ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲ್ ಮನೆಯಲ್ಲಿ ಪೂಜೆ-ಹೋಮ: 9 ದಿನಗಳ ಧಾರ್ಮಿಕ ಕಾರ್ಯ!
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಪುತ್ತೂರಿನ ಮನೆಯಲ್ಲಿ ಹೋಮ-ಹವನದ ಜೊತೆಗೆ ಒಂಭತ್ತು ದಿನಗಳ ಧಾರ್ಮಿಕ ಕಾರ್ಯಗಳು ನಡೆಯುತ್ತಿದ್ದು, ಈ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಹಲವು ಚರ್ಚೆಗಳು ಆರಂಭವಾಗಿದೆ.
ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು
ಮಂಗಳೂರು (ಜೂ.16): ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಪುತ್ತೂರಿನ ಮನೆಯಲ್ಲಿ ಹೋಮ-ಹವನದ ಜೊತೆಗೆ ಒಂಭತ್ತು ದಿನಗಳ ಧಾರ್ಮಿಕ ಕಾರ್ಯಗಳು ನಡೆಯುತ್ತಿದ್ದು, ಈ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಹಲವು ಚರ್ಚೆಗಳು ಆರಂಭವಾಗಿದೆ. ದ.ಕ ಜಿಲ್ಲೆಯ ಕಡಬ ತಾಲೂಕಿನ ಸವಣೂರಿನ ಕುಂಜಾಡಿಯಲ್ಲಿರುವ ಮನೆಯಲ್ಲಿ ಹೋಮ-ಹವನ ಎನ್ನುವ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, 9 ದಿನಗಳ ಕಾಲ ಜೂ.18ರವರೆಗೆ ಧಾರ್ಮಿಕ ಕಾರ್ಯ ನಡೆಯಲಿದೆ ಎಂದು ತಿಳಿದು ಬಂದಿದೆ. ನಿತ್ಯ ಪೂಜೆ ಸಹಿತ ವಾರ್ಷಿಕವಾಗಿ ನಡೆಯುವ ಪೂಜೆಗಳ ಜೊತೆಗೆ ನಳಿನ್ ಕುಮಾರ್ ಕಟೀಲ್ ಅವರೇ ಸ್ವತಃ ಭಾಗಿಯಾಗಿರುವ ಚಂಡಿಕಾ ಹೋಮ ಕೂಡ ನೆರವೇರಿದೆ.
ವಿದ್ವಾನ್ ಬಾಲಕೃಷ್ಣ ಆಚಾರ್ಯ ಎಂಬವರ ಉಪಸ್ಥಿತಿಯಲ್ಲಿ ಕಾರ್ಯಗಳು ನಡೆಯತ್ತಿದೆ. ರಾಜ್ಯದಲ್ಲಿ ಬಿಜೆಪಿ ಸೋಲಿನ ಬೆನ್ನಲ್ಲೇ ಪೂಜಾದಿ ಕಾರ್ಯ ಎಂಬ ಬಗ್ಗೆ ಫೋಟೋ ವೈರಲ್ ಆಗಿದ್ದು, ರಾಜಕೀಯ ಭವಿಷ್ಯ, ಲೋಕಸಭಾ ಸ್ಥಾನ ಸಂಬಂಧಿಸಿ ಹೋಮ ಎಂಬ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಚರ್ಚೆಗಳು ನಡೆಯುತ್ತಿವೆ. ಆದರೆ ಸಾಮಾಜಿಕ ತಾಣಗಳಲ್ಲಿ ನಡೀತಿರೋ ಚರ್ಚೆಗಳನ್ನು ನಳಿನ್ ಕುಮಾರ್ ಕಟೀಲ್ ನಿರಾಕರಿಸಿದ್ದಾರೆ. ಸದ್ಯ ರಾತ್ರಿ ಹಾಗೂ ಹಗಲು ಹೊತ್ತಿನ ಧಾರ್ಮಿಕ ಕಾರ್ಯಗಳಲ್ಲಿ ನಳಿನ್ ಕುಮಾರ್ ಕಟೀಲ್ ಕುಟುಂಬ ಸಮೇತರಾಗಿ ಭಾಗಿಯಾಗುತ್ತಿದ್ದಾರೆ.
ಮಣಿಪುರ ಗಲಾಟೆಗೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯವೇ ಕಾರಣ: ಮಲ್ಲಿಕಾರ್ಜುನ ಖರ್ಗೆ
ವಾರ್ಷಿಕ ಪೂಜೆಯ ಜೊತೆಗೆ ಚಂಡಿಕಾ ಹೋಮ: ಸಾಮಾಜಿಕ ತಾಣಗಳ ಫೋಟೋ ವೈರಲ್ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲ್ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದು ಪ್ರತೀ ವರ್ಷವೂ ನಮ್ಮ ಕುಟುಂಬದ ಮನೆಯಲ್ಲಿ ನಡೆಯುವ ಧಾರ್ಮಿಕ ಕಾರ್ಯ. ಕುಂಜಾಡಿಯ ತರವಾಡು ಮನೆಯಲ್ಲಿ ಎಲ್ಲರೂ ಸೇರಿ ನಡೆಸುವ ಕಾರ್ಯ. ಈ ವರ್ಷವೂ ನಿಗದಿಯಂತೆ ಧಾರ್ಮಿಕ ಕಾರ್ಯಗಳು ನಡೆಯುತ್ತಿದೆ. ಅದರ ಜೊತೆ ನನ್ನ ವೈಯಕ್ತಿಕ ಚಂಡಿಕಾ ಹೋಮ ನಡೆಸಲಾಗ್ತಿದೆ. ಚುನಾವಣೆ ಒತ್ತಡ ಹಾಗೂ ರಾಜಕೀಯ ಜಂಜಾಟದಲ್ಲಿ ಆಗಿರಲಿಲ್ಲ. ನಿತ್ಯ ಪೂಜೆ ಹಾಗೂ ಚಂಡಿಕಾ ಹೋಮದಲ್ಲಿ ಕುಟುಂಬ ಸಮೇತನಾಗಿ ಭಾಗಿಯಾಗಿದ್ದೇನೆ ಎಂದಿದ್ದಾರೆ.