ಇಂದು ವಿಶ್ವ ದಾದಿಯರ ದಿನ ಕೊರೋನಾ ವೈರಸ್‌ ರಣಕೇಕೆ ಹಾಕುತ್ತಿರುವ ಸಂದರ್ಭದಲ್ಲಿ ಯೋಧರಂತೆ  ದಾದಿಯರ ಕರ್ತವ್ಯ ಕಳೆದ ವರ್ಷ ಶುಶ್ರೂಷಕರಿಗೆ ನೀಡಿದ ಗೌರವ ಎರಡನೇ ಅಲೆಯಲ್ಲಿ ಮಾಯ 

ಬೆಂಗಳೂರು (ಮೇ.12): ಆತ್ಮವಿಶ್ವಾಸ ತುಂಬುವ ಆರೈಕೆ ಹಾಗೂ ಸೇವಾ ಮನೋಭಾವನೆ ಇಲ್ಲದ ಚಿಕಿತ್ಸೆಯಿಂದ ಯಾವುದೇ ಕಾಯಿಲೆ ಗುಣಮುಖರಾಗುವುದಿಲ್ಲ. ಹೀಗಿರುವಾಗ ಚಿಕಿತ್ಸೆಯೇ ಇಲ್ಲದ ಕೊರೋನಾ ವೈರಸ್‌ ರಣಕೇಕೆ ಹಾಕುತ್ತಿರುವ ಸಂದರ್ಭದಲ್ಲಿ ಯೋಧರಂತೆ ವೈದ್ಯಕೀಯ ಸಿಬ್ಬಂದಿ, ಅದರಲ್ಲೂ ಪ್ರಮುಖವಾಗಿ ದಾದಿಯರು ಶ್ರಮಿಸುತ್ತಿದ್ದಾರೆ.

ಇಂದು ವಿಶ್ವ ದಾದಿಯರ ದಿನ, ಕಳೆದ ವರ್ಷ ಶುಶ್ರೂಷಕರಿಗೆ ನೀಡಿದ ಗೌರವ ಎರಡನೇ ಅಲೆಯಲ್ಲಿ ಮಾಯವಾಗಿದೆ. ಎರಡನೇ ಅಲೆಗೆ ಹಲವು ಶುಶ್ರೂಷಕರು, ಕುಟುಂಬ ಸದಸ್ಯರೂ ಬಲಿಯಾಗಿದ್ದಾರೆ. ಇದರ ಜತೆಗೆ ಹಗಲಿರುಳು ಶ್ರಮಿಸುತ್ತಿರುವ ನಮ್ಮ ಮೇಲೆ ದೌರ್ಜನ್ಯಗಳೂ ಹೆಚ್ಚಾಗುತ್ತಿವೆ ಎಂದು ಸುಶ್ರೂಷಕರು ನೋವು ತೋಡಿಕೊಂಡಿದ್ದಾರೆ.

ಜಾತಿ, ಧರ್ಮ ಇಲ್ಲಿಲ್ಲ: ನೋವಿಗೆ ಮಿಡಿಯೋ ದಾದಿಯರೆಂಬ ದೇವತೆಗಳಿವರು..! ...

ಕೊರೋನಾ ಮೊದಲ ಅಲೆಯ ವೇಳೆ ಆರೋಗ್ಯ ಸಿಬ್ಬಂದಿಗೆ ಗೌರವ ಸೂಚಿಸಲು ಹೆಲಿಕಾಪ್ಟರ್‌ನಿಂದ ಪುಷ್ಪಾರ್ಚನೆ, ಚಪ್ಪಾಳೆ ತಟ್ಟುವುದು, ದೀಪ ಬೆಳಗುವುದೆಲ್ಲಾ ಮಾಡಿದ್ದರು. ರಾಜ್ಯ ಸರ್ಕಾರವು ಸುಶ್ರೂಷಕರನ್ನು ಸುಶ್ರೂಷಕ ಅಧಿಕಾರಿ ಎಂದು ಪದನಾಮ ಬದಲಿಸಿತ್ತು. ಆದರೆ, ಯಾವುದೇ ಹೆಚ್ಚುವರಿ ಸೌಲಭ್ಯ ನೀಡಲಿಲ್ಲ. ಉದ್ಯೋಗ ಭದ್ರತೆಯನ್ನೂ ಒದಗಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಜೀವದ ಹಂಗು ತೊರೆದು ಸೇವೆ : ಜಗತ್ತಿನಾದ್ಯಂತ ಕೊರೋನಾಗೆ ಬಲಿಯಾಗುವ ಯೋಧರ ಪೈಕಿ ಬಹುತೇಕ ಸುಶ್ರೂಷಕರು. ಆದರೆ ನಮ್ಮ ಸೇವೆಯನ್ನು ಯಾರೂ ಗುರುತಿಸುತ್ತಿಲ್ಲ ಎಂದು ವಿಕ್ಟೋರಿಯಾ ಆಸ್ಪತ್ರೆಯ ಸುಶ್ರೂಷಕಿ ರೂಪಾ ಹೇಳುತ್ತಾರೆ. ಸರ್ಕಾರದ ಖಾಯಂ ಹುದ್ದೆಗಳಲ್ಲಿ ನಮಗೆ ಅವಕಾಶವಿಲ್ಲ. ಪ್ರತಿ ವರ್ಷ ಗುತ್ತಿಗೆ ನವೀಕರಣಗೊಳ್ಳುತ್ತದೆ. ರಾಜ್ಯದಲ್ಲಿ 10 ಸಾವಿರಕ್ಕೂ ಹಚ್ಚು ಸುಶ್ರೂಷಕರು, ಒಂದೂವರೆ ಸಾವಿರ 108 ಸಿಬ್ಬಂದಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಅವರಿಗೆ 12 ಸಾವಿರ ರು. ಕೈಗೆ ಸಿಗುವುದು 10,500, ಇನ್ನೂ 5 ಸಾವಿರ ಜನಸಂಖ್ಯೆಗೆ ಒಬ್ಬರಂತೆ ಆರೋಗ್ಯ ಸಹಾಯಕರು ಇರಬೇಕು. ಆದರೆ 20 ಸಾವಿರಕ್ಕೆ ಒಬ್ಬರಂತೆಯೂ ಇಲ್ಲ. ಹೀಗಾಗಿ ಕೆಲಸದ ಒತ್ತಡ ಹೆಚ್ಚಾಗಿದೆ ಎಂದು ಮತ್ತೊಬ್ಬರು ಶುಶ್ರೂಷಕರು ಬೇಸರ ವ್ಯಕ್ತಪಡಿಸಿದರು.

ವೈದ್ಯರಿಗೆ ಮಾತ್ರವಲ್ಲ ನರ್ಸ್‌ಗಳಿಗೂ ಸಲಾಂ ಹೇಳಬೇಕು: ಸುದೀಪ್ ...

ಆರೋಗ್ಯ ಸಿಬ್ಬಂದಿಯ ಮೇಲೆಯೇ ದೌರ್ಜನ್ಯ:

ಎರಡನೇ ಅಲೆಯಲ್ಲಿ ಆಕ್ಸಿಜನ್‌ ಕೊರತೆ, ಬೆಡ್‌ ಕೊರತೆ, ಔಷಧ ಕೊರತೆಯಿಂದ ಮೃತಪಟ್ಟರೂ ವೈದ್ಯರು, ಸುಶ್ರೂಷಕರನ್ನೇ ಹೊಣೆಯಾಗಿಸಿ ದೌರ್ಜನ್ಯ ಮಾಡುತ್ತಿದ್ದಾರೆ. ನಮ್ಮ ಗೋಳು ಕೇಳುವವರಿಲ್ಲದಂತಾಗಿದೆ. ನಮ್ಮ ಮನೆಗಳಲ್ಲೂ ಸಾವುಗಳು ಆಗಿವೆ. ಆದರೆ ಏನೂ ಮಾಡಲಾಗದ ಸ್ಥಿತಿಗೆ ತಲುಪಿದ್ದೇವೆ ಎಂದು ಸಿ.ವಿ. ರಾಮನ್‌ ಜನರಲ್‌ ಆಸ್ಪತ್ರೆಯ ಸುಶ್ರೂಷಕರೊಬ್ಬರು ಕಣ್ಣೀರು ಹಾಕಿದರು.

ಖುಷಿ ಇದೆ:ನಾವು ಜೀವ ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದೇವೆ. ಸಿಬ್ಬಂದಿಗೆ ಕೊರೋನಾ ಬಂದರೆ ನಮ್ಮದೇ ಆಸ್ಪತ್ರೆಯಲ್ಲಿ ಬೆಡ್‌ ಸಿಗದಂತಹ ಮೆಡಿಕಲ್‌ ಎಮರ್ಜೆನ್ಸಿ ಸೃಷ್ಟಿಯಾಗಿದೆ. ಹೀಗಿದ್ದರೂ ಜನರ ಜೀವ ಉಳಿಸಲು ಕೆಲಸ ಮಾಡುತ್ತಿದ್ದೇವೆ. ನಮ್ಮ ಸೇವೆ ಬಗ್ಗೆ ಆತಂಕದ ಜತೆಗೆ ಖುಷಿ ಇದೆ.

- ಲಲಿತಾ, ರಾಜರಾಜೇಶ್ವರಿ ವೈದ್ಯಕೀಯ ಆಸ್ಪತ್ರೆ

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona