ಪ್ರಿಯಾಂಕಾ ಗಾಂಧಿಯವರನ್ನ ಕಿತ್ತೂರು ರಾಣಿ ಚೆನ್ನಮ್ಮಗೆ ಹೋಲಿಸಿದ್ರೆ ತಪ್ಪೇನು? : ಸಚಿವ ಶಿವರಾಜ ತಂಗಡಗಿ
ಪ್ರಿಯಾಂಕಾ ಗಾಂಧಿಯವರನ್ನು ಕಿತ್ತೂರು ರಾಣಿ ಚೆನ್ನಮ್ಮಗೆ ಹೋಲಿಸಿದ್ದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದಕ್ಕೆ ಸಚಿವ ಶಿವರಾಜ್ ತಂಗಡಗಿ ತೀವ್ರವಾಗಿ ತಿರುಗೇಟು ನೀಡಿದ್ದಾರೆ. ಪ್ರಧಾನಿ ಮೋದಿ ತಪ್ಪುಗಳನ್ನು ಪ್ರಿಯಾಂಕಾ ಎತ್ತಿ ತೋರಿಸುತ್ತಿರುವುದೇ ಬಿಜೆಪಿಗೆ ನೋವುಂಟು ಮಾಡಿದೆ ಎಂದಿದ್ದಾರೆ. ದೇಶಕ್ಕಾಗಿ ತ್ಯಾಗ ಮಾಡಿದ ಕುಟುಂಬವನ್ನು ಕಿತ್ತೂರು ರಾಣಿಗೆ ಹೋಲಿಸುವುದರಲ್ಲಿ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಕೊಪ್ಪಳ (ಜ.22): ಪ್ರಿಯಾಂಕಾ ಗಾಂಧಿಯವರನ್ನ ಕಿತ್ತೂರು ರಾಣಿ ಚೆನ್ನಮ್ಮಗೆ ಹೋಲಿಸಿದ್ರೆ ತಪ್ಪೇನು? ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಬಿಜೆಪಿ ವಿರೆದ್ಧ ಹರಿಹಾಯ್ದರು.
ಬೆಳಗಾವಿಯಲ್ಲಿ ನಡೆದ 'ಗಾಂಧಿ ಭಾರತ' ಸಮಾವೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಿಯಾಂಕಾ ಗಾಂಧಿಯವರನ್ನ ಕಿತ್ತೂರು ರಾಣಿ ಚೆನ್ನಮ್ಮಗೆ ಹೋಲಿಕೆ ಮಾಡಿರುವ ವಿಚಾರವಾಗಿ ಬಿಜೆಪಿಯವರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಕೊಪ್ಪಳದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಬಿಜೆಪಿಯವರು ತಾವು ಮಾತ್ರ ಯಾರಿಗೆ ಬೇಕಾದ್ರೂ ಹೋಲಿಸಬಹುದು, ಆದ್ರೆ ಪ್ರಿಯಾಂಕಾ ಗಾಂಧಿ ಅವರನ್ನ ಕಿತ್ತೂರು ಚೆನ್ನಮ್ಮ ಹೋಲಿಕೆ ಮಾಡಿದ್ರೆ ತಪ್ಪು ಹೇಗಾಗುತ್ತೆ ಎಂದು ಪ್ರಶ್ನಿಸಿದರು.
ಪ್ರಿಯಾಂಕಾ ಗಾಂಧಿಯವರನ್ನ ಕಿತ್ತೂರು ಚೆನ್ನಮ್ಮಗೆ ಹೋಲಿಕೆ ಮಾಡಿದ್ರೆ ಬಿಜೆಪಿಯವರಿಗೆ ನೋವಾಗುತ್ತೆ. ಏಕೆಂದರೆ ಪ್ರಧಾನಿ ಮೋದಿ ತಪ್ಪು ಮಾಡಿದಾಗ ಅದನ್ನ ಎತ್ತಿ ಹೇಳುವ ಕೆಲಸ ಪ್ರಿಯಾಂಕಾ ಗಾಂಧಿ ಮಾಡ್ತಿದ್ದಾರೆ. ದೇಶಕ್ಕಾಗಿ ಅನೇಕ ತ್ಯಾಗ ಮಾಡಿದ ಕುಟುಂಬವದು. ಅಂತಹ ತ್ಯಾಗ ಮಾಡಿದ ಕುಟುಂಬವನ್ನು ಕಿತ್ತೂರು ವೀರರಾಣಿ ಚೆನ್ನಮ್ಮಗೆ ಹೋಲಿಕೆ ಮಾಡುವುದರಲ್ಲಿ ತಪ್ಪಿಲ್ಲ ಎಂದರು.
ಇದನ್ನೂ ಓದಿ: ಗಾಂಧಿ ಕಂಡ ಭಾರತ ಮಾಡ್ತಿರೋದು ಕಾಂಗ್ರೆಸ್ ಅಲ್ಲ.. ಮೋದಿ! BJP MLC Ravi Kumar on Congress | Suvarna News
ಇನ್ನು ಡಿಕೆ ಶಿವಕುಮಾರ ಸಿಎಂ ಆಗಬೇಕು ಎಂಬ ಜೈನ ಮುನಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಸಿಎಂ ವಿಚಾರ ಸೇರಿದಂತೆ ಪಕ್ಷದ ವಿಚಾರಗಳನ್ನು ಮಾತನಾಡದಂತೆ ಹೈಕಮಾಂಡ್ ಸೂಚಿಸಿದೆ. ಹೀಗಾಗಿ ಆ ವಿಚಾರದ ಬಗ್ಗೆ ಪ್ರತಿಕ್ರಿಯಿಸಲಾರೆ. ಸಿಎಂ ಬದಲಾವಣೆ ನಿರ್ಧಾರವನ್ನು ನಮ್ಮ ಹೈಕಮಾಂಡ್ ನೋಡಿಕೊಳ್ಳುತ್ತದೆ. ಅದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದರು. ಇದೇ ವೇಳೆ ಸಚಿವರು ಡಿನ್ನರ್ ಸಭೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಸಚಿವರು ಚಹಾ, ಊಟಕ್ಕೆ ಸೇರಿದ್ರೆ ತಪ್ಪೇನಿದೆ? ಇವೆಲ್ಲ ಸಾಮಾನ್ಯವಾಗಿ ನಡೆಯುತ್ತಿರುತ್ತವೆ. ಆದರೆ ಬೇರೆ ಉದ್ದೇಶಕ್ಕಾಗಿ ಸೇರೋದು ಸರಿಯಲ್ಲ ಎಂದರು.