ಕಳೆದ ವರ್ಷ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಡಿ.21ನ್ನು ಪ್ರಥಮ ‘ವಿಶ್ವ ಧ್ಯಾನ ದಿನ’ವಾಗಿ ಘೋಷಿಸಿದ ದಿನದಂದೇ, ಜಗತ್ತಿನಾದ್ಯಂತ 8.5 ಮಿಲಿಯನ್ ಜನರು ಒಂದೇ ಸಮಯದಲ್ಲಿ ಧ್ಯಾನದಲ್ಲಿ ಭಾಗವಹಿಸಿದ್ದರು.
ಬೆಂಗಳೂರು (ಡಿ.18): ಕಳೆದ ವರ್ಷ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಡಿ.21ನ್ನು ಪ್ರಥಮ ‘ವಿಶ್ವ ಧ್ಯಾನ ದಿನ’ವಾಗಿ ಘೋಷಿಸಿದ ದಿನದಂದೇ, ಜಗತ್ತಿನಾದ್ಯಂತ 8.5 ಮಿಲಿಯನ್ ಜನರು ಒಂದೇ ಸಮಯದಲ್ಲಿ ಧ್ಯಾನದಲ್ಲಿ ಭಾಗವಹಿಸಿದ್ದರು. ಜಾಗತಿಕ ಆಧ್ಯಾತ್ಮಿಕ ನಾಯಕರು ಹಾಗೂ ಮಾನವತಾವಾದಿಯಾದ ಗುರುದೇವ್ ಶ್ರೀ ಶ್ರೀ ರವಿ ಶಂಕರರು ಬುಧವಾರ ಜಿನೀವಾದಲ್ಲಿನ ವಿಶ್ವಸಂಸ್ಥೆಯ ಸಭಾಂಗಣದಿಂದ ಮಾತನಾಡುತ್ತಾ, ಈ ಅಶಾಂತ ಜಗತ್ತಿಗೆ ಧ್ಯಾನದ ಅಗತ್ಯತೆಯ ಮಹತ್ವವನ್ನು ತಿಳಿಸಿ ಅದನ್ನು ಅನುಸರಿಸಿ, ರೂಢಿಸಿಕೊಳ್ಳುವಂತೆ ಇಡೀ ವಿಶ್ವಕ್ಕೆ ಕರೆ ನೀಡಿದರು.
ಕೇವಲ ವೈಯಕ್ತಿಕ ಸುಖ-ಶಾಂತಿಗಷ್ಟೇ ಅಲ್ಲದೇ, ದಣಿವು, ಒತ್ತಡ, ಘರ್ಷಣೆ, ಅನಿಶ್ಚಿತತೆ ಮತ್ತು ಭಾವನಾತ್ಮಕ ಸಂಕಟಗಳಿಂದ ಬಳಲುತ್ತಿರುವ ಸಂಪೂರ್ಣ ಸಮಾಜಕ್ಕೂ ಧ್ಯಾನವು ಇಂದು ಅತ್ಯಂತ ಪ್ರಸ್ತುತವಾಗಿದೆ ಎಂದು ಗುರುದೇವರು ತಮ್ಮ ಭಾಷಣದಲ್ಲಿ ಹೇಳಿದರು. ‘ಜಾಗತಿಕ ಶಾಂತಿಗಾಗಿ ವಿಶ್ವವು ಧ್ಯಾನ ಮಾಡುತ್ತದೆ’ ಎಂಬ ಶೀರ್ಷಿಕೆಯಡಿ ಎರಡನೇ ವಿಶ್ವ ಧ್ಯಾನ ದಿನದ ಶುಭಾರಂಭವು ಜಿನೀವಾದಲ್ಲಿನ ಯುಎನ್ ಕಚೇರಿಯಲ್ಲಿ ಆರಂಭಗೊಂಡಿತು. ಈ ವಿಶೇಷ ಕಾರ್ಯಕ್ರಮವನ್ನು ಜಿನೀವಾದಲ್ಲಿನ ಭಾರತದ ಶಾಶ್ವತ ಮಿಷನ್, ದಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿತ್ತು.
ಎಲ್ಲಾ ವಯೋಮಾನದವರಲ್ಲೂ, ಎಲ್ಲಾ ದೇಶಗಳಲ್ಲೂ ಆತಂಕ, ದೈಹಿಕ-ಮಾನಸಿಕ ದಣಿವು ಹಾಗೂ ಏಕಾಂಗಿತನ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಸಮಸ್ಯೆಗಳಿಗೆ ಬಾಹ್ಯ ಪರಿಹಾರಗಳಷ್ಟೇ ಸಾಕಾಗುವುದಿಲ್ಲ; ಮಾನವ ಮನಸ್ಸಿನ ಸ್ಥಿರತೆಯೂ ಅಗತ್ಯ ಎಂಬ ಸಂದೇಶವನ್ನು ಗುರುದೇವರು ನೀಡಿದರು. ಧ್ಯಾನವು ಇಂದು ಜಗತ್ತಿಗೆ ಐಶಾರಾಮಿ ವಿಷಯವಲ್ಲ,” ಎಂದು ಗುರುದೇವರು ಹೇಳಿದರು. “ಜನಸಂಖ್ಯೆಯ ಮೂರನೇ ಒಂದು ಭಾಗ ಒಂಟಿತನದಿಂದ ಬಳಲುತ್ತಿದ್ದು, ಅರ್ಧದಷ್ಟು ಜನರು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವಾಗ, ನಮ್ಮನ್ನು ಒತ್ತಡದಿಂದ ಮುಕ್ತಗೊಳಿಸಿ, ನಮ್ಮ ಅಂತರಂಗದೊಂದಿಗೆ ಬೆಸೆಯುವ ಒಂದು ಮಾರ್ಗ ನಮಗೆ ಬೇಕಾಗಿದೆ. ಇಲ್ಲಿ ಧ್ಯಾನವು ಮುಖ್ಯ ಪಾತ್ರ ವಹಿಸುತ್ತದೆ.
ಧ್ಯಾನಕ್ಕೆ ಸಂಬಂಧಿಸಿದಂತೆ ಪ್ರಜ್ಞಾಪೂರ್ವಕ ಸ್ಥಿತಿಯನ್ನು (ಮೈಂಡ್‌ಫುಲ್‌ನೆಸ್) ಕುರಿತು ವಿವರಿಸಿದ ಗುರುದೇವರು, "ಪ್ರಜ್ಞಾಪೂರ್ವಕ ಸ್ಥಿತಿಯು (ಮೈಂಡ್‌ಫುಲ್‌ನೆಸ್) ಎಂಬುದು ದಾರಿಯಾದರೆ, ಧ್ಯಾನವು ಮನೆ ಇದ್ದಂತೆ. ಧ್ಯಾನವು ನಿಮ್ಮನ್ನು ನಿಮ್ಮ ಅಂತರಾಳಕ್ಕೆ ಕೊಂಡೊಯುತ್ತದೆ ಮತ್ತು ಅತ್ಯಾವಶ್ಯಕವಾದ ನೆಮ್ಮದಿಯನ್ನು ನೀಡುತ್ತದೆ. ಧ್ಯಾನ ಮಾಡುವುದು ಕಷ್ಟಕರವಲ್ಲ. ಕಂಪ್ಯೂಟರ್ ನಲ್ಲಿ ಅನಾವಶ್ಯಕ ಕಡತಗಳನ್ನು ತೆಗೆದುಹಾಕಲು ಡಿಲೀಟ್ ಒತ್ತುವಂತೆ, ಧ್ಯಾನ ಮಾಡುವುದರಿಂದ ಮನಸ್ಸಿನಲ್ಲಿರುವ ಅನಾವಶ್ಯಕಗಳನ್ನು ವಿಷಯಗಳಿಂದ ಮುಕ್ತಿ ದೊರೆಯುತ್ತದೆ” ಎಂದು ಹೇಳಿದರು.
ಗುರುದೇವರೊಂದಿಗೆ ವಿಶ್ವ ಧ್ಯಾನ ಮಾಡುತ್ತದೆ
“ನಾವೆಲ್ಲರೂ ಚೈತನ್ಯಮಯವಾಗಿದ್ದೇವೆ” ಎಂದು ಗುರುದೇವರು ವಿವರಿಸಿದರು. ಈ ಚೈತನ್ಯ ಶಕ್ತಿ ಸಾಮರಸ್ಯಪೂರ್ಣವಾಗಿದೆಯೇ? ಅದು ನಮ್ಮ ಪರಿಸರದಲ್ಲಿ ಏಕತೆಯನ್ನು ಉಂಟುಮಾಡುತ್ತಿದೆಯೇ? ಎಂಬುದನ್ನು ಗಮನಿಸಬೇಕು. ಇದಕ್ಕೆ ಧ್ಯಾನವೇ ಉತ್ತರ. ಧ್ಯಾನ ನಮ್ಮ ಸುತ್ತಲೂ ಅಗತ್ಯವಾದ ಸಾಮರಸ್ಯವನ್ನು ತರುತ್ತದೆ; ನಮ್ಮ ತರಂಗಗಳನ್ನು ಶುದ್ಧಗೊಳಿಸುತ್ತದೆ. ಕಳೆದ ವರ್ಷ ಡಿ.21ರಂದು ಆಯೋಜಿಸಲಾದ ‘ಗುರುದೇವರೊಂದಿಗೆ ವಿಶ್ವ ಧ್ಯಾನ ಮಾಡುತ್ತದೆ’ ಕಾರ್ಯಕ್ರಮದಲ್ಲಿ ಜಗತ್ತಿನಾದ್ಯಂತ 8.5 ಮಿಲಿಯನ್‌ಕ್ಕಿಂತ ಹೆಚ್ಚಿನ ಮಂದಿ ಭಾಗವಹಿಸಿದ್ದರು. ಇದು ಇತಿಹಾಸದಲ್ಲೇ ಅತಿದೊಡ್ಡ ಧ್ಯಾನ ಸಮಾಗಮವಾಗಿದ್ದು, ಆರು ಗಿನ್ನಿಸ್ ವಿಶ್ವ ದಾಖಲೆಗಳನ್ನು ಸ್ಥಾಪಿಸಿತು. ಇದರ ವಿಶೇಷತೆ ಸಂಖ್ಯೆಯಲ್ಲಿ ಮಾತ್ರವಲ್ಲ; ಮನೆ-ಮನೆಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ, ಕೆಲಸದ ಸ್ಥಳಗಳಲ್ಲಿ, ಸಂಘರ್ಷಪೀಡಿತ ಪ್ರದೇಶಗಳಲ್ಲಿ ಹಾಗೂ ವಿವಿಧ ಸಮಾಜ-ಸಮುದಾಯಗಳಿಂದ ಜನರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ, ಜಿನೀವಾದಲ್ಲಿನ ವಿಶ್ವಸಂಸ್ಥೆಯ ಮತ್ತು ಇತರೆ ಅಂತರರಾಷ್ಟ್ರೀಯ ಸಂಸ್ಥೆಗಳ ಭಾರತದ ಶಾಶ್ವತ ಪ್ರತಿನಿಧಿ ಸನ್ಮಾನ್ಯ ಶ್ರೀ ಅರಿಂದಮ್ ಬಾಗ್ಚಿಯವರು ಮಾತನಾಡುತ್ತಾ, “ಕಳೆದ ವರ್ಷ ಗುರುದೇವರು ಜಿನೀವಾದಲ್ಲಿ ಭಾಗವಹಿಸಿದ್ದ ಅಂತರರಾಷ್ಟ್ರೀಯ ಸಮಾವೇಶವನ್ನು ನಾವು ಸ್ಮರಿಸುತ್ತೇವೆ. ಜಟಿಲವಾದ ಸಂಘರ್ಷಗಳು ಮತ್ತು ಅಪನಂಬಿಕೆಯಿಂದ ತುಂಬಿರುವ ಈ ಜಗತ್ತಿನಲ್ಲಿ, ಧ್ಯಾನವು ಕೇವಲ ವೈಯಕ್ತಿಕ, ಸ್ವಯಂ-ಸುಧಾರಣೆಯ ಅಭ್ಯಾಸವಷ್ಟೇ ಅಲ್ಲದೇ; ಜಾಗತಿಕ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಶಕ್ತಿಶಾಲಿ ಸಾಧನವಾಗಿದೆ,” ಎಂದರು.
ಪಾಶ್ಚಾತ್ಯ ಜಗತ್ತಿನಲ್ಲಿ ಧ್ಯಾನವನ್ನು ಕೆಲವೊಮ್ಮೆ ವಿಚಿತ್ರ ಅಥವಾ ವಿಲಕ್ಷಣ ವಿಷಯವಾಗಿ ಪರಿಗಣಿಸಲಾಗುತ್ತಿತ್ತು. 1980ರ ದಶಕದ ಆರಂಭದಲ್ಲಿ, ಧ್ಯಾನ-ಮೌನದಂತಹ ವಿಷಯಗಳು ಮುಖ್ಯವಾಹಿನಿಯಲ್ಲಿ ವಿರಳವಾಗಿದ್ದವು. ಗುರುದೇವ್ ಶ್ರೀ ಶ್ರೀ ರವಿ ಶಂಕರರು ಆರಂಭಿಸಿದ ಪ್ರಯಾಣವು ಜಗತ್ತಿನ ಆಂತರಿಕ ಅರಿವಿನ ದೃಷ್ಟಿಕೋನವನ್ನು ಕ್ರಮೇಣ ಬದಲಿಸಿತು. ಶಿಕ್ಷಣ, ಸಂಘರ್ಷ ಪರಿಹಾರ, ರೈತ ಕಲ್ಯಾಣ, ಕಾರಾಗೃಹ ಪುನರ್ವಸತಿ, ಯುವ ನಾಯಕತ್ವ, ಕಾರ್ಪೊರೇಟ್ ಒತ್ತಡ ನಿರ್ವಹಣೆ ಮತ್ತು ಸಮುದಾಯ ಪುನರ್‌ನಿರ್ಮಾಣ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಧ್ಯಾನವನ್ನು ಕೇಂದ್ರವಾಗಿಸಿಕೊಂಡು ಅವರು 182ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಬುಧವಾರ ತಮ್ಮ ಭಾಷಣದಲ್ಲಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ವಿಶ್ವ ಧ್ಯಾನ ದಿನದ ಘೋಷಣೆಗೆ ಬೆಂಬಲ ನೀಡಿದ 192 ರಾಷ್ಟ್ರಗಳಿಗೆ ಗುರುದೇವರು ಕೃತಜ್ಞತೆ ಸಲ್ಲಿಸಿದರು. ಆಂತರಿಕ ಸಾಧನಾಭ್ಯಾಸವೊಂದು ದೇಶ ಮತ್ತು ವಿಭಿನ್ನ ನಂಬಿಕೆಗಳನ್ನು ಮೀರಿ ಇಷ್ಟು ವ್ಯಾಪಕವಾಗಿ ಸಾಂಸ್ಕೃತಿಕ, ವೈಜ್ಞಾನಿಕ ಮತ್ತು ಸಂಸ್ಥೆಗಳಲ್ಲಿ ಒಪ್ಪಿಗೆ-ಮನ್ನಣೆಯನ್ನು ಪಡೆಯುವುದು ಅಪರೂಪದ ಸಂಗತಿ. ಈ ಜಾಗತಿಕ ಆಂದೋಲನವನ್ನು ಮುಂದುವರಿಸುತ್ತ, ಗುರುದೇವರು ಇದೇ ಡಿಸೆಂಬರ್ 19ರಂದು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಮುಖ್ಯ ಭಾಷಣ ನೀಡಲಿದ್ದು, ಬೇರೆ ಬೇರೆ ಬಣಗಳಿಂದ ಬಳಲುತ್ತಿರುವ ಜಗತ್ತಿಗೆ ಮಾನಸಿಕ ಸ್ಥೈರ್ಯ, ಸಂವಾದ ಮತ್ತು ಶಾಂತಿಗಾಗಿ ಧ್ಯಾನದ ಪಾತ್ರವನ್ನು ಮತ್ತೊಮ್ಮೆ ಒತ್ತಿ ಹೇಳಲಿದ್ದಾರೆ.
ಈ ವರ್ಷವೂ ಡಿ.21ರಂದು, ನ್ಯೂಯಾರ್ಕ್‌ನ ಪ್ರಸಿದ್ದ ವರ್ಲ್ಡ್ ಟ್ರೇಡ್ ಸೆಂಟರ್‌ನಿಂದ, ಭಾರತೀಯ ಕಾಲಮಾನ ರಾತ್ರಿ 8.30ಕ್ಕೆ ಗುರುದೇವರು ಧ್ಯಾನವನ್ನು ನಡೆಸಲಿದ್ದಾರೆ. ನಾಗಾಲೋಟದಿಂದ ಸಾಗುತ್ತಿರುವ ಜಗತ್ತು, ಸಾಮೂಹಿಕವಾಗಿ ಕೆಲಕಾಲ ಸ್ತಬ್ಧತೆಯ ಕ್ಷಣವನ್ನು ಅನುಭವಿಸಲಿದೆ. ನಿರಂತರ ಬದಲಾಗುತ್ತಿರುವ ಮತ್ತು ಅನಿಶ್ಚಿತತೆಯಿಂದ ಕೂಡಿರುವ ಈ ಸಮಯದಲ್ಲಿ, ಇವೆಲ್ಲದಕ್ಕೂ ಸಮಾಧಾನವಾಗಿರುವ ಶಾಂತಿಯ ಕೀಲಿಕೈ ಮಾನವ ಮನಸ್ಸಿನಲ್ಲೇ ಇದೆ ಎಂಬುದನ್ನು ನೆನಪಿಸುವ ಕ್ಷಣ ಇದಾಗಲಿದೆ.

