ಅರ್ಜುನ ಆನೆಗೆ ಗುಂಡು ಬಿತ್ತಾ.? ಸಾವಿನ ವಿವಾದಕ್ಕೆ ಸ್ಪಷ್ಟನೆ ಕೊಟ್ಟ ವೈದ್ಯ ರಮೇಶ್!
ಅರಣ್ಯಾಧಿಕಾರಿಗಳ ಗುಂಡೇಟಿನಿಂದ ಅರ್ಜುನ ಆನೆ ಸಾವನ್ನಪ್ಪಿದೆ ಎಂಬ ವಿವಾದದ ಬಗ್ಗೆ ಕಾರ್ಯಾಚರಣೆಯಲ್ಲಿ ತೊಡಗಿದ್ದ ವನ್ಯಜೀವಿ ವೈದ್ಯ ರಮೇಶ್ ಸ್ಪಷ್ಟೀಕರಣ ನೀಡಿದ್ದಾರೆ.
ಹಾಸನ (ಡಿ.10): ಮೈಸೂರು ದಸರಾದ 750 ಕೆ.ಜಿ. ಅಂಬಾರಿಯನ್ನು 8 ಬಾರಿ ಹೊತ್ತು ನಿವೃತ್ತಿ ಹೊಂದಿದ್ದ ಅರ್ಜುನ ಆನೆಯು ಕಾಡಾನೆ ಕಾರ್ಯಾಚರಣೆ ವೇಳೆ ಅರಣ್ಯಾಧಿಕಾರಿಗಳ ಗುಂಡೇಟಿಗೆ ಸಾವನ್ನಪ್ಪಿದೆ ಎಂದು ವಿವಾದ ಸೃಷ್ಟಿಯಾಗಿದೆ. ಆದರೆ, ವಿವಾದದ ಬಗ್ಗೆ ಅರ್ಜುನ ಆನೆಯ ಮೇಲೆ ಕುಳಿತು ಕಾರ್ಯಾಚರಣೆಯಲ್ಲಿ ತೊಡಗಿದ್ದ ವನ್ಯಜೀವಿ ವೈದ್ಯ ರಮೇಶ್ ಅರ್ಜುನ ಆನೆಯ ಸಾವಿನ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ.
ಅರಣ್ಯ ಸಚಿವ ಈಶ್ವರ ಖಂಡ್ರೆ ಅವರೊಂದಿಗೆ ಅರ್ಜುನ ಆನೆಯ ಸಮಾಧಿ ಸ್ಥಳಕ್ಕೆ ಬಂದು ಪೂಜಾ ಕಾರ್ಯದಲ್ಲಿ ತೊಡಗಿದ್ದ ವನ್ಯಜೀವಿ ವೈದ್ಯ ರಮೇಶ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಅರ್ಜುನ ಆನೆ ಸಾವಿನ ಸುತ್ತ ಇದ್ದ ವಿವಾದಗಳಿಗೆ ತೆರೆ ಎಳೆಯುವ ಪ್ರಯತ್ನವನ್ನು ಮಾಡಿದ್ದಾರೆ. ಅರ್ಜುನ ಆನೆಯೊಂದಿಗೆ ಕಾಡಾನೆಯ ಕಾರ್ಯಾಚರಣೆಗೆ ತೆರಳಿದ್ದ ವೇಳೆ ನಾನು, ಮಾವುತ ವಿನು ಹಾಗೂ ಭೀಮ ಆನೆಯ ಮಾವುತ ಗುಂಡಣ್ಣ ಅರ್ಜುನ ಆನೆಯ ಮೇಲಿದ್ದೆವು. ಕಾಡಿನಲ್ಲಿ ಎತ್ತರಕ್ಕೆ ಬೆಳೆದಿದ್ದ ಲಂಟಾನದಲ್ಲಿ ಮೇಯುತ್ತಿದ್ದ ಕಾಡಾನೆ ಏಕಾಏಕಿ ಹತ್ತಿರಕ್ಕೆ ಬಂದು ದಾಳಿ ಮಾಡಿದೆ.
ಅರ್ಜುನ ಸಾವಿನ ಇಂಚಿಂಚು ಮಾಹಿತಿ ಬಿಚ್ಚಿಟ್ಟ ವೈದ್ಯ ರಮೇಶ್: ಇಲ್ಲಿದೆ ನೋಡಿ ಅರ್ಜುನನ ಕೊಂದ ಕಾಡಾನೆ
ಈ ವೇಳೆಯಲ್ಲಿ ನನ್ನ ಕೈಯಲ್ಲಿದ್ದ ಅರವಳಿಕೆ ಟ್ರಿಗರ್ ಆಗಿ ಫೈರ್ ಆಗಿದೆ. ಅದು ಆಕಾಶದ ಕಡೆಗೆ ಹಾರಿ ಕೆಳಗೆ ಬೀಳುವಾಗ ಡಿಆರ್‌ಎಫ್‌ಒ ರಂಜಿತ್ ಕುಳಿತಿದ್ದ ಪ್ರಶಾಂತ್ ಆನೆಯ ಕಾಲಿಗೆ ಬಿದ್ದಿದೆ. ಆಗ ನಾನು ಮತ್ತು ಮಾಉತ ವಿನು ಪ್ರಶಾಂತ್ ಆನೆಗೆ ರಿವರ್ಸ್ ಇಂಜೆಕ್ಷನ್ ಕೊಡಲು ಹೋದಾಗ ಪುನಃ ಕಾಡಾನೆ ಬಂದು ಅರ್ಜುನನ ಮೇಲೆ ದಾಳಿ ಮಾಡಿದೆ. ನಮ್ಮ ಪ್ರಾಣ ಉಳಿಸಿ ಅರ್ಜುನ ಅಸುನೀಗಿದ್ದಾನೆ. ನಾನು ನಿತ್ಯ ಹೊರ ಬರುವಾಗ ಅರ್ಜುನ ಆನೆಗೆ ಕೈ ಮುಗಿದು ಬರಬೇಕು. ಅರ್ಜುನನಿಂದಲೇ ನಾವು ಬದುಕಿರೋದು ಎಂದರು.
ಯಾವುದೇ ಕಾರಣಕ್ಕೂ ಕಾಡಾನೆ ಕಾರ್ಯಾಚರಣೆ ಪಡೆಯ ಕ್ಯಾಫ್ಟನ್ ಆನೆ ಅರ್ಜುನನ ಕಾಲಿಗೆ ಗುಂಡೇಟು ಬಿದ್ದಿಲ್ಲ. ನಮ್ಮ ಕಾರ್ಯಾಚರಣೆ ತಂಡದ ಯಾರ ಬಳಿಯು ಬಂದೂಕು ಇರಲಿಲ್ಲ. ನಮ್ಮ ಸಿಬ್ಬಂದಿ ಬಳಿ ಇದ್ದದ್ದು ಡಬಲ್ ಬ್ಯಾರಲ್ ಚರ್ರೆ ಕೋವಿ ಮಾತ್ರ. ಅದರಲ್ಲಿ ಹಾರಿದ ಚರ್ರೆಯಿಂದ ಆನೆ ಸಾಯೋದಿಲ್ಲ. ಇದನ್ನ ಕಾಡಾನೆ ಹೆದರಿಸಲು ಮಾತ್ರ ಬಳಕೆ ಮಾಡ್ತೇವೆ. ಅರ್ಜನನ ಕಾಲಿಗೆ ಕೂಳೆ ಹೊಡೆದು ಗಾಯ ಆಗಿತ್ತು ಅದನ್ನ ಮಾವುತ ವಿನು ಅಲ್ಲೆ ಗಮನಿಸಿದ್ದಾನೆ. ಕಾರ್ಯಾಚರಣೆ ವೇಳೆ ಯಾವುದೇ ಲೋಪ ಆಗಿಲ್ಲ ಎಂದು ವನ್ಯಜೀವಿ ವೈದ್ಯ ರಮೇಶ್ ತಿಳಿಸಿದ್ದಾರೆ.
ವೀರಮರಣ ಹೊಂದಿದ ಅರ್ಜುನ ಆನೆ ಸಮಾಧಿಗೆ ಪೂಜೆ ಸಲ್ಲಿಸಿದ ಮೈಸೂರು ಒಡೆಯರ್ ದಂಪತಿ: ಕೊನೆಗೂ ಸಿಕ್ತು ರಾಜಮರ್ಯಾದೆ !
65 ಆನೆ, 50 ಚಿರತೆ, 7 ಹುಲಿಗಳಿಗೆ ಡಾಟ್ ಮಾಡಿದ ವೈದ್ಯ ರಮೇಶ್: ಜನರು ದಸರಾ ಅಂಬಾರಿ ಹೊತ್ತಾಗ ಮಾತ್ರ ಅರ್ಜುನನ ನೋಡಿರ್ತಾರೆ. ನಾವು ನಿತ್ಯ ಅವನ ಜೊತೆ ಇರೋರು ನಮಗೆ ಆಗಿರೊ ನೋವು ಹೇಳಲು ಆಗಲ್ಲ. ನಾನು ಇದುವರೆಗೆ 65 ಆನೆ ಸೆರೆ ಕಾರ್ಯಾಚರಣೆ ಮಾಡಿದ್ದೇನೆ. 40 ಆನೆಗಳಿಗೆ ನಾನೇ ಅರವಳಿಕೆ ಡಾಟ್ ಮಾಡಿದ್ದೇನೆ. 7 ಹುಲಿ, 50ಕ್ಕೂ ಹೆಚ್ಚು ಚಿರತೆ, 10 ಕರಡಿಗಳಿಗೆ ಡಾಟ್ ಮಾಡಿದ್ದೇನೆ. ಎಲ್ಲವೂ ಕೂಡ ಯೋಜನೆಯಂತೆಯೇ ನಡೆಯಿತು. ಆದರೆ, ಕಾಡಾನೆ ದಾಳಿಯಿಂದ ಅರ್ಜುನ ಮೃತಪಟ್ಡಿದೆ. ಬಹುಶಃ ಮಾವುತ ವಿನು ಅರ್ಜುನನ ಮೇಲೆ ಇದ್ದಿದ್ದರೆ ಹೋರಾಟ ಮಾಡಬಹುದಿತ್ತಾ ಅಥವಾ ಹಿಂದೆ ಸರಿಯಬಹುದಿತ್ತಾ ಎಂದು ನಿರ್ಧಾರ ಮಾಡುತ್ತಿದ್ದೆವು. ಒಂದು ವೇಳೆ ಅರ್ಜುನ ಆನೆಯ ಮೇಲೆ ಮಾವುತ ವಿನು ಮತ್ತು ನಾನು ಕುಳಿತಾಗಲೂ ಹೀಗೇ ಆಗುತ್ತಿರಲಿಲ್ಲ ಎಂದು ವೈದ್ಯ ರಮೇಶ್ ಮಾಹಿತಿ ನೀಡಿದರು.