:  ‘ರಾಜ್ಯದಲ್ಲಿ ಎಪಿಎಲ್‌, ಬಿಪಿಎಲ್‌ ಪಡಿತರ ಚೀಟಿಗಾಗಿ ಜುಲೈ-2023ರ ಅಂತ್ಯಕ್ಕೆ ಒಟ್ಟು 2,95,986 ಅರ್ಜಿಗಳು ಬಂದಿವೆ. ಸ್ಥಳ ಪರಿಶೀಲನೆ, ಆರ್ಥಿಕ ಇಲಾಖೆ ಅನುಮತಿ ಪ್ರಕ್ರಿಯೆ ಮುಗಿಸಿ ಮುಂದಿನ ತಿಂಗಳಿನ ಒಳಗಾಗಿ ಅರ್ಹ ಅರ್ಜಿದಾರರಿಗೆ ಹೊಸ ಪಡಿತರ ಚೀಟಿ ವಿತರಣೆ ಮಾಡುತ್ತೇವೆ’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿದ್ದಾರೆ.

ಬೆಂಗಳೂರು (ಆ.5) :  ‘ರಾಜ್ಯದಲ್ಲಿ ಎಪಿಎಲ್‌, ಬಿಪಿಎಲ್‌ ಪಡಿತರ ಚೀಟಿಗಾಗಿ ಜುಲೈ-2023ರ ಅಂತ್ಯಕ್ಕೆ ಒಟ್ಟು 2,95,986 ಅರ್ಜಿಗಳು ಬಂದಿವೆ. ಸ್ಥಳ ಪರಿಶೀಲನೆ, ಆರ್ಥಿಕ ಇಲಾಖೆ ಅನುಮತಿ ಪ್ರಕ್ರಿಯೆ ಮುಗಿಸಿ ಮುಂದಿನ ತಿಂಗಳಿನ ಒಳಗಾಗಿ ಅರ್ಹ ಅರ್ಜಿದಾರರಿಗೆ ಹೊಸ ಪಡಿತರ ಚೀಟಿ ವಿತರಣೆ ಮಾಡುತ್ತೇವೆ’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಿದ್ದುದರಿಂದ ಹೊಸ ಪಡಿತರ ಚೀಟಿ ವಿತರಣೆ ಕಾರ್ಯ ಸ್ಥಗಿತಗೊಂಡಿತ್ತು. ಈವರೆಗೆ ಬಾಕಿ ಇರುವ ಅರ್ಜಿಗಳ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಅರ್ಹ ಫಲಾನುಭವಿಗಳ ಮಾಹಿತಿಯನ್ನು ನೀಡುವಂತೆ ಜಿಲ್ಲೆಗಳಿಗೆ ತಿಳಿಸಲಾಗಿದೆ. ಒಟ್ಟು ಅರ್ಜಿಗಳನ್ನು ಪರಿಶೀಲಿಸಿ ಆರ್ಥಿಕ ಇಲಾಖೆ ಅನುಮತಿ ಪಡೆದು ಹೊಸ ಪಡಿತರ ಚೀಟಿ ವಿತರಿಸಲಾಗುವುದು ಎಂದು ಭರವಸೆ ನೀಡಿದರು.

ಯಾರಿಗೂ ಆಹಾರ ಕೊರತೆ ಆಗಬಾರದು: ಸಚಿವ ಮುನಿಯಪ್ಪ

1 ಕೋಟಿ ಕುಟುಂಬಗಳಿಗೆ 566 ಕೋಟಿ ರು. ಹಣ:

ಅನ್ನಭಾಗ್ಯ ಯೋಜನೆ ಜಾರಿಗೆ ಬಂದು ಒಂದು ತಿಂಗಳ ಒಳಗಾಗಿ 1 ಕೋಟಿಗೂ ಹೆಚ್ಚು ಪಡಿತರ ಕುಟುಂಬಗಳಿಗೆ 566 ಕೋಟಿ ರು. ಜಮೆ ಮಾಡಲಾಗಿದೆ. ಇದರಿಂದ 3.5 ಕೋಟಿ ಫಲಾನುಭವಿಗಳಿಗೆ ಅನುಕೂಲವಾಗಿದೆ. ಅನ್ನಭಾಗ್ಯ ಯೋಜನೆಯ ಹೆಚ್ಚುವರಿ ಅಕ್ಕಿಗೆ ಬದಲು ಪ್ರತಿ ಸದಸ್ಯರಿಗೆ 170 ರು.ಗಳಂತೆ ಹಣವನ್ನು ನೇರವಾಗಿ ಡಿಬಿಟಿ ಮೂಲಕ ವಿತರಿಸಿದ ಕೀರ್ತಿಗೆ ರಾಜ್ಯ ಸರ್ಕಾ ಪಾತ್ರವಾಗಿದೆ ಎಂದು ಹೇಳಿದರು.

ಈ ಬಾರಿ ಅನ್ನಭಾಗ್ಯದಡಿ ಪ್ರತಿಯೊಬ್ಬರಿಗೆ 10 ಕೆ.ಜಿ. ಅಕ್ಕಿ ನೀಡುವುದಾಗಿ ಭರವಸೆ ನೀಡಿದ್ದೆವು. ಕೇಂದ್ರ ಸಹಕರಿಸದ ಕಾರಣ 5 ಕೆ.ಜಿ. ಅಕ್ಕಿಗೆ ಹಣ ನೀಡುತ್ತಿದ್ದೇವೆ. ಯೋಜನೆಗೆ ಚಾಲನೆ ದೊರೆತು ಇಂದಿಗೆ 25 ದಿನಗಳಾಗಿವೆ. ಅತಿ ಕಡಿಮೆ ಸಮಯದಲ್ಲಿ ನಮ್ಮ ಇಲಾಖೆಯು 1 ಕೋಟಿ ಕುಟುಂಬಗಳಿಗೆ ನೇರ ನಗದು ವರ್ಗಾವಣೆ ಮಾಡಿರುವುದು ದಾಖಲೆಯಾಗಿದೆ ಎಂದರು.

ಉಳಿದಂತೆ ಹಣ ಪಾವತಿಯಾಗದ 28 ಲಕ್ಷ ಕುಟುಂಬಗಳಲ್ಲಿ ಕಳೆದ ಮೂರು ತಿಂಗಳಲ್ಲಿ ಒಂದು ತಿಂಗಳೂ ಪಡಿತರ ಪಡೆಯದೇ ಇರುವ ಫಲಾನುಭವಿಗಳು 5,32,349, ಅಂತ್ಯೋದಯ ಅನ್ನ ಪಡಿತರ ಚೀಟಿದಾರರಲ್ಲಿ ಮೂರು ಸದಸ್ಯರಿಗಿಂತ ಕಡಿಮೆ ಫಲಾನುಭವಿಗಳ ಸಂಖ್ಯೆ 3,40,425 ಹಾಗೂ ಚಾಲ್ತಿಯಲ್ಲಿ ಇರದೇ ಹಾಗೂ ಬ್ಯಾಂಕ್‌ ಖಾತೆಯೊಂದಿಗೆ ಆಧಾರ್‌ ಜೋಡಣೆ ಆಗದಿರುವ ಹಾಗೂ ಅನರ್ಹ ಪಡಿತರ ಚೀಟಿಗಳ ಸಂಖ್ಯೆಯು 19,27,226 ಇದೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ, ಈ ತಿಂಗಳು ಹಣ ಪಡೆಯಲು ಅನರ್ಹ ಆದವರಿಗೆ ಈ ತಿಂಗಳ ಹಣ ಮುಂದಿನ ತಿಂಗಳು ಕೊಡಲ್ಲ. ಖಾತೆ ಆದ ಮೇಲೆ ಆ ತಿಂಗಳಿಂದಲೇ ಹಣ ಕೊಡುತ್ತೇವೆ ಎಂದು ಸ್ಪಷ್ಟನೆ ನೀಡಿದರು.

ರಾಗಿಗೆ 5 ಸಾವಿರ ರು. ಬೆಂಬಲ ಬೆಲೆಗೆ ಮನವಿ:

ಕೇಂದ್ರ ಕೃಷಿ ಸಚಿವರ ಭೇಟಿ ವೇಳೆ ರಾಗಿಗೆ ಇರುವ 3846 ರುಪಾಯಿ ಬೆಂಬಲ ಬೆಲೆಯನ್ನು 5 ಸಾವಿರಕ್ಕೆ ಹೆಚ್ಚಳ ಮಾಡಲು ಮನವಿ ಮಾಡಿದ್ದೇನೆ. ಜತೆಗೆ ಜೋಳಕ್ಕೆ 3,225 ರು. ಇರುವ ಬೆಂಬಲ ಬೆಲೆಯನ್ನು 4,500 ರು.ಗೆ, ಹೈಬ್ರಿಡ್‌ ಜೋಳಕ್ಕೆ ಇರುವ 3,180 ರು. ಬೆಂಬಲ ಬೆಲೆಯನ್ನು 4,500 ರು.ಗೆ ಹೆಚ್ಚಳ ಮಾಡಲು ಮನವಿ ಮಾಡಿದ್ದೇನೆ ಎಂದರು.

ವೈಟ್‌ ಬೋರ್ಡ್‌ ಕಾರು ಇದ್ದರೆ ಬಿಪಿಎಲ್‌ ಅಲ್ಲ

ಬಿಪಿಎಲ್‌ ಕಾರ್ಡ್‌ಗೆ ಇರುವ ಮಾನದಂಡಗಳನ್ನು ಉಲ್ಲಂಘಿಸಿ ಪಡೆದಿರುವ ಹಲವರ ಬಿಪಿಎಲ್‌ ಕಾರ್ಡ್‌ ಈ ಮೊದಲು ರದ್ದು ಮಾಡಲಾಗಿದೆ. ಮುಂದೆಯೂ ಅನರ್ಹ ಕಾರ್ಡ್‌ಗಳ ಬಗ್ಗೆ ತನಿಖೆ ನಡೆಸಲಾಗುವುದು. ಯಾವಾಗ ಎಂಬುದು ಸದ್ಯಕ್ಕೆ ನಿರ್ಧರಿಸಿಲ್ಲ ಎಂದು ಕೆ.ಎಚ್‌.ಮುನಿಯಪ್ಪ ಹೇಳಿದರು.

ವೈಟ್‌ ಬೋರ್ಡ್‌ ಕಾರು ಹೊಂದಿರುವವರು ಬಿಪಿಎಲ್‌ ಕಾರ್ಡ್‌ ಪಡೆಯಲು ಅರ್ಹರಲ್ಲ. ಹೀಗಾಗಿ ಅಂತಹ ಕಾರ್ಡ್‌ಗಳ ರದ್ದು ಹಿಂಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

2016ರಲ್ಲಿ ಬಿಪಿಎಲ್‌ ಕಾರ್ಡ್‌ ಪಡೆಯಲು ಮಾನದಂಡಗಳನ್ನು ನಿಗದಿ ಮಾಡಲಾಗಿದೆ. ಇದರಡಿ ವಾಣಿಜ್ಯ ಬಳಕೆಗೆ ತೆಗೆದುಕೊಳ್ಳುವ ತ್ರಿಚಕ್ರ ವಾಹನ ಅಥವಾ ಕಾರು (ಯೆಲ್ಲೋ ಬೋರ್ಡ್‌) ಹೊಂದಿದ್ದರೆ ಅವರಿಗೆ ಬಿಪಿಎಲ್‌ ಕಾರ್ಡ್‌ ನೀಡಬಹುದು. ಜೀವನಾಧಾರಕ್ಕೆ ಕಾರು ಹೊಂದಿರುವುದು ಬಿಪಿಎಲ್‌ ಮಾನದಂಡ ಉಲ್ಲಂಘನೆಯಲ್ಲ. ಹೀಗಾಗಿ ಯೆಲ್ಲೋ ಬೋರ್ಡ್‌ ಕಾರು ಹೊಂದಿದ್ದ ಕಾರಣಕ್ಕೆ ಬಿಪಿಎಲ್‌ ಕಾರ್ಡ್‌ ರದ್ದಾಗಿದ್ದರೆ ಅಂತಹವುಗಳನ್ನು ಪುನರ್‌ ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದರು.

2 ತಿಂಗಳಲ್ಲಿ ಹಣ ವಿತರಣೆ ನಿಲ್ಲಿಸಿ ಧಾನ್ಯ ವಿತರಣೆ

ಅನ್ನಭಾಗ್ಯ ಅಡಿ ಅಕ್ಕಿ ಹೊಂದಿಸಲು ಪ್ರಯತ್ನ ಮುಂದುವರೆದಿದೆ. ಅಕ್ಕಿ ಜತೆ ರಾಗಿ, ಬಿಳಿ ಜೋಳ ನೀಡಲು ನಿರ್ಧರಿಸಲಾಗಿದೆ. ಅಗತ್ಯ ಆಹಾರಧಾನ್ಯ ಕ್ರೋಢೀಕರಣ ಆದರೆ ಮುಂದಿನ ಎರಡು ತಿಂಗಳಲ್ಲಿ ನಗದು ಹಣ ವರ್ಗಾವಣೆ ನಿಲ್ಲಿಸಿ 10 ಕೆ.ಜಿ. ಆಹಾರಧಾನ್ಯ ನೀಡಲಾಗುವುದು ಎಂದು ಕೆ.ಎಚ್‌. ಮುನಿಯಪ್ಪ ತಿಳಿಸಿದರು.

ಕಾನೂನು ಸಲಹೆ ಪಡೆದು ಸದಾಶಿವ ವರದಿ ಜಾರಿಗೆ ಯತ್ನ- ಕೆಎಚ್ ಮುನಿಯಪ್ಪ

ಪ್ರಸಕ್ತ ಸಾಲಿನಲ್ಲಿ ರೈತರಿಂದ 8 ಲಕ್ಷ ಟನ್‌ ರಾಗಿ, 3 ಲಕ್ಷ ಟನ್‌ ಜೋಳ ಖರೀದಿ ಮಾಡುತ್ತೇವೆ. ಉಳಿದಂತೆ ಆಂಧ್ರ ಮತ್ತು ತೆಲಂಗಾಣ ಅಕ್ಕಿ ಕೊಡಲು ಮುಂದೆ ಬಂದಿವೆ. ಕೆ.ಜಿ.ಗೆ 34 ರು.ಗಿಂತ ಹೆಚ್ಚು ಹಣ ನೀಡಲ್ಲ ಎಂದು ಹೇಳಿದ್ದೇವೆ. ಎರಡು ರಾಜ್ಯಗಳ ಜತೆ ಮಾತನಾಡುತ್ತಿದ್ದೇವೆ. ಜತೆಗೆ ನಾಫೆಡ್‌, ಕೇಂದ್ರೀಯ ಭಂಡಾರದಿಂದಲೂ ಅಕ್ಕಿ ಪಡೆಯುವ ಪ್ರಯತ್ನ ಮುಂದುವರೆದಿದೆ ಎಂದರು.