Asianet Suvarna News Asianet Suvarna News

‘ಭಾರತ’ದ ಅರ್ಥವೇನು? ಅದರ ಮೂಲವೇನು?: ಡಾ.ಗುರುಪಾದ ಹೆಗಡೆ

ಸನಾತನ ಧರ್ಮ, ಅದರಲ್ಲಿರುವ ಅಗಾಧ ಜ್ಞಾನ: ನಾವಿನ್ನೂ ತಿಳಿಯದ ಅದ್ಭುತ ವೈಶಿಷ್ಟ್ಯಗಳು: ಪ್ರೊ.ಡಾ.ಗುರುಪಾದ ಕೆ.ಹೆಗಡೆ ಮೈಸೂರು

What does India mean and What is its Origin Says Pro Dr Gurupad Hegde  grg
Author
First Published Oct 14, 2023, 12:44 PM IST

ಅತ್ಯಂತ ಪುರಾತನವೆಂದು ಭಾವಿಸಲಾದ ಗ್ರೀಕ್ ನಾಗರಿಕತೆಯೇ ಮುಂತಾದ ಜಗತ್ತಿನ ಎಲ್ಲ ನಾಗರಿಕತೆಗಳ ಪ್ರಾರಂಭಕ್ಕಿಂತಲೂ ಎಷ್ಟೋ ಸಾವಿರ ವರುಷಗಳ ಹಿಂದೆಯೇ ಈ ಭಾರತವರ್ಷದಲ್ಲಿ ವೇದಗಳ ಉಚ್ಛ್ರಾಯ ಕಾಲವು ಗತಿಸಿಹೋಗಿದೆ. ಹೀಗಾಗಿ ಈ ದೇಶವನ್ನು ಸನಾತನ ನಾಗರಿಕ ದೇಶವೆಂದು ಕರೆಯಲಾಗುತ್ತದೆ.

ಜ್ಞಾನಾರ್ಥಕೋ ಹಿ ಭಾಶಬ್ದೋ ಭಾಯಾಂ ರತಸ್ತು ಭಾರತಃ
ಭಾರತವರ್ಷ ಇತ್ಯಾರ್ಷಕಾಲೇಸೌ ಸರ್ವಸಂಸ್ತುತಃ

ನನ್ನ “ಭಾರತ-ಭಾರತಾಂಬೇ ಯಥಾರ್ಥತಃ” ಅನ್ನುವ ಪದ್ಯದ ಪ್ರಥಮ ಶ್ಲೋಕವಿದು. ಆರ್ಷಕಾಲವೆಂದರೆ ವೇದಗಳು ದರ್ಶನಕ್ಕೆ ಬಂದೊದಗಿದ ಕಾಲ. ಅದು ಪ್ರಾಚೀನ ಋಷಿ-ಮುನಿಗಳ ಕಾಲ. ಪ್ರಾಚೀನಕಾಲ ಅನ್ನುವ ಅರ್ಥವನ್ನು ಕೊಡುವ ಪಾರಿಭಾಷಿಕ ಶಬ್ದ ಸನಾತನ. ವೇದಗಳನ್ನು ಋಷಿ-ಮುನಿಗಳು ದರ್ಶಿಸಿದ ಕಾಲವು ಊಹಾತೀತವಾಗಿ ಪ್ರಾಚೀನವಾದದ್ದು; ಅಂದರೆ ಸನಾತನವಾದದ್ದು. ಆ ಕಾಲದಲ್ಲಿ ಈ ದೇಶವನ್ನು ಭಾರತವರ್ಷ ಎಂದು ಕರೆಯಲಾಗುತ್ತಿತ್ತು. ವರ್ಷ ಅನ್ನುವ ಶಬ್ದಕ್ಕೆ ಜಗತ್ತಿನ ಒಂದು ಭಾಗ, ಅರ್ಥಾತ್ ದೇಶ ಅನ್ನುವ ಅರ್ಥವೂ ಇದೆ. ಯಜ್ಞ-ಪೂಜಾದಿಗಳ ಸಂಕಲ್ಪದ ಸಮಯದಲ್ಲಿ ಆ ಸನಾತನಕಾಲದಿಂದಲೂ ‘ಭರತಖಂಡೇ’, ‘ಭಾರತವರ್ಷೇ’ ಎಂಬ ಶಬ್ದಗಳು ಹಾಸು-ಹೊಕ್ಕಾಗಿ ಬಂದಿವೆ. ಆ ಪ್ರಾಚೀನಕಾಲದಿಂದ ನಿತ್ಯಬಳಕೆಯಲ್ಲಿ ಉಳಿದುಬಂದ ಯಾವುದೇ ಶಬ್ದವೂ ವಿಶೇಷಾರ್ಥವಿಲ್ಲದೆ ರೂಪುಗೊಂಡಿದ್ದಲ್ಲ. ಭಾರತ ಅನ್ನುವ ಶಬ್ದದಿಂದ ಮೊದಲುಗೊಂಡು ವೇದ-ರಾಮಾಯಣ-ಮಹಾಭಾರತಾದಿಗಳಲ್ಲಿ ಬರುವ ಸನಾತನ ಹೆಸರುಗಳೆಲ್ಲವೂ ವಿಶೇಷಾರ್ಥ ಅಥವಾ ರಹಸ್ಯಾರ್ಥಗಳನ್ನಿಟ್ಟುಕೊಂಡೇ ರೂಪುಗೊಂಡು ಬಂದಿವೆ. ‘ಭಾರತ’ ಅನ್ನುವ ಶಬ್ದದಲ್ಲಿಯೂ, ಅಥವಾ ‘ಭರತಖಂಡ’ ಅನ್ನುವ ಶಬ್ದದಲ್ಲಿಯೂ ‘ಭಾ’ ಅಥವಾ “ಭ’ ಅನ್ನುವುದು ಜ್ಞಾನ ಹಾಗೂ ಪ್ರಕಾಶ ಅನ್ನುವ ಅರ್ಥಗಳಲ್ಲಿದ್ದು ಅವುಗಳಲ್ಲಿ ‘ರತ’- ತೊಡಗಿಕೊಂಡವರ ದೇಶ ಎಂಬ ಅರ್ಥದಲ್ಲಿ ಈ ದೇಶವನ್ನು ಭಾರತವರ್ಷ ಅಥವಾ ಭರತಖಂಡ ಎಂದು ಕರೆಯಲಾಯಿತು. ಅತ್ಯಂತ ಪುರಾತನವೆಂದು ಭಾವಿಸಲಾದ ಗ್ರೀಕ್ ನಾಗರಿಕತೆಯೇ ಮುಂತಾದ ಜಗತ್ತಿನ ಎಲ್ಲ ನಾಗರಿಕತೆಗಳ ಪ್ರಾರಂಭಕ್ಕಿಂತಲೂ ಎಷ್ಟೋ ಸಾವಿರ-ಸಾವಿರ ವರುಷಗಳ ಹಿಂದೆಯೇ ಈ ಭಾರತವರ್ಷದಲ್ಲಿ ವೇದಗಳ ಉಚ್ಛ್ರಾಯ ಕಾಲವು ಗತಿಸಿಹೋದದ್ದರಿಂದ ಈ ದೇಶವನ್ನು ಸನಾತನ ನಾಗರಿಕ ದೇಶವೆಂದು ಭಾವಿಸುವುದು ಅತ್ಯಂತ ಯೋಗ್ಯ.

ಸನಾತನ ಧರ್ಮದ ಬಗ್ಗೆ ಮಾತನಾಡಿದ್ರೆ ಸುಮ್ಮನಿರಲ್ಲ: ಪೇಜಾವರ ಶ್ರೀ

ವೇದಗಳ ಕಾಲ ಯಾವುದು?

ವೇದಗಳ ಆರ್ಷಕಾಲವು ಊಹೆಗೂ ನಿಲುಕದಷ್ಟು ಪ್ರಾಚೀನವಾದುದು ಅನ್ನಲು ಮುಖ್ಯ ಕಾರಣ ಸನಾತನವಾಗಿ ಬಂದ ಯಾವುದೇ ಧಾರ್ಮಿಕ ಕಾರ್ಯಕ್ರಮದ ಆಶೀರ್ಮಂತ್ರಗಳಲ್ಲಿ ಬರುವ “ಚಿತ್ತಾನಕ್ಷತ್ರಂ ಭವತಿ” ಅನ್ನುವ ವಾಕ್ಯ . ಚಿತ್ತಾನಕ್ಷತ್ರದಲ್ಲಿ ಸೂರ್ಯನಿದ್ದಾಗ ಆಗಿನ ಕಾಲದಲ್ಲಿ ಯುಗಾದಿ ಹಬ್ಬವು ಬರುತ್ತಿತ್ತು ಅನ್ನುವುದನ್ನು ಈ ವಾಕ್ಯವು ಸೂಚಿಸುತ್ತದೆ. ಈಗ ಯುಗಾದಿ ಹಬ್ಬದಂದು ಸೂರ್ಯನಿರುವುದು ಉತ್ತರಾಭಾದ್ರಾ ನಕ್ಷತ್ರದಲ್ಲಿ. ಸೂರ್ಯನು ತನ್ನ ಅಕ್ಷದಲ್ಲಿ ೭೨ ವರುಷಗಳಿಗೆ ಒಂದು ಅಂಶ ಅಥವಾ ಡಿಗ್ರಿ ಹಿಂದೆ ಸರಿಯುತ್ತ ಉತ್ತರಾಭಾದ್ರಕ್ಕೆ ಬರುವಷ್ಟರಲ್ಲಿ ೧೮೦ ಅಂಶಗಳು ಕಳೆದಿರುತ್ತವೆ; ಅಂದರೆ, ಸುಮಾರು ಹದಿಮೂರು ಸಾವಿರ ವರುಷಗಳು ಗತಿಸಿರುತ್ತವೆ. ಈ ಲೆಕ್ಕದಂತೆ ಕ್ರಿ.ಪೂ. ಹನ್ನೊಂದು ಸಾವಿರ ವರುಷಗಳಷ್ಟು ಹಿಂದೆಯೇ ಈ “ಚಿತ್ತಾನಕ್ಷತ್ರಂ ಭವತಿ” ಅನ್ನುವುದು ರೂಢಿಯಲ್ಲಿ ಬಂದಿರಬೇಕು. ಅದು ವೇದಗಳು ಕಾಣಿಸಿಕೊಳ್ಳುತ್ತ ಬಂದ ಪರಮೋಚ್ಚ ಕಾಲವೆಂದು ಭಾವಿಸಿದಾಗ ಅದಕ್ಕಿಂತಲೂ ಸಾವಿರಗಟ್ಟಲೆ ವರುಷಗಳ ಮೊದಲಿನಿಂದಲೇ ವೇದಗಳ ಆರಂಭದ ಕಾಲವೆಂದು ಭಾವಿಸಬೇಕಾಗುತ್ತದೆ. ಆದುದರಿಂದ ‘ಭಾರತವರ್ಷ’ ಎಂಬ ಹೆಸರು ತನ್ನ ವಿಶೇಷಾರ್ಥದೊಂದಿಗೆ ಅಸ್ತಿತ್ವಕ್ಕೆ ಬಂದದ್ದು ಕ್ರಿ.ಪೂ ಹದಿನಾಲ್ಕು-ಹದಿನೈದು ಸಹಸ್ರಗಟ್ಟಲೆ ವರುಷಗಳ ಹಿಂದಿನಿಂದಲೇ ಅನ್ನುವುದು ಮನದಟ್ಟಾಗದಿರದು. ಈ ಹಿಂದೆ ವೇದಗಳ ಪ್ರಾರಂಭದ ಕಾಲವನ್ನು ನಿರ್ಣಯಿಸುವವರು ಯಾರೂ ಕೂಡ ಈ ಖಗೌಲಿಕವಾದ ಆಂತರಿಕ ಕಾರಣವನ್ನು ಕಂಡುಹಿಡಿದಿದ್ದಿಲ್ಲ. ಆದುದರಿಂದ ಅವರಲ್ಲಿ ಯಾರೂ ಕೂಡ ಕ್ರಿ.ಪೂರ್ವ ಆರೇಳು ಸಾವಿರ ವರುಷಗಳಿಗೆ ಹಿಂದೆ ಹೋದದ್ದೇ ಇಲ್ಲ. ನಾನು ಕಂಡು ಹಿಡಿದ ಈ ಸೂರ್ಯಸಂಬಂಧೀಕಾರಣವು ಅತ್ಯಂತ ವಾಸ್ತವವಾದದ್ದು.

ಭಾರತ ಪದಕ್ಕೆ ಭರತ ಕಾರಣನಲ್ಲ

ಆಗಿನ ಸನಾತನ ಕಾಲವನ್ನು ಆರ್ಷಕಾಲವೆಂದು ಕರೆಯಲಾಯಿತು. ಏಕೆಂದರೆ ಅದು ಋಷಿ-ಮುನಿಗಳ ಕಾಲ. ಆಗಿನ ಕಾಲದಲ್ಲಿ ರಾಜರಿಂದ ಮೊದಲುಗೊಂಡು ಸಾಮಾನ್ಯರವರೆಗಿನ ಎಲ್ಲರ ಮಕ್ಕಳ ವಿದ್ಯಾಭ್ಯಾಸವು ನಡೆಯುತ್ತಿದ್ದುದು ಋಷಿ-ಮುನಿಗಳ ಗುರುಕುಲಗಳಲ್ಲಿ. ಎಲ್ಲ ವಿಧ ಲೌಕಿಕ ವಿದ್ಯೆಗಳ ಜೊತೆ-ಜೊತೆಗೆ ಅಧ್ಯಾತ್ಮ ತತ್ತ್ವಗಳನ್ನೂ ಯೋಗ ಸಾಧನಾಕ್ರಮಗಳನ್ನೂ ಅಂದಿನ ಅಧ್ಯಾಪಕರಾದ ಋಷಿಮುನಿಗಳು ಬೋಧಿಸುತ್ತಿದ್ದರು. ಅಂತಹ ಶಿಕ್ಷಣವನ್ನು ಪಡೆದ ಜ್ಞಾನಸಂಪನ್ನ ರಾಜಕುವರರು, ಸಗರ, ಭಗೀರಥ, ದಶರಥ, ಜನಕ, ಶ್ರೀರಾಮರ ರೀತಿಯಲ್ಲಿ ಸತ್ಯ, ಧರ್ಮ ಅರ್ಥಾತ್ ಕರ್ತವ್ಯಗಳ ಪರಿಪಾಲಕರಾಗಿ ಜ್ಞಾನವರ್ಧಕರೇ ಆಗಿದ್ದು ಋಷಿಗಳ ಮಾರ್ಗದರ್ಶನದಲ್ಲಿಯೇ ಪ್ರಜಾಪಾಲಕರಾಗಿರುತ್ತಿದ್ದರು. ಆದ್ದರಿಂದ ಅದು ಆರ್ಷಕಾಲ. ಆಗಿನ ಕಾಲದಲ್ಲಿ ಇಡೀ ಭಾರತವರ್ಷವು ಯಾವನೋ ಒಬ್ಬನೇ ರಾಜನ ಆಳ್ವಿಕೆಯಲ್ಲಿ ಎಂದಿಗೂ ಇದ್ದದ್ದಿಲ್ಲ. ಆದುದರಿಂದ ಭರತನೆಂಬ ರಾಜನು ಆಳಿದ್ದರಿಂದ ಈ ದೇಶಕ್ಕೆ ಭಾರತ ಎಂಬ ಹೆಸರು ಬಂದದ್ದು ಎಂದು ಭಾವಿಸುವುದು ಸುತರಾಂ ಸರಿಯಲ್ಲ. ಇಷ್ಟು ಮಾತ್ರವಲ್ಲದೆ ರಾಮಾಯಣದ ಭರತನಾಗಲೀ ದುಷ್ಯಂತ-ಶಕುಂತಲಾ ಪುತ್ರ ಭರತನಾಗಲೀ, ಜೈನ ಚಕ್ರವರ್ತಿ ಭರತನಾಗಲೀ, ಜ್ಞಾನಶ್ರೇಷ್ಠ ಜಡಭರತನಾಗಲೀ, ನಾಟ್ಯಶಾಸ್ತ್ರದ ಭರತಮುನಿಯಾಗಲೀ – ಈ ಎಲ್ಲ ಭರತರೂ ಭರತಖಂಡ-ಭಾರತವರ್ಷ ಎಂದು ಈ ದೇಶವನ್ನು ಗುರುತಿಸಿ ಸಾವಿರಗಟ್ಟಲೆ ವರುಷಗಳಾದ ಮೇಲೆ ಬಂದವರು. ಜ್ಞಾನರತದೇಶ, ಆತ್ಮಜ್ಞಾನರತದೇಶ ಅನ್ನುವ ಅರ್ಥದಲ್ಲಿಯೇ ಈ ದೇಶವನ್ನು ಭಾರತ ಎಂದು ಕರೆದದ್ದು ಅನ್ನುವುದರಲ್ಲಿ ಯಾವುದೇ ಸಂಶಯವೂ ಬೇಕಾಗಿಲ್ಲ.

ಮಹಾಭಾರತ, ರಾಮಾಯಣದ ಮೂಲ

ಪ್ರಪಂಚದ ಸನಾತನ ಕಾಲದ ಮೊದಲ ಗ್ರಂಥಗಳೆಂದರೆ ವೇದಗಳು; ಅರ್ಥಾತ್, ಋಗ್ವೇದದ ಮಂತ್ರಗಳಿಂದ ಮೊದಲುಗೊಂಡು ಉಪನಿಷತ್ತುಗಳವರೆಗೆ ಪ್ರವಹಿಸಿ ಬಂದ ವಾಗ್ದರ್ಶನಗಳು. ಅವೆಲ್ಲ ಅಲಿಖಿತವಾಗಿದ್ದವು. ಏಕೆಂದರೆ ಆಗ ಲಿಪಿಗಳೇ ಅಸ್ತಿತ್ವಕ್ಕೆ ಬಂದಿರಲಿಲ್ಲ. ಮುಂದೆ ಲಿಪಿಗಳ ಆವಿರ್ಭೂತಿಯೊಂದಿಗೆ ಲಿಖಿತ ರೂಪದಲ್ಲಿ ಬಂದೊದಗಿದವು ರಾಮಾಯಣ, ಮಹಾಭಾರತ, ಪುರಾಣಾದಿಗಳು. ಮೇಲುನೋಟಕ್ಕೆ ಈ ಎಲ್ಲವುಗಳಲ್ಲಿ ದೇವತೆಗಳನ್ನು ಹಾಗೂ ಅನಂತರದಲ್ಲಿ ದೇವಾಂಶಸಂಭೂತರನ್ನು ಕುರಿತು ಬಂದ ವಿವಿಧ ಸ್ತೋತ್ರ, ಮಂತ್ರ, ಘಟನಾವಳಿಗಳ ಸಂಯೋಜನೆಗಳಿದ್ದರೆ ಒಳನೋಟಕ್ಕೆ ಅರಿವಾಗುವಂತೆ ಭೌತಿಕ-ಆಧ್ಯಾತ್ಮಿಕ ವಿಷಯಗಳನ್ನು ಅನುಸ್ಯೂತವಾಗಿ ಪ್ರಸ್ತುತಪಡಿಸುವ ವಿಶೇಷತೆಗಳಿವೆ, ರಹಸ್ಯಾತ್ಮಕ ಅರ್ಥಗಳಿವೆ. ವೇದ ಅನ್ನುವ ಶಬ್ದವೂ ಸಹ ಮಂತ್ರ, ಸ್ತೋತ್ರಾರ್ಥಗಳೊಂದಿಗೆ ಪರಮಸತ್ಯದ ಹಾಗೂ ಧ್ಯಾನಗಮ್ಯಜ್ಞಾನದ, ಆತ್ಮಜ್ಞಾನದ ವಿವಿಧ ಮಜಲುಗಳನ್ನು, ಹಂತಗಳನ್ನು ಬೋಧಿಸುತ್ತದೆ. ರಾಮಾಯಣ ಹಾಗೂ ಮಹಾಭಾರತ ಎಂಬ ಶಬ್ದವೂ ಸಹ ರಹಸ್ಯಾರ್ಥವುಳ್ಳದ್ದೇ ಆಗಿದೆ.

ಪುರಾಣ ಎಂಬ ಶಬ್ದವೂ ಸಹ ಆತ್ಮವನ್ನು, ಜೀವಾತ್ಮವನ್ನು ‘ಪುರಾ’ - ಹಿಂದಕ್ಕೆ, ಅಂದರೆ ಜನ್ಮ-ಜನ್ಮಾಂತರಗಳನ್ನು ಪಡೆಯುತ್ತ ಬಂದದ್ದಕ್ಕಿಂತಲೂ ಹಿಂದಕ್ಕೆ, ಅರ್ಥಾತ್ ತನ್ನ ಪರಮಾತ್ಮಸ್ಥಿತಿಗೆ ‘ನ’ - ನಯತಿ ಇತಿ – ಕೊಂಡೊಯ್ಯುವ ಗ್ರಂಥ ಎಂಬ ಅರ್ಥವುಳ್ಳದ್ದು. ಇದೇ ರೀತಿ ರಾಮಾಯಣ, ಭಾರತ, ಪುರಾಣಗಳಲ್ಲಿ ಬರುವ ದೇವ, ರಾಜ, ಋಷಿ, ನಗರ, ನದಿ, ಪರ್ವತಾದಿಗಳನ್ನು ಅರ್ಥೈಸುವ ನಾಮಪದಗಳೆಲ್ಲವೂ ವಿಶೇಷಾರ್ಥಕಗಳಾಗಿದ್ದು ಐತಿಹಾಸಿಕವೆಂದೆನಿಸುವ ಕಥೆಗಳ ಮೂಲಕ ವೇದಗಳಲ್ಲಿ ರಹಸ್ಯವಾಗಿ ಸಂಯೋಜಿಸಲ್ಪಟ್ಟ ಪರಮಾತ್ಮದೆಡೆಗಿನ ಜೀವಾತ್ಮದ ನಡೆಯನ್ನು ಅನುಸ್ಯೂತವಾಗಿ ತಿಳಿಯಪಡಿಸುತ್ತವೆ.

ಋಷಿಗಳ ಹೆಸರಿನ ವೈಶಿಷ್ಟ್ಯಗಳು

ವೇದಗಳಲ್ಲಿ ಬರುವ ಅಗ್ನಿ, ಇಂದ್ರ ಮುಂತಾದ ದೇವತೆಗಳ ಹೆಸರುಗಳೂ ಹಾಗೂ ಸಮಾಧಿಸ್ಥಿತಿಯಲ್ಲಿ ತಮ್ಮ ಅಸ್ತಿತ್ವವನ್ನು ಆ ದೇವತೆಗಳಲ್ಲಿ ವಿಲೀನಗೊಳಿಸಿಕೊಂಡು ಅವೇ ತಾವಾಗಿ ಹಾಗೂ ಆ ಮಂತ್ರಗಳೇ ತಾವಾಗಿ ತಮ್ಮ ಅರಿವಿನಾಚೆಗಿನ ತತ್ತ್ವಗಳನ್ನು ಛಂದೋಬದ್ಧ ಶಬ್ದಗಳಲ್ಲಿ ಸಮಾಧಿ ಸ್ಥಿತಿಯಲ್ಲಿ ಒಡನುಡಿದ ಋಷಿಗಳ ಹೆಸರುಗಳೂ ಸಹ ವಿವಿಧಾರ್ಥಗಳುಳ್ಳದ್ದಾಗಿವೆ. ಉದಾಹರಣೆಗೆ ಅಗ್ನಿದೇವನು ಸಂದರ್ಭಾನುಗುಣವಾಗಿ ಋಷಿಯೂ ಆಗುವನು, ಯಜ್ಞದ ಯಜಮಾನನೂ ಆಗುವನು, ಪುರೋಹಿತನೂ ಆಗುವನು, ಸೂರ್ಯನೂ ಜೀವಾತ್ಮವೂ ಪರಮಾತ್ಮನೂ ಆಗುವನು. ಇಂದ್ರನು ಓಂಕಾರವೂ, ಸ್ಥಿತ್ಯಧಿಪನೂ, ವೃಷ್ಟ್ಯಧಿಪನೂ ದೇವರಾಜನೂ ಪರಮಾತ್ಮನೂ ಆಗುವುದಲ್ಲದೇ ಜೈವಿಕವಾದ ಹೃದಯವೂ ಪಿಟ್ಯೂಟರಿ ಗ್ರಂಥಿ ಮುಂತಾದವೂ ಆಗುವನು; ಮಿತ್ರಾವರುಣರು ಹಗಲು-ರಾತ್ರ್ಯಧಿಪರಾಗಿ, ಅನ್ನ ನೀರುಗಳ ಅಧಿಪತಿಗಳಾಗಿ, ಸದಸತ್ ತತ್ತ್ವಗಳಾಗಿ ಅರ್ಥೈಸುವರು. ಋಷಿಗಳೂ ಸಹ ಹೀಗೆಯೇ. ಉದಾಹರಣೆಗೆ ಅಂಗೀರಸ ಮಹರ್ಷಿಗಳು ಪುರೋಹಿತರೆಂಬ ಅರ್ಥದೊಂದಿಗೆ ಅಗ್ನಿತತ್ತ್ವ-ಪ್ರಾಣತತ್ತ್ವ ಮುಂತಾದ ಅರ್ಥಗಳುಳ್ಳವರು; ಕಣ್ವರು ಅಗ್ನಿಯೇ ಮುಂತಾದ ವಿವಿಧಾರ್ಥಗಳೊಂದಿಗೆ ಆಧ್ಯಾತ್ಮಿಕವಾದ ಸುಷುಮ್ನಾನಾಡಿಯ ಅರ್ಥದಲ್ಲಿಯೂ ಬಂದದ್ದಿದೆ; ವಸಿಷ್ಠರು ಸೂರ್ಯನೂ ಆಗಿ, ಸೂರ್ಯಕುಲದ ರಾಜರುಗಳ ಪುರೋಹಿತರೂ ಆಗಿ, ಕೂಟಸ್ಥನಿತ್ಯನಾದ ಪರಮಾತ್ಮನೂ ಆಗಿ, ಶರೀರದಲ್ಲಿ ಮಸ್ತಿಷ್ಕವೂ ಆಗಿ ನಿಲ್ಲುವರು; ವಿಶ್ವಾಮಿತ್ರ ಮಹರ್ಷಿಗಳು ಋಷಿ, ಸೂರ್ಯ, ಸೂರ್ಯನಿಂದ ಸಿಡಿದು ಬಂದ ಪ್ರತ್ಯಗಾತ್ಮವೇ ಮಾತ್ರವಲ್ಲದೆ ಪರಮಾತ್ಮನೂ ಆಗಿ ಅರ್ಥೈಸುವರು. ಇದೇ ರೀತಿ ಎಲ್ಲ ಋಷಿಗಳೂ ಹಾಗೂ ದೇವತೆಗಳೂ ವಿವಿಧಾರ್ಥಕರಾಗಿರುವರು.

ಭಾರತಚರಿತ್ರ ಪರೀಕ್ಷಾ ಓದಿರಿ

ಈಗ ತಾನೇ ಗತಿಸಿದ ೨೦ನೆಯ ಶತಮಾನದ ಮಂತ್ರದೃಷ್ಟಾರರೆನಿಸಿದ ಗೋಕರ್ಣದ ದೈವರಾತ ಮಹರ್ಷಿಗಳ ಗುರುಗಳಾಗಿದ್ದ ವಾಸಿಷ್ಠ ಗಣಪತಿ ಮುನಿಗಳೆನ್ನುವವರು ಮಹಾಭಾರತದ ಪ್ರಮುಖ ಪಾತ್ರಗಳು ಋಗ್ವೇದದಲ್ಲಿ ಬರುವುದನ್ನು ಕಂಡು ಹಿಡಿದು ‘ಭಾರತಚರಿತ್ರಪರೀಕ್ಷಾ’ ಅನ್ನುವ ಗ್ರಂಥವನ್ನು ಸಂಸ್ಕೃತದಲ್ಲಿ ಬರೆದಿದ್ದಾರೆ.

ಅಸ್ಪೃಶ್ಯತೆಗೆ ಸನಾತನ ಧರ್ಮ ಕಾರಣನಾ ? ಎಲ್ಲರೂ ವೇದ- ಸಂಸ್ಕೃತಗಳನ್ನು ಯಾಕೆ ಕಲೀಬೇಕು?

ಋಗ್ವೇದದ ಇಂದ್ರನೇ ಮಹಾಭಾರತದಲ್ಲಿ ಕೃಷ್ಣ; ಅಲ್ಲಿಯ ವ್ಯಂಸ ಇಲ್ಲಿಯ ಕಂಸ; ಅಲ್ಲಿಯ ಅಹಿರ್ಬುಧ್ನ್ಯ ಇಲ್ಲಿಯ ಬಲರಾಮ; ಅಲ್ಲಿಯ ಕುತ್ಸ ಇಲ್ಲಿಯ ಅರ್ಜುನ; ಅಲ್ಲಿಯ ಶುಷ್ಣ ಇಲ್ಲಿಯ ಕರ್ಣ; ಅಲ್ಲಿಯ ಕುಯವರು ಇಲ್ಲಿಯ ಕೌರವರು; ಅಲ್ಲಿಯ ವೃಷಾಗಿರನ ಐದು ಮಕ್ಕಳಾದ ಅಂಬರೀಷ, ಭಯಮಾನ, ಋಜ್ರಾಶ್ವ, ಸುರಾಧಸ, ಸಹದೇವರು ಇಲ್ಲಿಯ ಪಾಂಡವರು ಎಂದು ಮುಂತಾಗಿ ವಾಸಿಷ್ಠ ಗಣಪತಿ ಮುನಿಗಳು ತಮ್ಮ ಗ್ರಂಥದಲ್ಲಿ ಉದಾಹರಣೆ ಸಹಿತ ವಿವರಿಸಿದ್ದಾರೆ.

ಹೀಗೆ ವೇದ, ರಾಮಾಯಣ, ಭಾರತಾದಿಗಳಲ್ಲಿ ಬರುವ ಶಬ್ದಗಳೆಲ್ಲ, ಅರ್ಥಾತ್ ಸನಾತನ ಶಬ್ದಗಳೆಲ್ಲ ವಿವಿಧಾರ್ಥಕಗಳಾಗಿದ್ದು ಪರಮಾತ್ಮನೆಡೆಗಿನ ಆತ್ಮದ, ಜೀವಾತ್ಮದ ನಡೆಯನ್ನು ರಹಸ್ಯವಾಗಿ ಬೋಧಿಸುತ್ತವೆ. ಈ ತಿಳುವಳಿಕೆಯೊಂದಿಗೆ ಆ ಗ್ರಂಥಗಳನ್ನೆಲ್ಲ ಜನರು ಓದುವಂತಾಗಲಿ:  ಪ್ರೊ.ಡಾ.ಗುರುಪಾದ ಕೆ.ಹೆಗಡೆ ಮೈಸೂರು

Follow Us:
Download App:
  • android
  • ios