Wild elephant fight in Belur hassan: ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಕ್ಯಾಪ್ಟನ್ ಮತ್ತು ಭೀಮ ಎಂಬ ಎರಡು ಕಾಡಾನೆಗಳ ನಡುವೆ ಭೀಕರ ಕಾಳಗ ನಡೆದಿದೆ. ಈ ಕಾದಾಟದಲ್ಲಿ ಭೀಮ ಆನೆಯ ದಂತ ಮುರಿದು ತೀವ್ರವಾಗಿ ಗಾಯಗೊಂಡಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಬೇಲೂರು (ನ.10): ಕ್ಯಾಪ್ಟನ್ ಹಾಗೂ ಭೀಮ ಎಂಬ ಹೆಸರಿನ 2 ಕಾಡಾನೆಗಳ ನಡುವೆ ನಡೆದ ಕಾಳಗದಲ್ಲಿ ಭೀಮ ಆನೆಯ ದಂತ ಮುರಿದು ತೀವ್ರವಾಗಿ ಗಾಯಗೊಂಡಿರುವ ಘಟನೆ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಜಗಬೋರನಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಕ್ಯಾಪ್ಟನ್-ಭೀಮ ನಡುವೆ ಭೀಕರ ಕಾದಾಟ:
ಬಿಕ್ಕೋಡು ಮುಖ್ಯರಸ್ತೆಯಲ್ಲಿ ಏಕಾಂಗಿಯಾಗಿ ತಿರುಗಾಡುತ್ತಿದ್ದ ಭೀಮ ಎಂಬ ಆನೆ ಜಗಬೋರನಹಳ್ಳಿ ಗ್ರಾಮದೊಳಗೆ ಮೊದಲು ಬಂದಿದ್ದು, ಇದರ ಹಿಂದೆಯೇ ಕ್ಯಾಪ್ಟನ್ ಎಂಬ ಆನೆ ಬೆನ್ನಟ್ಟಿ ಬಂದಿದೆ. ನಂತರ ಆನೆಗಳು ಮನೆಗಳ ಬಳಿ ಕಾದಾಡುತ್ತಾ ಓಡಾಡಿದ್ದು, ಮನೆಗಳ ಗೇಟ್, ಕಾಂಪೌಂಡ್ ಹಾಗೂ ನೀರಿನ ಪೈಪ್‌ಗಳು ಹಾನಿಗೊಳಗಾಗಿವೆ. ಅಕ್ಕಪಕ್ಕದ ಗದ್ದೆಗಳಲ್ಲಿ ಬೆಳೆ, ತೋಟಗಳಲ್ಲಿ ತೆಂಗಿನ ಮರಗಳಿಗೆ ಹಾನಿಯಾಗಿದೆ.
ಕಾದಾಟದಲ್ಲಿ ಭೀಮ ಆನೆಯ ದಂತ ಮುರಿದಿದೆ:
ಭೀಮ ಹಾಗೂ ಕ್ಯಾಪ್ಟನ್ ಆನೆಗಳ ಕಾದಾಟದ ಸ್ಥಳದಲ್ಲಿದ್ದ ಗ್ರಾಮಸ್ಥರು ಓಡಿಹೋಗಿ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಕಿತ್ತಾಡಿದ ಬಳಿಕ ಅಲ್ಲಿಂದ ಆನೆ ತೆರಳಿದ್ದು, ಭೀಮ ಆನೆಯ ದಂತ ಮುರಿದು ಸ್ಥಳದಲ್ಲಿ ಬಿದ್ದಿದೆ.
ಗ್ರಾಮಸ್ಥರಲ್ಲಿ ಭಯ:
ಸುಮಾರು 50ಕ್ಕೂ ಹೆಚ್ಚು ಕಾಡಾನೆಗಳು ಕೋಗಿಲೆ ಮನೆಕೊಪ್ಪಲು ಗ್ರಾಮದಲ್ಲಿ ಬೀಡು ಬಿಟ್ಟಿದ್ದು ರೈತರ ಬೆಳೆಗಳನ್ನು ತುಳಿದು ನಾಶಪಡಿಸಿವೆ. ಗ್ರಾಮದ 4 ಎಕರೆಯಲ್ಲಿ ಬೆಳೆದಿದ್ದ ಜೋಳ, ಭತ್ತ, ಕಾಫಿ, ಬಾಳೆ ಬೆಳೆಗಳನ್ನು ತುಳಿದು ನಾಶ ಮಾಡಿವೆ. ರಾತ್ರಿ ಸಮಯದಲ್ಲಿ ಮನೆಯಿಂದ ಹೊರಬರಲು ಗ್ರಾಮಸ್ಥರು ಭಯಪಡುವಂತಾಗಿದೆ.
