Asianet Suvarna News Asianet Suvarna News

Karnataka Bandh: ಡಿ.31ರ ಕರ್ನಾಟಕ ಬಂದ್‌ಗೆ ಬೆಂಬಲ ಇಲ್ಲ, ಕರವೇ ಅಧ್ಯಕ್ಷ ನಾರಾಯಣಗೌಡ ಸ್ಪಷ್ಟನೆ

* ಬೆಳಗಾವಿಯಲ್ಲಿ ಪದೇ ಪದೇ ಎಂಇಎಸ್ ಪುಂಡಾಟ
* ಇದನ್ನ ವಿರೋಧಿ ಕರ್ನಾಟಕ ಬಂದ್‌ಗೆ ಕರೆ ಕೊಟ್ಟ ಕನ್ನಡ ಸಂಘಟನೆಗಳು
* ಕರ್ನಾಟಕ ಬಂದ್‌ಗೆ ಬೆಂಬಲ ಇಲ್ಲ ಎಂದ ಕರವೇ

will Not support To Karnataka Bandh On Dec 31 Says karave narayana gowda rbj
Author
Bengaluru, First Published Dec 22, 2021, 4:37 PM IST

ಬೆಂಗಳೂರು, (ಡಿ.22):  ಎಂಇಎಸ್ (MES) ದಬ್ಬಾಳಿಕೆ, ಪುಂಡಾಟಿಕೆ ವಿರೋಧಿಸಿ ಡಿಸೆಂಬರ್ 31ರಂದು ಕರ್ನಾಟಕ ಬಂದ್‌ಗೆ (Karnataka Bandh) ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ (Vattal Nagaraj) ಕರೆ ಕೊಟ್ಟಿದ್ದಾರೆ.

ಡಿಸೆಂಬರ್ 31ರಂದು ಬೆಳಿಗ್ಗೆ 6 ರಿಂದ ಸಂಜೆ 6 ರ ವರೆಗೆ ಕರ್ನಾಟಕ ಬಂದ್ ಆಗಲಿದೆ. ತುರ್ತುಸೇವೆಗಳನ್ನು ಹೊರತುಪಡಿಸಿ ಎಲ್ಲ ಕಡೆ ಬಂದ್ ಆಗಬೇಕು. ಪಕ್ಷಾತೀತವಾಗಿ ಎಲ್ಲರೂ ಕರ್ನಾಟಕ ಬಂದ್ ಬೆಂಬಲಿಸಬೇಕು ಎಂದು ವಾಟಾಳ್ ನಾಗರಾಜ್ ಮನವಿ ಮಾಡಿದ್ದಾರೆ.

ಇದಕ್ಕೆ ಓಲಾ, ಉಬರ್,ಬೀದಿ, ರೈತ ಸಂಘಟನೆ ಸೇರಿದಂತೆ ಇತರೆ ಕನ್ನಡ ಪರ ಸಂಘಷನೆಗಳು (Kannada Organisations) ಬೆಂಬಲಿಸಿವೆ, ಆದ್ರೆ, ಕರ್ನಾಟಕ ರಕ್ಷಣಾ‌ ವೇದಿಕೆ(ಕರವೇ) (Karnataka Rakshana Vedike) ಕರ್ನಾಟಕ ಬಂದ್‌ಗೆ ಬೆಂಬಲ ಇಲ್ಲ ಎಂದು ಘೋಷಣೆ ಮಾಡಿದೆ.

Karnataka Bandh : ಡಿ.31 ಕರ್ನಾಟಕ ಬಂದ್‌- ಕನ್ನಡಿಗರೇ ಬೆಂಬಲಿಸಿ

ಬಂದ್‌ಗೆ ಕರವೇ ಬೆಂಬಲ ಇಲ್ಲ
ಹೌದು....ಡಿ.31ರ ಕರ್ನಾಟಕ ಬಂದ್‌ಗೆ ಕರ್ನಾಟಕ ರಕ್ಷಣಾ ವೇದಿಕೆ  ಬೆಂಬಲ ಇರುವುದಿಲ್ಲ ಎಂದು ಅಧ್ಯಕ್ಷ ಟಿ.ಎ ನಾರಾಯಣ ಗೌಡ (TA Narayana Gowda) ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ವಿವರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದು, ಅದು ಈ ಕೆಳಗಿನಂತಿದೆ.

ಡಿಸೆಂಬರ್ 31ರಂದು ಕೆಲವು ಕನ್ನಡ ಸಂಘಟನೆಗಳು ಕರೆದಿರುವ ಕರ್ನಾಟಕ ಬಂದ್ ಗೆ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲ ಇರುವುದಿಲ್ಲ. ಡಿಸೆಂಬರ್ 31 ರಂದು ಕರ್ನಾಟಕ ರಕ್ಷಣಾ‌ ವೇದಿಕೆಯ ಕಾರ್ಯಕರ್ತರು ಬಂದ್ ನಲ್ಲಿ ಪಾಲ್ಗೊಳ್ಳುವುದಿಲ್ಲ. ಎಂಇಎಸ್ ಮತ್ತು ಶಿವಸೇನೆಗಳ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ.

ಇಂದು ಕೆಲವು ಸಂಘಟನೆಗಳು ನಡೆಸಿದ ಸಭೆಯಲ್ಲಿ ನಾನು ಪಾಲ್ಗೊಂಡಿರಲಿಲ್ಲ, ನನಗೆ ಆಹ್ವಾನವೂ ಇರಲಿಲ್ಲ. ವಾಟಾಳ್ ನಾಗರಾಜ್ ಅವರು ಹಿರಿಯರು, ಅವರ ಕುರಿತು ನನಗೆ ಅಪಾರವಾದ ಗೌರವವಿದೆ. ಆದರೆ ದಿಢೀರನೆ ಬಂದ್ ಗಳಿಗೆ ಕರೆ ನೀಡಿದರೆ ಅದನ್ನು ಬೆಂಬಲಿಸಲು ಸಾಧ್ಯವಿಲ್ಲ. 

ಕಳೆದ ಎರಡು ವರ್ಷಗಳಿಂದ ಕೋವಿಡ್ ನಿಂದಾಗಿ ರಾಜ್ಯದ ಜನರು ನೊಂದು ನಲುಗಿದ್ದಾರೆ. ಸರ್ಕಾರವೇ ನೂರಾರು ದಿನಗಳ ಲಾಕ್ ಡೌನ್ ಹೇರಿದ ಪರಿಣಾಮವಾಗಿ ಜನಸಾಮಾನ್ಯರು ಸಾಕಷ್ಟು ಸಮಸ್ಯೆ ಎದುರಿಸಿದ್ದಾರೆ. ಇಂಥ ಸಂದರ್ಭದಲ್ಲಿ ಬಂದ್ ಕರೆ ನೀಡುವುದು ಎಷ್ಟು ಸರಿ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಿದೆ. 

ಕರ್ನಾಟಕ ರಕ್ಷಣಾ‌ ವೇದಿಕೆ ಮೊದಲಿನಿಂದಲೂ ಈ ಬಗೆಯ ದಿಢೀರ್ ಬಂದ್ ಕರೆಗಳಿಂದ ದೂರ ಉಳಿಯುತ್ತ ಬಂದಿದೆ. ಬಂದ್ ಎಲ್ಲ ಸಮಸ್ಯೆಗಳಿಗೂ ಪರಿಹಾರವಲ್ಲ, ಅದೊಂದೇ‌ ಚಳವಳಿಯ ಮಾರ್ಗವಲ್ಲ. ಬಂದ್ ಚಳವಳಿಯ ಕೊನೆಯ ಅಸ್ತ್ರವಾಗಬೇಕು ಎಂಬುದು ನಮ್ಮ ನಿಲುವು. 

ಕರ್ನಾಟಕ ರಕ್ಷಣಾ ವೇದಿಕೆ ಕರ್ನಾಟಕದಾದ್ಯಂತ ಭಯೋತ್ಪಾದಕ ಸಂಘಟನೆಗಳಂತೆ ಕಾರ್ಯನಿರ್ವಹಿಸುತ್ತಿರುವ ಎಂಇಎಸ್ ಮತ್ತು ಶಿವಸೇನೆಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸತತ ಹೋರಾಟಗಳನ್ನು ನಡೆಸಿಕೊಂಡುಬಂದಿದೆ. ಮುಂದೆಯೂ ಈ ಚಳವಳಿ ಮುಂದುವರೆಯಲಿದೆ. 

ಎಂಇಎಸ್ ಮತ್ತು ಶಿವಸೇನೆ ನಿಷೇಧಿಸಲು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಡಿಸೆಂಬರ್ 28ರಂದು ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಗು ಡಿ. 30 ರಂದು  'ರಾಜಭವನ ಮುತ್ತಿಗೆ' ಕಾರ್ಯಕ್ರಮ ಹಮ್ಮಿಕೊಳ್ಳಲಿದೆ. ಈ ಸಂಘಟನೆಗಳನ್ನು ನಿಷೇಧಿಸಲು ಅಗತ್ಯವಾಗಿರುವ ಎಲ್ಲ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮೇಲೆ ಒತ್ತಡವನ್ನು ಹೇರಲಿದ್ದೇವೆ ಎಂದು ನಾರಾಯಣಗೌಡ ತಿಳಿಸಿದ್ದಾರೆ.

Follow Us:
Download App:
  • android
  • ios