* ಸರಿಯಾದ ಉತ್ತರಕ್ಕೆ ಬೇಕಂತಲೇ ವ್ಯಾಕರಣ ದೋಷ ಮಾಡಿ ಅಭ್ಯರ್ಥಿಗಳಿಗೆ ಗುಪ್ತ ಸಂದೇಶ* ತಪ್ಪು ಉತ್ತರಗಳಿಗೆ ಅಂಕ ಎಂದು ಮೊದಲೇ ಏಕೆ ಹೇಳಿಲ್ಲ?* ದೋಷ ಒಪ್ಪಿದ ಪರೀಕ್ಷಾ ಪ್ರಾಧಿಕಾರ
ಬೆಂಗಳೂರು(ಮೇ.01): ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಹಾಯಕ ಪ್ರಾಧ್ಯಾಪಕರ(Professor Recruitment) ನೇಮಕಾತಿಗೆ ನಡೆದ ಐಚ್ಛಿಕ ಕನ್ನಡ(Kannada) ಭಾಷೆಯ ಪ್ರಶ್ನೆ ಪತ್ರಿಕೆಯಲ್ಲಿನ ಪ್ರಶ್ನೆ ಹಾಗೂ ಉತ್ತರದಲ್ಲಿ ಬರೋಬ್ಬರಿ 29 ಮುದ್ರಣ ಹಾಗೂ ವ್ಯಾಕರಣ ದೋಷಗಳು ಕಂಡುಬಂದಿವೆ.
‘ಸರಿ’ ಉತ್ತರದ ಆಯ್ಕೆಗಳನ್ನು ತಪ್ಪಾಗಿ ಮುದ್ರಿಸಿ, ತನ್ಮೂಲಕ ಸಂಬಂಧಪಟ್ಟ ಸೀಮಿತ ಅಭ್ಯರ್ಥಿಗಳಿಗೆ(Candidates) ಗುಪ್ತ ಸಂದೇಶ ನೀಡುವ ಅತಿ ದೊಡ್ಡ ಹಗರಣವನ್ನು(Scam) ಮಾಡಲಾಗಿದೆ. ಕೇವಲ ವ್ಯಾಕರಣ ದೋಷ ಮಾತ್ರವಲ್ಲ, ಪ್ರಶ್ನೆ ಸಂಖ್ಯೆ 13ರಲ್ಲಿ ನಾಲ್ಕು ಉತ್ತರಗಳ ಆಯ್ಕೆಗಳಲ್ಲಿ ಮೂರು ಆಯ್ಕೆಗಳಿಗೆ ರೋಮನ್ ಅಂಕಿಗಳನ್ನು ನೀಡಲಾಗಿದ್ದು, 2ನೇ ಆಯ್ಕೆಗೆ (ಬಿ) ಎಂದು ನೀಡಲಾಗಿದೆ. ವಿಚಿತ್ರವೆಂದರೆ ‘ಬಿ’ ಎಂದು ನೀಡಿರುವುದೇ ಸರಿ ಉತ್ತರವಾಗಿದ್ದು, ಉದ್ದೇಶಪೂರ್ವಕವಾಗಿಯೇ ದೋಷಗಳನ್ನು ಸೃಷ್ಟಿಸಿ ಡೀಲ್ ಆಗಿರುವ ಅಭ್ಯರ್ಥಿಗಳಿಗೆ ಸುಳಿವು ನೀಡಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
KEA Exam Paper Leak ರಿಜಿಸ್ಟ್ರಾರ್ ರನ್ನು ಕೆವಿವಿಯಿಂದ ಕೈಬಿಡಲು ಎಬಿವಿಪಿ ಆಗ್ರಹ
ಈ ಬಗ್ಗೆ ‘ಕನ್ನಡಪ್ರಭ’ ಜತೆ ಮಾತನಾಡಿದ ಕನ್ನಡ ಸಹಾಯಕ ಪ್ರಾಧ್ಯಾಪಕ ಹುದ್ದೆಯ ಆಕಾಂಕ್ಷಿಗಳ ಹೋರಾಟ ಸಮಿತಿ ಸದಸ್ಯರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದಂತಹ(Karnataka Examination Authority) ಉನ್ನತ ಸಂಸ್ಥೆ ಹಾಗೂ ತಜ್ಞರು ಸಿದ್ಧಪಡಿಸಿರುವ ಪ್ರಶ್ನೆ ಪತ್ರಿಕೆಯಲ್ಲಿ ಈ ಮಟ್ಟದಲ್ಲಿ ತಪ್ಪುಗಳು ಹೇಗೆ ಮುದ್ರಣವಾಗಲು ಸಾಧ್ಯ? ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಯಲಿಗೆಳೆಯಬೇಕು, ಜತೆಗೆ ಪರೀಕ್ಷೆಯನ್ನು ರದ್ದುಪಡಿಸಿ ಮರು ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ದೋಷ ಒಪ್ಪಿದ ಪರೀಕ್ಷಾ ಪ್ರಾಧಿಕಾರ:
ಕನ್ನಡ ಅಭಿವೃದ್ಧಿ ಪ್ರಾಧಿಕಾರವು(Kannada Development Authority) ಬರೆದ ಪತ್ರಕ್ಕೆ ಉತ್ತರ ನೀಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಾಲು-ಸಾಲು ವ್ಯಾಕರಣ, ಮುದ್ರಣ ದೋಷ ಆಗಿರುವುದನ್ನು ಒಪ್ಪಿಕೊಂಡಿದೆ. ಕೆಲವು ತಪ್ಪುಗಳಿಗೆ ಕುರುಡು ಸಮರ್ಥನೆ ನೀಡಿದ್ದು, ಉಳಿದವುಗಳು ತಪ್ಪಾಗಿವೆ ಎಂದು ಒಪ್ಪಿಕೊಂಡಿದೆ. ವಿಚಿತ್ರವೆಂದರೆ, ಕನ್ನಡದಲ್ಲಿ ಮುದ್ರಿತವಾಗಿರುವ ಪ್ರಶ್ನೆಗಳ ಬಗ್ಗೆ ಏನಾದರೂ ವ್ಯತ್ಯಾಸ ಕಂಡುಬಂದರೆ ಇಂಗ್ಲಿಷ್ ಆವೃತ್ತಿಯನ್ನು ಅಂತಿಮ ಎಂದು ಪರಿಗಣಿಸಲಾಗುವುದು ಎಂದು ಸೂಚನೆ ನೀಡಲಾಗಿದೆ. ಐಚ್ಛಿಕ ಕನ್ನಡಕ್ಕೆ ಇಂಗ್ಲಿಷ್ ಆವೃತ್ತಿಯ ಅನಿವಾರ್ಯತೆ ಏನಿದೆ? ಅದೂ ಸಹ ಕನ್ನಡದಲ್ಲಿ ತಪ್ಪಾಗಿದ್ದರೆ ಇಂಗ್ಲೀಷ್ ಆವೃತ್ತಿಯನ್ನು ಅಂತಿಮ ಎಂದು ಪರಿಗಣಿಸಲಾಗುವುದು ಎಂದರೆ ಏನರ್ಥ? ಎಂದು ಅಭ್ಯರ್ಥಿಗಳು ಪ್ರಶ್ನಿಸುತ್ತಾರೆ.
ವ್ಯಾಕರಣ ದೋಷದ ವಿವರ:
ಕೆ.ವಿ.ತಿರುಮಲೇಶರ ವಿಮರ್ಶಾ ಕೃತಿ ‘ಸಮ್ಮುಖ’ವನ್ನು ‘ಸರ್ಮುಖ’ ಎಂದು ಮುದ್ರಿಸಲಾಗಿದೆ. ಡಿ.ಕೆ.ರಾಜೇಂದ್ರ ಅವರ ಹೆಸರಿಗೆ ಹೊಂದಿಕೆಯಾಗುವ ‘ಕರಪಾಲ ಮೇಳ’ ಎಂಬ ಕೃತಿಯ ಹೆಸರಿದೆ. ವಾಸ್ತವದಲ್ಲಿ ಡಿ.ಕೆ.ರಾಜೇಂದ್ರ ಅವರ ಕೃತಿ ‘ಕರಪಾಲದವರು’ ಎಂದಾಗಬೇಕಿತ್ತು. ಬುದ್ದಣ್ಣ ಹಿಂಗಮಿರೆ ಎಂಬ ಹೆಸರಿನ ಬದಲಿಗೆ ‘ಬುದ್ದಡ್ಡಿ ಹಿಂಗಮಿರೆ’ ಎಂದು ಮುದ್ರಿಸಲಾಗಿದೆ. ರಸೀದು ಟಿಕೆಟ್ಟು ಎಂದು ಮುದ್ರಿಸಿರುವುದು ‘ರಸೀದಿ ತಿಕೀಟು’ ಎಂದಾಗಬೇಕಿತ್ತು. ಹಲ್ಮಿಡಿ ಶಾಸನದಲ್ಲಿ ಕಂಡು ಬರುವ ಸ್ಥಳನಾಮ ‘ನರಿದಾವಿಳೆ ನಾಡು’ ಎಂಬುದು ಪ್ರಶ್ನೆ ಪತ್ರಿಕೆಯಲ್ಲಿ ‘ನಂದಾವಿಳೆ ನಾಡು’ ಎಂದು ತಪ್ಪಾಗಿದೆ.
ಹೊಂದಾಣಿಕೆಯಲ್ಲಿ ನೀಡಲಾದ ವಚನಕಾರ್ತಿಯರು ಮತ್ತವರ ವಚನಗಳಲ್ಲಿ ಅಕ್ಕಮಹಾದೇವಿಯ ವಚನದ ಬದಲಿಗೆ ಅಕ್ಕಮ್ಮಳ ವಚನವನ್ನು ಕೊಡಲಾಗಿದೆ. ಅಕ್ಕಮಹಾದೇವಿಯ ಹೆಸರಿನೊಂದಿಗೆ ಬೇರೆ ಯಾವ ಆಯ್ಕೆಯೂ ಹೊಂದಾಣಿಕೆ ಆಗುವುದಿಲ್ಲ. ಹೊಂದಿಸಿ ಬರೆಯಿರಿಯಲ್ಲಿ ಇರುವ ಕವಿ ‘ಕೆ.ಎಸ್. ನರಸಿಂಹವರ್ಮ’ ಯಾರು? ಇದೇ ಪ್ರಶ್ನೆಯಲ್ಲಿ ಕೆ.ಎಸ್. ನಿಸಾರ್ ಅಹಮದ್ ಅವರ ಹೆಸರನ್ನು ‘ಕೆ.ಸ್’ ಎಂದು ಬರೆಯಲಾಗಿದೆ.
ರಾಘವೇಂದ್ರ ಖಾಸನೀಸ ಬದಲಿಗೆ ‘ನಾಘವೇಂದ್ರ ಖಾಸನೀಸ’ ಎಂದು ಮುದ್ರಿಸಲಾಗಿದೆ. ವೈ.ಸಿ. ಭಾನುಮತಿಯವರು ಸಂಪಾದಿಸಿರುವ ಕೃತಿಗಳಲ್ಲಿ ಒಂದಾದ ‘ನಿಜಚಿಕ್ಕಲಿಂಗಯ್ಯ ಸಾಂಗತ್ಯ’ವನ್ನು ‘ನಿಜಲಿಂಗ ಚಿಕ್ಕಯ್ಯನ ಸಾಂಗತ್ಯ’ ಎಂದು ಬರೆಯಲಾಗಿದೆ. ಪ್ರಶ್ನೆ ಸಂಖ್ಯೆ 102ರಲ್ಲಿ ಕೊಟ್ಟಿರುವ ಬಹು ಆಯ್ಕೆಯ ಇಂಗ್ಲೀಷ್ ಸೂಚಕಗಳು ಸಿ ಮತ್ತು ಡಿ ಆಗಬೇಕಿತ್ತು. ಆದರೆ ಎರಡೂ ಸಿ, ಸಿ ಆಗಿವೆ.
ಪ್ರಾಧ್ಯಾಪಕರ ನೇಮಕಾತಿ ಅಕ್ರಮ: ದೂರು ಬಂದ್ರೂ 22 ದಿನ ಸೈಲೆಂಟಾಗಿದ್ದ ಪ್ರಾಧಿಕಾರ..!
ಪ್ರಶ್ನೆಸಂಖ್ಯೆ 18ರ ಆಯ್ಕೆಗಳಲ್ಲಿ ಕೊಟ್ಟಿರುವ ಕೃತಿಯ ಹೆಸರಾದ ‘ವಿಮರ್ಶೆಯ ನರಿಭಾಷೆ’ಯ ಕರ್ತೃ ಯಾರೆಂಬುದನ್ನು ಕೇಳಲಾಗಿದೆ. ಅಂತಹ ಕೃತಿ ಇದೆಯೇ ಎಂಬುದನ್ನು ಕನ್ನಡ ಪರೀಕ್ಷಾ ಪ್ರಾಧಿಕಾರ ತಿಳಿಸಬೇಕು. ಇನ್ನು ಪ್ರಶ್ನೆ ಸಂಖ್ಯೆ 13ರಲ್ಲಿ ಯಾವ ಸೂಚನೆಯೇ ಕೊಡದೆ ಪ್ರಶ್ನೆಗೆ ಉತ್ತರವನ್ನು ಗುರುತಿಸುವಂತೆ ಮಾಡಲಾಗಿದೆ. ಈ ಪ್ರಶ್ನೆಯ ಉತ್ತರದಲ್ಲಿ ಎರಡನೇ ಆಯ್ಕೆಗೆ (ಆಯ್ಕೆ ಬಿ), ಉಳಿದ ಮೂರು ಆಯ್ಕೆಗಳು ರೋಮನ್ ಸಂಖ್ಯೆಗಳಾಗಿವೆ. ವಿಚಿತ್ರವೆಂದರೆ ಭಿನ್ನವಾಗಿರುವುದೇ ಉತ್ತರವಾಗಿದೆ. ಇದು ಪರೀಕ್ಷಾ ಅಕ್ರಮದ ಸೂಚನೆಯಾಗಿವುದರಲ್ಲಿ ಸಂಶಯವೇ ಇಲ್ಲ ಎಂದು ಹೋರಾಟ ಸಮಿತಿ ಸದಸ್ಯರು ದೂರಿದ್ದಾರೆ.
ತಪ್ಪು ಉತ್ತರಗಳಿಗೆ ಅಂಕ ಎಂದು ಮೊದಲೇ ಏಕೆ ಹೇಳಿಲ್ಲ?: ಹೋರಾಟ ಸಮಿತಿ
ಮುಖಪುಟದಲ್ಲಿ ಋುಣಾತ್ಮಕ ಅಂಕಗಳ ಕುರಿತಾಗಿ ಯಾವ ಸೂಚನೆಯನ್ನೂ ನಮೂದಿಸಿಲ್ಲ. ಹೀಗಾಗಿ ಬಹುತೇಕರು 125 ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇದು ಪ್ರಾಧಿಕಾರದ ತಪ್ಪು. ಇನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮೊದಲ ಪುಟದಲ್ಲಿ ಅಭ್ಯರ್ಥಿಗಳಿಗೆ ಸಾಕಷ್ಟುಸೂಚನೆಗಳನ್ನು ನೀಡಿದೆ. ಆದರೆ ‘ತಪ್ಪು ಉತ್ತರಕ್ಕೆ ಅಂಕಗಳನ್ನು ನೀಡಲಾಗುತ್ತದೆ’ ಎಂಬ ಸೂಚನೆ ಏಕೆ ಕೊಟ್ಟಿಲ್ಲ? ಈ ಸೂಚನೆ ಮುದ್ರಿಸುವುದಕ್ಕೆ ಜಾಗದ ಕೊರತೆ ಇತ್ತೇ? ಎಂದು ಹೋರಾಟ ಸಮಿತಿ ಸದಸ್ಯರು ಪ್ರಶ್ನಿಸಿದ್ದಾರೆ.
