಾಲೆಗಳಲ್ಲಿ ಯಕ್ಷಗಾನ ಕಲಿಸುವಂತಾಗಬೇಕು ಎಂದು ಆಶಿಸಿದರು. ಇದೇ ವೇಳೆ, ಯಕ್ಷಗಾನಕ್ಕೆ ಸಂಬಂಧಿಸಿದ 18 ಗ್ರಂಥಗಳನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ ಹೆಗ್ಡೆ ಬಿಡುಗಡೆ ಮಾಡಿದರು.

ಸಂಸದೆ ಸುಮಲತಾ ಕಾಂಗ್ರೆಸ್‌ ಪಕ್ಷ ಸೇರಲು ಅಭ್ಯಂತರವಿಲ್ಲ: ಡಿ.ಕೆ.ಶಿವಕುಮಾರ್‌

ಶಾಲಾ ಪಠ್ಯದಲ್ಲಿ ಸೇರಿಸಿ: ಬಳಿಕ ಸಮ್ಮೇಳನದ ವಿಚಾರಗೋಷ್ಠಿಗಳ ದಿಕ್ಸೂಚಿ ಭಾಷಣ ಮಾಡಿದ ಅಂಕಣಕಾರ ರೋಹಿತ್‌ ಚಕ್ರತೀರ್ಥ, ಯಕ್ಷಗಾನೇತರ ಜಿಲ್ಲೆಗಳಲ್ಲಿಯೂ ಯಕ್ಷಗಾನ ಸಮ್ಮೇಳನಗಳು ನಡೆಯಬೇಕು. ಅಲ್ಲಿನವರಿಗೂ ಯಕ್ಷಗಾನದ ರುಚಿ ಹತ್ತಿಸಬೇಕು. ಶಾಲಾ ಪಠ್ಯದಲ್ಲಿ ಯಕ್ಷಗಾನ ಕಲೆಯನ್ನು ಸೇರಿಸಬೇಕು, ಶಾಲೆಗಳಲ್ಲಿ ಯಕ್ಷಗಾನ ಶಿಕ್ಷಕರನ್ನು ನೇಮಿಸಬೇಕು. ಇದರಿಂದ ಯಕ್ಷಗಾನ ಶಿಕ್ಷಕರಿಗೆ ಉದ್ಯೋಗ ನೀಡಿದಂತಾಗುತ್ತದೆ ಎಂದರು. ಅಲ್ಲದೆ, ಕೆಲವು ವಿಘಟನಾ ಶಕ್ತಿಗಳಿಂದ ಯಕ್ಷಗಾನದ ಬಗ್ಗೆ ಅಪಪ್ರಚಾರ ನಡೆಯುತ್ತಿದೆ ಎಂದು ವಿಷಾದಿಸಿದರು.

ಬಿಲ್ಲವ ಸಂಘಟನೆಗಳ ಪ್ರತಿಭಟನೆ: ಈ ಮಧ್ಯೆ, ದಿಕ್ಸೂಚಿ ಭಾಷಣಕ್ಕೆ ರೋಹಿತ್‌ ಚಕ್ರತೀರ್ಥ ಅವರನ್ನು ಆಹ್ವಾನಿಸಿದ್ದನ್ನು ವಿರೋಧಿಸಿ ಬಿಲ್ಲವ ಸಂಘಟನೆಗಳು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದವು. ಅವರು ಪಠ್ಯಪುಸ್ತಕ ಪರಿಷ್ಕರಣ ಸಮಿತಿ ಅಧ್ಯಕ್ಷರಾಗಿದ್ದಾಗ ಪಠ್ಯಪುಸ್ತಕದಲ್ಲಿದ್ದ ಬ್ರಹ್ಮರ್ಷಿ ನಾರಾಯಣಗುರುಗಳ ಬಗೆಗಿನ ಪಠ್ಯವನ್ನು ತೆಗೆದು ಹಾಕಿ ಬಿಲ್ಲವ ಸಮಾಜವನ್ನು ಅವಮಾನಗೊಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಸರ್ಕಾರಕ್ಕೆ ನಿಯೋಗ: ಯಕ್ಷಗಾನಕ್ಕೆ ಸಂಬಂಧಿಸಿದ 18 ಗ್ರಂಥಗಳನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ ಹೆಗ್ಡೆ ಅವರು ಬಿಡುಗಡೆ ಮಾಡಿ, ಯಕ್ಷಗಾನ ಕಲಾವಿದರು ಇಂದು ಅನೇಕ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಈ ಬಗ್ಗೆ ಕಲಾವಿದರು ಮತ್ತು ಜನಪ್ರತಿನಿಧಿಗಳು ನಿಯೋಗದಲ್ಲಿ ತೆರಳಿ ಸರ್ಕಾರಕ್ಕೆ ಮನವರಿಕೆ ಮಾಡಿ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ಮಾಡಿದರು.

ಸಕ್ರೆಬೈಲು ಆನೆ ಬಿಡಾರದಿಂದ ಮತ್ತೆ 3 ಆನೆಗಳು ಶಿಫ್ಟ್‌?: ಮಧ್ಯಪ್ರದೇಶದಿಂದ ಅರಣ್ಯ ಇಲಾ​ಖೆಗೆ ಮತ್ತೆ ಬೇಡಿಕೆ

ಸಮ್ಮೇಳನ ನಿರಂತರ: ಉದ್ಘಾಟನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ರಘುಪತಿ ಭಟ್‌, ಇಂತಹ ಸಮ್ಮೇಳನ ಉಡುಪಿ ಮಾತ್ರವಲ್ಲ ಬೇರೆ ಜಿಲ್ಲೆಗಳಲ್ಲಿಯೂ ನಡೆಸೋಣ, ಮುಂದಿನ ಜಿಲ್ಲೆ ಯಾವುದು ಎಂದು ಈ ಸಮ್ಮೇಳನದಲ್ಲಿಯೇ ನಿರ್ಧರಿಸಿ, ಸರ್ಕಾರಕ್ಕೆ ಸಲ್ಲಿಸಿ, ಅನುದಾನ ಪಡೆಯೋಣ ಎಂದರು.

Follow Us:
Download App:
  • android
  • ios