Asianet Suvarna News Asianet Suvarna News

ವನ್ಯಜೀವಿ ರಕ್ಷಣೆ: ಸಿಎಂಗೆ ರಿಷಬ್‌ ಶೆಟ್ಟಿ 22 ಅಂಶಗಳ ಮನವಿ

ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಕಾಡಂಚಿನ ಗ್ರಾಮಗಳ ಜನರ ಸಮಸ್ಯೆಗಳ ನಿವಾರಣೆ ಮತ್ತು ವನ್ಯಜೀವಿ ಸಂರಕ್ಷಣೆಗಾಗಿ ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ಮತ್ತು ‘ಕನ್ನಡಪ್ರಭ’ ನಡೆಸುತ್ತಿರುವ ‘ವನ್ಯಜೀವಿ ಸಂರಕ್ಷಣಾ ಅಭಿಯಾನ’ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಥ್‌ ನೀಡಿದ್ದು, ಅಭಿಯಾನದ ಸಂದರ್ಭದಲ್ಲಿ ಕಂಡುಬಂದ ಸಮಸ್ಯೆಗಳಿಗೆ ಪರಿಹಾರ ನೀಡಲು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಹಾಗೂ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳ ಜತೆಗೆ ಸಭೆ ನಡೆಸುವುದಾಗಿ ಭರವಸೆ ನೀಡಿದರು.

Wildlife protection Actor Rishabh shetty 22 point appeal to CM siddaramaiah at bengaluru rav
Author
First Published Aug 26, 2023, 9:53 PM IST

ಬೆಂಗಳೂರು (ಆ.26) :  ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಕಾಡಂಚಿನ ಗ್ರಾಮಗಳ ಜನರ ಸಮಸ್ಯೆಗಳ ನಿವಾರಣೆ ಮತ್ತು ವನ್ಯಜೀವಿ ಸಂರಕ್ಷಣೆಗಾಗಿ ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ಮತ್ತು ‘ಕನ್ನಡಪ್ರಭ’ ನಡೆಸುತ್ತಿರುವ ‘ವನ್ಯಜೀವಿ ಸಂರಕ್ಷಣಾ ಅಭಿಯಾನ’ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಥ್‌ ನೀಡಿದ್ದು, ಅಭಿಯಾನದ ಸಂದರ್ಭದಲ್ಲಿ ಕಂಡುಬಂದ ಸಮಸ್ಯೆಗಳಿಗೆ ಪರಿಹಾರ ನೀಡಲು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಹಾಗೂ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳ ಜತೆಗೆ ಸಭೆ ನಡೆಸುವುದಾಗಿ ಭರವಸೆ ನೀಡಿದರು.

‘ವನ್ಯಜೀವಿ ಸಂರಕ್ಷಣಾ ಅಭಿಯಾನ’(Wildlife Conservation Campaign)ದ ರಾಯಭಾರಿಯಾದ ಖ್ಯಾತ ನಟ, ನಿರ್ದೇಶಕ ರಿಷಬ್‌ ಶೆಟ್ಟಿ(Rishab shetty)ಅವರು ಶನಿವಾರ ವಿಧಾನಸೌಧದ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಸಿದ್ದರಾಮಯ್ಯ (Rishab shetty met cm siddaramaiah)ಅವರನ್ನು ಭೇಟಿಯಾಗಿ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಕಾಡಂಚಿನ ಗ್ರಾಮಗಳ ಜನರ ಸಮಸ್ಯೆಗಳನ್ನು ಒಳಗೊಂಡ 22 ಅಂಶಗಳ ಮನವಿ ಪತ್ರ ಸಲ್ಲಿಸಿದರು. ಈ ವೇಳೆ ‘ವನ್ಯಜೀವಿ ಸಂರಕ್ಷಣಾ ಅಭಿಯಾನ’ದ ಅಂಗವಾಗಿ ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿ ಹಾಗೂ ಕಾಡಂಚಿನ ಗ್ರಾಮಗಳ ಜನರ ಜತೆಗೆ ನಡೆಸಿದ ಸಂವಾದದ ಸಂದರ್ಭದಲ್ಲಿ ಗಮನಕ್ಕೆ ಬಂದ ಸಮಸ್ಯೆಗಳು, ಸಲಹೆಗಳ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆಯಲಾಯಿತು.

ರಿಷಬ್‌ ಶೆಟ್ಟಿಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ಮತ್ತು ‘ಕನ್ನಡಪ್ರಭ’(Asianet suvarna news and kannadaprabha) ವನ್ಯಜೀವಿ ಸಂರಕ್ಷಣಾ ಅಭಿಯಾನ ನಡೆಸುವ ಮೂಲಕ ಅರಣ್ಯ ಪ್ರದೇಶದಲ್ಲಿನ ಸಮಸ್ಯೆಗಳನ್ನು ಅರಿಯಲು ಸಹಕಾರಿಯಾಗಿದೆ. ವನ್ಯಜೀವಿ ಸಂರಕ್ಷಣೆಗೆ ಸಂಬಂಧಿಸಿದಂತೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ. ಜತೆಗೆ ‘ವನ್ಯಜೀವಿ ಸಂರಕ್ಷಣಾ ಅಭಿಯಾನ’ದ ಸಮಯದಲ್ಲಿ ಕಂಡುಬಂದ ಸಮಸ್ಯೆಗಳ ಬಗ್ಗೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಹಾರ ಕ್ರಮಗಳನ್ನು ಕಂಡುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ಮತ್ತು ‘ಕನ್ನಡಪ್ರಭ’ದ ಪ್ರಧಾನ ಸಂಪಾದಕ ರವಿ ಹೆಗಡೆ, ಪುರವಣಿ ಸಂಪಾದಕ ಗಿರೀಶ್‌ ಹತ್ವಾರ್‌, ಸಹಾಯಕ ಸಂಪಾದಕ ವಿನೋದ್‌ ಬಿ.ನಾಯಕ್‌ ಇದ್ದರು.

ಸಿಎಂಗೆ ಗಮನಸೆಳೆದ 22 ಅಂಶಗಳು:

‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ಮತ್ತು ‘ಕನ್ನಡಪ್ರಭ’ ಕಳೆದ ನಾಲ್ಕು ವರ್ಷಗಳಿಂದ ‘ವನ್ಯಜೀವಿ ಸಂರಕ್ಷಣಾ ಅಭಿಯಾನ’ ನಡೆಸುತ್ತಿವೆ. ಅಭಿಯಾನದ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿ, ಕಾಡಂಚಿನ ಗ್ರಾಮಗಳಲ್ಲಿನ ಜನರೊಂದಿಗೆ ಸಂವಾದ ನಡೆಸಿ ಅವರಿಗಿರುವ ನೈಜ ಸಮಸ್ಯೆಗಳನ್ನು ಅರಿಯುವ ಕೆಲಸ ಮಾಡಲಾಗುತ್ತಿದೆ. ಆ ಪ್ರಕಾರ ಅಭಿಯಾನದ ಸಂದರ್ಭದಲ್ಲಿ ಕಂಡು ಬಂದ ಸಮಸ್ಯೆಗಳು, ಸಲಹೆಗಳನ್ನಾಧರಿಸಿ 22 ಅಂಶಗಳ ಬೇಡಿಕೆ ಪಟ್ಟಿಯನ್ನು ಸಿದ್ಧಪಡಿಸಿ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದೆ.

ಮನವಿ ಪತ್ರದಲ್ಲಿ ಯಾವ ಇಲಾಖೆ ಮತ್ತು ಯಾವ ಹಂತದ ಅಧಿಕಾರಿಗಳಿಂದ ಸಮಸ್ಯೆ ಪರಿಹಾರವಾಗಲಿದೆ ಎಂಬುದನ್ನೂ ಉಲ್ಲೇಖಿಸಲಾಗಿದೆ. ಸಮಸ್ಯೆ ಬಗೆಹರಿಸಲು ಅಥವಾ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಅನುಕೂಲವಾಗುವಂತೆ ಪಟ್ಟಿಸಿದ್ಧಪಡಿಸಿ ನೀಡಲಾಗಿದೆ.

ಸಮಸ್ಯೆ ಮತ್ತು ಪರಿಹಾರ:

ಪ್ರಮುಖವಾಗಿ ಕಳ್ಳಬೇಟೆ ತಡೆ ಶಿಬಿರಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ದಿನವೊಂದಕ್ಕೆ ಪಡಿತರಕ್ಕಾಗಿ 130 ರು. ನೀಡಬೇಕು, ಈ ಪ್ರಮಾಣವನ್ನು ಪ್ರತಿ ವರ್ಷ ಅಥವಾ ಎರಡು ವರ್ಷಕ್ಕೊಮ್ಮೆ ಹೆಚ್ಚಿಸಬೇಕು. ಭಾನುವಾರ ಕೆಲಸ ಮಾಡುವ ಅರಣ್ಯ ಇಲಾಖೆ ಸಿಬ್ಬಂದಿಗೆ ದಿನದ ಭತ್ಯೆ 30 ರು. ನೀಡಲಾಗುತ್ತಿದೆ. ಅದೇ ಪೊಲೀಸ್‌ ಇಲಾಖೆಯಲ್ಲಿ ಆ ಮೊತ್ತ 500 ರು.ನಿಗದಿ ಮಾಡಲಾಗಿದೆ. ಹೀಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ದಿನದ ಭತ್ಯೆ ಹೆಚ್ಚಿಸಬೇಕು. ಪೊಲೀಸ್‌ ಕ್ಯಾಂಟೀನ್‌ ಮತ್ತು ಮಿಲಿಟರಿ ಕ್ಯಾಂಟೀನ್‌ ಮಾದರಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕುಟುಂಬಕ್ಕೂ ಕಡಿಮೆ ದರದಲ್ಲಿ ಪಡಿತರ ಸಿಗುವಂತೆ ಮಾಡಲು ಅರಣ್ಯ ಕ್ಯಾಂಟೀನ್‌ ಆರಂಭಿಸಬೇಕು ಅಥವಾ ಪೊಲೀಸ್‌ ಕ್ಯಾಂಟೀನ್‌ಗಳಲ್ಲೇ ಅರಣ್ಯ ಸಿಬ್ಬಂದಿಗೂ ಪಡಿತರ ವಿತರಣೆ ಮಾಡಬೇಕು.

ದಿನದ 24 ಗಂಟೆಯೂ ಕರ್ತವ್ಯ ನಿರ್ವಹಿಸುವ ಅರಣ್ಯ ಇಲಾಖೆ ಹೊರಗುತ್ತಿಗೆ ಸಿಬ್ಬಂದಿಗೆ ಮಾಸಿಕ 26 ದಿನಗಳ ಬದಲಿಗೆ 30 ದಿನಗಳ ವೇತನ ಪಾವತಿಸಬೇಕು. ಗುತ್ತಿಗೆ ಸಿಬ್ಬಂದಿಗೆ ಸಮರ್ಪಕವಾಗಿ ಇಎಸ್‌ಐ ಮತ್ತು ಭವಿಷ್ಯ ನಿಧಿ ಸೌಲಭ್ಯ ದೊರೆಯುವಂತೆ ಮಾಡಬೇಕು.

ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಕಾಡಂಚಿನ ಗ್ರಾಮಗಳ ಸಮೀಪ ಅಥವಾ ಕಾಡಿನ ಸಮೀಪ ಸಾಕಾನೆ ಶಿಬಿರಗಳನ್ನು ನಿರ್ಮಿಸಬೇಕು. ಕಾಡಂಚಿನ ಗ್ರಾಮಗಳಲ್ಲಿ ರಾತ್ರಿ ಮಾತ್ರ ನೀಡಲಾಗುವ ತ್ರೀ (3) ಫೇಸ್‌ ವಿದ್ಯುತ್ತನ್ನು ಹಗಲು ಹೊತ್ತಿನಲ್ಲಿ 3ರಿಂದ 5 ಗಂಟೆಗಳ ಕಾಲ ಕಡ್ಡಾಯ ಪೂರೈಕೆ ಮಾಡಬೇಕು. ಅದರಿಂದ ರೈತರು ರಾತ್ರಿ ಹೊತ್ತು ತಮ್ಮ ಜಮೀನಿಗೆ ನೀರು ಹಾಯಿಸಲು ಹೋಗುವುದು ತಪ್ಪುತ್ತದೆ. ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಿರುವ ಜಿಲ್ಲೆಗಳಲ್ಲಿ ಅರಣ್ಯ, ಪೊಲೀಸ್‌ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳನ್ನೊಳಗೊಂಡ ಶಾಶ್ವತ ಟಾಸ್‌್ಕಫೋರ್ಸ್‌ ರಚಿಸಬೇಕು.

ವನ್ಯಜೀವಿ ವಲಯಗಳಲ್ಲಿ ಸಿಬ್ಬಂದಿಗೆ ವಸತಿ ಸೌಲಭ್ಯ ಹಾಗೂ ಸಿಬ್ಬಂದಿ ಮಕ್ಕಳಿಗೆ ವನ್ಯಜೀವಿ ವಿಭಾಗದ ವೃತ್ತಗಳಲ್ಲಿ ವಸತಿ ಶಾಲೆ ಆರಂಭಿಸಬೇಕು. ವನ್ಯಜೀವಿ ವಿಭಾಗಕ್ಕೆ ಕಾಯಂ ಪಶು ವೈದ್ಯರನ್ನು ನೇಮಿಸಬೇಕು. ಬೇರೆ ಇಲಾಖೆಗೆ ಹೋಲಿಸಿದರೆ ಅರಣ್ಯ ಇಲಾಖೆ ಸಿಬ್ಬಂದಿ, ಅಧಿಕಾರಿಗಳಿಗೆ ವೇತನ ಕಡಿಮೆಯಿದ್ದು, ಆ ತಾರತಮ್ಯ ನಿವಾರಿಸಲು ಕ್ರಮ ಕೈಗೊಳ್ಳಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಪಟ್ಟಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದೆ.

ಪ್ರಮುಖ ಅಂಶಗಳು

1. ಕಳ್ಳಬೇಟೆ ತಡೆ ಶಿಬಿರಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ದಿನವೊಂದಕ್ಕೆ ಪಡಿತರಕ್ಕಾಗಿ 130 ರು. ನೀಡಬೇಕು

2. ಭಾನುವಾರ ಕೆಲಸ ಮಾಡುವ ಅರಣ್ಯ ಇಲಾಖೆ ಸಿಬ್ಬಂದಿಗೆ ದಿನದ ಭತ್ಯೆ 30 ರು. ಬದಲು 500 ರು. ನೀಡಬೇಕು

3. ಪೊಲೀಸ್‌ ಕ್ಯಾಂಟೀನ್‌ ರೀತಿ ಅರಣ್ಯ ಸಿಬ್ಬಂದಿಗೂ ಕ್ಯಾಂಟೀನ್‌ ಆರಂಭಿಸಿ ಕಡಿಮೆ ದರದಲ್ಲಿ ಪಡಿತರ ನೀಡಬೇಕು

4. ಮಾನವ-ವನ್ಯಜೀವಿ ಸಂಘರ್ಷ ತಪ್ಪಿಸಲು ಕಾಡಂಚಿನ ಗ್ರಾಮಗಳ ಬಳಿ ಆನೆ ಶಿಬಿರಗಳನ್ನು ಆರಂಭಿಸಬೇಕು

5. ಕಾಡಂಚಿನ ಗ್ರಾಮಗಳಲ್ಲಿ ರಾತ್ರಿ ಹೊತ್ತು ತ್ರೀಫೇಸ್‌ ವಿದ್ಯುತ್‌ ನೀಡುವ ಬದಲು ಹಗಲು ಹೊತ್ತಲ್ಲೇ ನೀಡಬೇಕು

ಸಿಎಂ ಸಕಾರಾತ್ಮಕ ಸ್ಪಂದನೆ

ವನ್ಯಜೀವಿ ಸಂರಕ್ಷಣಾ ಅಭಿಯಾನದ ಅಂಗವಾಗಿ ಅರಣ್ಯ ಇಲಾಖೆಯ ಸಂರಕ್ಷಿತಾರಣ್ಯ ಸೇರಿದಂತೆ 8 ವಿಭಾಗಗಳಿಗೆ ತೆರಳಿ ಕಾಡಂಚಿನ ಜನರು, ಅರಣ್ಯ ಇಲಾಖೆ ಸಿಬ್ಬಂದಿ ಸಮಸ್ಯೆಗಳನ್ನು ಗಮನಿಸಿ ಅದನ್ನು ಪಟ್ಟಿಮಾಡಿ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದೇವೆ. 22 ಅಂಶಗಳ ಪಟ್ಟಿಯಲ್ಲಿ ವನ್ಯಜೀವಿ ಸಂರಕ್ಷಣೆಯ ಜತೆಗೆ ಕಾಡಂಚಿನ ಜನರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗೆ ನೆರವಾಗುವಂಥದ್ದಿವೆ. ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.

-ರಿಷಬ್‌ ಶೆಟ್ಟಿ, ವನ್ಯಜೀವಿ ಸಂರಕ್ಷಣಾ ಅಭಿಯಾನದ ರಾಯಭಾರಿ, ನಟ-ನಿರ್ದೇಶಕ

Follow Us:
Download App:
  • android
  • ios