ಫ್ರೀ ಬಸ್ ಪ್ರಯಾಣ: ಇಡೀ ಬಸ್ ಉಚಿತ ಬುಕ್ ಮಾಡಲು ಬಂದ ಮಹಿಳೆ..!
ಬಸ್‌ಗಳಲ್ಲಿ ಕೇವಲ ಶೇ.50ರಷ್ಟು ಮಾತ್ರ ಮಹಿಳಾ ಪ್ರಯಾಣಿಕರಿಗೆ ಅವಕಾಶ ನೀಡಲಾಗಿದೆ. ಉಳಿದಂತೆ ಶೇ.50 ಪುರುಷ ಪ್ರಯಾಣಿಕರು ಇರುತ್ತಾರೆ. ಮಹಿಳೆಯರು ಪ್ರವಾಸ ಅಥವಾ ಇನ್ನಿತರ ಕಾರ್ಯಗಳಿಗೆ ತೆರಳಲು ಕೆಎಸ್‌ಆರ್‌ಟಿಸಿ ನಿಯಮಗಳ ಪ್ರಕಾರ ಪ್ರತ್ಯೇಕವಾಗಿ ಹಣ ಕೊಟ್ಟು ಬಸ್ ಬುಕ್ಕಿಂಗ್ ಮಾಡಿಕೊಳ್ಳಬೇಕು. ಅದಕ್ಕೆ ಶಕ್ತಿ ಯೋಜನೆ ಅನ್ವಯ ಆಗುವುದಿಲ್ಲ.
ಬೆಂಗಳೂರು(ಜೂ.18): ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣಕ್ಕೆ ಅವಕಾಶವಿದೆ ಎಂದು ಮಹಿಳೆಯೊಬ್ಬರು ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸ ಕೈಗೊಳ್ಳಲು ಇಡೀ ಬಸ್ಸನ್ನು ಬುಕ್ ಮಾಡಲು ಮುಂದಾಗಿರುವ ಕುತೂಹಲಕರ ಬೆಳಕಿಗೆ ಬಂದಿದೆ. ಆದರೆ ನಿಯಮಾನುಸಾರ ಇದಕ್ಕೆ ಅವಕಾಶವಿಲ್ಲ ಎಂದು ಹೇಳಿ ಕೆಎಸ್ಸಾರ್ಟಿಸಿ ಸಿಬ್ಬಂದಿ ವಾಪಸು ಕಳಿಸಿದ್ದಾರೆ.
ಬೆಂಗಳೂರಿನ ಬ್ಯಾಡರಹಳ್ಳಿಯ ನಿವಾಸಿ ಸುನಂದಾ ಎಂಬುವರು ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿ ವಿಚಾರಣಾ ಕೇಂದ್ರಕ್ಕೆ ಬಂದಿದ್ದು, ಯಾವ ಧಾರ್ಮಿಕ ಕ್ಷೇತ್ರಗಳಿಗೆ ಎಷ್ಟು ಗಂಟೆಗೆ ಬಸ್‌ಗಳು ಇವೆ ಎಂಬಿತ್ಯಾದಿ ಮಾಹಿತಿಯನ್ನು ಕಲೆ ಹಾಕಿ ಬರೆದಿಟ್ಟು ಕೊಂಡಿದ್ದರು. ಅಲ್ಲದೇ 48 ಆಸನಗಳಿರುವ ಬಸ್ ಬುಕ್ಕಿಂಗ್ ಮಾಡುವ ಬಗ್ಗೆಯೂ ವಿಚಾರಿಸಿದರು ಎಂದು ಮೂಲಗಳು ತಿಳಿಸಿವೆ.
'ಶಕ್ತಿ ಯೋಜನೆ ಸ್ಮಾರ್ಟ್ ಕಾರ್ಡ್' ಪಡೆದ ಮೊದಲ ಮಹಿಳೆ ಇವರೇ! ಉಚಿತ ಪ್ರಯಾಣವನ್ನೂ ಮಾಡಿದ್ರು
ಧಾರ್ಮಿಕ ಕ್ಷೇತ್ರಗಳಿಗೆ ಮಹಿಳಾ ತಂಡದೊಂದಿಗೆ ಹೋಗುವ ಚಿಂತನೆ ನಡೆಸಿದ್ದ ಅವರು, ಈಗಾಗಲೇ 20 ಮಹಿಳೆಯರ ತಂಡ ಮಾಡಿಕೊಂಡಿದ್ದರು. ಮಹಿಳಾ ಸಂಘಗಳು, ಕುಟುಂಬದವರು ಸೇರಿ 25 ಮಹಿಳೆಯರನ್ನು ಒಗ್ಗೂಡಿಸಿ ಒಟ್ಟು 45 ಮಂದಿ ಧಾರ್ಮಿಕ ಕ್ಷೇತ್ರಗಳ ದರ್ಶನಕ್ಕೆ ತೆರಳುವ ಚಿಂತನೆ ಅವರದ್ದಾಗಿತ್ತು. ಅದಕ್ಕಾಗಿ ತಲಾ 20 ರು. ಕೊಟ್ಟು ಮುಂಗಡ ಬುಕ್ಕಿಂಗ್ ಮಾಡಿಕೊಳ್ಳುವ ಯೋಜನೆಯೂ ಇತ್ತು ಎನ್ನಲಾಗಿದೆ. ಆದರೆ ಇದಕ್ಕೆ ಕೆಎಸ್ಸಾರ್ಟಿಸಿ ಸಿಬ್ಬಂದಿ ಅವಕಾಶ ನೀಡಿಲ್ಲ.
ನಿರಾಕರಣೆ ಏಕೆ?
ಬಸ್‌ಗಳಲ್ಲಿ ಕೇವಲ ಶೇ.50ರಷ್ಟು ಮಾತ್ರ ಮಹಿಳಾ ಪ್ರಯಾಣಿಕರಿಗೆ ಅವಕಾಶ ನೀಡಲಾಗಿದೆ. ಉಳಿದಂತೆ ಶೇ.50 ಪುರುಷ ಪ್ರಯಾಣಿಕರು ಇರುತ್ತಾರೆ. ಮಹಿಳೆಯರು ಪ್ರವಾಸ ಅಥವಾ ಇನ್ನಿತರ ಕಾರ್ಯಗಳಿಗೆ ತೆರಳಲು ಕೆಎಸ್‌ಆರ್‌ಟಿಸಿ ನಿಯಮಗಳ ಪ್ರಕಾರ ಪ್ರತ್ಯೇಕವಾಗಿ ಹಣ ಕೊಟ್ಟು ಬಸ್ ಬುಕ್ಕಿಂಗ್ ಮಾಡಿಕೊಳ್ಳಬೇಕು. ಅದಕ್ಕೆ ಶಕ್ತಿ ಯೋಜನೆ ಅನ್ವಯ ಆಗುವುದಿಲ್ಲ ಎಂದು ಮಹಿಳೆಗೆ ಮಾಹಿತಿ ನೀಡಿರುವುದಾಗಿ ಕೆಎಸ್‌ಆರ್‌ಟಿಸಿ ವಿಚಾರಣಾ ಕೇಂದ್ರದ ಸಿಬ್ಬಂದಿ ತಿಳಿಸಿದ್ದಾರೆ.