ಬೆಂಗಳೂರು (ಅ.11):  ನೆರೆಯ ತೆಲಂಗಾಣ ಹಾಗೂ ಗೋವಾ ರಾಜ್ಯಗಳು ಮಹದಾಯಿ ಮತ್ತು ಕೃಷ್ಣಾ ನದಿ ನೀರು ಹಂಚಿಕೆ ಸಂಬಂಧ ಹೊಸ ವಿವಾದ ಸೃಷ್ಟಿಸಲು ಮುಂದಾಗಿದ್ದು, ಇದರಿಂದ ರಾಜ್ಯಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ. ಕೇಂದ್ರ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್‌ ಮುಂದೆ ರಾಜ್ಯ ಸಮರ್ಥ ವಾದ ಮಂಡನೆ ಮಾಡಲಿದೆ ಎಂದು ಜಲ ಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಹೇಳಿದ್ದಾರೆ.

ಈ ಎರಡು ಹೊಸ ವಿವಾದಗಳ ಬಗ್ಗೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಬಳಿಕ ಸಚಿವರು ಈ ಬಗ್ಗೆ ಲಿಖಿತ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಇದರ ಪ್ರಕಾರ ಕೃಷ್ಣಾ ನದಿ ನೀರು ಹಂಚಿಕೆ ವಿಷಯದಲ್ಲಿ ತೆಲಂಗಾಣ ಸರ್ಕಾರವು ಹೊಸ ಹಾಗೂ ಅಗನತ್ಯ ತಗಾದೆ ತೆಗೆದಿದೆ. ಕೃಷ್ಣಾ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ನ್ಯಾಯಾಧಿಕರಣವು ಈಗಾಗಲೇ ಅಂತಿಮ ತೀರ್ಪು ನೀಡಿದ್ದು 2013 ರಲ್ಲಿಯೇ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶ ರಾಜ್ಯಗಳಿಗೆ ನೀರು ಹಂಚಿಕೆ ಮಾಡಲಾಗಿದೆ. ಸುಪ್ರೀಂಕೋರ್ಟ್‌ ಅಂತಿಮ ತೀರ್ಪು ನೀಡಿದ ಬಳಿಕ ತೀರ್ಪಿನ ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರವೂ ನಿರ್ಧರಿಸಿದೆ. ಇಂತಹ ಸಮಯದಲ್ಲಿ ಹೊಸದಾಗಿ ನ್ಯಾಯಾಧಿಕರಣ ಸ್ಥಾಪಿಸಬೇಕು ಎಂಬ ತೆಲಂಗಾಣ ವಾದ ಅತಾರ್ಕಿಕ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಸಚಿವರೊಂದಿಗೆ ಚರ್ಚೆ:

ಕೃಷ್ಣಾ ನದಿ ನೀರು ಹಂಚಿಕೆ ಸಂಬಂಧ ನ್ಯಾಯಾಧಿಕರಣದಲ್ಲಿ ಮರು ವಿಚಾರಣೆ ನಡೆಸಲು ತೆಲಂಗಾಣ ಸರ್ಕಾರ ಒತ್ತಾಯಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಜಲ ಶಕ್ತಿ ಸಚಿವರೊಂದಿಗೆ ರಮೇಶ್‌ ಜಾರಕಿಹೊಳಿ ಚರ್ಚಿಸಿದ್ದು, ನ್ಯಾಯಾಧಿಕರಣದ ತೀರ್ಪು ಪ್ರಕಟವಾದಾಗ ತೆಲಂಗಾಣ ಆಂಧ್ರದ ಭಾಗವಾಗಿತ್ತು. ಇದೀಗ ಆಂಧ್ರಪ್ರದೇಶಕ್ಕೆ ಹಂಚಿಕೆಯಾಗಿರುವ ಪಾಲಿನಿಂದಲೇ ತೆಲಂಗಾಣ ಹಂಚಿಕೊಳ್ಳಬೇಕು. ಹೀಗಾಗಿ ಸುಪ್ರೀಂಕೋರ್ಟ್‌ ಅಂತಿಮ ಐ-ತೀರ್ಪು ಪ್ರಕಟಿಸುವ ಸಮಯದಲ್ಲಿ ಸೀಮಾಂಧ್ರ ಮತ್ತು ತೆಲಂಗಾಣ ರಾಜ್ಯಗಳ ನಡುವಿನ ನೀರು ಹಂಚಿಕೆ ಸಮಸ್ಯೆಯಲ್ಲಿ ಕರ್ನಾಟಕವನ್ನು ಹೊಣೆಯನ್ನಾಗಿಸದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.

ದೇವೇಂದ್ರ ಫಡ್ನ​ವೀಸ್‌ ಜತೆ ಜಾರ​ಕಿ​ಹೊಳಿ: ಕುತೂ​ಹಲ ಕೆರ​ಳಿ​ಸಿದ ಉಭಯ ನಾಯಕರ ಭೇಟಿ...

ಗೋವಾ ರಾಜ್ಯದಿಂದ ಸುಳ್ಳು ಆರೋಪ:

‘ಮಹದಾಯಿ ನದಿ ನೀರು ಹಂಚಿಕೆ ಕುರಿತು ಈಗಾಗಲೇ ನ್ಯಾಯಾಧಿಕರಣವು ಐತೀರ್ಪು ನೀಡಿದ್ದು, ಕೇಂದ್ರ ಸರ್ಕಾರವೂ ಸಹ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ಅಧಿಸೂಚನೆ ಹೊರಡಿಸಿದೆ. ಈ ಸಂದರ್ಭದಲ್ಲಿ ಗೋವಾ ಮುಖ್ಯಮಂತ್ರಿ ಛಾಯಾಚಿತ್ರ ಹಾಗೂ ವಿಡಿಯೋ ಬಿಡುಗಡೆ ಮಾಡಿ ಮಹದಾಯಿ ನದಿ ನೀರು ಮಲಪ್ರಭಾಗೆ ಹರಿಸಲಾಗಿದೆ ಎಂದು ಆರೋಪಿಸಿದ್ದಾರೆ. ಇವು ಸೃಷ್ಟಿಸಿರುವ ದಾಖಲೆಗಳು’ ಎಂದು ರಮೇಶ್‌ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.

‘ಇದರ ಆಧಾರದ ಮೇಲೆ ಗೋವಾ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿರುವುದು ಹಾಸ್ಯಾಸ್ಪದ. ರಾಜ್ಯ ಸರ್ಕಾರವು ಇದನ್ನು ನ್ಯಾಯಾಲಯದಲ್ಲಿ ಸಮರ್ಥವಾಗಿ ಎದುರಿಸಲಿದೆ. ಮಹದಾಯಿ ಮತ್ತು ಮಲಪ್ರಭಾ ನದಿ ನಡುವೆ ಪ್ರಬಲ ಗೋಡೆ ನಿರ್ಮಿಸಲಾಗಿದ್ದು ಒಂದು ಹನಿ ನೀರೂ ಸಹ ಮಲಪ್ರಭಾ ನದಿ ಸೇರಿಲ್ಲ. ಇಂತಹ ಸುಳ್ಳು ದಾಖಲೆಗಳನ್ನು ಸುಪ್ರೀಂಕೋರ್ಟ್‌ ಸಹ ನಂಬುವುದಿಲ್ಲ’ ಎಂದು ಹೇಳಿದ್ದಾರೆ.

‘ಈ ಯೋಜನೆ ಸಂಬಂಧ ಕರ್ನಾಟಕ ಮತ್ತು ಗೋವಾ ರಾಜ್ಯಗಳ ನೀರಾವರಿ ಇಲಾಖೆಯ ಉನ್ನತ ಅಧಿಕಾರಿಗಳ ಸಮಿತಿಯೊಂದು ಅಸ್ತಿತ್ವದಲ್ಲಿ ಇದೆ. ಈ ಸಮಿತಿಯಿಂದಲೇ ವಾಸ್ತವ ಸ್ಥಿತಿಯ ಮಾಹಿತಿ ಪಡೆದಿದ್ದೇನೆ. ತೆಲಂಗಾಣ ಹಾಗೂ ಗೋವಾ ತೆಗೆದಿರುವ ತಗಾದೆಗಳನ್ನು ಸಮರ್ಥವಾಗಿ ಎದುರಿಸುತ್ತೇವೆ’ ಎಂದಿ​ದ್ದಾ​ರೆ.

ಸಿಎಂರಿಂದಲೂ ಕೇಂದ್ರ​ಕ್ಕೆ ಪತ್ರ

ಮಹದಾಯಿ ಮತ್ತು ಕೃಷ್ಣಾ ನದಿ ನೀರು ಹಂಚಿಕೆ ವಿಚಾರದಲ್ಲಿ ನೆರೆ ರಾಜ್ಯಗಳು ವಿವಾದ ಸೃಷ್ಟಿಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೂ ಕೇಂದ್ರ ಜಲ ಶಕ್ತಿ ಸಚಿವರಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.