Belagavi DCC Bank: ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಜಾರಕಿಹೊಳಿ ಬಣ ಸ್ಪಷ್ಟ ಬಹುಮತ ಹೊಂದಿದೆ. ಆದಾಗ್ಯೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರವೇಶ, ಕತ್ತಿ-ಸವದಿ ಬಣದ ಲಿಂಗಾಯತ ಕಾರ್ಡ್ ಬಳಕೆ ಪ್ರಯತ್ನ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ.
ಬೆಳಗಾವಿ (ನ.10): ಬೆಳಗಾವಿ ಡಿಸಿಸಿ ಬ್ಯಾಂಕಿನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನ.10 ರಂದು ಚುನಾವಣೆ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಚುನಾವಣೆಯಲ್ಲಿ ಎಂಟ್ರಿಕೊಟ್ಟಿರುವುದರಿಂದ ಅಧ್ಯಕ್ಷ ಸ್ಥಾನ ಯಾರ ಪಾಲಾಗುತ್ತದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.
ಇತ್ತೀಚೆಗೆ ನಿರ್ದೇಶಕರ ಸ್ಥಾನಗಳಗೆ ನಡೆದ ಚುನಾವಣೆಯಲ್ಲಿ ಜಾರಕಿಹೊಳಿ ಮತ್ತು ಕತ್ತಿ- ಸವದಿ ಬಣಗಳ ನಡುವೆ ತೀವ್ರ ಪೈಪೋಟಿ ನಡೆದಿತ್ತು. 13 ಸ್ಥಾನಗಳಲ್ಲಿ ತಮ್ಮ ಬಣಕ್ಕೆ ಗೆಲುವಾಗಿದೆ ಎಂದು ಜಾರಕಿಹೊಳಿ ಬಣ ಘೋಷಿಸಿತ್ತು. ಆದರೆ, ಜಾರಕಿಹೊಳಿ ಬಣದಲ್ಲಿ ಈಗ 11 ನಿರ್ದೇಶಕರು ಗುರುತಿಸಿಕೊಂಡಿದ್ದಾರೆ. ಸಚಿವ ಸತೀಶ ಜಾರಕಿಹೊಳಿ ಜೊತೆಗೆ ಇಬ್ಬರು ಗುರುತಿಸಿಕೊಂಡಿದ್ದಾರೆ. ಕತ್ತಿ- ಸವದಿ ಬಣದಲ್ಲಿ ಮೂವರು ನಿರ್ದೇಶಕರಿದ್ದರು. ಆದರೆ, ಬ್ಯಾಂಕಿನ ಮೇಲೆ ಹಿಡಿತ ಸಾಧಿಸಲು ಮತ್ತೆ ಉಭಯ ಬಣಗಳ ನಾಯಕರ ನಡುವೆ ಕಿತ್ತಾಟ ನಡೆದಿದೆ. ಲಿಂಗಾಯತ ಸಮುದಾಯಕ್ಕೆ ಅಧ್ಯಕ್ಷ ಸ್ಥಾನ ನೀಡುವುದಾಗಿ ಜಾರಕಿಹೊಳಿ ಬಣ ಘೋಷಿಸಿತ್ತು. ಇಲ್ಲಿ ಏನಿದ್ದರೂ ಕುಟುಂಬ ರಾಜಕೀಯ ಮೇಲುಗೈಸಾಧಿಸಿದ್ದು, ರಾಜಕೀಯ ಪಕ್ಷಗಳು ಗೌನವಾಗಿವೆ. ಆದರೆ, ಡಿಸಿಸಿ ಬ್ಯಾಂಕಿನ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಟ್ರಿಕೊಟ್ಟಿರುವುದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಸವಾಲಾಗಿದೆ. ಹಾಗಾಗೀ, ಅಧ್ಯಕ್ಷ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಲಾಗುತ್ತದೆ ಎಂಬುದು ತೀವ್ರ ಕುತೂಹಲ ಕೆರಳಿಸುವಂತೆ ಮಾಡಿದೆ.
ಲಿಂಗಾಯತರನ್ನು ಸೆಳೆಯಲು ಕತ್ತಿ ಕಸರತ್ತು:
ಜಾರಕಿಹೊಳಿ ಬಣ ಹೆಚ್ಚು ನಿರ್ದೇಶಕರನ್ನು ಹೊಂದುವ ಮೂಲಕ ಸ್ಪಷ್ಟ ಬಹುಮತ ಸಾಧಿಸಿದೆ. ಆದರೆ, ಕತ್ತಿ ಮತ್ತು ಸವದಿ ಬಣ ಸುಮ್ಮನೇ ಕುಳಿತಿಲ್ಲ. ಲಿಂಗಾಯತ ಟ್ರಂಪ್ ಕಾರ್ಡ್ ಬಳಸಿ, ಮತ್ತೆ ಲಿಂಗಾಯತ ನಿರ್ದೇಶಕರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ನಡೆಸುತ್ತಿದೆ ಎನ್ನಲಾಗಿದೆ. ಇನ್ನು ತಮ್ಮ ಗಮನಕ್ಕೆ ತಾರದೇ ರಾಮದುರ್ಗ ಶಾಸಕ ಅಶೋಕ ಪಟ್ಟಣ ಅವರನ್ನು ನಾಮ ನಿರ್ದೇಶಕರನ್ನಾಗಿ ನೇಮಕ ಮಾಡಿರುವ ಸರ್ಕಾರದ ಕ್ರಮ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ನಾಮನಿರ್ದೇಶಿತ ಸದಸ್ಯ, ಅಪೇಕ್ಸ್ ಬ್ಯಾಂಕ್ ಪ್ರತಿನಿಧಿ ಮತ್ತು ಬೆಳಗಾವಿ ಉಪ ನಿಬಂಧಕರು ಮತ ಚಲಾಯಿಸುವ ಅರ್ಹತೆ ಹೊಂದಿದ್ದಾರೆ. ಅಶೋಕ ಪಟ್ಟಣ ಅವರು ಯಾರ ಪರವಾಗಿ ನಿಲ್ಲುತ್ತಾರೆ ಎಂಬುದು ಕೂಡ ಕುತೂಹಲಕ್ಕೆ ಕಾರಣವಾಗಿದೆ.
ತಮ್ಮವರೇ ಆಯ್ಕೆಯಾಗುವ ವಿಶ್ವಾಸದಲ್ಲಿ ಬಾಲಚಂದ್ರ:
ಡಿಸಿಸಿ ಬ್ಯಾಂಕಿನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಶಾಸಕ ಮತ್ತು ಬೆಮೂಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಬೆಳಗಾವಿಯ ಖಾಸಗಿ ಹೋಟೆಲ್ಲೊಂದರಲ್ಲಿ ಶನಿವಾರ ಸಂಜೆ ಗೌಫ್ಯ ಸಭೆ ನಡೆದಿದೆ. ಕಳೆದ ಅಕ್ಟೋಬರ್ 19 ರಂದು ಬೆಳಗಾವಿ ಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿಗೆ ಚುನಾವಣೆ ನಡೆದಿದ್ದು, ಇದರಲ್ಲಿ ಜಾರಕಿಹೊಳಿ ಬಣದ 11 ಜನರು ಆಯ್ಕೆಯಾಗಿ ಸ್ಪಷ್ಟ ಬಹುಮತವನ್ನು ಪಡೆದುಕೊಂಡಿದ್ದಾರೆ. ಚುನಾವಣೆಯಲ್ಲಿ ನಮ್ಮ ಬಣದವರೇ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳನ್ನು ಅಲಂಕರಿಸಲಿದ್ದು, ನಮ್ಮವರೇ ಐದು ವರ್ಷಗಳ ಅಧಿಕಾರವನ್ನು ನಡೆಸಲಿದ್ದಾರೆ ಎಂದು ಬಾಲಚಂದ್ರ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಭೆಯಲ್ಲಿ ಬ್ಯಾಂಕಿನ ನಿರ್ದೇಶಕರಾದ ಅಣ್ಣಾಸಾಹೇಬ್ ಜೊಲ್ಲೆ, ವಿಶ್ವಾಸ ವೈದ್ಯ, ಬಾಬಾ ಸಾಹೇಬ್ ಪಾಟೀಲ, ಚನ್ನರಾಜ ಹಟ್ಟಿಹೊಳಿ, ಮಹಾಂತೇಶ ದೊಡ್ಡಗೌಡ್ರ, ಅರವಿಂದ ಪಾಟೀಲ, ಅಪ್ಪಾಸಾಹೇಬ ಕುಲಗೋಡೆ, ಅಮರನಾಥ ಜಾರಕಿಹೊಳಿ, ರಾಹುಲ್ ಜಾರಕಿಹೊಳಿ, ನೀಲಕಂಠ ಕಪ್ಪಲಗುದ್ದಿ, ವಿರುಪಾಕ್ಷ ಮಾಮನಿ ಅವರು ಪಾಲ್ಗೊಂಡಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿಯವರೊಂದಿಗೆ ಮತ್ತೊಂದು ಸುತ್ತಿನ ಸಭೆಯ ನಂತರ ಅಧ್ಯಕ್ಷ- ಉಪಾಧ್ಯಕ್ಷರ ಹೆಸರುಗಳು ಅಂತಿಮವಾಗಲಿವೆ.
ಅವಿರೋಧ ಆಯ್ಕೆಗೆ ತಾಲೀಮು
ಬೆಳಗಾವಿ ಡಿಸಿಸಿ ಬ್ಯಾಂಕಿನ ಮೇಲೆ ಸ್ಪಷ್ಟ ಬಹುಮತ ಹೊಂದಿರುವ ಜಾರಕಿಹೊಳಿ ಬಣ ಅಧ್ಯಕ್ಷ, ಉಪಾಧ್ಯಕ್ಷ ಎರಡೂ ಸ್ಥಾನಕ್ಕೆ ಅವಿರೋಧ ಆಯ್ಕೆಗೆ ಕಸರತ್ತು ನಡೆಸಿದೆ. ತಮ್ಮ ಬಣದಿಂದ ಯಾರು ಬೇರೆ ಬಣಕ್ಕೆ ಹೋಗದಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು 11 ನಿರ್ದೇಶಕರೊಂದಿಗೆ ಗೌಪ್ಯ ಸಭೆ ನಡೆಸಿದ್ದಾರೆ. ತಮ್ಮ ಜೊತೆಗೆ ಗುರುಸಿಕೊಂಡಿರುವ ಕಾಗವಾಡ ಶಾಸಕ ರಾಜು ಕಾಗೆ ಮತ್ತು ಚಿಕ್ಕೋಡಿ ಶಾಸಕ ಗಣೇಶ ಹುಕ್ಕೇರಿ ಅವರೊಂದಿಗೆ ಸಚಿವ ಸತೀಶ ಜಾರಕಿಹೊಳಿ ಸಭೆ ನಡೆಸುವ ಸಾಧ್ಯತೆಗಳಿವೆ.
ಜಾರಕಿಹೊಳಿಯವರ ಬಣದಿಂದ ಅಧ್ಯಕ್ಷ ಸ್ಥಾನಕ್ಕೆ ಅಣ್ಣಾಸಾಹೇಬ ಜೊಲ್ಲೆ, ಮಹಾಂತೇಶ ದೊಡ್ಡಗೌಡ್ರ, ಅಪ್ಪಾಸಾಹೇಬ ಕುಲಗೋಡೆ ಅವರ ಹೆಸರುಗಳು ಕೇಳಿ ಬರುತ್ತಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ನೀಲಕಂಠ ಕಪ್ಪಲಗುದ್ದಿ ಮತ್ತು ಅರವಿಂದ ಪಾಟೀಲ್ ಅವರ ಹೆಸರುಗಳು ಕೇಳಿ ಬರುತ್ತಿವೆ. ಡಿಸಿಸಿ ಬ್ಯಾಂಕಿಗೆ ಯಾರು ಅಧ್ಯಕ್ಷರಾಗುತ್ತಾರೆ ಎಂಬುದನ್ನು ಕಾಯ್ದುನೋಡಬೇಕು.
