Asianet Suvarna News Asianet Suvarna News

ನೈಸ್‌ ಯೋಜನೆ ವಿವಾದಕ್ಕೆ ಮರುಜೀವ

ನೈಸ್ ಯೋಜನೆಯ ವಿವಾದಕ್ಕೆ ಇದೀಗ ಮರು ಜೀವ ಬಂದಿದೆ.ನೈಸ್‌ ಯೋಜನೆಗೆ ಸಂಬಂಧಿಸಿದಂತೆ ಸದನ ಸಮಿತಿ ನೀಡಿರುವ ವರದಿಯ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳಲು ರಾಜ್ಯ ಸರ್ಕಾರಕ್ಕೆ ಸೂಚಿಸುವುದಾಗಿ ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದ್ದಾರೆ.

Will Take Action Against NICE Report Says HD Deve Gowda
Author
Bengaluru, First Published Nov 24, 2018, 7:58 AM IST

ಬೆಂಗಳೂರು :  ದಶಕಗಳಿಂದ ರಾಜ್ಯ ರಾಜಕೀಯದಲ್ಲಿ ಆಗೊಮ್ಮೆ ಈಗೊಮ್ಮೆ ಸದ್ದು ಮಾಡುವ ನೈಸ್‌ (ನಂದಿ ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌) ಯೋಜನೆಯ ವಿವಾದಕ್ಕೆ ಈಗ ಮತ್ತೆ ಜೀವ ಬಂದಿದೆ. ನೈಸ್‌ ಯೋಜನೆಗೆ ಸಂಬಂಧಿಸಿದಂತೆ ಸದನ ಸಮಿತಿ ನೀಡಿರುವ ವರದಿಯ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳಲು ರಾಜ್ಯ ಸರ್ಕಾರಕ್ಕೆ ಸೂಚಿಸುವುದಾಗಿ ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದ್ದಾರೆ.

ಸರ್ಕಾರ ಸದ್ಯದಲ್ಲೇ ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಲಿದೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಮುಂದಿನ ವಿಚಾರಗಳ ಬಗ್ಗೆ ಮಾತನಾಡುತ್ತಾರೆ ಎಂದೂ ಅವರು ತಿಳಿಸಿದ್ದಾರೆ.

ಜೆಡಿಎಸ್‌ ಮತ್ತು ಕಾಂಗ್ರೆಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ದೇವೇಗೌಡರು ಇದೇ ಮೊದಲ ಬಾರಿಗೆ ನೈಸ್‌ ಯೋಜನೆ ಬಗ್ಗೆ ಪ್ರಸ್ತಾಪ ಮಾಡಿದ್ದು ಕುತೂಹಲಕರವಾಗಿದೆ.

ಇತ್ತೀಚೆಗಷ್ಟೇ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಸಿ.ಟಿ.ರವಿ ಅವರು ನೈಸ್‌ ವಿವಾದ ಕುರಿತ ಸದನ ಸಮಿತಿ ವರದಿ ಬಗ್ಗೆ ದೇವೇಗೌಡರು ಹಾಗೂ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮೌನ ವಹಿಸಿರುವ ಬಗ್ಗೆ ಲೇವಡಿ ಮಾಡಿದ್ದರು. ಅದರ ಬೆನ್ನಲ್ಲೇ ದೇವೇಗೌಡರು ಈ ವಿಷಯ ಪ್ರಸ್ತಾಪಿಸಿದ್ದಾರೆ.

ನೈಸ್‌ ‘ಸಂತ್ರಸ್ತರ’ ಅಹವಾಲು ಆಲಿಕೆ:  ಶುಕ್ರವಾರ ಬೆಂಗಳೂರಿನ ಹೊಸಕೆರೆಹಳ್ಳಿ ನೈಸ್‌ ರಸ್ತೆ ಸಮೀಪವಿರುವ ಹಾಗೂ ಯೋಜನೆಯ ವ್ಯಾಪ್ತಿಗೆ ಒಳಪಟ್ಟಜಮೀನು ಎನ್ನಲಾದ ಪ್ರಮೋದ್‌ ಬಡಾವಣೆಯು ನಿವಾಸಿಗಳು ಎದುರಿಸುತ್ತಿರುವ ಮೂಲ ಸೌಕರ್ಯಗಳ ಸಮಸ್ಯೆ ಆಲಿಸಲು ಶುಕ್ರವಾರ ದೇವೇಗೌಡರು ಖುದ್ದು ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯಶಂಕರ್‌ ಕೂಡ ಉಪಸ್ಥಿತರಿದ್ದರು.

ಕುಡಿಯುವ ನೀರಿನ ಸಮಸ್ಯೆ, ಅಸಮರ್ಪಕ ರಸ್ತೆ ಹಾಗೂ ನೈಸ್‌ ಮಾಲೀಕರು ಕೊಡುತ್ತಿದ್ದಾರೆ ಎನ್ನಲಾದ ಕಿರುಕುಳದ ಬಗ್ಗೆ ಅಲ್ಲಿನ ನಿವಾಸಿಗಳು ದೇವೇಗೌಡರ ಬಳಿ ಪ್ರಸ್ತಾಪಿಸಿದರು.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡರು, ‘ನೈಸ್‌ ವಿರುದ್ಧ ಹೋರಾಟ ಮಾಡಿ ಬಹಳ ದಿನವಾಗಿತ್ತು. ವಿಧಾನಸಭೆಯಲ್ಲಿ ಇದರ ಬಗ್ಗೆ ಸುಧೀರ್ಘ ಚರ್ಚೆ ಮಾಡಲು ಅವಕಾಶ ಕೋರಿದ್ದೆವು. ಬಹಳ ಚರ್ಚೆಯೂ ಆಗಿದೆ. ನೈಸ್‌ನಿಂದ ಅನ್ಯಾಯಕ್ಕೊಳಗಾದ ಜನರು ನನ್ನ ಬಳಿ ಬಂದಿದ್ದಾರೆ. ಪ್ರಮೋದ್‌ ಬಡಾವಣೆಯಲ್ಲಿ 17 ಎಕರೆ ಮತ್ತು ಹೊಸಕೆರೆಹಳ್ಳಿಯಲ್ಲಿ 50 ಎಕರೆ ಜಮೀನು ನೈಸ್‌ ರಸ್ತೆಗಾಗಿ ಸ್ವಾಧೀನ ಮಾಡಲಾಗಿತ್ತು. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಸ್ವಾಧೀನಗೊಂಡ ಭೂಮಿಗೆ ಪರ್ಯಾಯ ಜಾಗ ನೀಡಲು ಬರುವುದಿಲ್ಲ ಎಂದಿದ್ದರು. ಯಾವ ಯಾವ ಕಾಲದಲ್ಲಿ ಏನೇನು ಅಕ್ರಮ ನಡೆದಿದೆ ಎಂದು ನನಗೆ ತಿಳಿದಿದೆ. ಬೇರೆ ಬೇರೆ ಕಡೆ ಸಾಕಷ್ಟುಜಮೀನಿದೆ. ಸರ್ಕಾರಗಳು ಈ ವಿಚಾರದಲ್ಲಿ ವಿಳಂಬ ಮಾಡಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಯೋಜನೆಯ ವಿವಾದಕ್ಕೆ ಸಂಬಂಧಿಸಿದಂತೆ ಸದನ ಸಮಿತಿ ನೀಡಿರುವ ವರದಿಯ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳಲು ರಾಜ್ಯ ಸರ್ಕಾರಕ್ಕೆ ಸೂಚಿಸುತ್ತೇನೆ. ಸರ್ಕಾರ ಸದ್ಯದಲ್ಲೇ ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಲಿದೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಮುಂದಿನ ವಿಚಾರಗಳ ಬಗ್ಗೆ ಮಾತನಾಡುತ್ತಾರೆ’ ಎಂದು ತಿಳಿಸಿದರು.

ಸದನ ಸಮಿತಿಯ ವರದಿಯಲ್ಲೇನಿತ್ತು?:  ಬೆಂಗಳೂರಿನ ಆಚೆ ಹೊಸ ವರ್ತುಲ ರಸ್ತೆ ನಿರ್ಮಿಸಿರುವ ನೈಸ್‌ ಯೋಜನೆ ವಿರುದ್ಧ ಕೇಳಿಬಂದ ಆರೋಪಗಳ ಪರಾಮರ್ಶೆಗೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಟಿ.ಬಿ. ಜಯಚಂದ್ರ ನೇತೃತ್ವದ ಸದನ ಸಮಿತಿ ರಚನೆಯಾಗಿತ್ತು. ಸಮತಿ ಸಲ್ಲಿಸಿದ್ದ ವರದಿಯಲ್ಲಿ, ‘ನೈಸ್‌ ಯೋಜನೆಯಲ್ಲಿ ಅಕ್ರಮಗಳು ನಡೆದಿದ್ದು, ಅದರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಸೂಚಿಸಲಾಗಿತ್ತು. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ನೈಸ್‌ ಸಂಸ್ಥೆ ಮುಖ್ಯಸ್ಥ ಅಶೋಕ್‌ ಖೇಣಿ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸೇರಿದ್ದರು. ಈ ಹಿನ್ನೆಲೆಯಲ್ಲಿ ನೈಸ್‌ ವಿರುದ್ಧ ಕ್ರಮ ಜರುಗಿಸಬೇಕೆಂಬ ಸದನ ಸಮಿತಿ ವರದಿಗೆ ಧೂಳು ಹಿಡಿದಿತ್ತು.

ಇದೀಗ ನೈಸ್‌ ಖೇಣಿ ಇರುವ ಕಾಂಗ್ರೆಸ್‌ ಪಕ್ಷ ಹಾಗೂ ನೈಸ್‌ ವಿರುದ್ಧ ತೊಡೆತಟ್ಟಿದ್ದ ದೇವೇಗೌಡರ ಪಕ್ಷಗಳು ಒಟ್ಟಾಗಿ ಸರ್ಕಾರ ನಡೆಸುತ್ತಿದ್ದು, ಆ ಸಂಸ್ಥೆಯ ವಿರುದ್ಧ ದೋಸ್ತಿ ಸರ್ಕಾರ ಏನು ಕ್ರಮ ಜರುಗಿಸಲಿದೆ ಎಂಬುದು ಕುತೂಹಲಕಾರಿಯಾಗಿದೆ.

Follow Us:
Download App:
  • android
  • ios