*   3 ರೈಲುಗಳು ಜುಲೈ ಅಂತ್ಯದವರೆಗೂ ಭರ್ತಿ*  ಪ್ರಕೃತಿ ಸೌಂದರ‍್ಯ ಸವಿಯಲು ಜನ ಕಾತರ*  ಶಿವಮೊಗ್ಗ-ಬೆಂಗಳೂರು ಇಂಟರ್‌ಸಿಟಿಗಿಲ್ಲ ಬೇಡಿಕೆ  

ಜಯಪ್ರಕಾಶ್‌ ಬಿರಾದಾರ್‌

ಬೆಂಗಳೂರು(ಜೂ.18):  ‘ಮಳೆಗಾಲ ಆರಂಭವಾಯ್ತು...ರೈಲಿನ ವಿಸ್ಟಾಡೋಮ್‌ ಬೋಗಿಯಲ್ಲಿ ತೆರಳಿ ಪಶ್ಚಿಮಘಟ್ಟದ ಸೌಂದರ್ಯ ಕಣ್ತುಂಬಿಕೊಳ್ಳೋಣ’ ಎಂದು ಪ್ರವಾಸಕ್ಕೆ ಯೋಜನೆ ರೂಪಿಸುತ್ತಿದ್ದೀರಾ? ಹಾಗಾದರೆ ನೀವು ಇನ್ನೂ ಒಂದೂವರೆ ತಿಂಗಳು ಕಾಯಬೇಕು!

ಯಶವಂತಪುರ-ಕಾರವಾರ, ಯಶವಂತಪುರ-ಮಂಗಳೂರು ಮಾರ್ಗದ 3 ರೈಲುಗಳ ವಿಸ್ಟಾಡೋಮ್‌ ಬೋಗಿಯ ಆಸನಗಳು ಜುಲೈ ಅಂತ್ಯದವರೆಗೂ ಭರ್ತಿಯಾಗಿವೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಬೆಂಗಳೂರಿನಿಂದ ಕರಾವಳಿಯತ್ತ ಸಾಗುವ ಈ ರೈಲುಗಳ ವಿಸ್ಟಾಡೋಮ್‌ ಬೋಗಿಗಳಿಗೆ ಬೇಡಿಕೆ ಹೆಚ್ಚಿದೆ. ಪ್ರತಿ ರೈಲಿನಲ್ಲಿ 2 ಬೋಗಿ ಮಾತ್ರ ಅಳವಡಿಸಲಾಗಿದ್ದು, ಸೀಮಿತ (88 ಮಾತ್ರ) ಆಸನಗಳಿವೆ. ಹೀಗಾಗಿಯೇ ಮಾಚ್‌ರ್‍, ಏಪ್ರಿಲ್‌ನಲ್ಲೇ ಪ್ರಯಾಣಿಕರು ಮಳೆ ಬೀಳುವ ಜೂನ್‌ ಮತ್ತು ಜುಲೈನಲ್ಲಿ ಪ್ರಯಾಣಿಸಲು ಮುಂಗಡ ಬುಕ್ಕಿಂಗ್‌ ಮಾಡಿಕೊಳ್ಳುತ್ತಿದ್ದರು. ಈ ಹಿನ್ನೆಲೆ ಜುಲೈ ಕೊನೆಯ ವಾರದವರೆಗೂ ಶೇ.100 ರಷ್ಟುಬುಕ್ಕಿಂಗ್‌ ಪೂರ್ಣಗೊಂಡಿದೆ. ಇನ್ನು ವಾರಾಂತ್ಯಗಳಲ್ಲಿ ಶೇ.120 ರಷ್ಟು(ವೇಟಿಂಗ್‌ ಲಿಸ್ಟ್‌ ಸೇರಿ) ಬುಕ್ಕಿಂಗ್‌ ಆಗಿದೆ ಎಂದು ನೈಋುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಕಾರವಾರಕ್ಕೆ ಬಂತು ವಿಸ್ಟಾಡೋಮ್‌ ರೈಲು..!

ಮಳೆಗಾಲದ ಪ್ರಯಾಣ ಮತ್ತಷ್ಟು ಸುಂದರ:

ರೈಲು ಸಕಲೇಶಪುರ -ಸುಬ್ರಮಣ್ಯ ರೋಡ್‌ ನಿಲ್ದಾಣ ಮಧ್ಯೆ ಸಂಚರಿಸುವಾಗ ವಿಸ್ಟಾಡೋಮ್‌ ಬೋಗಿಗಳಲ್ಲಿ ಕುಳಿತು ಪಶ್ಚಿಮ ಘಟ್ಟಗಳ ಮೂಲಕ ಸಂಚರಿಸುವಾಗ ರಮಣೀಯ ಪ್ರಾಕೃತಿಕ ಸೊಬಗನ್ನು ನೋಡಬಹುದು. ಸಾಮಾನ್ಯ ದಿನಗಳಿಗಿಂತ ಮಳೆಗಾಲದ ಪ್ರಯಾಣ ಹೆಚ್ಚು ಖುಷಿ ನೀಡುತ್ತದೆ ಎನ್ನುತ್ತಾರೆ ಪ್ರಯಾಣಿಕರು.

ದಕ್ಷಿಣ ಭಾರತದಲ್ಲಿ ಮೊದಲ ಬಾರಿ 2021ರ ಜುಲೈ 11 ರಿಂದ ಬೆಂಗಳೂರು-ಕರಾವಳಿ ಮಾರ್ಗದ ರೈಲುಗಳಿಗೆ ವಿಸ್ಟಾಡೋಮ್‌ ಬೋಗಿ ಅಳವಡಿಸಲಾಗಿತ್ತು. ಆರಂಭದ ತಿಂಗಳುಗಳಲ್ಲಿ ಮಾಹಿತಿ ಕೊರತೆ ಮತ್ತು ದುಬಾರಿ ಟಿಕೆಟ್‌ ಎಂಬ ಕಾರಣಕ್ಕೆ ಬೇಡಿಕೆ ಕಂಡು ಬರಲಿಲ್ಲ. ಕೆಲ ತಿಂಗಳುಗಳ ಬಳಿಕ ಪ್ರವಾಸಿ ಬ್ಲಾಗರ್‌ಗಳು ವಿಸ್ಟಾಡೋಮ್‌ ಬೋಗಿಗಳ ಅನುಕೂಲ, ರೈಲು ಮಾರ್ಗ ಮಧ್ಯೆ ಕಾಣುವ ಪ್ರಕೃತಿ ಸೌಂದರ್ಯ ಕುರಿತ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಪ್ರಚಾರ ನೀಡಿದರು. ಪ್ರಯಾಣಿಸಿದವರು ಕೂಡಾ ತಮ್ಮ ಅನುಭವಗಳನ್ನು ಇತರರೊಂದಿಗೆ ಹಂಚಿಕೊಂಡರು. ಇದರಿಂದಾಗಿ ಹೆಚ್ಚು ಜನ ಪ್ರಯಾಣಿಸಲು ಆಗಮಿಸುತ್ತಿದ್ದಾರೆ. 2022ರ ಆರಂಭದಿಂದಲೂ ಶೇ.95-100 ಆಸನಗಳು ಭರ್ತಿಯಾಗಿವೆ ಎನ್ನುತ್ತಾರೆ ರೈಲ್ವೆ ಅಧಿಕಾರಿಗಳು.

ವಿಜಯಪುರ -ಮಂಗಳೂರು ರೈಲಿನಲ್ಲೂ ಅಳವಡಿಸಿ:

ವಿಜಯಪುರ-ಮಂಗಳೂರು ಮಾರ್ಗದ ರೈಲಗಳು ಕೂಡಾ ಪಶ್ಚಿಮಘಟ್ಟದ ಸಕಲೇಶಪುರ, ಸುಬ್ರಮಣ್ಯ ರೋಡ್‌ ಮಾರ್ಗದಲ್ಲಿಯೇ ಸಂಚರಿಸಲಿವೆ. ವಿಜಯಪುರ - ಮಂಗಳೂರು ಎಕ್ಸ್‌ಪ್ರೆಸ್‌ ಬೆಳಿಗ್ಗೆ 7.10 ರಿಂದ 10.30 ನಡುವೆ, ಮಂಗಳೂರು -ವಿಜಯಪುರ ಎಕ್ಸ್‌ಪ್ರೆಸ್‌ ಕೂಡಾ ಸಂಜೆ 4.55 ರಿಂದ 7.30ಕ್ಕೆ ನಡುವೆ ಪಶ್ಚಿಮ ಘಟ್ಟದಲ್ಲಿ (ಸಕಲೇಶಪುರ - ಸುಬ್ರಮಣ್ಯ ರೋಡ್‌ ನಿಲ್ದಾಣಗಳ ಮಧ್ಯೆ) ಸಾಗಲಿದೆ. ಈ ರೈಲುಗಳಿಗೂ ಅರಸೀಕೆರೆ -ಮಂಗಳೂರು ನಡುವೆ ವಿಸ್ಟಾಡೋಮ್‌ ಬೋಗಿ ಅಳವಡಿಸಬೇಕು ಎಂಬ ಒತ್ತಾಯ ಪ್ರಯಾಣಿಕರಿಂದ ಕೇಳಿಬಂದಿದೆ. ಇಷ್ಟಾದರೆ ಉತ್ತರ ಕರ್ನಾಟಕ ಭಾಗದ ಪ್ರಯಾಣಿಕರಿಗೂ ಕೂಡಾ ವಿಸ್ಟಾಡೋಮ್‌ ಬೋಗಿ ಸೌಲಭ್ಯ ಸಿಕ್ಕಂತಾಗುತ್ತದೆ.

ರಾಜ್ಯದಲ್ಲಿ ‘ವಿಸ್ಟಾಡೋಮ್‌’ ಸಂಚಾರ ಶುರು: ಬೆಂಗ್ಳೂರು-ಮಂಗ್ಳೂರು ಮಧ್ಯೆ ಸಂಚಾರ

ಇದೇ ರೀತಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಂಡುಬರುವ ಪಶ್ಚಿಮಘಟ್ಟದ ಅರಣ್ಯ, ಪರ್ವತ, ದೂಧಸಾಗರ ಜಲಪಾತ ಸೌಂದರ್ಯ ಕಣ್ತುಂಬಿಕೊಳ್ಳುವ ನಿಟ್ಟಿನಲ್ಲಿ ವಾಸ್ಕೋ (ಗೋವಾ) ಹುಬ್ಬಳ್ಳಿ ಮಾರ್ಗದಲ್ಲಿಯೂ ವಿಸ್ಟಾಡೋಮ್‌ ಬೋಗಿ ಅಳವಡಿಸಬೇಕು ಎಂಬ ಬೇಡಿಕೆಯನ್ನು ಆ ಭಾಗದ ಪ್ರಯಾಣಿಕರು ನೈಋುತ್ಯ ರೈಲ್ವೆ ಮುಂದಿಟ್ಟಿದ್ದಾರೆ.

ಶಿವಮೊಗ್ಗ-ಬೆಂಗಳೂರು ಇಂಟರ್‌ಸಿಟಿಗಿಲ್ಲ ಬೇಡಿಕೆ:

ಕಳೆದ ವರ್ಷ ಡಿಸೆಂಬರ್‌ನಿಂದ ಯಶವಂತಪುರ ಶಿವಮೊಗ್ಗ ಇಂಟರ್‌ಸಿಟಿ ರೈಲಿನಲ್ಲಿಯೂ ವಿಸ್ಟಾಡೋಮ್‌ ಬೋಗಿಯನ್ನು ಅಳವಡಿಸಲಾಗಿತ್ತು. ಆದರೆ, ಈ ಮಾರ್ಗದಲ್ಲಿ ವಿಸ್ಟಾಡೋಮ್‌ ಬೋಗಿಯ ಅರ್ಧಕ್ಕರ್ಧ ಆಸನಗಳು ಖಾಲಿ ಉಳಿದಿರುತ್ತವೆ. ಹೆಚ್ಚು ದರ ಮತ್ತಿತ್ತರ ಕಾರಣಗಳಿಂದ ಹೆಚ್ಚಿನ ಬೇಡಿಕೆ ಇಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಮಳೆಗಾಲದ ಹಿನ್ನೆಲೆ ವಿಸ್ಟಾಡೋಮ್‌ ಪ್ರಯಾಣಕ್ಕೆ ಸಾಕಷ್ಟುಬೇಡಿಕೆ ಬಂದಿದೆ. ಜುಲೈ ಅಂತ್ಯದವರೆಗೂ ಆಸನಗಳು ಭರ್ತಿಯಾಗಿವೆ. ಭವಿಷ್ಯದಲ್ಲಿ ವಿಸ್ಟಾಡೋಮ್‌ ಬೋಗಿಯನ್ನು ಹೆಚ್ಚಿಸುವ, ಇತರೆ ರೈಲು ಮಾರ್ಗಕ್ಕೆ ಅಳವಡಿಸುವ ಕುರಿತು ಚರ್ಚಿಸಲಾಗುತ್ತಿದೆ ಅಂತ ನೈಋುತ್ಯ ರೈಲ್ವೆ ಮುಖ್ಯಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್‌ ಹೆಗಡೆ ತಿಳಿಸಿದ್ದಾರೆ.