ದೇವಾಲಯ, ರೈತರ ಭೂಮಿ ಮುಟ್ಟುವುದಿಲ್ಲ:-ಸಚಿವ ಜಮೀರ್ ಸ್ಪಷ್ಟನೆ
ಖಾಸಗಿ ವ್ಯಕ್ತಿಗಳ ಒತ್ತುವರಿಯಲ್ಲಿರುವ 17 ಸಾವಿರ ಎಕರೆ ವಕ್ಫ್ ಆಸ್ತಿಯನ್ನು ವಾಪಸ್ ಪಡೆಯಲು ಕ್ರಮ ಕೈಗೊಳ್ಳಲಾಗುವುದು. ಆದರೆ, ದೇವಸ್ಥಾನ ಮತ್ತು ರೈತರ ಜಮೀನುಗಳನ್ನು ಮುಟ್ಟುವುದಿಲ್ಲ ಎಂದು ಸಚಿವ ಜಮೀರ್ ಅಹಮದ್ ಖಾನ್ ಸ್ಪಷ್ಟಪಡಿಸಿದ್ದಾರೆ. ವಕ್ಫ್ ಆಸ್ತಿಯಾಗಿ ನಮೂದಿಸಲಾದ ದೇವಸ್ಥಾನ ಅಥವಾ ರೈತರ ಜಮೀನಿನ ದಾಖಲೆಗಳಿದ್ದರೆ ಸಲ್ಲಿಸುವಂತೆ ಮನವಿ ಮಾಡಿದ್ದಾರೆ.
ಸುವರ್ಣ ವಿಧಾನ ಪರಿಷತ್ : ಮಂತ್ರಿ ಸ್ಥಾನ ನೀಡಿದ್ದಕ್ಕೆ ನೀನು ಏನು ಮಾಡಿದೆ ಎಂದು ದೇವರು ನಾಳೆ ಕೇಳಿದರೆ ನಾನು ಉತ್ತರ ಕೊಡಬೇಕಲ್ವಾ, ಹಾಗಾಗಿ ಒತ್ತುವರಿಯಾಗಿರುವ ವಕ್ಫ್ ಆಸ್ತಿ ವಾಪಸ್ ಪಡೆಯಲು ಕ್ರಮ ವಹಿಸಲಾಗುತ್ತಿದೆ. ಆದರೆ, ಯಾವುದೇ ಕಾರಣಕ್ಕೂ ದೇವಸ್ಥಾನ ಹಾಗೂ ರೈತರ ಜಮೀನನ್ನು ನಾವು ಮುಟ್ಟುವುದಿಲ್ಲ ಎಂದು ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಸ್ಪಷ್ಟಪಡಿಸಿದ್ದಾರೆ.
ದೇವರು ನನಗೆ ಮಂತ್ರಿ ಸ್ಥಾನ ಕೊಟ್ಟಿದ್ದಾರೆ. ನಿನಗೆ ಮಂತ್ರಿ ಸ್ಥಾನ ಕೊಟ್ಟಿದ್ದಕ್ಕೆ ಏನು ಮಾಡಿದೆಯಪ್ಪಾ ಎಂದು ನಾಳೆ ನನ್ನನ್ನು ದೇವರು ಕೇಳಬಹುದು. ಆಗ ನಾನು ಉತ್ತರ ಕೊಡಬೇಕಲ್ವಾ? ಹಾಗಾಗಿ ರಾಜ್ಯದಲ್ಲಿ ಖಾಸಗಿ ವ್ಯಕ್ತಿಗಳಿಂದ ಒತ್ತುವರಿಯಾಗಿರುವ 17 ಸಾವಿರ ಎಕರೆ ವಕ್ಫ್ ಆಸ್ತಿ ವಾಪಸ್ ಪಡೆಯಲು ಕ್ರಮ ವಹಿಸಲಾಗುವುದು. ಅದನ್ನು ಬಿಟ್ಟು ಯಾವುದೇ ಕಾರಣಕ್ಕೂ ದೇವಸ್ಥಾನ ಅಥವಾ ರೈತರ ಜಮೀನು ಮುಟ್ಟುವುದಿಲ್ಲ ಎಂದು ಹೇಳಿದರು.
ಅಲ್ಲದೆ, ಯಾವುದೇ ದೇವಸ್ಥಾನದ ಜಾಗ ಅಥವಾ ರೈತರ ಜಾಗವನ್ನು ವಕ್ಫ್ ಎಂದು ನಮೂದಿಸಿರುವ ಪ್ರಕರಣಗಳ ದಾಖಲೆ ಇದ್ದರೆ ಕೊಡಿ. ಕೂಡಲೇ ಅದನ್ನು ಸರಿಪಡಿಸಲಾಗುವುದು. ಅದನ್ನು ಬಿಟ್ಟು ಜನರನ್ನು ದಾರಿತಪ್ಪಿಸುವ ಕೆಲಸ ಮಾಡಬೇಡಿ ಎಂದು ಕೈಮುಗಿದು ಸದಸ್ಯರಲ್ಲಿ ಮನವಿ ಮಾಡಿದರು.
ವಕ್ಫ್ ಆಸ್ತಿ ವಿವಾದ ಕುರಿತು ನಡೆದ ಚರ್ಚೆಗೆ ಉತ್ತರಿಸಿದ ಸಚಿವರು, ವಕ್ಫ್‌ಗೆ ಸಂಬಂಧಿಸಿದ 1.28 ಲಕ್ಷ ಎಕರೆ ಆಸ್ತಿ ಪೈಕಿ ಭೂ ಸುಧಾರಣೆ, ಇನಾಂ, ಸರ್ಕಾರದಿಂದ ಒತ್ತುವರಿ ಹೀಗೆ ನಾನಾ ಕಾರಣಗಳಿಂದಾಗಿ ಈಗ 20,300 ಎಕರೆ ಮಾತ್ರ ಉಳಿದಿದೆ. ಇದರಲ್ಲಿ 17 ಸಾವಿರ ಎಕರೆ ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದು, ಇದನ್ನು ತೆರವು ಮಾಡಲು ಉದ್ದೇಶಿಸಲಾಗಿದೆ. ಆದರೆ ದೇವಸ್ಥಾನ, ರೈತರ ಆಸ್ತಿ ತೆರವು ಮಾಡುವುದಿಲ್ಲ ಎಂದರು.
ಬಳ್ಳಾರಿ ಬಾಣಂತಿಯರ ಸಾವಿನ ತನಿಖಾ ವರದಿಯೂ ಬಂತು; ಆದ್ರೂ ಸಚಿವ ಜಮೀರ್ ಬರಲಿಲ್ಲ
ವಕ್ಫ್ ಆಸ್ತಿ ತೆರವು ಸಂಬಂಧ ಬಿಜೆಪಿ ಸರ್ಕಾರದ ಅವಧಿಯಲ್ಲೇ ಅತಿ ಹೆಚ್ಚು ನೋಟಿಸ್ ನೀಡಿ ಖಾತಾ ಮಾಡಲಾಗಿದೆ. ಕಾಂಗ್ರೆಸ್ ಅವಧಿಯಲ್ಲೂ ನೋಟಿಸ್ ನೀಡಲಾಗಿದೆ ಎಂದು ಅಂಕಿ-ಅಂಶಗಳ ಸಹಿತ ವಿವರಿಸಿದ ಸಚಿವರು, ಈವರೆಗೂ ಯಾವ ರೈತರ ಭೂಮಿಯನ್ನೂ ನಾವು ತೆಗೆದುಕೊಂಡಿಲ್ಲ ಎಂದು ಹೇಳಿದರು.