Asianet Suvarna News Asianet Suvarna News

ಇಂದು ವಿಶ್ವ ಪರಿಸರ ದಿನ: ಇರುವುದಿದೊಂದೇ ಭೂಮಿ, ಉಳಿಸಿಕೊಳ್ಳೋಣ ಬನ್ನಿ

ಇಂಗಾಲದ ಡೈಆಕ್ಸೈಡಿಗೆ ದೇಶಗಳ ಭೌಗೋಳಿಕ ಗಡಿಗಳ ತಡೆಯಿಲ್ಲ. ತಪ್ಪು ಯಾರೇ ಮಾಡಿರಲಿ ಅದು ಇಡಿಯ ಜೀವ ಸಂಕುಲಕ್ಕೆ ಆಪತ್ತು ತರುತ್ತದೆ. ಅದು ಭೂಮಿಯ ಅಂತ್ಯಕ್ಕೆ ಕಾರಣವಾಗುತ್ತದೆ. 

World Environment Day 2022 Earth Cannot Keep up with our Demands hls
Author
Bengaluru, First Published Jun 5, 2022, 11:14 AM IST

ಮೇ ತಿಂಗಳ ಮೂರನೆಯ ವಾರ, ಬೆಂಗಳೂರಿನ ಪ್ರತಿಷ್ಠಿತ ಶಾಪಿಂಗ್‌ ಮಾಲ್‌ ಒಂದರಲ್ಲಿ ಇದ್ದೆ. ಪಾತ್ರೆಗಳು ಮತ್ತು ಇತರೆ ಅಡುಗೆ ಮನೆಯ ಸಾಮಾನುಗಳ ನಡುವೆ ತೆಂಗಿನ ಚಿಪ್ಪಿನಿಂದ ಮಾಡಿದ ಸೌಟುಗಳನ್ನು ನೋಡಿ ಖುಶಿಯಾಯಿತು. ಜನ ಅವುಗಳನ್ನು ಕೊಳ್ಳುತ್ತಿದ್ದರು ಸಹ. ಓಹೋ ಅಂತೂ ನಮ್ಮ ಜನ ಪರಿಸರಕ್ಕೆ ಮರಳುತ್ತಿದ್ದಾರೆ, ಇಂತಹ ಐಷಾರಾಮಿ ಸಾಮಾನುಗಳ ನಡುವೆಯೂ ಪರಿಸರ ಸ್ನೇಹಿ ವಸ್ತುಗಳ ಮಾರಾಟವಾಗುತ್ತಿವೆ ಎಂದು ಸಂತೋಷಪಟ್ಟೆ. ಆದರೆ ಅವುಗಳನ್ನು ಕೊಂಡ ಆ ಮಹಿಳೆಯರು ಬಿಲ್ಲಿಂಗ್‌ ಕೌಂಟರ್‌ನಲ್ಲಿ ಅವುಗಳಿಗೆ ಒಂದೊಂದು ದೊಡ್ಡ ಕಾಗದದ ಚೀಲ ಪಡೆದು ಹೊರಟಾಗ, ಈ ಕಾಗದದ ಚೀಲ ತಯಾರಿಗೆ ಅದೆಷ್ಟುಮರಗಳ ಮಾರಣ ಹೋಮವಾಗಿರಬಹುದು ಎನ್ನಿಸಿದರೂ, ಇದು ಜೈವಿಕವಾಗಿ ವಿಘಟನೆಗೊಳ್ಳುವ ವಸ್ತುವಲ್ಲವೇ ಎಂದು ಸಮಾಧಾನಗೊಂಡೆ.

World Environment Day:ಎಲ್ಲರಿಗೂ 'ಒಂದೇ ಒಂದು ಭೂಮಿ', ಪರಿಸರ ಉಳಿಸಿ, ಬೆಳೆಸಿ

ಹೊರಗೆ ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ಮಳೆಯಲ್ಲಿ ಹೊರ ಹೋಗಲಾರದೆ ಜನರೆಲ್ಲ ಮಾಲ್‌ನ ಮುಂಭಾಗದಲ್ಲಿ ನಿಂತಿದ್ದರು. ನಾವೂ ಅಲ್ಲಿಯೇ ನಿಂತು ಸುತ್ತ ಕಣ್ಣಾಡಿಸಿದಾಗ ಜನರ ಕೈಯಲ್ಲಿದ್ದ ಶಾಪಿಂಗ್‌ ಬ್ಯಾಗ್‌ಗಳು, ಅವುಗಳಿಗಿದ್ದ ಪ್ಯಾಕೇಜ್‌ ವಸ್ತುಗಳನ್ನೂ ನೋಡಿ ಆಶ್ಚರ್ಯವಾಯಿತು. ಈ ಕೊಳ್ಳುಬಾಕುತನಕ್ಕೆ ಕೊನೆಯೇ ಇಲ್ಲವೇ? ಫ್ರೀ ಹೋಮ್‌ ಡೆಲಿವರಿಯ ಹೆಸರಿನಲ್ಲಿ ಕೊಂಡ ವಸ್ತುಗಳೊಡನೆ ಮನೆಗೆ ಬರುವ ಪ್ಯಾಕೇಜಿಂಗ್‌ ಸಾಮಗ್ರಿ ನಗರಿಗರು ಉತ್ಪಾದಿಸುತ್ತಿರುವ ಅತಿ ಹೆಚ್ಚಿನ ಘನತ್ಯಾಜ್ಯ. ಎಲ್ಲವೂ ಮನೆಗೆ ಬರುತ್ತದೆ, ಆದರೆ ಅದು ಹೊತ್ತು ತರುವ ಅನವಶ್ಯಕ ಸಾಮಗ್ರಿಗಳು ಈ ಭೂಮಿಗೆ ಹೊರೆಯಾಗುತ್ತಿವೆ.

ಅಕಾಲಿಕ ಮಳೆ, ಹೆಚ್ಚುತ್ತಿರುವ ಚಂಡಮಾರುತಗಳು, ನಶಿಸುತ್ತಿರುವ ನೈಸರ್ಗಿಕ ಸಂಪತ್ತು, ಕಾಣಿಸಿಕೊಳ್ಳುತ್ತಿರುವ ಹೊಸ ಹೊಸ ರೋಗಗಳು- ಇವುಗಳ ನಡುವೆ ಮತ್ತೊಂದು ‘ವಿಶ್ವ ಪರಿಸರ ದಿನ’ ಬಂದಿದೆ. ಅದೂ 1972ರಲ್ಲಿ ಸ್ವೀಡನ್ನಿನ ಸ್ಟಾಕ್‌ ಹೋಮ್‌ನಲ್ಲಿ ನಡೆದ ಮೊಟ್ಟಮೊದಲ ಪರಿಸರವನ್ನು ಕುರಿತ ಶೃಂಗಸಭೆಯ 50ನೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ. ಅದು ಜೂನ್‌ 5ರಿಂದ ಜೂನ್‌ 16ರವರೆಗೆ ನಡೆಯಿತು. ಅಲ್ಲಿ ಪರಿಸರ ಸಂರಕ್ಷಣೆಯ ಒಡಂಬಡಿಕೆ ಮತ್ತು ಕ್ರಿಯಾಯೋಜನೆಯನ್ನು ನಿರ್ಧರಿಸಲಾಯಿತು.

ಅದಾದ ನಂತರ ವಿಶ್ವಸಂಸ್ಥೆ 1974ರಲ್ಲಿ ಜೂನ್‌ 5ನ್ನು ವಿಶ್ವಪರಿಸರ ದಿನವನ್ನಾಗಿ ಆಚರಿಸಲು ಕರೆ ನೀಡಿತು. ಅಂದೂ ಕೂಡಾ ‘ಇರುವುದೊಂದೇ ಭೂಮಿ. ಅದನ್ನು ಜೋಪಾನವಾಗಿ ಕಾಯ್ದುಕೊಳ್ಳೋಣ’ ಎಂಬ ಘೋಷವಾಕ್ಯವಿತ್ತು. ಈ ಬಾರಿಯೂ ‘ಇರುವುದೊಂದೇ ಭೂಗ್ರಹ. ಪ್ರಕೃತಿಯ ಜೊತೆಗೆ ಸಾಮರಸ್ಯದಿಂದ ಸಮರ್ಥವಾಗಿ ಬದುಕೋಣ’ ಎಂಬ ಧ್ಯೇಯ ವಾಕ್ಯದೊಂದಿಗೆ ಸ್ವೀಡನ್‌ನ ಆತಿಥ್ಯದಲ್ಲಿ ವಿಶ್ವ ಪರಿಸರ ದಿನದ ಆಚರಣೆ ಜಗತ್ತಿನಾದ್ಯಂತ ನಡೆಯುತ್ತಿದೆ. ಅಂದು ಮಾನವ ಪರಿಸರದ ಚೀಂತನೆ ನಡೆದಿದ್ದರೆ, ಇಂದು ಇಡಿಯ ಜೀವ ಸಂಕುಲದ ಪರಿಸರದ ಚಿಂತನೆ ನಡೆಯುತ್ತಿದೆ. ಏಕೆಂದರೆ ಮಾನವ ಕೇಂದ್ರಿತ ಅಭಿವೃದ್ಧಿ ಯೋಜನೆಗಳು ಮಾಡಿದ ಹಾನಿಯ ಅರಿವು ನಮಗೀಗ ಆಗಿದೆ. ಹಾಗಾಗಿ ನಮ್ಮ ಪರಿಸರ ಸಂರಕ್ಷಣೆಯ ಚಿಂತನೆಗಳು, ಕಾರ್ಯಯೋಜನೆಗಳು, ಮಾನವ ಕೇಂದ್ರಿತವಾಗಿರದೆ ಪರಿಸರ ಕೇಂದ್ರಿತವಾಗಿರಬೇಕಾಗಿದೆ.

ನಮ್ಮ ಮನೆ ಅಪಾಯದಲ್ಲಿದೆ

ಭೂಮಿಯ ಚಿತ್ರವನ್ನು ಅಪೋಲೋ 17ರ ಗಗನ ಯಾತ್ರಿಗಳು ಚಂದ್ರನಿಗೆ ಹೋಗುವ ಹಾದಿಯಲ್ಲಿ 29,000 ಕಿ.ಮೀ. ಎತ್ತರದಿಂದ ತೆಗೆದು ಕಳಿಸಿದಾಗ ಈ ಸುಂದರ ನೀಲಿ ಗ್ರಹ ನಮ್ಮ ಮನೆ ಎಂದು ಮಾನವ ಕುಲ ಹೆಮ್ಮೆಯಿಂದ ಬೀಗಿತು. ಅಂದು ಮಾತ್ರವಲ್ಲ, ಇಂದೂ ಸಹ ಜೀವವನ್ನು ಪೋಷಿಸುತ್ತಿರುವ ಮತ್ತೊಂದು ಗ್ರಹ ಇಡಿಯ ವಿಶ್ವದಲ್ಲಿ ಎಲ್ಲಿಯೂ ಪತ್ತೆಯಾಗಿಲ್ಲ. 460 ಕೋಟಿ ವರ್ಷಗಳ ಹಿಂದೆ ಉಗಮವಾದ ಈ ಭೂಮಿ ಇಂದಿನವರೆಗೆ ತನ್ನ ಮೇಲೆ ನಡೆಸಿದ, ನಡೆಸುತ್ತಿರುವ ಹಲವಾರು ಭೌತ ಮತ್ತು ರಾಸಾಯನಿಕ ಚಟುವಟಿಕೆಗಳ ಪರಿಣಾಮವಾಗಿ ಸಹಸ್ರಾರು ಜೀವಿಗಳು ಇಲ್ಲಿ ಉಗಮವಾಗಿ ವಿಕಾಸಹೊಂದಿವೆ.

ಇವುಗಳಲ್ಲಿ ಎಲ್ಲಕ್ಕಿಂತ ಇತ್ತೀಚೆಗೆ ಉಗಮವಾದ ‘ಹೋಮೋಸೆಪಿಯನ್‌’ ತನ್ನ ಮೊದಲಿನ ಅಲೆಮಾರಿ ಬದುಕನ್ನು ಬಿಟ್ಟು ಒಂದೆಡೆ ನೆಲೆ ನಿಂತು ಜೀವನವನ್ನು ನಡೆಸಿ ನಾಗರಿಕನಾದದ್ದು ತೀರ ಇತ್ತೀಚೆಗೆ ಅಂದರೆ ಕೇವಲ 10,000 ವರ್ಷಗಳ ಹಿಂದೆ. ಇಷ್ಟುಸಣ್ಣ ಅವಧಿಯಲ್ಲಿ ಭೂಮಿಯನ್ನು ಇಂದು ನಾವು ಅಪಾಯದಂಚಿಗೆ ತಂದು ನಿಲ್ಲಿಸಿದ್ದೇವೆ.

ಭೂಮಿ ತಾಯಿ ರಕ್ಷಣೆ, ನಮ್ಮೆಲ್ಲರ ಹೊಣೆ: ಪರಿಸರವನ್ನು ಉಳಿಸಲು ನಾವೇನು ಮಾಡಬಹುದು.?

ಇದಕ್ಕೆ ಕಾರಣ ‘ನಾವು’ ಎಂದರೆ ಮಾನವರು ಮಾತ್ರ ಎನ್ನುವುದು ಈಗ ಎಲ್ಲರಿಗೆ ತಿಳಿದಿರುವ ವಿಷಯ. ಈ ಭೂಮಿಯ ಮೇಲೆ ಇನ್ನಾವ ಜೀವಿಯೂ ತನ್ನ ಅವಶ್ಯಕತೆಯನ್ನು ಮೀರಿ ಕೂಡಿಡುವುದಿಲ್ಲ, ಅವುಗಳ ಆವಶ್ಯಕತೆಗಳೆಲ್ಲವೂ ಪರಿಸರದಿಂದಲೇ ಬಂದು ಪರಿಸರವನ್ನೇ ಸೇರುತ್ತೇವೆ. ಆದರೆ ಮಾನವರಾದ ನಮ್ಮ ರಕ್ತದಲ್ಲಿ ಸಹ ನಾವು ಸೃಷ್ಟಿಸಿದ ಕೃತಕ ವಸ್ತು ಪ್ಲಾಸ್ಟಿಕ್‌ ಸೇರಿಹೋಗಿದೆ.

ಮೊದಮೊದಲು ಭೂಮಿ ನಾವು ನೀಡಿದ ಎಲ್ಲ ದೌರ್ಜನ್ಯಗಳನ್ನು ಸಹಿಸಿಕೊಂಡಿತು. ತನ್ನನ್ನು ತಾನು ಸರಿ ಪಡಿಸಿಕೊಂಡಿತು. ಅದನ್ನು ನಾವು ‘ಕ್ಷಮಯಾಧರಿತ್ರಿ’ ಎಂದು ಕರೆದು ಬೇಡದ ವಸ್ತುಗಳನ್ನು ಅದರ ಒಡಲಿಗೆ ಸುರಿಯುತ್ತಲೇ ಹೋದೆವು. ಅದರ ಪರಿಣಾಮವಾಗಿ ಇಂದು ಭೂಮಿಯ ನೆಲ, ಜಲ, ಗಾಳಿ, ಮಳೆ ಇಲ್ಲಿ ಬೆಳೆಯುವ ಆಹಾರ ಎಲ್ಲವೂ ವಿಷಮಯವಾಗಿದೆ. ನಾವು ನಮ್ಮ ಕೈಗಾರಿಕೆಗಳ ಚಿಮಣಿಗಳಿಂದ, ಐಷಾರಾಮಿ ಬದುಕಿನ ಚಟುವಟಿಕೆಗಳಿಂದ ವಾಯುಮಂಡಲಕ್ಕೆ ಚಿಮ್ಮಿದ ಅನಿಲಗಳು ಉಷ್ಣವರ್ಧಕ ಅನಿಲಗಳಂತೆ ವರ್ತಿಸಿ ಮರಳಿ ಭೂಮಿಯ ವಾತಾವರಣವನ್ನು ಸೇರಿ ಭೂಮಿಯನ್ನು ಬಿಸಿಯಾಗಿಸಿವೆ.

ಇದು ಈಚಿನ ಬೆಳವಣಿಗೆ ಅಲ್ಲ

ಎಲ್ಲವೂ ಸಹಜವೂ ನೈಸರ್ಗಿಕವೂ ಆಗಿದ್ದಾಗ ಹಚ್ಚನೆಯ ಹೊದಿಕೆಯ ಈ ನಮ್ಮ ಬೆಚ್ಚನೆಯ ಭೂಮಿ ಜೀವಿಗಳ ಸ್ವರ್ಗವಾಗಿತ್ತು, ಸಮೃದ್ಧವಾಗಿತ್ತು. ಆದರೆ ಪರಿಸ್ಥಿತಿ ಹಾಗೆಯೇ ಉಳಿಯಲಿಲ್ಲ. ಮಾನವನ ಚಟುವಟಿಕೆಗಳ ಪರಿಣಾಮವಾಗಿ ವಾಯುಮಂಡಲದಲ್ಲಿ ಹಸಿರು ಮನೆ ಅನಿಲಗಳ ಪ್ರಮಾಣ ಹೆಚ್ಚಾಯಿತು. ಪರಿಣಾಮವಾಗಿ ಭೂಮಿಯ ಬಿಸಿಯೂ ಹೆಚ್ಚಾಯಿತು. ಭೂಮಿ ಬಿಸಿಯಾಗುತ್ತಿದೆ ಎಂಬ ವಿಷಯ ಇತ್ತೀಚಿನ ದಿನಗಳಲ್ಲಿ ಕೇಳಿಬರುತ್ತಿದ್ದರೂ ಸಹ 1896ರಲ್ಲಿಯೇ ಸ್ವೀಡನ್‌ ದೇಶದ ಪ್ರಖ್ಯಾತ ರಸಾಯನಶಾಸ್ತ್ರಜ್ಞ ವಾಂಟೆ ಅರೆನಿಯಸ್‌ ‘ಗ್ರೀನ್‌ ಹೌಸ್‌’ ಎಂಬ ಪದಪುಂಜವನ್ನು ಮೊದಲ ಬಾರಿಗೆ ಸೃಷ್ಟಿಸಿದ್ದ.

ಈ ಪರಿಣಾಮದಿಂದ ಭೂಮಿಯ ತಾಪಮಾನ ಕಳೆದೆರಡು ಶತಮಾನಗಳಿಂದ ಏರುತ್ತಲೇ ಬಂದಿದೆ. ಅದನ್ನು ತಡೆಯಲು ನಾವೇನೂ ಮಾಡಲಿಲ್ಲವಾದ್ದರಿಂದ ಅದು ಬರಿ ಬಿಸಿಯ ಹಂತವನ್ನು ದಾಟಿ ಹವಾಗುಣ ಬದಲಾವಣೆಯ ಹಂತಕ್ಕೆ ಬಂದಿದೆ. ಅದರ ಪರಿಣಾಮವಾಗಿಯೇ ನಾವಿಂದು ಅತಿವೃಷ್ಟಿಇಲ್ಲವೇ ಅನಾವೃಷ್ಟಿಅನುಭವಿಸುತ್ತಿದ್ದೇವೆ. ಚಂಡಮಾರುತಗಳು ಹೆಚ್ಚಾಗುತ್ತಿವೆ, ಹಿಮದಿಂದಾವೃತವಾದ ಧ್ರುವ ಪ್ರದೇಶದ ಹಿಮಗಡ್ಡೆಗಳು, ನಮ್ಮ ಹಿಮಾಲಯದ ಹಿಮದ ಹೊದಿಕೆ ಕರಗುತ್ತಿದೆ. ಅನಿಯಮಿತ ಮತ್ತು ಅಕಾಲಿಕ ಮಳೆಯಿಂದಾಗಿ ಕೃಷಿಕ ಕಂಗೆಟ್ಟಿದ್ದಾನೆ. ತಗ್ಗು ಪ್ರದೇಶಗಳು ನೀರಿನಿಂದಾವೃತವಾಗಿವೆ.

ನಾವೇನು ಮಾಡಬಹುದು?

ಉಷ್ಣವರ್ಧಕ ಅನಿಲಗಳ ಉತ್ಸರ್ಜನೆಯನ್ನು ತಡೆಗಟ್ಟಲು ನಾವು ಮಾಡಿಕೊಂಡ ಎಲ್ಲ ಒಪ್ಪಂದಗಳು, ಒಡಂಬಡಿಕೆಗಳು, ವಾಗ್ದಾನಗಳು ಸರಿಯಾಗಿ ಕಾರ್ಯಗತವಾಗಿದ್ದರೆ ಇಂದಿನ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಅಂತಹ ಯಾವುದೇ ಗಂಭೀರ ಪ್ರಯತ್ನಗಳು ನಡೆದಿಲ್ಲ. ಹಾಗೆಂದು ಏನೂ ಆಗಿಲ್ಲ ಎನ್ನುವಂತಿಲ್ಲ. ಅಲ್ಲೊಂದು ಇಲ್ಲೊಂದು ಪುಟ್ಟದೇಶಗಳು ಇಂತಹ ಪ್ರಯತ್ನಗಳನ್ನು ಮಾಡಿ ತೋರಿಸಿ ಇದು ಸಾಧ್ಯ ಎಂದು ಸಾಬೀತುಪಡಿಸಿವೆ. ಕೆಲವು ಕಾರ್ಬನ್‌ ತಟಸ್ಥ ದೇಶಗಳಾದರೆ, ಮತ್ತೆರಡು ಕಾರ್ಬನ್‌ ನೆಗೆಟಿವ್‌ ದೇಶಗಳಾಗಿವೆ. ಅವು ಇಂದು ಬೇರೆಯ ದೇಶಗಳಿಗೆ ಮಾದರಿಯಾಗಬೇಕಿದೆ.

2021ರಲ್ಲಿ ಅತಿ ಹೆಚ್ಚು ಇಂಗಾಲದ ಡೈಆಕ್ಸೈಡನ್ನು ವಾಯುಮಂಡಲಕ್ಕೆ ಸೇರಿಸಿದ ದೇಶ ಚೀನಾ. ಅದು 9.9 ಮಿಲಿಯನ್‌ ಟನ್‌. ಇದು ಇಡಿಯ ಜಗತ್ತಿನ ಶೇ.28ರಷ್ಟು. ಅಮೆರಿಕ 15% ಉತ್ಸರ್ಜಿಸಿದರೆ, ಮೂರನೆ ಸ್ಥಾನದಲ್ಲಿರುವ ಭಾರತ 7% ಇಂಗಾಲದ ಡೈಆಕ್ಸೈಡ್‌ ಹೊರಹಾಕಿದೆ. ಜಾಗತಿಕ ತಾಪಮಾನದ ಏರಿಕೆ ತಡೆಯಬೇಕು ಎನ್ನುವುದಾದರೆ, ದೇಶಗಳು ಉತ್ಪಾದಿಸುವ ಇಂಗಾಲದ ಡೈಆಕ್ಸೈಡ್‌ ಪ್ರಮಾಣ ಅಲ್ಲಿಯೇ ತಟಸ್ಥವಾಗಿಸಬೇಕು. ನಮಗೆಲ್ಲ ಗೊತ್ತಿರುವಂತೆ ಸಸ್ಯಗಳು ಇಂಗಾಲದ ಡೈಆಕ್ಸೈಡನ್ನು ಹೀರಿಕೊಂಡು ದ್ಯುತಿಸಂಶ್ಲೇಷಣೆ ಮಾಡಿ ಆಮ್ಲಜಕವನ್ನು ಹೊರಹಾಕುತ್ತವೆ.

ಹೀಗಾಗಿ ಸಾಕಷ್ಟುಕಾಡು ಇರಬೇಕು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕಾರ್ಬನ್‌ ನೆಗೆಟಿವ್‌ ದೇಶವಾಗಬೇಕು ಎನ್ನುವುದಾದರೆ ದೇಶ ಉತ್ಪಾದಿಸುವ ಇಂಗಾಲದ ಡೈಆಕ್ಸೈಡಿಗಿಂತ ಅದನ್ನು ಹೀರಿಕೊಳ್ಳುವ ಕಾಡು ಹೆಚ್ಚಾಗಿರಬೇಕು. ಮೇಲ್ನೋಟಕ್ಕೆ ಇದು ಸಾಧ್ಯವೇ ಎನಿಸಬಹುದಾದರೂ ಇದನ್ನು ಸಾಧ್ಯವಾಗಿಸಿದ ಉದಾಹರಣೆಗಳು ನಮ್ಮ ಮುಂದಿವೆ. ಅವುಗಳೆಂದರೆ ಭೂತಾನ್‌, ಸುರಿನಾಮ್‌ ಹಾಗೂ ಪನಾಮಾ. ಇವು ಕಾರ್ಬನ್‌ ನೆಗೆಟಿವ್‌ ದೇಶವಾಗಿವೆ.

ಈ ದೇಶಗಳ ಮಾದರಿ ಅನುಸರಿಸಿ ಕಾಡನ್ನು ಹೆಚ್ಚಿಸಿಕೊಳ್ಳುವುದೊಂದೇ ಹವಾಗುಣ ಬದಲಾವಣೆಯನ್ನು ತಡೆಯಲು ಈಗುಳಿದಿರುವ ಮಾರ್ಗ. ಇದಕ್ಕೆ ನಾವೆಲ್ಲರೂ ಕೈಜೋಡಿಸುವ ಮೂಲಕ ಈ ಬಾರಿಯ ವಿಶ್ವ ಪರಿಸರ ದಿನವನ್ನು ಆಚರಿಸಬೇಕಾಗಿದೆ. ಇಂಗಾಲದ ಡೈಆಕ್ಸೈಡಿಗೆ ದೇಶಗಳ ಭೌಗೋಳಿಕ ಗಡಿಗಳ ತಡೆಯಿಲ್ಲ. ತಪ್ಪು ಯಾರೇ ಮಾಡಿರಲಿ ಅದು ಇಡಿಯ ಜೀವ ಸಂಕುಲಕ್ಕೆ ಆಪತ್ತು ತರುತ್ತದೆ. ಅದು ಭೂಮಿಯ ಅಂತ್ಯಕ್ಕೆ ಕಾರಣವಾಗುತ್ತದೆ. ಹಾಗಾಗಬಾರದು ಅಂತಾದರೆ ಪ್ರತಿಯೊಬ್ಬರೂ ಭೂಮಿಯ ಆರೈಕೆಗೆ ಕೈಜೋಡಿಸಬೇಕು. ಭೂಮಿಗೆ ಈಗ ನಮ್ಮ ಅವಶ್ಯಕತೆ ಇದೆ.

- ಸುಮಂಗಲಾ ಎಸ್‌.ಮುಮ್ಮಿಗಟ್ಟಿ

Follow Us:
Download App:
  • android
  • ios