ಬೆಂಗಳೂರು (ನ.24): ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಸ್ಥಗಿತಗೊಳಿಸಿದ್ದಕ್ಕೆ ಪರಿಹಾರವಾಗಿ ಕೇವಲ ಪಡಿತರ ನೀಡುವ ಸರ್ಕಾರದ ನಿರ್ಧಾರವನ್ನು ಒಪ್ಪದ ಹೈಕೋರ್ಟ್‌, ಪಡಿತರದ ಜೊತೆಗೆ ಭತ್ಯೆ ಸಹ ನೀಡಬೇಕಿದೆ ಎಂದು ಅಭಿಪ್ರಾಯಪಟ್ಟಿದೆ.

ಲಾಕ್‌ಡೌನ್‌ನಿಂದಾಗಿ ಸಾರ್ವಜನಿಕರಿಗೆ ಉಂಟಾದ ಅನಾನುಕೂಲತೆ ಬಗೆಹರಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು. ಆ ಬಗ್ಗೆ ಸೋಮವಾರದೊಳಗೆ ನಿಲುವು ತಿಳಿಸುವಂತೆ ಸರ್ಕಾರಕ್ಕೆ ಸೂಚಿಸಿ ವಿಚಾರಣೆ ಮುಂದೂಡಿತು. ಅರ್ಜಿಯ ಕಳೆದ ವಿಚಾರಣೆ ವೇಳೆ, ಇಷ್ಟುದಿನ ಊಟ ಪೂರೈಸದ ಹಿನ್ನೆಲೆಯಲ್ಲಿ ಒಟ್ಟಿಗೆ ಮಕ್ಕಳಿಗೆ ಹೇಗೆ ಆಹಾರ ತಲುಪಿಸಲಾಗುತ್ತದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಸರ್ಕಾರಕ್ಕೆ ನ್ಯಾಯಪೀಠ ನಿರ್ದೇಶಿಸಿತ್ತು.

ಇಷ್ಟು ದಿನದ ಬಿಸಿಯೂಟವನ್ನು ಮಕ್ಕಳಿಗೆ ಹೇಗೆ ತಲುಪಿಸುತ್ತೀರಿ?: ಹೈಕೋರ್ಟ್‌ .

ಅರ್ಜಿ ಮತ್ತೆ ಸೋಮವಾರ ವಿಚಾರಣೆಗೆ ಬಂದಾಗ ಸರ್ಕಾರಿ ವಕೀಲರು, ಜುಲೈನಿಂದ ಬಿಸಿಯೂಟ ವಿತರಣೆ ಸ್ಥಗಿತಗೊಳಿಸಿರುವುದರಿಂದ ಅಷ್ಟೂದಿನಕ್ಕೂ ಮಕ್ಕಳಿಗೆ ಪಡಿತರ ವಿತರಣೆ ಮಾಡಲಾಗುತ್ತದೆ. ಶಾಲಾ ದಾಖಲಾತಿ-ಹಾಜರಾತಿ ಪುಸ್ತಕಗಳಿಂದ ವಿದ್ಯಾರ್ಥಿಗಳು ಮತ್ತು ಪೋಷಕರ ಮಾಹಿತಿ ಸಂಗ್ರಹಿಸಿ ಪಡಿತರ ವಿತರಿಸಲಾಗುತ್ತದೆ. ವಾಟ್ಸ್‌ ಅಪ್‌ ಗ್ರೂಪ್‌ ಹಾಗೂ ಪೋನ್‌ ನಂಬರ್‌ಗಳ ಮೂಲಕ ಆಹಾರಧಾನ್ಯ ಸಂಗ್ರಹಿಸಿಕೊಳ್ಳಲು ಮಾಹಿತಿ ನೀಡಲಾಗುವುದು ಎಂದು ತಿಳಿಸಿ ಪ್ರಮಾಣ ಪತ್ರ ಸಲ್ಲಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಮಕ್ಕಳಿಗೆ ಊಟ ನೀಡದೆ ಅವರಿಗೆ ಸಂವಿಧಾನದತ್ತವಾಗಿ ಲಭಿಸಿದ ಮೂಲಭೂತ ಹಕ್ಕನ್ನು ಸರ್ಕಾರ ಉಲ್ಲಂಘಿಸಿದೆ. ಹೀಗಾಗಿ, ಕೇವಲ ಮಕ್ಕಳಿಗೆ ಪಡಿತರ ವಿತರಣೆ ಮಾಡದೇ ಜೊತೆಗೆ ಭತ್ಯೆಯನ್ನೂ ಸಹ ನೀಡಬೇಕು ಎಂದು ಅಭಿಪ್ರಾಯಪಟ್ಟಿತು.

ಪ್ರಮಾಣ ಪತ್ರದಲ್ಲಿ ಏನಿದೆ?:  ಜೂನ್‌-ಜುಲೈ ಅವಧಿಯ 53 ದಿನಗಳ ಪಡಿತರ ನವೆಂಬರ್‌ ತಿಂಗಳಲ್ಲಿ, ಆಗಸ್ಟ್‌ನಿಂದ ಅಕ್ಟೋಬರ್‌ವರೆಗಿನ 55 ದಿನಗಳ ಪಡಿತರ ಡಿಸೆಂಬರ್‌ನಲ್ಲಿ, ನವೆಂಬರ್‌-ಡಿಸೆಂಬರ್‌ ತಿಂಗಳ 49 ದಿನಗಳ ಪಡಿತರ 2021ರ ಜನವರಿಯಲ್ಲಿ, 2021ರ ಜನವರಿ ಮತ್ತು ಫೆಬ್ರವರಿ ತಿಂಗಳ 49 ದಿನಗಳ ಪಡಿತರವನ್ನು ಫೆಬ್ರವರಿ 2021ರಲ್ಲಿ ಹಾಗೂ ಮಾಚ್‌ರ್‍ ಮತ್ತು ಏಪ್ರಿಲ್‌ 2021ರ 34 ದಿನಗಳ ಪಡಿತರವನ್ನು ಮಾಚ್‌ರ್‍ ತಿಂಗಳಲ್ಲಿ ವಿತರಿಸಲಾಗುವುದು ಎಂದು ತಿಳಿಸಿದರು.

ಅಲ್ಲದೆ, ಮಧ್ಯಾಹ್ನ ಬಿಸಿಯೂಟ ಯೋಜನೆ ಅಡಿ ಪ್ರಾಥಮಿಕ ಶಾಲೆಯ 1 ರಿಂದ 5ನೇ ತರಗತಿವರೆಗಿನ ಮಕ್ಕಳಿಗೆ ಪ್ರತಿ ದಿನ 100 ಗ್ರಾಂ ಅಕ್ಕಿ ಮತ್ತು ಗೋಧಿ, 6 ರಿಂದ 8ನೇ ತರಗತಿ ವರೆಗಿನ ಮಕ್ಕಳಿಗೆ 7.45 ರು. ಮೊತ್ತದ 150 ಗ್ರಾಂ. ಅಕ್ಕಿ ಮತ್ತು ಗೋಧಿ ಹಾಗೂ 9 ಮತ್ತು 10ನೇ ತರಗತಿಯ ಮಕ್ಕಳಿಗೆ 7.45 ರು. ಮೌಲ್ಯದ 150 ಗ್ರಾಂ ಅಕ್ಕಿ ವಿತರಿಸಲಾಗುವುದು. 1 ರಿಂದ 5ನೇ ತರಗತಿ ವರೆಗಿನ ಮಕ್ಕಳಿಗೆ 4.5 ಕೆ.ಜಿ. ಅಕ್ಕಿ, ಗೋಧಿ ಮತ್ತು ಬೇಳೆ ವಿತರಿಸಲಾಗುವುದು. ಅಗತ್ಯ ಆಹಾರದ ಜೊತೆಗೆ ರಾಜ್ಯದಲ್ಲಿ ಅಡುಗೆ ಮಾಡುವ ವೆಚ್ಚವನ್ನು ಪ್ರತಿ ಮಕ್ಕಳಿಗೂ ಒದಗಿಸಲಾಗುವುದು ಎಂದು ಸರ್ಕಾರ ಪ್ರಮಾಣ ಪತ್ರದಲ್ಲಿ ತಿಳಿಸಿದೆ.