ಬೆಂಗಳೂರು [ಅ.23]:  ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಾಗೂ ಅಪರಾಧಗಳನ್ನು ತಡೆಗಟ್ಟುವ ಸಂದರ್ಭದಲ್ಲಿ ಕರ್ತವ್ಯ ನಿರತ ಪೊಲೀಸ್‌ ಅಧಿಕಾರಿ ಹಾಗೂ ಸಿಬ್ಬಂದಿ ಸಾಧಾರಣವಾಗಿ ಗಾಯಗೊಂಡರೆ ನೀಡುವ ಅನುಗ್ರಹ ಪೂರ್ವಕ ಪರಿಹಾರ ದರವನ್ನು ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಅಧಿಕಾರಿ ಅಥವಾ ಸಿಬ್ಬಂದಿಯ ಕಣ್ಣಿಗೆ ಪೆಟ್ಟಾಗಿ ಸಂಪೂರ್ಣ ದೃಷ್ಟಿಕಳೆದುಕೊಂಡರೆ, ದವಡೆ, ಮೂಳೆ ಮುರಿತದಂತಹ ಪ್ರಕರಣಗಳಿಗೆ ಈ ವರೆಗೆ ಇದ್ದ 1500 ರು. ಪರಿಹಾರವನ್ನು 10 ಸಾವಿರ ರು.ಗಳಿಗೆ ಹೆಚ್ಚಿಸಲಾಗಿದೆ. ಹಲ್ಲು ಮುರಿತ, ಸಣ್ಣಪುಟ್ಟಗಾಯಗಳಿಗೆ ಇದ್ದ 1000 ರು. ಪರಿಹಾರವನ್ನು 2000 ರು.ಗಳಿಗೆ, ತರಚುಗಾಯ, ಉರಿಊತ ಮತ್ತಿತರ ಪ್ರಕರಣಗಳಲ್ಲಿ ನೀಡುತ್ತಿದ್ದ 500 ರು. ಪರಿಹಾರದ ಮೊತ್ತವನ್ನು 1000 ರು.ಗಳಿಗೆ ಹೆಚ್ಚಿಸಿ ರಾಜ್ಯ ಪೊಲೀಸ್‌ ಮಹಾನಿರ್ದೇಶಕಿ ಹಾಗೂ ಪೊಲೀಸ್‌ ಮಹಾನಿರೀಕ್ಷಕರಾದ ನೀಲಮಣಿ ಎನ್‌.ರಾಜು ಮಂಗಳವಾರ ಆದೇಶ ಹೊರಡಿಸಿದ್ದಾರೆ.

ರಾಜ್ಯ ಸರ್ಕಾರದಿಂದ ಪೊಲೀಸರಿಗೆ ಗುಡ್ ನ್ಯೂಸ್.. ಭತ್ಯೆ ಗಣನೀಯ ಹೆಚ್ಚಳ...

ಗಾಯಗೊಂಡ ವಿವಿಧ ಪ್ರಕರಣಗಳಲ್ಲಿ ಕನಿಷ್ಠ 30ರಿಂದ 50 ಸಾವಿರ ರು.ವರೆಗೂ ಪರಿಹಾರ ಮೊತ್ತ ನೀಡಲು ಪೊಲೀಸ್‌ ಇಲಾಖೆ ಸರ್ಕಾರಕ್ಕೆ ಈ ಹಿಂದೆ ಸಲ್ಲಿಸಿದ್ದ ಪ್ರಸ್ತಾವನೆಗೆ ಸರ್ಕಾರ ಅನುಮೋದಿಸಿದ್ದ ಮೊತ್ತದ ಆಧಾರದ ಮೇಲೆ ಪೊಲೀಸ್‌ ಮಹಾನಿರ್ದೇಶಕರು ಆದೇಶ ಮಾಡಿದ್ದಾರೆ. ಗಾಯಾಳುಗಳು ಆಯಾ ಗಾಯದ ಸ್ವರೂಪದ ಬಗ್ಗೆ ಪ್ರಮಾಣ ಪತ್ರ ಪಡೆದು ಅನುಗ್ರಹ ಪೂರ್ವಕ ಪರಿಹಾರ ಧನ ಘಟಕಾಧಿಕಾರಿಗಳಿಗೆ ಸಲ್ಲಿಸಿ ಪರಿಹಾರ ಧನ ಪಡೆಯಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.