ರಾಜ್ಯಾದ್ಯಂತ ಮುಂದಿನ ಐದು ದಿನ ಮಳೆಯಾಗಲಿದ್ದು, ಜೂ.23 ಮತ್ತು 24ರಂದು ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಅಧಿಕ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ. 

ಬೆಂಗಳೂರು (ಜೂ.21): ರಾಜ್ಯಾದ್ಯಂತ ಮುಂದಿನ ಐದು ದಿನ ಮಳೆಯಾಗಲಿದ್ದು, ಜೂ.23 ಮತ್ತು 24ರಂದು ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಅಧಿಕ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ. ಮೇಲ್ಮೈ ಸುಳಿಗಾಳಿ ಹಿನ್ನೆಲೆ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಂಗಳವಾರ ಮತ್ತು ಬುಧವಾರ ಹೆಚ್ಚು ಮಳೆಯಾಗುವ ಹಿನ್ನೆಲೆಯಲ್ಲಿ ‘ಯಲ್ಲೋ ಅಲರ್ಟ್‌’ ಘೋಷಿಸಲಾಗಿದೆ. ಜತೆಗೆ ಗುರುವಾರ ಮತ್ತು ಶುಕ್ರವಾರ ಭಾರೀ ಮಳೆಯಾಗುವ ಸಾಧ್ಯತೆಗಳಿದ್ದು, ‘ಆರೆಂಜ್‌ ಅಲರ್ಟ್‌’ ನೀಡಿ ಜಿಲ್ಲಾಡಳಿತಗಳಿಗೆ ಎಚ್ಚರಿಸಲಾಗಿದೆ. 

ಉತ್ತರ ಒಳನಾಡಿನ ವಿಜಯಪುರ, ಬೀದರ್‌, ಬೆಳಗಾವಿ, ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ಶಿವಮೊಗ್ಗ, ತುಮಕೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ಕೂಡ ಮುಂದಿನ ಎರಡು ದಿನ ಗುಡುಗು ಸಹಿತ ಮಳೆ ನಿರೀಕ್ಷೆ ಇದ್ದು, ಈ ಜಿಲ್ಲೆಗಳಿಗೂ ‘ಯೆಲ್ಲೋ ಅಲರ್ಟ್‌’ ನೀಡಲಾಗಿದೆ. ಉಳಿದಂತೆ ಈ ಜಿಲ್ಲೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಮಾನ್ಯ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಳೆಗಾಲ ಆರಂಭವಾಯ್ತು, ವಿಸ್ಟಾಡೋಮ್‌ನ ರೈಲಿಗೆ ಭಾರೀ ಬೇಡಿಕೆ..!

ಬೆಂಗಳೂರಿನಲ್ಲಿ ಎರಡು ದಿನ ಜೋರು: ಬೆಂಗಳೂರು ನಗರದಲ್ಲಿ ಮಂಗಳವಾರ, ಬುಧವಾರ ಸಂಜೆ ಬಳಿಕ ಗುಡುಗುಸಹಿತ ಬಿರುಸಿನ ಮಳೆ ಆಗುವ ಲಕ್ಷಣಗಳು ಇವೆ. ನಗರ ವ್ಯಾಪ್ತಿಯ ಹಲವೆಡೆ ಭಾರಿ ಮಳೆ ಸುರಿದರೆ, ಇನ್ನು ಕೆಲವು ಪ್ರದೇಶದಲ್ಲಿ ಸಾಧಾರಣವಾಗಿ ಮಳೆ ಬೀಳಲಿದೆ. ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್‌ ಮತ್ತು ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್‌ ಇರಲಿದೆ ಎಂದು ತಿಳಿಸಲಾಗಿದೆ.

ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಗಾಗಿ ರೈತ ಸ್ನೇಹಿ ಆಪ್‌: ಪ್ರಸಕ್ತ ಸಾಲಿನ ಪೂರ್ವ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಯೋಜನೆಯನ್ವಯ ಜಿಲ್ಲೆಯ ರೈತರು ತಮ್ಮ ಜಮೀನುಗಳ ಸರ್ವೆ ನಂ, ಹಿಸ್ಸಾ ನಂಬರ್‌ವಾರು ತಾವು ಬೆಳೆದ ಕೃಷಿ ಬೆಳೆಗಳ ಹಾಗೂ ತಮ್ಮ ಜಮೀನಿನಲ್ಲಿರುವ ಬಹುವಾರ್ಷಿಕ ತೋಟಗಾರಿಕೆ, ಅರಣ್ಯ, ಇತರೆ ಬೆಳೆಗಳ ಮಾಹಿತಿಯನ್ನು ಛಾಯಾ ಚಿತ್ರಸಹಿತ ತಮ್ಮ ಅಂಡ್ರ್ಯಾಡ್‌ ಮೊಬೈಲ್‌ ಗೂಗಲ್‌ ಪ್ಲೇ ಸ್ಟೋರ್‌ ನಲ್ಲಿ ಮುಂಗಾರು ರೈತರ ಬೆಳೆ ಸಮೀಕ್ಷೆ ಆಪ್‌ 2022-23 ಡೌನ್‌ಲೋಡ್‌ ಮಾಡಿಕೊಂಡು ಸ್ವತಃ ತಾವೇ ಬೆಳೆ ಸಮೀಕ್ಷೆ ಮೂಲಕ ನಮೂದಿಸಬಹುದಾಗಿದೆ.

ಬೆಳೆ ಸಮೀಕ್ಷೆ ದತ್ತಾಂಶವನ್ನು ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆಗಳ ವಿಸ್ತೀರ್ಣವನ್ನು ಲೆಕ್ಕ ಹಾಕಲು, ಬೆಳೆ ವಿಮೆ ಯೋಜನೆಯ ಸರ್ವೆ ನಂ. ವಾರು ಬೆಳೆ ಪರಿಶೀಲನೆ ಹಾಗೂ ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳ್ಳಲು, ಸರ್ವೆ ನಂಬರ್‌ ಆಯ್ಕೆ ಮಾಡಲು, ಕನಿಷ್ಠ ಬೆಂಬಲ ಬೆಲೆ ಯೋಜನೆಯ ಅರ್ಹ ಫಲಾನುಭವಿಗಳನ್ನು ಗುರುತಿಸಲು ಹಾಗೂ ಆರ್‌.ಟಿ.ಸಿ ಯಲ್ಲಿ ಬೆಳೆ ವಿವರ ದಾಖಲಾತಿಗಾಗಿ ಎಸ್‌.ಡಿ.ಆರ್‌.ಎಫ್‌ ಮತ್ತು ಎನ್‌.ಡಿ.ಆರ್‌.ಎಫ್‌. ನಡಿ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಬೆಳೆ ಹಾನಿ ಕುರಿತು ವರದಿ ಸಿದ್ದಪಡಿಸಲು ಬೆಳೆ ಆಪ್‌ ಸಹಾಯಕವಾಗಲಿದೆ.

Karnataka Weather Forecast: ಕರಾವಳಿ ಮತ್ತು ಮಲೆನಾಡಿನಲ್ಲಿ ಭಾರೀ ಮಳೆ ನಿರೀಕ್ಷೆ

ಹಾನಿಗೊಳಗಾದ ಬೆಳೆ ವಿಸ್ತೀರ್ಣದ ಮಾಹಿತಿ ಸಿದ್ದಪಡಿಸುವಲ್ಲಿ ಮತ್ತು ಅರ್ಹ ಫಲಾನುಭವಿಗಳ ಪಟ್ಟಿತಯಾರಿಸುವ ಸಂದರ್ಭಗಳಲ್ಲಿ ಬೆಳೆ ಸಮೀಕ್ಷೆ ಮಾಹಿತಿಯನ್ನೇ ಆಧಾರವಾಗಿಟ್ಟುಕೊಂಡು ಸಿದ್ದಪಡಿಸುವುದರಿಂದ ರೈತರು ತಪ್ಪದೇ ತಮ್ಮ ಜಮೀನಿನಲ್ಲಿರುವ ಕೃಷಿ, ತೋಟಗಾರಿಕೆ, ಅರಣ್ಯ, ರೇಷ್ಮೆ ಇತರೆ ಬೆಳೆಗಳ ವಿವರಗಳನ್ನು ಮುಂಗಾರು ರೈತರ ಬೆಳೆ ಸಮೀಕ್ಷೆ ಆಪ್‌ 2022-23 ನಲ್ಲಿ ನಮೂದಿಸಬಹುದಾಗಿದೆ.