ಭಾರತದಲ್ಲಿರುವ ಪಾಕಿಸ್ತಾನಿ ಪ್ರಜೆಗಳನ್ನು ಹುಡುಕಿ ಗಡೀಪಾರು ಮಾಡುವಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮುಖ್ಯಮಂತ್ರಿಗಳಿಗೆ ಸೂಚನೆ ನೀಡಿದ ಬೆನ್ನಲ್ಲೇ ರಾಜ್ಯದಲ್ಲಿ ನೆಲೆಸಿರುವ ಪಾಕ್‌ ಪ್ರಜೆಗಳಿಗೆ ಆತಂಕ ಶುರುವಾಗಿದೆ. 

ಗಿರೀಶ್ ಮಾದೇನಹಳ್ಳಿ

ಬೆಂಗಳೂರು (ಏ.26): ಭಾರತದಲ್ಲಿರುವ ಪಾಕಿಸ್ತಾನಿ ಪ್ರಜೆಗಳನ್ನು ಹುಡುಕಿ ಗಡೀಪಾರು ಮಾಡುವಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮುಖ್ಯಮಂತ್ರಿಗಳಿಗೆ ಸೂಚನೆ ನೀಡಿದ ಬೆನ್ನಲ್ಲೇ ರಾಜ್ಯದಲ್ಲಿ ನೆಲೆಸಿರುವ ಪಾಕ್‌ ಪ್ರಜೆಗಳಿಗೆ ಆತಂಕ ಶುರುವಾಗಿದೆ. ರಾಜ್ಯದಲ್ಲಿ 108 ಮಂದಿ ಪಾಕ್‌ ಪ್ರಜೆಗಳು ಇದ್ದಾರೆ. ಆ ಪೈಕಿ 88 ಮಂದಿ ವೈವಾಹಿಕ ಸಂಬಂಧವನ್ನು ಹೊಂದಿದ್ದು, ಅವರ ಕತೆ ಏನು ಎಂಬುದರ ಬಗ್ಗೆ ಗೊಂದಲವಿದೆ. ಪಾಕಿಸ್ತಾನ ಮೂಲದವರು ದೀರ್ಘಕಾಲ ನೆಲೆಸುವ ವೀಸಾ (ಲಾಂಗ್‌ ಟರ್ಮ್‌ ವೀಸಾ- ಎಲ್‌ಟಿವಿ) ಅಡಿ ಭಾರತಕ್ಕೆ ಆಗಮಿಸಿ ಇಲ್ಲಿನವರನ್ನು ವರಿಸಿದ್ದಾರೆ. ಕಾಲಕಾಲಕ್ಕೆ ಆ ವೀಸಾಗಳನ್ನು ನವೀಕರಣ ಮಾಡಿಸಿಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ, ಇಂತಹ ವೀಸಾ ಪಡೆದು ಬಂದಿರುವ ಪಾಕಿಸ್ತಾನದ ಹಿಂದುಗಳಿಗೆ ವಿನಾಯಿತಿ ಇರುತ್ತದೆ. ಆದರೆ ಹತ್ತಿಪ್ಪತ್ತು ವರ್ಷಗಳಿಂದ ಇಲ್ಲೇ ಸಂಸಾರ ಮಾಡುತ್ತಿರುವವರ ಭವಿಷ್ಯ ಏನು ಎಂಬುದರ ಬಗ್ಗೆ ಏನೆಂದು ಗೊತ್ತಾಗುತ್ತಿಲ್ಲ.

ಉಳಿದಂತೆ, ಭಯೋತ್ಪಾದಕ ಪ್ರಕರಣಗಳು ಸೇರಿ ವಿವಿಧ ಅಪರಾಧ ಪ್ರಕರಣಗಳಲ್ಲಿ ರಾಜ್ಯದಲ್ಲಿ 13 ಮಂದಿ ಪಾಕಿಸ್ತಾನ ಪ್ರಜೆಗಳು ಬಂಧಿತರಾಗಿದ್ದಾರೆ. ಈ ಪ್ರಜೆಗಳ ವಿರುದ್ಧ ನ್ಯಾಯಾಲಯದ ವಿಚಾರಣೆ ಬಾಕಿ ಇರುವ ಕಾರಣಕ್ಕೆ ಸ್ವದೇಶಕ್ಕೆ ಕಳುಹಿಸಲು ತಾಂತ್ರಿಕ ಅಡಚಣೆ ಇದೆ. ಪ್ರವಾಸ ಹಾಗೂ ವೈದ್ಯಕೀಯ ಚಿಕಿತ್ಸೆ ಕಾರಣಕ್ಕೆ ವೀಸಾ ಪಡೆದು ರಾಜ್ಯಕ್ಕೆ ಬಂದಿರುವ ಪಾಕಿಸ್ತಾನ ಪ್ರಜೆಗಳನ್ನು ಗುರುತಿಸಿ ಸ್ವದೇಶಕ್ಕೆ ಮರಳಿ ಕಳುಹಿಸಲು ರಾಜ್ಯ ಪೊಲೀಸರು ಹಾಗೂ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆಓಓ) ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಎರಡು ವೀಸಾದಲ್ಲಿ ಬಂದವರ ಪೈಕಿ ಬಹುತೇಕರು ಕೇಂದ್ರ ಸರ್ಕಾರದ ಗಡುವಿನ ಅನ್ವಯ ಸ್ವದೇಶಕ್ಕೆ ಗೇಟ್ ಪಾಸ್‌ ಆಗಲಿದ್ದಾರೆ ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.

ಪಹಲ್ಗಾಂ ರಕ್ಕಸರಿಗಾಗಿ ಕಾರ್ಯಾಚರಣೆ: ಉಗ್ರಗಾಮಿಗಳ ಬೇಟೆ ಶುರು

88 ಮಂದಿಗೆ ವೈವಾಹಿಕ ಸಂಬಂಧ: ಹಲವು ವರ್ಷಗಳಿಂದ ಪಾಕಿಸ್ತಾನದ ಕುಟುಂಬಗಳ ಜತೆ ರಾಜ್ಯದ ಕೆಲ ಕುಟುಂಬಗಳು ವೈವಾಹಿಕ ಸಂಬಂಧ ಹೊಂದಿದ್ದು, ಇವರು ಕೂಡ ಈ 108 ಮಂದಿಯಲ್ಲಿ ಸೇರಿದ್ದಾರೆ. ಬೆಂಗಳೂರಿನ ಬಸವನಗುಡಿಯಲ್ಲಿ 40, ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ 14, ಮೈಸೂರು ಹಾಗೂ ಮಂಗಳೂರು ಸೇರಿ ರಾಜ್ಯದ ವಿವಿಧೆಡೆ ಒಟ್ಟು 88 ಮಂದಿ ಈ ರೀತಿ ನೆಲೆಸಿದ್ದಾರೆ. ಭಾರತದಲ್ಲಿ ಬಹುಕಾಲ ನೆಲೆಸುವ ವೀಸಾವನ್ನು (ಎಲ್‌ಟಿವಿ) ಆ ದೇಶವಾಸಿಗಳಿಗೆ ಕಾನೂನು ಪ್ರಕಾರ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.

13 ಮಂದಿ ಸೆರೆ ಹಕ್ಕಿಗಳು: ರಾಜ್ಯದಲ್ಲಿ ಭಯೋತ್ಪಾದಕ ಕೃತ್ಯಗಳು ಸೇರಿ ಇತರೆ ಅಪರಾಧ ಪ್ರಕರಣಗಳಲ್ಲಿ ಸುಮಾರು 13ಕ್ಕೂ ಅಧಿಕ ಪಾಕಿಸ್ತಾನ ಪ್ರಜೆಗಳು ಬಂಧಿತರಾಗಿದ್ದಾರೆ. ಈ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿವೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಹಾಗೂ ಬೆಳಗಾವಿಯ ಕೇಂದ್ರ ಕಾರಾಗೃಹಗಳಲ್ಲಿ ಪಾಕ್‌ ಮೂಲದ ಈ ಶಂಕಿತ ಉಗ್ರರು ಬಂಧನದಲ್ಲಿದ್ದಾರೆ. ಕೆಲ ತಿಂಗಳ ಹಿಂದೆ ಆನೇಕಲ್, ದಾವಣಗೆರೆ ಹಾಗೂ ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಕೆಲ ಪಾಕ್‌ ಪ್ರಜೆಗಳ ಬಂಧನವಾಗಿತ್ತು. ನ್ಯಾಯಾಲಯದ ವಿಚಾರಣೆ ಬಾಕಿ ಕಾರಣಕ್ಕೆ ಆರೋಪಿಗಳನ್ನು ದೇಶದಿಂದ ಹೊರಕಳುಹಿಸಲು ಕಾನೂನು ತೊಡಕಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬಂಗಾರಿ ಜತೆ ಸಹವಾಸ: ಶಾಸಕ ವಿನಯ್‌ ಕುಲಕರ್ಣಿಗೆ ಬಂಧನ ಭೀತಿ

4-5 ಹೊರಕ್ಕೆ: ಇನ್ನು ರಾಜ್ಯಕ್ಕೆ ವೈದ್ಯಕೀಯ ಹಾಗೂ ಪ್ರವಾಸ ವೀಸಾದಡಿ ಬಂದಿದ್ದ 4-5 ಮಂದಿ ಪಾಕ್‌ ಪ್ರಜೆಗಳನ್ನು ರಾಜ್ಯ ಗುಪ್ತದಳ ಹಾಗೂ ಎಫ್‌ಆಒಒ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಕೇಂದ್ರ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಆ ಪ್ರಜೆಗಳನ್ನು ದೇಶದಿಂದ ಹೊರ ಕಳುಹಿಸುವ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.