ನನಗೆ ಪ್ರಧಾನಿ ಮೋದಿ ಅಂದರೆ ತುಂಬಾ ಇಷ್ಟ| ಕೊರೋನಾ ಸಂಕಷ್ಟದ ಸಮಯದಲ್ಲಿ ಅವರು ಏನೇನು ಮಾರ್ಗಸೂಚಿಗಳನ್ನು ಪಾಲಿಸಲು ಹೇಳುತ್ತಿದ್ದರೋ ಅದೆಲ್ಲವನ್ನೂ ನನ್ನ ಗೇಮ್‌ನಲ್ಲಿ ಅಳವಡಿಸಿದ್ದೇನೆ| ಸಂವಾದದಲ್ಲಿ ಮೋದಿ ಏನೇ ಪ್ರಶ್ನೆ ಕೇಳಿದರೂ ಉತ್ತರಿಸಲು ನಾನು ತಯಾರಿದ್ದೇನೆ| ರಾಷ್ಟ್ರೀಯ ಬಾಲ ಪುರಸ್ಕಾರ ವಿಜೇತನ ಮನದಾಳದ ಮಾತು|
ಬೆಂಗಳೂರು(ಜ.25): ‘ನನಗೆ ಪ್ರಧಾನಿ ಮೋದಿ ಜೀ ಸ್ಪೂರ್ತಿ. ಬಾಲ ಪುರಸ್ಕಾರ ಸಿಕ್ಕಿರುವುದರಿಂದ ತುಂಬಾ ಖುಷಿಯಾಗಿದೆ. ಅವಕಾಶ ಸಿಕ್ಕರೆ ಮೋದಿ ಅವರೊಂದಿಗೆ ಬೋರ್ಡ್ ಗೇಮ್ ಆಡುವ ಕನಸಿದೆ!’ ಹೀಗೆಂದು ಪಟಪಟನೆ ಹೇಳಿದ್ದು, ‘ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ 2021’ಕ್ಕೆ ಕರ್ನಾಟಕದಿಂದ ಆಯ್ಕೆಯಾಗಿರುವ ಬೆಂಗಳೂರಿನ ರಾಜರಾಜೇಶ್ವರಿ ನಗರದ ವೀರ ಕಶ್ಯಪ್ (10 ವರ್ಷ)! ಕೊಚ್ಚಿ ನೇವಿ ಚಿಲ್ಡ್ರನ್ ಸ್ಕೂಲ್‌ನಲ್ಲಿ 5ನೇ ತರಗತಿ ವಿದ್ಯಾರ್ಥಿ ಕಶ್ಯಪ್. ಭಾರತೀಯ ನೌಕಾಪಡೆಯ ಕಮಾಂಡರ್ ವಿನಾಯಕ್ ಹಾಗೂ ಸಂಗೀತಾ ದಂಪತಿ ಪುತ್ರ.
ಕೋವಿಡ್ 19 ಕುರಿತು ಜಾಗೃತಿ ಮೂಡಿಸುವ ‘ಕೊರೋನಾ ಯುಗ’ ಹೆಸರಿನ ಕ್ರಿಯೇಟಿವ್ ಬೋರ್ಡ್ ಗೇಮ್ ಅಭಿವೃದ್ಧಿಪಡಿಸಿ ಗಮನ ಸೆಳೆದಿದ್ದಾನೆ. ಈ ಬೋರ್ಡ್ ಗೇಮ್ ಮಾರಾಟ ಮಾಡಿ ಬಂದ ಹಣವನ್ನು ‘ಪಿಎಂ ಕೇರ್’ ನಿಧಿಗೆ ಕಳುಹಿಸಿದ್ದಾನೆ. ಅಲ್ಲದೆ ದೇಶದಲ್ಲಿ ಮೊದಲ ಬಾರಿಗೆ ಗೂಗಲ್ ಫಾಮ್‌ರ್ ಕ್ರಿಯೇಟ್ ಮಾಡಿ ಬೋರ್ಡ್ ಗೇಮ್ ಡಿಸೈನ್ ಸ್ಪರ್ಧೆ ಏರ್ಪಡಿಸಿದ್ದು, ಈ ಬಾಲಕನ ಸಾಧನೆಯಾಗಿದೆ.
ಕರ್ನಾಟಕದ ಇಬ್ಬರಿಗೆ ‘ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ’!
ಈ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ವೀರ ಕಶ್ಯಪ್, ‘ನನಗೆ ಪ್ರಧಾನಿ ಮೋದಿ ಅಂದರೆ ತುಂಬಾ ಇಷ್ಟ. ಕೊರೋನಾ ಸಂಕಷ್ಟದ ಸಮಯದಲ್ಲಿ ಅವರು ಏನೇನು ಮಾರ್ಗಸೂಚಿಗಳನ್ನು ಪಾಲಿಸಲು ಹೇಳುತ್ತಿದ್ದರೋ ಅದೆಲ್ಲವನ್ನೂ ನನ್ನ ಗೇಮ್‌ನಲ್ಲಿ ಅಳವಡಿಸಿದ್ದೇನೆ. ಸಂವಾದದಲ್ಲಿ ಮೋದಿ ಏನೇ ಪ್ರಶ್ನೆ ಕೇಳಿದರೂ ಉತ್ತರಿಸಲು ನಾನು ತಯಾರಿದ್ದೇನೆ’ ಎಂದು ಹೇಳುತ್ತನೆ.
ಗೇಮ್ ಹೇಗೆ ಆಡಬಹುದು?:
ಕೊರೋನಾ ವೈರಸ್ ಆಕಾರದಂತೆ ವಿನ್ಯಾಸಗೊಳಿಸಲಾಗಿರುವ ಈ ಬೋರ್ಡ್ ಗೇಮ್‌ಗೆ ದಾಳಗಳು ಇವೆ. ಸುಮಾರು ಮುಕ್ಕಾಲು ಗಂಟೆಗಳ ಕಾಲ ಆಡಬಹುದಾಗಿದೆ. ಈ ಆಟದ ವರ್ತುಲದೊಳಗೆ ಪ್ರವೇಶಿಸಬೇಕಾದರೆ ಆಟಗಾರನು ಎರಡು ಸಂಖ್ಯೆಗಳ ದಾಳ ಉರುಳಿಸಿ ‘ಬೈ ಮಾಸ್ಕ್’ ಬ್ಲಾಕ್‌ಗೆ ಹೋಗಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ನಂತರ ದಾಳವನ್ನು ಉರುಳಿಸಿದಂತೆ ಆಟಗಾರರು ಪದೇ ಪದೇ ಕೈ ತೊಳೆಯುವುದು, ಸ್ಯಾನಿಟೈಸಿಂಗ್, ಸಾಮಾಜಿಕ ಅಂತರ ಪಾಲನೆ, ಸುರಕ್ಷಾ ಮಾರ್ಗಸೂಚಿ ಉಲ್ಲಂಘನೆ, ದಂಡ ವಿಧಿಸುವಿಕೆ, ಕೋವಿಡ್ ಪಾಸಿಟಿವ್ ಬಂದರೆ ಆಸ್ಪತ್ರೆಗೆ ದಾಖಲಾಗುವುದು ಮುಂತಾದ ಬ್ಲಾಕ್‌ಗಳಿಗೆ ಹೋಗುತ್ತಾರೆ ಎಂದು ಕಶ್ಯಪ್ ತಿಳಿಸಿದರು.
