ಪತಿಯ ಐಷಾರಾಮಿ ಜೀವನದ ಹಕ್ಕು ಪತ್ನಿ, ಮಕ್ಕಳಿಗೂ ಇದೆ: ಹೈಕೋರ್ಟ್
ಪತಿ ಐಷಾರಾಮಿ ಬದುಕು ನಡೆಸುತ್ತಿದ್ದಾಗ ಪತ್ನಿ ಮತ್ತು ಮಗ ಸಹ ಐಷಾರಾಮಿ ಬದುಕು ನಿರ್ವಹಣೆ ಮಾಡುವಂತೆ ನೋಡಿಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್.

ವಿಶೇಷ ವರದಿ
ಬೆಂಗಳೂರು (ಸೆ.25): ಪತಿ ಐಷಾರಾಮಿ ಬದುಕು ನಡೆಸುತ್ತಿದ್ದಾಗ ಪತ್ನಿ ಮತ್ತು ಮಗ ಸಹ ಐಷಾರಾಮಿ ಬದುಕು ನಿರ್ವಹಣೆ ಮಾಡುವಂತೆ ನೋಡಿಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್, ಪತ್ನಿಗೆ ಕೌಟುಂಬಿಕ ನ್ಯಾಯಾಲಯ ನಿಗದಿಪಡಿಸಿದ್ದ ಮಾಸಿಕ 75 ಸಾವಿರ ರು. ಜೀವನಾಂಶವನ್ನು 1.5 ಲಕ್ಷಕ್ಕೆ ಹೆಚ್ಚಿಸಿದೆ. ಕೌಟುಂಬಿಕ ನ್ಯಾಯಾಲಯ ಆದೇಶ ಪ್ರಶ್ನಿಸಿ ಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನ್ಯಾಯಪೀಠ ಈ ಆದೇಶ ಮಾಡಿದೆ.
ಪತಿ ಓಡಾಡಲು ಹಲವು ಕಾರುಗಳನ್ನು ಬಳಸುತ್ತಿದ್ದಾರೆ. ವ್ಯಾಪಾರ ಸಾಲ ತೀರಿಸಲು ಮಾಸಿಕ 7, 72,000 ರು. ಕಂತು ಪಾವತಿಸುತ್ತಾರೆ. ಪತಿ ಸ್ವತಃ ತಿಳಿಸಿರುವ ಪ್ರಕಾರ ಆತ ಮಾಸಿಕ 11 ಲಕ್ಷ ರು. ವ್ಯಯಿಸುತ್ತಿದ್ದಾರೆ. ಮತ್ತೊಂದೆಡೆ ಪತ್ನಿಯ ಬ್ಯಾಂಕ್ ದಾಖಲೆಗಳ ಪ್ರಕಾರ 2022ರ ಮಾರ್ಚ್‌ವರೆಗೆ ಆಕೆ ಮಾಸಿಕ 47,736 ರು. ಆದಾಯ ಗಳಿಸುತ್ತಿದ್ದಾರೆ. ಅಲ್ಲದೆ, ಪತ್ನಿಯ ತನ್ನ ಜೀವನ ನಿರ್ವಹಣೆಯ ಜೊತೆಗೆ, ಮಗನ ಶೈಕ್ಷಣಿಕ ಅಗತ್ಯಗಳನ್ನು ನೋಡಿಕೊಳ್ಳುತ್ತಿದ್ದಾರೆ. ಆದರೆ ಪತಿ ಉತ್ತಮವಾಗಿ ಜೀವನ ಮಾಡುತ್ತಿದ್ದಾರೆ.
ಕಾವೇರಿ ನೀರಿನ ಸಮಸ್ಯೆ ಬಗೆಹರಿಸಲು ಪ್ರಧಾನಿ ಮೋದಿ ಮಧ್ಯಪ್ರವೇಶಿಸಲಿ: ಸಚಿವ ಭೋಸರಾಜ್
ಇಂತಹ ಸಂದರ್ಭದಲ್ಲಿ ಪತಿಗಿಂತ ಕೆಳಮಟ್ಟದ ಜೀವನ ನಡೆಸುವಂತೆ ಪತ್ನಿಗೆ ಹೇಳಲಾಗದು. ಪತ್ನಿಗೆ ಜೀವನಾಂಶ ರೂಪದಲ್ಲಿ ಮಾಸಿಕ 1.5 ಲಕ್ಷ ರು. ಪಾವತಿಸಬೇಕು. ಪತ್ನಿಯ ಕಾನೂನು ಹೋರಾಟಕ್ಕೆ ತಗುಲಿದ ವೆಚ್ಚ ಮತ್ತು ಪುತ್ರನ ಶೈಕ್ಷಣಿಕ ಖರ್ಚು-ವೆಚ್ಚಗಳನ್ನು ಪತಿಯೇ ಭರಿಸಬೇಕು ಎಂದು ಆದೇಶಿಸಿ, ಪತಿಯ ಅರ್ಜಿಯನ್ನು ವಜಾಗೊಳಿಸಿದೆ. ಹೆಚ್ಚಿನ ಜೀವನಾಂಶ ನೀಡಲು ಪತಿಗೆ ಆದೇಶಿಸುವಂತೆ ಕೋರಿದ ಪತ್ನಿಯ ಅರ್ಜಿಯನ್ನು ಪುರಸ್ಕರಿಸಿದೆ.
ಪ್ರಕರಣದ ವಿವರ: ರಮ್ಯಾ ಮತ್ತು ರಾಜು (ಹೆಸರು ಬದಲಿಸಲಾಗಿದೆ) 2001ರಲ್ಲಿ ವಿವಾಹವಾಗಿದ್ದು, ದಂಪತಿಗೆ 21 ವರ್ಷದ ಮಗನಿದ್ದಾನೆ. ಮದುವೆ ನಂತರ ದಂಪತಿ ಜಂಟಿಯಾಗಿ ವ್ಯಾಪಾರ ಆರಂಭಿಸಿದ್ದರು. ಬಳಿಕ ಪತ್ನಿ ತನ್ನ ಪಾಲಿನ ಎಲ್ಲ ಶೇರು, ತನ್ನ ಹೆಸರಿನಲ್ಲಿ ಠೇವಣಿ ಇರಿಸಲಾಗಿದ್ದ 1.64 ಕೋಟಿ ರು., ತಂದೆ ಉಡುಗೊರೆಯಾಗಿ ನೀಡಿದ್ದ ನಿವೇಶನವನ್ನು ಪತಿಗೆ ವರ್ಗಾಯಿಸಿ, ತನ್ನದೆ ಆದ ಸ್ವತಃ ಕಂಪನಿ ಆರಂಭಿಸಿದ್ದರು. ತಂದೆ ಉಡುಗೊರೆ ನೀಡಿದ್ದ ನಿವೇಶನದಲ್ಲಿ ಮನೆ ನಿರ್ಮಿಸಲಾಗಿತ್ತು. ನಂತರ ಆ ನಿವೇಶನವನ್ನು ಪತಿ ಮರಳಿ ಪತ್ನಿಗೆ ಹೆಸರಿಗೆ ವರ್ಗಾಯಿಸಿದ್ದರು. ಆ ನಿವೇಶನ ಮೌಲ್ಯ ಸುಮಾರು ಅಂದಾಜು ಏಳು ಕೋಟಿ ರು. ಎನ್ನಲಾಗಿದೆ.
ಈ ಮಧ್ಯೆ ದಂಪತಿ ನಡುವೆ ವೈಮನಸ್ಸು ಉಂಟಾಗಿದ್ದು, 2021ರಲ್ಲಿ ಪತಿ ವಿರುದ್ಧ ಪತ್ನಿ ಕ್ರಿಮಿನಲ್ ಕೇಸು ದಾಖಲಿಸಿದ್ದರು. ಜತೆಗೆ ಮದುವೆ ಅನೂಜಿರ್ತಗೊಳಿಸಲು ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಪತ್ನಿ ಅರ್ಜಿ ಸಲ್ಲಿಸಿದ್ದರು. ಈ ನಡುವೆ ಜೀವನಾಂಶ ಕೋರಿ ಪತ್ನಿ ಸಲ್ಲಿಸಿದ್ದ ಮನವಿಯನ್ನು ಕೌಟುಂಬಿಕ ನ್ಯಾಯಾಲಯ ಪುರಸ್ಕರಿಸಿ ಪತ್ನಿಗೆ ಮಾಸಿಕ 75 ಸಾವಿರ ರು. ಜೀವನಾಂಶ ನೀಡುವಂತೆ ಪತಿಗೆ ನಿರ್ದೇಶಿಸಿ, 2022ರ ಅ.1ರಂದು ಆದೇಶಿಸಿತ್ತು. ಈ ಆದೇಶ ರದ್ದು ಕೋರಿ ಪತಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಜೀವನಾಂಶ ಹೆಚ್ಚಿಸಲು ಕೋರಿ ಪತ್ನಿ ಸಹ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು.
ಪತಿ ಪರ ವಕೀಲರು, ಪತ್ನಿ ತನ್ನದೇ ಅದ ಕಂಪನಿ ಹೊಂದಿದ್ದಾರೆ. ಸ್ವಂತತ್ರವಾಗಿ ಜೀವನ ನಿರ್ವಹಣೆ ಮಾಡಿಕೊಳ್ಳಲು ಸಮರ್ಥರಿಸಿದ್ದಾರೆ. ಪತಿ ವ್ಯಾಪಾರ ಉದ್ದೇಶಕ್ಕಾಗಿ ಪಡೆದ ಸಾಲಕ್ಕೆ ಪ್ರತಿಯಾಗಿ ಮಾಸಿಕ 7, 72000 ರು. ಕಂತು ಪಾವತಿಸುತ್ತಿದ್ದಾರೆ. ಜೀವನಾಂಶ ರೂಪದಲ್ಲಿ ಪತ್ನಿಗೆ ಮಾಸಿಕ 75 ಸಾವಿರ ರು. ನೀಡುವುದು ದೊಡ್ಡ ಮೊತ್ತವಾಗಿದ್ದು, ಅದನ್ನು ಕಡಿತಗೊಳಿಸಬೇಕು ಎಂದು ಕೋರಿದ್ದರು.
ಜೆಡಿಎಸ್‌ನವರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ: ಹೊಸ ಬಾಂಬ್ ಸಿಡಿಸಿದ ಮಧು ಬಂಗಾರಪ್ಪ
ಪತ್ನಿ ಪರ ವಕೀಲರು, ಪತಿಯು ತನ್ನ ಜೀವನ ನಿರ್ವಹಣೆಗೆ ಪ್ರತಿ ತಿಂಗಳು ಸುಮಾರು 12 ಲಕ್ಷ ರು . ವ್ಯಯಿಸುತ್ತಿದ್ದಾರೆ. ಹಲವು ಕಾರುಗಳನ್ನು ನಿರ್ವಹಣೆ ಮಾಡುತ್ತಿದ್ಧಾರೆ. ಕಾರುಗಳ ನಿರ್ವಹಣೆಗೆ ಸಿದ್ಧರಿಸಿದ್ದಾರೆ ಹೊರತು ಮಗ ಮತ್ತು ಪತ್ನಿಯ ಜೀವನ ನಿರ್ವಹಣೆಗೆ ಸಿದ್ಧರಿಲ್ಲ ಎಂದು ಪ್ರತಿಪಾದಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಪತ್ನಿ ಮತ್ತು ಮಗನ ಸಾಮಾಜಿಕ ಸ್ಥಾನಮಾನ/ಘನತೆಯನ್ನು ಪತಿಯೇ ನಿರ್ವಹಣೆ ಮಾಡಬೇಕಾಗುತ್ತದೆ. ಹೆಂಡತಿ ಮತ್ತು ಮಗ ಒಟ್ಟಿಗೆ ಬದುಕು ನಡೆಸುತ್ತಿರುವಾಗ ಅವರ ಜೀವನ ನಿರ್ವಹಣೆಗೆ ಸಂಬಂಧಿತ ಅಂಶಗಳಿಗೆ ಸರಿಯಾದ ಗೌರವವನ್ನು ಪತಿ ನೀಡಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟು ಜೀವನಾಂಶ ಮೊತ್ತ ಹೆಚ್ಚಿಸಿದೆ.