Asianet Suvarna News Asianet Suvarna News

ಜಗದ್‌ವಿಖ್ಯಾತ ಮೈಸೂರು ದಸರಾ ಇಂದಿನಿಂದ ಶುರು: ಎಸ್‌ಎಂಕೆ ಉದ್ಘಾಟನೆ!

* ಇಂದಿನಿಂದ ನಾಡ ಹಬ್ಬ, ನೋಡು ಬಾ ದಸರಾ

* ಮೈಸೂರು ದಸರಾಕ್ಕೆ ಎಸ್ಸೆಂಕೆ ಚಾಲನೆ

* ಅ.15ಕ್ಕೆ ವಿಶ್ವಪ್ರಸಿದ್ಧ ಜಂಬೂ ಸವಾರಿ

* ಸಿಎಂ ಬೊಮ್ಮಾಯಿಗೆ ಮೊದಲ ದಸರೆ

World famous Mysore Dasara to start from today Former CM SM Krishna to Inaugurate pod
Author
Bangalore, First Published Oct 7, 2021, 7:28 AM IST

ಅಂಶಿ ಪ್ರಸನ್ನಕುಮಾರ್‌

ಮೈಸೂರು(ಅ.07): ವಿಶ್ವವಿಖ್ಯಾತ ಮೈಸೂರು ದಸರಾ(Mysore dasara) ಮಹೋತ್ಸವ ಗುರುವಾರದಿಂದ ಆರಂಭವಾಗಲಿದ್ದು, ಒಂಬತ್ತು ದಿನಗಳ ಕಾಲ (ಅ.7ರಿಂದ 15ರ ವರೆಗೆ) ನಡೆಯುವ ನಾಡಹಬ್ಬಕ್ಕೆ ಅರಮನೆ ನಗರಿ ಸಜ್ಜಾಗಿದೆ. ಕೋವಿಡ್‌ ಆತಂಕದ ಹಿನ್ನೆಲೆಯಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ದಸರಾವನ್ನು(Dasara) ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದೆ.

ಚಾಮುಂಡಿ ಬೆಟ್ಟದಲ್ಲಿ(Chamundi Hills) ಶ್ರೀ ಚಾಮುಂಡೇಶ್ವರಿ ದೇವಿಗೆ ಅಗ್ರಪೂಜೆಯೊಂದಿಗೆ ಬೆಳಗ್ಗೆ 8.15ರಿಂದ 8.45ರ ಸಲ್ಲುವ ಶುಭ ಮುಹೂರ್ತದಲ್ಲಿ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ(Former CM SM Krishna) ಅವರು ದಸರಾಗೆ ಚಾಲನೆ ನೀಡುವರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai), ಕೇಂದ್ರ ಸಚಿವರಾದ ಪ್ರಹ್ಲಾದ್‌ ಜೋಶಿ(Pralhad Joshi), ರಾಜೀವ್‌ ಚಂದ್ರಶೇಖರ್‌(Rajeev Chandrasekhar), ಶೋಭಾ ಕರಂದ್ಲಾಜೆ(Shobha Karandlaje), ಎ.ನಾರಾಯಣಸ್ವಾಮಿ ಉಪಸ್ಥಿತರಿರುವರು. ರಾಜ್ಯದ ಸಚಿವರಾದ ಎಸ್‌.ಟಿ.ಸೋಮಶೇಖರ್‌, ವಿ.ಸುನಿಲ್‌ ಕುಮಾರ್‌, ಶಶಿಕಲಾ ಜೊಲ್ಲೆ, ಆನಂದ್‌ ಸಿಂಗ್‌ ಮುಖ್ಯ ಅತಿಥಿಗಳಾಗಿರುವರು. ಸಚಿವರಾದ ಆರ್‌.ಅಶೋಕ್‌, ಬಿ.ಸಿ.ಪಾಟೀಲ್‌, ಶಿವರಾಮ್‌ ಹೆಬ್ಬಾರ್‌, ಬೈರತಿ ಬಸವರಾಜ, ಡಾ.ಕೆ.ಸುಧಾಕರ್‌, ಮೇಯರ್‌ ಸುನಂದಾ ಪಾಲನೇತ್ರ ವಿಶೇಷ ಆಹ್ವಾನಿತರಾಗಿರುವರು. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅಧ್ಯಕ್ಷತೆ ವಹಿಸುವರು.

ಸಂಜೆ 6ಕ್ಕೆ ಅರಮನೆ ಆವರಣದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು. ಆನಂದ್‌ ಅವರಿಗೆ ಸಂಗೀತ ವಿದ್ವಾನ್‌ ಪ್ರಶಸ್ತಿ ಪ್ರದಾನ ಮಾಡುವರು. ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮುಖ್ಯ ಅತಿಥಿಗಳಾಗಿರುವರು. ಶಾಸಕ ಎಸ್‌.ಎ.ರಾಮದಾಸ್‌ ಅಧ್ಯಕ್ಷತೆ ವಹಿಸುವರು. ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರಿದು ಮೊದಲ ದಸರಾ ಆಗಿದೆ.

15ರಂದು ಜಂಬೂ ಸವಾರಿ:

ದಸರೆಯ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಅ.15ರಂದು ನಡೆಯಲಿದೆ. ಅಂದುಸಂಜೆ 4.36ರಿಂದ 4.46ರ ವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪೂಜೆ ಸಲ್ಲಿಸುವರು. ಸಂಜೆ 5ರಿಂದ 5.30ರವರೆಗೆ ಅರಮನೆ ಅಂಗಳದಲ್ಲಿ ವಿಜಯದಶಮಿ ಮೆರವಣಿಗೆ(ಜಂಬೂ ಸವಾರಿ)ಗೆ ಚಾಲನೆ ನೀಡುವರು. ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್‌.ಆರ್‌.ಬೊಮ್ಮಾಯಿ 1988ರಲ್ಲಿ ಜಂಬೂ ಸವಾರಿ ಉದ್ಘಾಟಿಸಿದ್ದರು. ಈ ಬಾರಿ ಬಸವರಾಜ ಬೊಮ್ಮಾಯಿ ಅವರಿಗೆ ಆ ಅವಕಾಶ ಸಿಗುತ್ತಿರುವುದು ವಿಶೇಷ. ಎಚ್‌.ಡಿ.ದೇವೇಗೌಡ-ಎಚ್‌.ಡಿ.ಕುಮಾರಸ್ವಾಮಿ ಅವರ ನಂತರ ಈ ರೀತಿ ತಂದೆ-ಮಗನಿಗೆ ಜಂಬೂ ಸವಾರಿ ಉದ್ಘಾಟಿಸುವ ಅದೃಷ್ಟಒದಗಿದೆ.

ಸಾರ್ವಜನಿಕರಿಗೆ ಇಲ್ಲ ಪ್ರವೇಶ

ಕೋವಿಡ್‌ ಮೂರನೇ ಅಲೆಯ ಭೀತಿಯಿಂದಾಗಿ ಚಾಮುಂಡಿಬೆಟ್ಟದಲ್ಲಿ ಉದ್ಘಾಟನೆ, ಅರಮನೆ ಅಂಗಳದಲ್ಲಿ ಪ್ರತಿನಿತ್ಯ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ, ಕೊನೇ ದಿನ ಅರಮನೆ ಒಳಾವರಣಕ್ಕೆ ಸೀಮಿತವಾಗಿ ನಡೆಯುವ ಜಂಬೂಸವಾರಿಗೆ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಚಾಮುಂಡಿಬೆಟ್ಟಹಾಗೂ ಅರಮನೆ ಆವರಣದಲ್ಲಿ ನಡೆಯುವ ಕಾರ್ಯಕ್ರಮಗಳಿಗೂ ಪ್ರವೇಶ ಮಿತಿ ನಿಗದಿಪಡಿಸಲಾಗಿದೆ. ಇದು 500ರ ಸಂಖ್ಯೆ ದಾಟುವಂತಿಲ್ಲ.

"

ಇನ್ನು ಅರಮನೆ ಒಳಾವರಣದಲ್ಲಿ ರಾಜವಂಶಸ್ಥರು 412 ವರ್ಷಗಳಿಂದ ಸಂಪ್ರದಾಯದಂತೆ ನವರಾತ್ರಿಯಂದು ಪ್ರತಿದಿನ ನಡೆಸುವ ಖಾಸಗಿ ದರ್ಬಾರ್‌ ಕೂಡ ಈ ಬಾರಿ ಸರಳವಾಗಿ ನಡೆಯಲಿದೆ. ಈಗಾಗಲೇ ದರ್ಬಾರ್‌ಗೆ ಸಿದ್ಧತೆ ಮಾಡಿಕೊಂಡಿದ್ದು, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ರಾಜಪೋಷಾಕಿನಲ್ಲಿ ಸಿಂಹಾಸನಾರೂಢರಾಗಿ ದರ್ಬಾರ್‌ ನಡೆಸುವರು. ಕೋವಿಡ್‌ ಹಿನ್ನೆಲೆಯಲ್ಲಿ ಈ ಖಾಸಗಿ ದರ್ಬಾರ್‌ಗೂ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.

ದೀಪಾಲಂಕಾರವೇ ಹೈಲೈಟ್‌: ಕೋವಿಡ್‌ ಹಿನ್ನೆಲೆಯಲ್ಲಿ ಸರಳ ಮತ್ತು ಸಂಪ್ರದಾಯದಂತೆ ದಸರಾ ಕಾರ್ಯಕ್ರಮಗಳು ನಡೆಯಲಿದ್ದರೂ ಈ ಬಾರಿ

ನಗರದಾದ್ಯಂತ ಅಂದಾಜು 100 ಕಿ.ಮೀ. ದೀಪಾಲಂಕಾರ ಮಾಡಲಾಗಿದೆ. ಈ ಬಾರಿಯ ದಸರೆ ಹೈಲೆಟ್‌ ಕೂಡ ದೀಪಾಲಂಕಾರವೇ ಆಗಿದೆ.

Follow Us:
Download App:
  • android
  • ios